April 23, 2024

Chitradurga hoysala

Kannada news portal

ಸತ್ಯಕ್ಕನಂತಹ ಶರಣರ ಮುಂದೆ ಇಂದಿನ ವಿದ್ಯಾವಂಥರು ಮೂಢರಂತೆ ಕಾಣುವರು. ಸತ್ಯಕ್ಕನ ಇಂಥ ವಿಚಾರಗಳು ನಮ್ಮ ಕಣ್ಣು ತೆರೆಸಬೇಕಾಗಿದೆ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

1 min read

ಸಾಣೇಹಳ್ಳಿ, ಅಗಸ್ಟ್ 6; ಇಲ್ಲಿನ ಶ್ರೀ ತರಳಬಾಳು ಜಗದ್ಗುರು ಶಾಖಾಮಠ ಆಯೋಜಿಸಿರುವ `ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ ಸಾನಿಧ್ಯ ವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ ಸತ್ಯಕ್ಕ ನಾಮಪದವಾಗಿರುವಂತೆ ಗುಣವಾಚಕವೂ ಹೌದು. ಸತ್ಯವಾದುದು ಸುಂದರ ಮತ್ತು ಶಿವಮಯವಾಗಿರುತ್ತದೆ. ಸತ್ಯ ಎಂದರೆ ದೇವರು. ಹೀಗಾಗಿ ಗಾಂಧೀಜಿ ಸತ್ಯವೇ ದೇವರು ಎಂದರು. ಕೆಲವೊಮ್ಮೆ ಹೆಸರಿಗೂ ಬದುಕಿನ ವಿಧಾನಕ್ಕೂ ಸಂಬಂಧವಿರುವುದಿಲ್ಲ. ಆದರೆ ಸತ್ಯಕ್ಕ ಹೆಸರಿಗೆ ತಕ್ಕಂತೆ ಸದ್ಗುಣಿ, ಸತ್ಯವಂತಳು, ಪ್ರಾಮಾಣಿಕಳು, ನಡೆ-ನುಡಿ ಒಂದಾದವಳು. ಇಂದಿಗೂ ಆದರ್ಶ ಮಹಿಳೆ. ಸತ್ಯಶುದ್ಧ ಬದುಕಿನಿಂದ ಸತ್ಯಕ್ಕ ಎಂದು ಬಂದಿದೆ.

ಈಕೆಯ ಕೌಟುಂಬಿಕ ಜೀವನದ ಬಗೆಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ. ಸತ್ಯಕ್ಕನ ಕಾಯಕನಿಷ್ಠೆ, ಏಕದೇವನಿಷ್ಠೆ, ಪ್ರಾಮಾಣಿಕತೆಯಂಥ ಮೌಲ್ಯಗಳನ್ನು ಎತ್ತಿ ಹಿಡಿದವಳು. ಆಕೆಯ `ಬಟ್ಟೆ(ದಾರಿ)ಯಲ್ಲಿ ವಸ್ತ್ರ, ಹೊನ್ನು ಬಿದ್ದಿದ್ದಡೆ ಕೈಮುಟ್ಟಿ ಎತ್ತಿದೆನಾದಡೆ..’ ಎನ್ನುವ ವಚನ ಸುಪ್ರಸಿದ್ಧವಾದುದು. ಕಸಗುಡಿಸಿ ಬರುವ ಆದಾಯದಲ್ಲಿಯೇ ಸಂತೃಪ್ತಿಯ ಬದುಕು ಸಾಗಿಸುವ ಆಕೆ ಲಂಚಕ್ಕೆ ಕೈಯೊಡ್ಡುವುದಿಲ್ಲ ಎಂದು ತನಗೆ ತಾನೇ ಪ್ರಮಾಣ ಮಾಡುವ ಪರಿ ಅನನ್ಯವಾದುದು.
ಇಂದು ಸತ್ಯಕ್ಕನ ಇಂಥ ಗುಣಗಳನ್ನು ಎಲ್ಲಿ ಕಾಣುವುದು? ಇನ್ನೂ ಬೇಕು, ಇನ್ನೂ ಬೇಕು ಎನ್ನುವ ಹಪಾಹಪಿತನ ಇಂದಿನ ಸ್ವಾಮಿ-ಸಂನ್ಯಾಸಿಗಳನ್ನೂ ಬಿಟ್ಟಿಲ್ಲ. ಹೀಗಾಗಿ ಸತ್ಯಕ್ಕನ ಮುಂದೆ ಇಂಥವರೆಲ್ಲ ಕ್ಷುಲ್ಲಕ ಜೀವಿಗಳಂತೆ ಭಾಸವಾಗುವರು. 12 ನೆಯ ಶತಮಾನದ ಶಣರಣರು ನುಡಿದಂತೆ ನಡೆದವರು, ನಡೆದಂತೆ ನುಡಿದವರು. ಅವರಿಗೆ ಅವರು ಮಾಡುವ ಕಾಯಕವೇ ಕೈಲಾಸವಾಗಿತ್ತು.

