ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಸಿಇಟಿ ಪರೀಕ್ಷೆ ಬರೆಯಿರಿ: ಡಿಸಿಎಂ ಅಶ್ವಥ್ ನಾರಾಯಣ
1 min readನಾಳೆ ನಾಡಿದ್ದು ಸಿಇಟಿ
ಬೆಂಗಳೂರು : ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ನಾಳೆ ಮತ್ತು ನಾಡಿದ್ದು (ಜುಲೈ 30-31) ಸಿಇಟಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ತಮ್ಮತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಿ ನಿರಾತಂಕವಾಗಿ ಪರೀಕ್ಷೆ ಬರೆಯಬಹುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.ಪರೀಕ್ಷೆಯ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿ ವಿಲೇವಾರಿ ಮಾಡಿದ ಕೋರ್ಟ್, ಸರಕಾರಕ್ಕೆ ಕೆಲ ಮಹತ್ವದ ಸೂಚನೆಗಳನ್ನು ನೀಡಿದ ಬಳಿಕ ಆನ್‌ಲೈನ್ ಸುದ್ದಿಗೋಷ್ಟಿಯಲ್ಲಿ ಡಾ. ಅಶ್ವಥ್ ನಾರಾಯಣ ಅವರು ಮಾತನಾಡಿದರು. ಇಡೀ ಪರೀಕ್ಷೆಯ ಪ್ರಕ್ರಿಯೆ ನ್ಯಾಯಾಲಯ ನೀಡಿರುವ ಸೂಚನೆಗಳಂತೆಯೇ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು. ಜೊತೆಗೆ ಏನಾದರೂ ಸಮಸ್ಯೆಗಳಾದಲ್ಲಿ ವಿದ್ಯಾರ್ಥಿಗಳು ಸಂಪರ್ಕಿಸಲು ದೂರವಾಣಿ ಸಂಖ್ಯೆಗಳನ್ನು ಪ್ರಕಟಿಸಿದರು.
ಫಿಟ್ನೆಸ್ ಸರ್ಟಿಫಿಕೇಟ್
ಕಂಟೇನ್ಮೆಂಟ್ ಝೋನ್‌ಗಳಿಂದ ಬರುವ ವಿದ್ಯಾರ್ಥಿಗಳ ಫಿಟ್‌ನೆಸ್ ಸರ್ಟಿಫಿಕೇಟ್‌ನ್ನು ಪರೀಕ್ಷಾ ಕೇಂದ್ರಗಳಲ್ಲಿ ಕೇಳುವಂತಿಲ್ಲ, ಅದನ್ನು ಕಡ್ಡಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿಗಳು ಆ ಸರ್ಟಿಫಿಕೇಟ್ ಅನ್ನು ತರಲಿ, ತರದೇ ಇರಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಪ್ರವೇಶ ಪತ್ರ ಹೊಂದಿರುವ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯುವುದನ್ನು ತಡೆಯುವಂತಿಲ್ಲ. ಅವರು ಕೊವಿಡ್ ಪಾಸಿಟಿವ್ ಇರಲಿ ಅಥವಾ ಕೊರೊನಾವೈರಸ್ ಲಕ್ಷಣಗಳನ್ನು ತೋರಿಸದೆ ಇರಲಿ, ಇಲ್ಲವೇ ಶೀತ-ಕೆಮ್ಮು ಮತ್ತಿತರೆ ಲಕ್ಷಣಗಳಿದ್ದರೂ ಅವರನ್ನು ಕಡ್ಡಾಯವಾಗಿ ಪರೀಕ್ಷೆ ಬರೆಯಲು ಅವಕಾಶ ಕೊಡಲೇಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಹೀಗಾಗಿ ಸೋಂಕಿತರಿಗೆ ಮತ್ತು ಸೋಂಕಿನ ಲಕ್ಷಣಗಳು ಇರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂರಿಸಲಾಗುವುದು. ಈ ಎಲ್ಲ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಲಾಗಿದೆ. ಕೊವಿಡ್ ಪಾಸಿಟಿವ್ ಇರುವ ವಿದ್ಯಾರ್ಥಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‌ಓಪಿ ಪಾಲನೆ
ಈಗಾಗಲೇ ಜಾರಿಯಲ್ಲಿರುವ ಪರಿಷ್ಕೃತ ಮಾರ್ಗಸೂಚಿ ಪ್ರಕಾರ ಕಂಟೇನ್ಮೆಂಟ್ ಝೋನ್‌ನಲ್ಲಿರುವ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಬಂದು ಪರೀಕ್ಷೆಗೆ ಹಾಜರಾಗಬಹುದು. ಇವರು ತಮ್ಮ ಮನೆಯಿಂದ ಹೊರಬಂದ ಕೂಡಲೇ ಯಾರೇ ತಡೆದರೂ ಪ್ರವೇಶ ಪತ್ರ ತೋರಿಸಿದರೆ ಸಾಕು, ಅವರನ್ನು ಯಾರೂ ತಡೆಯುವುದಿಲ್ಲ ಎಂದು ಸೂಚಿಸಿದ್ದಾರೆ.
ಇನ್ನು ಕೊವಿಡ್ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವಿದ್ಯಾರ್ಥಿಗಳನ್ನು ಪ್ರತ್ಯೇಕ ವಾಹನದಲ್ಲಿ ಕರೆತಂದು, ಪರೀಕ್ಷೆ ಮುಗಿದ ನಂತರ ವಾಪಸ್ ಅವರ ಜಾಗಕ್ಕೆ ಬಿಡಲಾಗುವುದು. ಬೆಂಗಳೂರು ಸೇರಿ ರಾಜ್ಯ ಎಲ್ಲ ಜಿಲ್ಲೆಗಳಲ್ಲಿ ಎಲ್ಲ ಕಡೆಗಳಿಂದಲೂ ಪರೀಕ್ಷಾ ಕೇಂದ್ರಗಳಿಗೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಉನ್ನತ ಶಿಕ್ಷಣ ಇಲಾಖೆ ಮುಖ್ಯಸ್ಥರು ಸೇರಿದಂತೆ ಸಾರಿಗೆ, ಪೊಲೀಸ್, ಆರೋಗ್ಯ ಸೇರಿದಂತೆ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಉನ್ನತಮಟ್ಟದ ತಂಡವನ್ನು ರಚಿಸಲಾಗಿದೆ. ಆ ತಂಡದ ಉಸ್ತುವಾರಿಯಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆಯಲಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದರು.