April 18, 2024

Chitradurga hoysala

Kannada news portal

ರಾಜನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕರಾದ ಎಂ.ಚಂದ್ರಪ್ಪ ಆಗಸ್ಟ್15ರೊಳಗೆ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನೀರು

1 min read

ರಾಜನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ಶಾಸಕರಾದ ಎಂ.ಚಂದ್ರಪ್ಪ
ಆಗಸ್ಟ್15ರೊಳಗೆ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನೀರು

ಚಿತ್ರದುರ್ಗ,ಜುಲೈ18:
ತುಂಗಾಭದ್ರ ನದಿಯಿಂದ ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಮುಂಬರುವ ಆಗಸ್ಟ್15ರೊಳಗೆ ಭರಮಸಾಗರ ಕೆರೆಗೆ ನೀರು ತುಂಬಿಸಲಾಗುವುದು ಎಂದು ಹೊಳಲ್ಕೆರೆ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಹೇಳಿದರು.
ದಾವಣಗೆರೆಯ ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮ ಸಮೀಪದ ರಾಜನಹಳ್ಳಿ ಏತನೀರಾವರಿ ಯೋಜನೆಯ ಜಾಕ್‍ವೆಲ್‍ಕಂಪಂಪ್‍ಹೌಸ್‍ಗೆ ಭಾನುವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ನಂತರ ಅವರು ಮಾತನಾಡಿದರು.
ಭರಮಸಾಗರ ಏತನೀರಾವರಿ ಯೋಜನೆಗೆ ರೂ.565 ಕೋಟಿ ಅನುದಾನ ಮಂಜೂರಾಗಿದ್ದು, ಭರಮಸಾಗರ ವ್ಯಾಪ್ತಿಯ 42 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ತುಂಬಿಸುವ ಯೋಜನೆ ಇದಾಗಿದೆ ಎಂದರು.

ಶಂಕರ್ ನಾರಾಯಣ್ ಕನ್ಸ್‍ಟ್ರಕ್ಷನ್ ಕಂಪನಿಯು ಈ ಯೋಜನೆಯನ್ನು ಗುತ್ತಿಗೆ ಪಡೆದಿದ್ದು, ಕಂಪನಿಯು ಕೋವಿಡ್ ಸಂದರ್ಭದಲ್ಲೂ ಕಾಮಗಾರಿಯ ಕೆಲಸ ನಿಲ್ಲಿಸದೇ ಬಹಳ ಅತ್ಯುತ್ತಮವಾಗಿ ಕಾಮಗಾರಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹರಿಹರದ ರಾಜನಹಳ್ಳಿನಹಳ್ಳಿಯಿಂದ ಭರಮಸಾಗರ ಕೆರೆಗೆ ನೀರು ತುಂಬಿಸಲು ಸುಮಾರು 60 ಕಿ.ಮೀ ಪೈಪ್‍ಲೈನ್ ಕಾಮಗಾರಿಯನ್ನು ಕೈಗೊಂಡಿದ್ದು, ಇದರಲ್ಲಿ 59 ಕಿ.ಮೀ ಪೈಪ್‍ಲೈನ್ ಕಾಮಗಾರಿಯನ್ನು ಪೂರ್ಣಗೊಂಡಿದೆ. ಶಾಮನೂರು ಬಳಿ 200 ಮೀಟರ್, ಹೊನ್ನೂರುಗೊಲ್ಲರಹಟ್ಟಿ 200 ಮೀಟರ್, ಅವರೆಗೆರೆ ಹತ್ತಿರ 100 ಮೀಟರ್, ಆನಗೋಡು ಬಳಿ 150 ಮೀಟರ್, ಹೆಬ್ಬಾಳು ಬಳಿ 150 ಮೀಟರ್ ಸೇರಿದಂತೆ 940 ಮೀಟರ್ ಪೈಪ್‍ಲೈನ್ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಸಣ್ಣಪುಟ್ಟ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಸಮಸ್ಯೆಗಳನ್ನು ಬಗೆಹರಿಸಿ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಭರಮಸಾಗರ ದೊಡ್ಡಕೆರೆಗೆ ಪೈಪ್‍ಲೈನ್ ಮುಗಿದ 23 ದಿನದಲ್ಲಿ ಭರಮಸಾಗರ ಕೆರೆ ಸಂಪೂರ್ಣ ಭರ್ತಿಯಾಗಲಿದೆ. ಅಲ್ಲಿಂದ 35 ದಿವಸದೊಳಗೆ 40 ಕೆರೆಗಳು ಭರ್ತಿಯಾಗಲಿದ್ದು, ಇದು ಸಿರಿಗೆರೆ ಶ್ರೀಗಳ ಕನಸಿನ ಯೋಜನೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಲ್ಲಪ್ಪ, ಇಂಜಿನಿಯರ್‍ಗಳಾದ ಚಂದ್ರಶೇಖರ್, ಮನೋಜ್ ಹಾಗೂ ಶಂಕರ್‍ನಾರಾಯಣ್ ಕನ್ಸ್‍ಟ್ರಕ್ಷನ್ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ ವಿವರ: ದಾವಣಗೆರೆಯ ಹಲಸಬಾಳು ಸಮೀಪದ ರಾಜನಹಳ್ಳಿ ಏತನೀರಾವರಿ ಯೋಜನೆಯ ಜಾಕ್‍ವೆಲ್‍ಕಂಪಂಪ್‍ಹೌಸ್‍ಗೆ ಭಾನುವಾರ ಹೊಳಲ್ಕೆರೆ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷರಾದ ಎಂ.ಚಂದ್ರಪ್ಪ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

About The Author

Leave a Reply

Your email address will not be published. Required fields are marked *