ಕೈಲಾಸವೆಂದರೆ ಸಂತೃಪ್ತಿ, ನೆಮ್ಮದಿ. ಸತ್ಯಕ್ಕ ಶಿವನಿಷ್ಠೆಗೆ ಹೆಸರಾದವವಳು. ವ್ರತ, ನೇಮಗಳ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳ ವಿರುದ್ಧ ಗಟ್ಟಿದನಿ ಎತ್ತಿದವಳು. ಪೌರಾಣಿಕ, ಪವಾಡ ಸದೃಶ ಘಟನೆಗಳನ್ನು ಖಂಡಿಸುವಳು. ಪೌರಾಣಿಕ ಕಲ್ಪನೆಯ ದೇವರುಗಳನ್ನು ಸೌಮ್ಯವಾಗಿಯೇ ಲೇವಡಿ ಮಾಡುವಳು. ಸತ್ಯಕ್ಕನಂತಹ ಶರಣರ ಮುಂದೆ ಇಂದಿನ ವಿದ್ಯಾವಂಥರು ಮೂಢರಂತೆ ಕಾಣುವರು. ಸತ್ಯಕ್ಕನ ಇಂಥ ವಿಚಾರಗಳು ನಮ್ಮ ಕಣ್ಣು ತೆರೆಸಬೇಕಾಗಿದೆ.

ಶಿವನ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಸತ್ಯಕ್ಕ ಶಿವ ಎಂಥವರಿಗೆ ಒಲಿಯುವನು ಅಥವ ಒಲಿಯುವುದಿಲ್ಲ ಎನ್ನುವ ಮಾತುಗಳನ್ನು ಉದಾಹರಣೆ ಸಹಿತ ಸಾಮಾನ್ಯರಿಗೂ ಅರ್ಥವಾಗುವಂತೆ ತನ್ನ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾಳೆ. ದೇವರು ಒಲಿಯುವುದು ಸದಾಚಾರ, ಸನ್ಮಾರ್ಗದಲ್ಲಿ ನಡೆಯುವವರಿಗೆ ಮಾತ್ರ. ಶರಣರ ನುಡಿಗಳು ಅಜ್ಞಾನವನ್ನು ನಿವಾರಿಸಿ ಸುಜ್ಞಾನಿಯನ್ನಾಗಿ ಮಾಡುವ ಶಕ್ತಿಯುಳ್ಳವು. ಅವು ಕೇವಲ ನುಡಿಗಳಾಗದೆ; ಅನುಭವದ ಮೂಸೆಯಿಂದ ಮೂಡಿಬಂದವು. ಇಂಥ ಅಮೃತ ನುಡಿಗಳು ಇಂದು ಹೆಚ್ಚು ಪ್ರಸ್ತುತ. ಸತ್ಯಕ್ಕನ ಯಾವ ಮಾತುಗಳಲ್ಲಿಯೂ ಅತಿಶಯೋಕ್ತಿಯಿಲ್ಲ.

