Recent Posts

October 17, 2021

Chitradurga hoysala

Kannada news portal

ಪೌರಸೇವಾ ನೌಕರರು ಸದಾ ಸರ್ಕಾರಿ ಕೆಲಸಗಳ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಾ ತಮ್ಮ ಒಳಗಿನ ಪ್ರತಿಭೆಯನ್ನು ಅಡಗಿಸಿಟ್ಟುಕೊಂಡಿರುತ್ತಾರೆ ಮುಖ್ಯಾಧಿಕಾರಿ ಎ.ವಾಸಿಂ : ಹೊಳಲ್ಕೆರೆ ಪುರಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ:ಪುರಸಭೆಯ ನೌಕರ ರವಿನಾಗ್ ತಾಳ್ಯ ಇವರಿಗೆ ಪೌರ ಸನ್ಮಾನ

1 min read


ಹೊಳಲ್ಕೆರೆ ಪುರಸಭೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಣೆ

ಹೊಳಲ್ಕೆರೆ:ಹೊಳಲ್ಕೆರೆ ಪುರಸಭೆಯ ನೌಕರ ರವಿನಾಗ್ ತಾಳ್ಯ ಇವರಿಗೆ ಪೌರ ಸನ್ಮಾನ ಪುರಸಭಾ ಕಾರ್ಯಾಲಯದಲ್ಲಿ ಇಂದು ನಡೆಯಿತು,2020-21ನೇ ಸಾಲಿನ ಶೇಕಡ 24.10 ಮತ್ತು ಶೇಕಡ 7.25ರ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗದ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರಾದ ಆರ್ ಎ ಅಶೋಕ್ ರವರು, ಉಪಾಧ್ಯಕ್ಷರಾದ ಕೆ.ಸಿ. ರಮೇಶ್ ರವರು, ಮುಖ್ಯಾಧಿಕಾರಿ ಎ ವಾಸಿಂ ರವರು, ಸದಸ್ಯರುಗಳಾದ ಬಿ ಎಸ್ ರುದ್ರಪ್ಪನವರು, ಸೈಯದ್ ಸಜೀಲ್ ರವರು, ಡಿ ಎಸ್ ವಿಜಯ ರವರು, ಪಿ ಹೆಚ್ ಮುರುಗೇಶ್ ರವರು, ಸವಿತಾ ನರಸಿಂಹ ಖಾಟ್ರೋತ್ ರವರು, ಮಮತ ಜಯ ಸಿಂಹ ಖಾಟ್ರೋತ್ ರವರು ಹಾಗೂ ಎಲ್ ವಿಜಯ ಸಿಂಹ ಖಾಟ್ರೋತ್ ರವರು ಹಾಗೂ ಪತ್ರಕರ್ತರಾದ ವೇದಮೂರ್ತಿಯವರು ಉಪಸ್ಥಿತರಿದ್ದರು. ಪ್ರತಿ ಶೈಕ್ಷಣಿಕ ವರ್ಷದಲ್ಲೂ ಸಹ ಇದೇ ರೀತಿ ಉತ್ತಮ ಅಂಕಗಳಿಸಿ ಅತ್ಯುನ್ನತ ಪದವಿ ಗಳಿಸಿ ನಿಮ್ಮ ಹೆತ್ತವರಿಗೆ ಹೆಸರು ತರುವ ಮಕ್ಕಳಾಗಿ ಬಾಳುವಂತೆ ಮತ್ತು ಉನ್ನತ ಹುದ್ದೆ ಗಳಿಸಿ ಉತ್ತಮ ಸಾಧನೆ ಮಾಡುವಂತೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಹಾಜರಿದ್ದ ಸದಸ್ಯರುಗಳು ಚೆಕ್ ವಿತರಣೆ ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಹರಸಿ ಅಭಿನಂದಿಸಿದರು.

