April 23, 2024

Chitradurga hoysala

Kannada news portal

ಮಾನವನಿಗೆ ವಿಚಾರದ ಗೀಳು ಹಿಡಿಯಬೇಕು.

1 min read

ಮಾನವನಿಗೆ ವಿಚಾರದ ಗೀಳು ಹಿಡಿಯಬೇಕು.

ಚಿತ್ರದುರ್ಗ ಆ. 16 – ಮಾನವನಿಗೆ ವಿಚಾರದ ಗೀಳು ಹಿಡಿಯಬೇಕು. ಸೈದ್ಧಾಂತಿಕವಾದ ಒಲವು ನಮ್ಮೊಳಗೆ ಪ್ರವೇಶಿಸಬೇಕು. ಸಿದ್ಧಾಂತವನ್ನು ಮುಂದಿಟ್ಟುಕೊಂಡು ದಾರ್ಶನಿಕರು ಉದಾತ್ತವಾದ ಜೀವನ ಕಟ್ಟಿಕೊಂಡಿದ್ದಾರೆ. ಇದರಿಂದ ಜಗತ್ತಿಗೆ ಆದರ್ಶಗಳನ್ನು ಕೊಟ್ಟಿದ್ದಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ನಗರದ ಪ್ರಶಾಂತ ಕಾಲೋನಿಯ ಅಜಿತ್‍ಪ್ರಸಾದ್ ಜೈನ್ ಇವರ ಮನೆಯಲ್ಲಿ ನಡೆದ ನಿತ್ಯ ಕಲ್ಯಾಣ 8ನೇ ದಿನದ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಸಾಕ್ಷಾತ್ಕಾರ ಹಾಗೆಂದರೇನು? ವಿಷಯ ಚಿಂತನ ಮಾಡಿದ ಶ್ರೀಗಳು, ಮಾನವನಿಗೆ ವಿಚಾರದ ಗೀಳು ಹಿಡಿಯಬೇಕು. ಸೈದ್ಧಾಂತಿಕವಾದ ಒಲವು ನಮ್ಮೊಳಗೆ ಪ್ರವೇಶಿಸಬೇಕು. ಸಿದ್ಧಾಂತವನ್ನು ಮುಂದಿಟ್ಟುಕೊಂಡು ದಾರ್ಶನಿಕರು ಉದಾತ್ತವಾದ ಜೀವನ ಕಟ್ಟಿಕೊಂಡಿದ್ದಾರೆ. ಇದರಿಂದ ಜಗತ್ತಿಗೆ ಆದರ್ಶಗಳನ್ನು ಕೊಟ್ಟಿದ್ದಾರೆ. ಜಿಜ್ಞಾಸೆಗಳನ್ನು ಇಟ್ಟುಕೊಂಡು ಅವರು ಸಾಗಿದ್ದಾರೆ. ಆದರ್ಶದ ಬಗೆಗಿನ ಆಸಕ್ತಿ ನಮ್ಮದಾಗಬೇಕು. ಧರ್ಮದ ಜೊತೆಗೆ ಒಲವಿರಬೇಕು. ಯುವಕರು, ಮಕ್ಕಳು ಶ್ರೇಷ್ಠ ಚಿಂತನೆಗಳನ್ನು ಕೇಳುವುದರಿಂದ ಅವರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.

ಚಿಕ್ಕ ವಯಸ್ಸಿನಲ್ಲಿ ಬಸವಾದಿ ಪ್ರಮಥರಿಗೆ ತಾತ್ವಿಕವಾದ ಜಿಜ್ಞಾಸೆ ಹೊಳೆಯುತ್ತದೆ. ಜಿಜ್ಞಾಸೆಗೆ ವಯಸ್ಸಿನ ಅಂತರ ಇರಬಾರದು. ತಿಳಿದುಕೊಳ್ಳಲು ಯಾವುದೇ ಬಂಧನ ಇರಬಾರದು. ಅದರ ಆಚೆಗೆ ಸೈದ್ಧಾಂತಿಕ ನಿಲುವು ಉಂಟಾಗುತ್ತದೆ. ಸಾಕ್ಷಾತ್ಕಾರ ಎಂದರು ದರ್ಶನ. ದರ್ಶನದಲ್ಲಿ ಎರಡು ವಿಧ.

1) ಗುರುಹಿರಿಯರ ದರ್ಶನ/ಶರಣರ ದರ್ಶನ : ಅನುಭವಿಗಳ, ಲಿಂಗಜಂಗಮರ ದರ್ಶನ. ಗುರು ಪರಂಪರೆಯನ್ನು ಹೊರತುಪಡಿಸಿದವರಿಗೆ ದೇವರ ದರ್ಶನ. ಅದು ದರ್ಶನ ಅಷ್ಟೆ. ಆಧ್ಯಾತ್ಮಿಕ ಪರಿಭಾಷೆಯಲ್ಲಿ ದರ್ಶನ ಎನ್ನುತ್ತಾರೆ. ದೇವರ ದರ್ಶನ, ಚಂದ್ರದರ್ಶನ ಇತ್ಯಾದಿ.