ಇಂದು ಅವರಿವರೆನ್ನದೆ ಎಲ್ಲರ ಮೈ-ಮನ, ಮಾತು-ಕೃತಿ ಮಲಿನಗೊಳ್ಳುತ್ತಿವೆ. ನಿರ್ಮಲಿನಗೊಳಿಸಲು ಬಸವಾದಿ ಶಿವಶರಣರ ವಚನಾನುಸಂಧಾನವೊಂದೇ ದಾರಿ.
ಇಂದೂ ಸಹ ಪೂಜಾರಿ ಪುರೋಹಿತರ ಮಾತು ಕೇಳಿ ವಿವಿಧ ರೀತಿಯ ವ್ರತ, ನಿಯಮಗಳನ್ನು ಆಚರಿಸುವರು. ಆದರೆ ಸತ್ಯಕ್ಕ ಇಂಥವುಗಳನ್ನು ಧಿಕ್ಕರಿಸಿ ಪರಧನ, ಪರಸ್ತ್ರೀ, ಪರದೈವಗಳಿಗೆ ಎರಗದಿಪ್ಪುದೇ ನಿತ್ಯ ನೇಮ ಎಂದು ಹೇಳುವಳು. ಇಲ್ಲಿ ಬದ್ಧತೆ ಎದ್ದು ಕಾಣುವುದು. ಇಂಥ ಬದ್ಧತೆ ಇಲ್ಲದಿದ್ದರೆ ಬದುಕು ನರಕ ಸದೃಶವಾಗುವುದು. ಗುರು ಮತ್ತು ಜಂಗಮರ ಜವಾಬ್ದಾರಿಯ ಕುರಿತು ಆಕೆ ಹೇಳಿದ ಮಾತುಗಳು ಕಣ್ಣು ತೆರೆಸುವಂಥವು. ಈಗಲೂ ಜನ ಮರ ಸುತ್ತುವುದು, ನೀರಲ್ಲಿ ಮುಳುಗುವುದು, ಹರಕೆ ಕಟ್ಟಿಕೊಳ್ಳುವುದು ಮುಂತಾದ ಕರ್ಮಠಗಳನ್ನು ಮಾಡುವರು. ವರಲಕ್ಷ್ಮಿ ಪೂಜೆ ಮಾಡಿದರೆ ಸಂಪತ್ತು, ಸವರ್ಣಗೌರಿ ಪೂಜೆ ಮಾಡಿದರೆ ಗಂಡನ ಆಯಸ್ಸು ಹೆಚ್ಚುವುದು ಎನ್ನುವುದು ಕೇವಲ ಭ್ರಮೆಯಷ್ಟೇ.

ಸತ್ಯಕ್ಕನ ನಿಷ್ಠೆ, ಬದ್ಧತೆ ನಮ್ಮ ಇಂದಿನ ತಾಯಂದಿರಲ್ಲಿ ಬಂದರೆ ತಮ್ಮ ಗಂಡಂದಿರ ಕಿವಿ ಹಿಂಡಿ ಬದುಕನ್ನು ಬದಲಾಯಿಸಿಕೊಳ್ಳಬಹುದು. ಬಸವಾದಿ ಶರಣರು ಅನುಭವ ಮಂಟಪದ ಸಂಪರ್ಕದಿಂದ ಶರಣರಿಗೆ ದೇವರನ್ನೂ ಪ್ರಶ್ನಿಸುವ ತಾಕತ್ತು ಬಂದಿತ್ತು. ಹೀಗಾಗಿ ಅವರು ಆತ್ಮಕಲ್ಯಾಣದ ಜೊತೆ ಸಮಾಜದ ಕಲ್ಯಾಣವನ್ನೂ ಮಾಡಿದರು. ಸತ್ಯಕ್ಕ ಅಂದಿಗೆ ಮಾತ್ರವಲ್ಲ; ಇಂದಿಗೂ ಮಾರ್ಗದರ್ಶಕಳು ಎಂದರು.