ಪುರಸಭೆಯ ನೌಕರ ರವಿನಾಗ್ ತಾಳ್ಯ ಇವರಿಗೆ ಪೌರ ಸನ್ಮಾನ

ಇದೇ ಸಂದರ್ಭದಲ್ಲಿ ವಿಚಾರ ಮಂಟಪ ಸಾಹಿತ್ಯ ವೇದಿಕೆ (ಬೀದರ್) ಇವರು “ಕನ್ನಡ ನಾಡಿನ ವೈಭವ” ಕುರಿತು ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪುರಸಭೆಯ ನೌಕರ ರವಿನಾಗ್ ತಾಳ್ಯ ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮುಖ್ಯಾಧಿಕಾರಿಗಳಾದ ಎ ವಾಸಿಂ ರವರು ಮಾತನಾಡಿ ಪೌರಸೇವಾ ನೌಕರರುಗಳು ಸದಾ ಸರ್ಕಾರಿ ಕೆಲಸಗಳ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಾ ತಮ್ಮ ಒಳಗಿನ ಪ್ರತಿಭೆಯನ್ನು ಅಡಗಿಸಿಟ್ಟುಕೊಂಡಿರುತ್ತಾರೆ. ಕೆಲವು ಬಾರಿ ತಮ್ಮ ಕುಟುಂಬ ಬಗ್ಗೆಯೂ ಗಮನ ಹರಿಸಲು ಸಮಯ ಇರುವುದಿಲ್ಲ. ಇಂತಹ ಬಿಡುವಿಲ್ಲದ ಪೌರಸೇವೆಯ ಜೊತೆಗೆ ಬರೆಯುವ ಹವ್ಯಾಸವನ್ನೂ ಸಹ ರೂಢಿಸಿಕೊಂಡು ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನಮ್ಮ ನೌಕರರಾದ ಶ್ರೀ ರವಿನಾಗ್ ರವರು ಪ್ರಥಮ ಸ್ಥಾನ ಗಳಿಸಿರುವುದು ನಮಗೆ ಸಂತಸ ತಂದಿದೆ. ಇವರಿಂದ ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ಲಭಿಸುವಂತಾಗಲಿ ಎಂದರು. ಉಪಾಧ್ಯಕ್ಷರಾದ ಕೆ ಸಿ ರಮೇಶ್ ರವರು ಮಾತನಾಡಿ ರವಿನಾಗ್ ರವರು ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿ ನಮ್ಮ ಪುರಸಭೆಗೆ ಗೌರವ ತಂದಿದ್ದಾರೆ ಎಂದರು, ನಮ್ಮ ತಾಲ್ಲೂಕಿನ ಹಿರಿಯ ಸಾಹಿತಿಗಳಾದ ಚಂದ್ರಶೇಖರ್ ತಾಳ್ಯ ಇವರಂತೆ ಸಾಹಿತ್ಯ ಕ್ಷೇತ್ರದಲ್ಲಿ ರವಿನಾಗ್ ತಾಳ್ಯ ಸಹ ನಮ್ಮ ತಾಲ್ಲೂಕಿಗೆ ಕೀರ್ತಿ ತರುವಂತಹ ಉತ್ತಮ ಸಾಹಿತಿಯಾಗಿ ಹೊರಹೊಮ್ಮಲಿ ಎಂದರು. ಸದಸ್ಯರಾದ ಬಿ ಎಸ್ ರುದ್ರಪ್ಪನವರು ಮಾತನಾಡಿ ಸದಾ ಬಿಡುವಿಲ್ಲದ ಕೆಲಸದಲ್ಲಿ ತೊಡಗಿರುವ ರವಿನಾಗ್ ಒಳಗಿರುವ ಪ್ರತಿಭೆ ತಿಳಿದು ತುಂಬಾ ಸಂತೋಷವಾಗಿದೆ. ನಮ್ಮ ಪುರಸಭೆ ನೌಕರರು, ಪೌರಕಾರ್ಮಿಕರೂ ಸಹ ತಮ್ಮೊಳಗೆ ಇರುವ ಪ್ರತಿಭೆಗಳನ್ನು ತಮ್ಮೊಳಗೆ ಬಚ್ಚಿಟ್ಟುಕೊಳ್ಳದೆ ನಿಮ್ಮಲ್ಲಿರುವ ಉತ್ತಮ ಹವ್ಯಾಸಗಳ ಮೂಲಕ ಪುರಸಭೆಗೆ ಮತ್ತು ನಮ್ಮ ಹೊಳಲ್ಕೆರೆ ಪಟ್ಟಣಕ್ಕೆ ಹಾಗೂ ಕನ್ನಡ ನಾಡಿಗೆ ಕೀರ್ತಿ ತರುವಂತಾಗಲಿ ಎಂದರು.

