April 25, 2024

Chitradurga hoysala

Kannada news portal

ಮಾದಿಗರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ – ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ಎಡಗೈ ನಾಯಕರ ಮೊರೆ

1 min read

ನವದೆಹಲಿ: ಮಾದಿಗರಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ – ಪಕ್ಷ ನಿಷ್ಠೆಯ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಕೊಡಿ – ಕಾಂಗ್ರೆಸ್ ಹೈಕಮಾಂಡ್‌ಗೆ ರಾಜ್ಯದ ಎಡಗೈ ನಾಯಕರ ಮೊರೆ.

ರಾಜ್ಯದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಲ್ಲಿರುವ ಹಾಗೂ ಬಹುತೇಕ ವಿಧಾನಸಭೆ, ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ ಮಾದಿಗ ಸಮುದಾಯಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೆಚ್ಚು ಪ್ರಾತಿನಿಧ್ಯತೆ ನೀಡಬೇಕೆಂದು ಮಾದಿಗ ಸಮುದಾಯದ ಮುಖಂಡರ ನಿಯೋಗ ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದೆ.

ರಾಜ್ಯದಿಂದ ದೆಹಲಿಗೆ ಬುಧವಾರ ತೆರಳಿದ್ದ ಮಾಜಿ ಸಚಿವರಾದ ಹೆಚ್.ಆಂಜನೇಯ, ಆರ್.ಬಿ.ತಿಮ್ಮಾಪುರ , ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ನೇತೃತ್ವದ ನಿಯೋಗ, ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು..

ಈ ವೇಳೆ ಮಾತನಾಡಿದ ನಿಯೋಗದಲ್ಲಿದ್ದ ಮುಖಂಡರು, ರಾಜ್ಯದಲ್ಲಿ ಮಾದಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿದ್ದು, ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಪಕ್ಷ ಬಹಳಷ್ಟು ರಾಜಕೀಯ ಪ್ರಾತಿನಿಧ್ಯ, ವಿಶೇಷ ಯೋಜನೆಗಳು ಜಾರಿಗೊಳಿಸಿದೆ.

ಈ ಮಧ್ಯೆ ಕೋಮು ಪಕ್ಷಗಳು ವಿವಿಧ ರೀತಿ ತಪ್ಪು ಸಂದೇಶ ರವಾನಿಸಿ ಸಮುದಾಯದ ಮತ ಸೆಳೆಯಲು ಯತ್ನಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಮುದಾಯದ ನಾಯಕರಿಗೆ ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೆಚ್ಚು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಅಸ್ಪೃಶ್ಯ ವರ್ಗದಲ್ಲಿ ಮೊದಲ ಸಾಲಿನಲ್ಲಿರುವ ಮಾದಿಗ ಸಮುದಾಯ ಬಹಳಷ್ಟು ನೋವುಂಡ ಸಮುದಾಯ ಆಗಿದೆ. ಈ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಅದಮ್ಯ *ವಿಶ್ವಾಸ* , *ನಂಬಿಕೆ* ಇದ್ದು, ಅದನ್ನು ಮುಂದುವರಿಸಿಕೊಂಡು ಹೋಗಲು ರಾಜಕೀಯ ಪ್ರಾತಿನಿಧ್ಯ ನೀಡುವುದು ಬಹಳ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಇತ್ತಿಚೆಗೆ ಸಮುಯದಾಯದ ಯುವಕರಿಗೆ ವಿವಿಧ ರೀತಿ ಆಮಿಷವೊಡ್ಡಿ ಕೋಮುವಾದಿ ಪಕ್ಷ ತನ್ನಡೆಗೆ ಸೆಳೆಯುವ ಪ್ತಯತ್ನ ನಡೆಸುತ್ತಿದೆ. ಆದರೂ ಸಮುದಾಯದ ಶೇ.95ರಷ್ಟು ಮಂದಿ ಕಾಂಗ್ರೆಸ್ ನಿಷ್ಠೆ ಕೈಬಿಟ್ಟಿಲ್ಲ. ಆದ್ದರಿಂದ ಸಮುದಾಯದ ಬದ್ಧತೆ ಗುರುತಿಸಿ ಹಾಗೂ ಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಸಹಕಾರಿ ಆಗುವ ರೀತಿ ಸಾಮಾಜಿಕ ನ್ಯಾಯದಡಿ ಸಮುದಾಯಕ್ಕೆ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಸ್ಥಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲ್ ಅವರನ್ನು ಕರ್ನಾಟಕ ರಾಜ್ಯದ ಮಾದಿಗ ಸಮುದಾಯದ ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗ ಮನವಿ ಜತೆಗೆ ಗೌರವ ಸಲ್ಲಿಸಿತು.ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಚ್.ಆಂಜನೆಯ, ಆರ್.ಬಿ.ತಿಮ್ಮಾಪುರ್, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ಇದ್ದರು..

About The Author

Leave a Reply

Your email address will not be published. Required fields are marked *