ಉಪನ್ಯಾಸ ಮಾಲಿಕೆಯಲ್ಲಿ `ಸತ್ಯಕ್ಕ’ ವಿಷಯ ಕುರಿತಂತೆ ಸಮಯ ನ್ಯೂಸ್ ಚಾನೆಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಮುಖ್ಯ ಸುದ್ಧಿ ಸಂಪಾದಕ ಟಿ ಆರ್ ಶಿವಪ್ರಸಾದ್ ಮಾತನಾಡಿ ಇಂದಿನ ಪೀಳಿಗೆಗೆ ಶರಣರ ಬದುಕು-ಬರಹಗಳನ್ನು ಪರಿಚಯಿಸುವ ನಿಟ್ಟಿನಲ್ಲಿ `ಮತ್ತೆ ಕಲ್ಯಾಣ’ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ. ಸಾಣೇಹಳ್ಳಿಯ ಕಲಾವಿದರು ಸೇರಿದಂತೆ ನಿರ್ಮಾಣಗೊಂಡಿದ್ದ 12ನೆಯ ಶತಮಾನದ ಅನುಭವ ಮಂಟಪದ ಸ್ತಬ್ಧಚಿತ್ರ ಕಳೆದ ಬಾರಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆದಿತ್ತು. ಸತ್ಯಕ್ಕ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರು ಗ್ರಾಮದವಳು. ಜಾಡಮಾಲಿ ಅಂದರೆ ಕಸಗುಡಿಸುವ ಕಾಯಕ ಸತ್ಯಕ್ಕನದ್ದು. ಇವತ್ತಿನ ಸ್ವಚ್ಛತ ಅಭಿಯಾನ ಹನ್ನೆರಡನೆಯ ಶತಮಾನದಲ್ಲಿಯೇ ಜಾರಿಯಲ್ಲಿತ್ತು ಎನ್ನುವುದಕ್ಕೆ ಶಿವಶರಣೆ ಸತ್ಯಕ್ಕ ಬದುಕು-ಬರಹಗಳೇ ಸಾಕ್ಷಿಯಾಗುವವು. ಶಿವನಲ್ಲದೆ ಅನ್ಯ ದೈವದ ಹೆಸರನ್ನೂ ಹೇಳದ ಏಕದೇವತಾ ನಿಷ್ಠೆ ಆಕೆಯಲ್ಲಿತ್ತು. ಈಕೆ ಸಂಸಾರಿಯಾಗದೆ ಸನ್ಯಾಸಿ ಜೀವನ ಸಾಗಿಸಿದಳು. ಜಂಬೂಕ ಎನ್ನುವ ಋಷಿ ತಪಸ್ಸು ಮಾಡಿ ಐಕ್ಯವಾದ ಸ್ಥಳವೇ ಮುಂದೆ ಜಂಬೂರು ಎಂದಾಗಿದೆ.