ಸದಸ್ಯರಾದ ಪಿ ಹೆಚ್ ಮುರುಗೇಶ್ ರವರು ಮಾತನಾಡಿ ಒಬ್ಬ ತಾಂತ್ರಿಕ ಸಿಬ್ಬಂದಿ ಸಾಹಿತ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನನಗೆ ಸಂತಸ ತಂದಿದೆ ಅವರಲ್ಲಿರುವ ಕಂಪ್ಯೂಟರ್ ಕೌಶಲ್ಯವೂ ಸಹ ಅವರ ಬರವಣಿಗೆಗೆ ಸಹಕಾರಿಯಾಗಿದೆ ಎಂದರು. ಪತ್ರಕರ್ತರಾದ ವೇದಮೂರ್ತಿಯವರು ಮಾತನಾಡಿ ಸಾಹಿತ್ಯ ಅಭಿರುಚಿಯು ಶಿಕ್ಷಕರು ಮತ್ತು ಉಪನ್ಯಾಸ ವೃತ್ತಿಯಲ್ಲಿರುವವರಲ್ಲಿ ಹೆಚ್ಚಾಗಿರುತ್ತದೆ. ತಾಂತ್ರಿಕ ನೌಕರರು ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವುದು ತೀರಾ ವಿರಳ. ರವಿನಾಗ್ ರವರಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ಲಭಿಸುವಂತಾಗಲಿ ಎಂದರು. ಮತ್ತೊಬ್ಬ ಸದಸ್ಯರಾದ ಎಲ್ ವಿಜಯಸಿಂಹ ಖಾಟ್ರೋತ್ ಮಾತನಾಡಿ ರವಿನಾಗ್ ತಾಳ್ಯ ನನ್ನ ಬಾಲ್ಯ ಸ್ನೇಹಿತ. ಬಾಲ್ಯದಿಂದಲೂ ಅವರು ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಾರೆ. ಈಗ ಅವರೊಟ್ಟಿಗೆ ಪೌರಸೇವೆ ಮಾಡುವ ಅವಕಾಶ ಸಿಕ್ಕಿದೆ. ನನ್ನ ಗೆಳೆಯನಿಂದ ಮುಂದೆ ಕನ್ನಡ ಸಾಹಿತ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಆಗಲಿ ಎಂದರು.

ಸನ್ಮಾನಿತ ಕವಿ ರವಿನಾಗ್ ತಾಳ್ಯ ಮಾತನಾಡಿ ನಾನು ಈ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಶಿಶು. ತಮ್ಮೆಲ್ಲರ ಪ್ರೋತ್ಸಾಹ ನನಗೆ ಬರೆಯಲ್ಲು ಹೆಚ್ಚಿನ ಉತ್ತೇಜನ ನೀಡಿದೆ ಎಂದರು.
ಅಧ್ಯಕ್ಷರಾದ ಆರ್ ಎ ಅಶೋಕ್ ಮಾತನಾಡಿ ನಮ್ಮ ಪುರಸಭಾ ಸಿಬ್ಬಂದಿ ಒಳಗೆ ಇಂತಹ ಉತ್ತಮ ಪ್ರತಿಭೆ ಇರುವುದು ನಮಗೆ ಸಂತೋಷ ಉಂಟು ಮಾಡಿದೆ. ತುಂಬಾ ಶ್ರಮ ಜೀವಿ ಮತ್ತು ಪ್ರಾಮಾಣಿಕ ನೌಕರರಾದ ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಸಹ ಉತ್ತಮ ಸಾಧನೆ ಮಾಡಲಿ ಎಂದರು. ಪುರಸಭೆ ನೌಕರರಾದ ಡಿ ನೌಷಾದ್, ಹೆಚ್ ಮಹೇಶ್ವರಪ್ಪ, ಎಸ್. ಎಂ ನಾಗಭೂಷಣ, ಎಂ ದೇವರಾಜ್ ಹಾಗೂ ಇನ್ನಿತರೆ ಪೌರಕಾರ್ಮಿಕ ಮತ್ತು ನೀರು ಸರಬರಾಜು ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

You may have missed