2) ಪಕ್ವಜ್ಞಾನ, ಪರಿಪೂರ್ಣ ಜ್ಞಾನ : ಒಳನೋಟ ದರ್ಶನಕ್ಕೆ ಸಮಾನ. ಸ್ವರೂಪ ದರ್ಶನ. ದರ್ಶನದ ಒಳಗಡೆ ಒಂದು ಸ್ವಸ್ವರೂಪದರ್ಶನ ಇದೆ. ಅಂತರಂಗದ ದಿಗ್ದರ್ಶನ.ಕನ್ನಡಿ ಮಾನವನ ಬಹಿರಂಗದ ತಪ್ಪುಗಳನ್ನು ತಿದ್ದುತ್ತದೆ.ಹಾಗೆಯೇ ಧರ್ಮ,ತತ್ವ,ಮೌಲ್ಯಗಳು ಕನ್ನಡಿ ಇದ್ದಹಾಗೆ.ಕನ್ನಡಿ ನೋಡುವ ಅಣ್ಣಗಳಿರಾ ಜಂಗಮವ ನೋಡಿರಿಎಂದುಹೇಳುತ್ತಾರೆ. ಸೈದ್ಧಾಂತಿಕವಾದ ಒಲವು ಜೀವಪರವಾದ ನಿಲುವು ಇರಬೇಕು. ದರ್ಶನವೇ ಸಾಕ್ಷಾತ್ಕಾರ. ಮೂರು ಹಂತದಲ್ಲಿ ಸಾಕ್ಷಾತ್ಕಾರ.
ಅ) ದೈವೀ ಸಾಕ್ಷಾತ್ಕಾರ :ಕೆಲವರು ದೇವರ ಪೂಜೆ ಮಾಡುತ್ತ ದೈವವನ್ನು ಆವಾಹನೆ ಮಾಡಿಕೊಳ್ಳುತ್ತಾರೆ. ಅಲ್ಲಿರುವ ದೇವರನ್ನು ಭಾವನಾತ್ಮಕವಾಗಿ ನೋಡುತ್ತಾರೆ. ಸಾಕ್ಷಾತ್ಕಾರ ಸುಲಭದ ಹಾದಿಯಲ್ಲ. ಇದು ಪ್ರಯತ್ನದ ಮೂಲಕ ಆಗುತ್ತದೆ.

ಆ) ಸರಳತೆಯ ಸಾಕ್ಷಾತ್ಕಾರ : ಸರಳತೆಯಲ್ಲಿ ದರ್ಶನ ಇದೆ. ಆದರೆ ಆಡಂಬರದಲ್ಲಿ ಪ್ರದರ್ಶನ ಇದೆ. ಇದುವೆ ನಿಜವಾದ ನಿದರ್ಶನ. ಪ್ರದರ್ಶನದಿಂದ ನಿದರ್ಶನದ ಕಡೆಗೆ ಬರಬೇಕು.

3) ಸತ್ಯ ಸಾಕ್ಷಾತ್ಕಾರ : ಗಾಂಧೀಜಿ ಸತ್ಯದ ಸಾಕ್ಷಾತ್ಕಾರಕ್ಕಾಗಿ ಹೋರಾಡಿದರು. ಹಾಗಾಗಿ ಅನ್ವೇಷಣೆಗೆ ಒಳಗಾಗಬೇಕು. ನಾವಿಲ್ಲಿ ಸೇರಿರುವುದು ಸತ್ಸಂಗ. ಅದರಿಂದ ಒಂದಷ್ಟು ಸಂಸ್ಕಾರ. ಸಂಸ್ಕಾರದಿಂದ ಸತ್ಕಾರ್ಯ. ಅತ್ತಿಮಬ್ಬೆ ದಾನಧರ್ಮಗಳಲ್ಲಿ ಎತ್ತಿದ ಕೈ. ಮಹಾವೀರರು ಅರಿವಿನ ಕಡೆ ಹೋಗಬೇಕೆಂದು ನಿರ್ಧರಿಸಿ ಮಹಾನಾ ತ್ಯಾಗಿಯಾದರು. ಸತ್ಕಾರ್ಯದಿಂದ ಸತ್ಕಾರ ಬರುತ್ತದೆ.ಸತ್ಕಾರದಿಂದ ಸಾಕ್ಷಾತ್ಕಾರ.
ಸಮ್ಮುಖ ವಹಿಸಿದ್ದ ಶಿಕಾರಿಪುರ ಮುರುಘಾಮಠದ ಶ್ರೀ ಚನ್ನಬಸವ ಸ್ವಾಮಿಗಳು ಮಾತನಾಡಿ,ಮೊದಲು ಜ್ಞಾನದ ಸಾಕ್ಷಾತ್ಕಾರ ಆಗಬೇಕು.ಪ್ರತಿಯೊಬ್ಬರಿಗು ಸಾಕ್ಷಾತ್ಕಾರ ಆಗಬೇಕು. ಸಾಕ್ಷಾತ್ಕಾರವಾದರೆ ಅನುಭಾವವಾಗುತ್ತದೆ.ಇದುನಿತ್ಯಕಲ್ಯಾಣವಲ್ಲ, ಸತ್ಯ ಕಲ್ಯಾಣ.ನಾವು ಸತ್ಯ ವಚನವನ್ನು ನುಡಿಯಬೇಕೆಂದರು.
ವಿ.ಆರ್. ನಾಗರಾಜಯ್ಯ, ಕಾರ್ಯಕ್ರಮದ ದಾಸೋಹಿ ಅಜಿತ್‍ಪ್ರಸಾದ್ ಜೈನ್ ವೇದಿಕೆಯಲ್ಲಿದ್ದರು.ಶ್ರೀ ಬಸವನಾಗಿದೇವ ಸ್ವಾಮಿಗಳು ಭಾಗವಹಿಸಿದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಅಜಿತ್‍ಪ್ರಸಾದ್ ಜೈನ್ ಸ್ವಾಗತಿಸಿದರು. ತಿಪ್ಪೇರುದ್ರಪ್ಪ ನಿರೂಪಿಸಿದರು.

About The Author

Leave a Reply

Your email address will not be published. Required fields are marked *