ಇದು ಅಗ್ರಹಾರ ಅಂದರೆ ಶೈಕ್ಷಣಿಕ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಸತ್ಯಕ್ಕ, ದೋಸೆ ಪಿಟ್ಟವ್ವೆ, ಮಹಾಕಾಳಯ್ಯ, ಮೂಕಮಲ್ಲವ್ವೆ, ಹಾವಿನಹಾಳ ಕಲ್ಲಪ್ಪ ಎನ್ನುವ ಆರು ಜನ ಶರಣ-ಶರಣೆಯರು ಸಮಕಾಲೀನ ವ್ಯಕ್ತಿಗಳಾಗಿದ್ದರು. ಸತ್ಯಕ್ಕ ಬಸವಣ್ಣನವರಿಗಿಂತ ಹಿರಿಯಳು. ದಾಸಿಮಯ್ಯ, ಮುಕ್ತಾಯ್ತಕ್ಕನವರ ಸಮಕಾಲೀನಳು. ಸುಖ-ದುಃಖವನ್ನು ಸಮಾನವಾಗಿ ಕಾಣಬೇಕು ಎನ್ನುವ ಭಾವನೆ ಆಕೆಯದು. ಆದಯ್ಯ ತನ್ನ ವಚನಗಳಲ್ಲಿ ಸತ್ಯಕ್ಕನ ಯುಕ್ತಿಯನ್ನು ಕೊಂಡಾಡುವನು. ಆಕೆ ಸಾಕಷ್ಟು ಅರಿವನ್ನು ಹೊಂದಿದ್ದಳು. ಲಿಂಗಾರ್ಚನೆಯ ರಗಳೆ, ಶಿವತತ್ವ ಚಿಂತಾಮಣಿ, ಸರ್ವಜ್ಞನ ವಚನ ಮುಂತಾದೆಡೆಗಳಲ್ಲಿ ಸತ್ಯಕ್ಕನ ಉಲ್ಲೇಖವಿದೆ. ಸತ್ಯಕ್ಕನ ವಚನಾಂಕಿತ ಶಂಭುಜಕ್ಕೇಶ್ವರ. ಈಕೆಯ 27 ವಚನಗಳು ಲಭ್ಯ. ನಾಯಿಯಿಂದ ಸತ್ಯಕ್ಕ ವೇದವನ್ನು ಓದಿಸಿದಳು ಎನ್ನುವ ಪ್ರತೀತಿ ಇದೆ. ಶಿವನು ಸತ್ಯಕ್ಕನನ್ನು ಪರೀಕ್ಷಿಸುವ ಪೌರಾಣಿಕ ಕಥೆಗಳಿವೆ. ಆಕೆಯ ಸ್ವಚ್ಛತೆಯ ಕಲ್ಪನೆ ಅದ್ಭುತವಾದದು. ಆಕೆ ಶರಣರ ಬಗೆಗೆ ಅಪಾರ ಅಭಿಮಾನವುಳ್ಳವಳು. ಢಾಂಬಿಕ ಆಚರಣೆಗಳನ್ನು ಟೀಕಿಸುತ್ತ ಅರ್ಚನೆ, ಪೂಜನೆ ನೇಮವಲ್ಲ, ಮಂತ್ರ ತಂತ್ರ ನೇಮವಲ್ಲ; ಪರಧನ, ಪರಸ್ತ್ರೀ, ಪರದೈವಕ್ಕೆರಗದಿಪ್ಪುದೇ ನೇಮ ಎನ್ನುವಳು. `ಲಂಚ ವಂಚನಕ್ಕೆ ಕೈಯಾನ್ನದ ಭಾಷೆ’ ಎಂದು ಲಂಚದ, ಭ್ರಷ್ಟಾಚಾರವನ್ನು ಸ್ಪಷ್ಟವಾಗಿ ಖಂಡಿಸುವಳು. ದೈಹಿಕವಾಗಿ ಗಂಡು ಹೆಣ್ಣು ಎನ್ನುವ ಬೇಧವಿದೆಯೇ ಹೊರತು ಆತ್ಮಕ್ಕೆ, ಶಿವನ ಅನುಗ್ರಹಕ್ಕೆ ಈ ಭೇದಗಳು ಅಡ್ಡಿಯಾಗುವುದಿಲ್ಲ ಎನ್ನುವಳು ಆತ್ಮಗೌರವವನ್ನು ಎತ್ತಿ ಹಿಡಿಯುವ, ಆದರ್ಶ ಜೀವನಕ್ಕೆ ಬೇಕಾದ ಮೌಲ್ಯಗಳು ಆಕೆಯ ವಚನಗಳಲ್ಲಿ ಹೇರಳವಾಗಿವೆ. ಸಂಶೋಧಕರು ಸತ್ಯಕ್ಕನ ಹೆಸರು ಮೊದಲು ಬೇರೆಯದೇ ಇರಬಹುದು; ಆಕೆಯ ಸತ್ಯನಿಷ್ಠ ನಡವಳಿಕೆಯಿಂದಾಗಿ ಆಕೆಗೆ `ಸತ್ಯಕ್ಕ’ ಎನ್ನುವ ಅನ್ವರ್ಥನಾಮ ಬಂದಿರಬಹುದು ಎಂದಿದ್ದಾರೆ. ಸತ್ಯಕ್ಕನ ಬಗೆಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಇಂಥ ಅಲಕ್ಷಿತ ಶರಣ-ಶರಣೆಯರ ಬಗೆಗೆ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ. ಜಗತ್ತಿಗೆ ಆದರ್ಶವನ್ನು ಸಾರಿ ಹೇಳಿದ ವಚನಕಾರರ ಜನ್ಮಸ್ಥಳಗಳು ಪುನರುಜ್ಜೀವನಗೊಳಿಸುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ `ಮತ್ತೆ ಕಲ್ಯಾಣ’ದ ಈ ವೇದಿಕೆ ಸರ್ಕಾರದ, ಸ್ಥಳೀಯರ ಗಮನ ಸೆಳೆಯುವಂತಾಗಲಿ ಎಂದರು.

ಬೆಂಗಳೂರಿನ ಸಿ ಸಿ ಹೇಮಲತಾ ಸ್ವಾಗತಿಸಿದರು. ಶಿವಸಂಚಾರದ ಕೆ ಜ್ಯೋತಿ, ಕೆ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ಮತ್ತು ತಬಲಸಾಥಿ ಶರಣ್ ತಂಡ ಅತ್ಯಂತ ಸುಶ್ರಾವ್ಯವಾಗಿ ವಚನಗೀತೆಗಳನ್ನು ಹಾಡಿದರು. ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದ ಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು. ಕಡೂರು ತಾಲ್ಲೂಕು ಚಿಕ್ಕಪಟ್ಟಣಗೆರೆಯ ಜಿ ಟಿ ನಾಗರಾಜ್ ಮತ್ತು ಮಕ್ಕಳು ಈ ದಿನದ ದಾಸೋಹಿಗಳಾಗಿದ್ದರು.

ಹೆಚ್ ಎಸ್ ದ್ಯಾಮೇಶ್

About The Author

Leave a Reply

Your email address will not be published. Required fields are marked *