April 25, 2024

Chitradurga hoysala

Kannada news portal

ಮೊಬೈಲ್ ಆ್ಯಪ್ ಮೂಲಕ ರೈತರಿಂದ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ: ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಚಾಲನೆ

1 min read


ಮೊಬೈಲ್ ಆ್ಯಪ್ ಮೂಲಕ ರೈತರಿಂದ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆ: ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಚಾಲನೆ

ಚಿತ್ರದುರ್ಗ,ಆಗಸ್ಟ್17:
2021-22ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಹಾಗೂ ಛಾಯಾಚಿತ್ರ ಸಹಿತ ಅಪ್ಲೋಡ್ ಮಾಡಬಹುದಾದ ಮೊಬೈಲ್ ಆ್ಯಪ್ ಮೂಲಕ ರೈತರಿಂದ ಬೆಳೆ ಸಮೀಕ್ಷೆ ಪ್ರಾತ್ಯಕ್ಷಿಕೆಗೆ ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.
ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿಯ ಗ್ರಾಮದ ರೈತ ಮಂಜುನಾಥ್ ಅವರ ಶೇಂಗಾ ಬೆಳೆಯನ್ನು ವೀಕ್ಷಿಸಿ ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್‍ಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಸಹ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳೆ ಸಮೀಕ್ಷೆ ಮಾಡುವುದರ ಮೂಲಕ ಬೆಳೆ ಪ್ರದೇಶಗಳ ನಿಖರ ಅಂಕಿ ಅಂಶಗಳ ಕ್ರೂಢೀಕರಣ, ಪಹಣಿಯಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಿಸಲು, ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಅಂದರೆ ಕನಿಷ್ಟ ಬೆಂಬಲ ಬೆಲೆ ಯೋಜನೆ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು, ಕೃಷಿ ಮತ್ತು ಇತರೆ ಯೋಜನೆಗಳಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಬಳಸಿಕೊಳ್ಳಲು ಸಹಕಾರಿಯಾಗುವುದು ಎಂದು ಹೇಳಿದರು.
ಎನ್.ಡಿ.ಆರ್.ಎಫ್, ಎಸ್‍ಡಿಆರ್‍ಎಫ್ ಯೋಜನೆಗಳಡಿ ಇನ್‍ಪುಟ್ ಸಬ್ಸಿಡಿ ಸ್ಕೀಮ್‍ನಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸುವುದು, ತೊಗರಿ ಮತ್ತು ಇತರೆ ಬೆಳೆಗಳಿಗೆ ಕೊಡುವ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಲು, ಬೆಳೆ ವಿಮೆ ಯೋಜನೆಯಲ್ಲಿ ರೈತರಿಂದ ವಿಮೆ ಮಾಡಲ್ಪಟ್ಟ ತಾಕುಗಳ ಬೆಳೆಗೆ ವಿರುದ್ಧವಾಗಿ ಬೆಳೆದ ತಾಕುಗಳ ಪರಿಶೀಲನೆ ಮಾಡಲು ಬಳಸಿಕೊಳ್ಳುವುದು. ಬ್ಯಾಂಕುಗಳಲ್ಲಿ ರೈತರಿಗೆ ಬೆಳೆ ಸಾಲವನ್ನು ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶವನ್ನು ಪರಿಗಣಿಸಿ ಬೆಳೆ ಸಾಲ ಮಂಜೂರು ಮಾಡಲು ಸಹಾಯವಾಗುತ್ತದೆ. ಅರ್ಹ ಫಲಾನುಭವಿಗಳ ಬೆಳೆ ವಿಮೆ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ನನ್ನ ಬೆಳೆ ನನ್ನ ಹಕ್ಕು ಇದು ರೈತರೇ ಸ್ವತಃ ತಾನು ಬೆಳದದ ಬೆಳೆಯ ಸಮೀಕ್ಷೆ ಮಾಡುವುದು. ತಾನು ಬೆಳೆದ ಬೆಳೆಯನ್ನು ಸಮೀಕ್ಷೆ ಮಾಡಿ ಬೆಳೆಯ ಮಾಹಿತಿಯ ವಿವರವನ್ನು ಸರ್ಕಾರಕ್ಕೆ ವರದಿ ಕೊಡುವ ಕೆಲಸವನ್ನು ಸ್ವಾಭಿಮಾನಿ ರೈತರು ಮಾಡುತ್ತಿದ್ದಾರೆ ಎಂದರು.
ಕಳೆದ ವರ್ಷ 80 ಲಕ್ಷ ತಾಕುಗಳ ಬೆಳೆ ವಿವರ ದಾಖಲು: ರಾಜ್ಯದಲ್ಲಿ ಸುಮಾರು 2.10 ಕೋಟಿ ರೈತರ ತಾಕುಗಳಿದ್ದು, ಕಳೆದ ವರ್ಷ 80 ಲಕ್ಷ ತಾಕುಗಳಲ್ಲಿ ರೈತರೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರವನ್ನು ದಾಖಲಿಸಿದ್ದಾರೆ. ಸಂಪೂರ್ಣವಾಗಿ ರೈತರಿಂದಲೇ ಬೆಳೆ ಸಮೀಕ್ಷೆಯ ಕಾರ್ಯ ಮಾಡಿಸಬೇಕು ಎಂದು ಉದ್ದೇಶದಿಂದ ಬೆಳೆ ಸಮೀಕ್ಷೆ ಕಾರ್ಯವನ್ನು ಪ್ರಾರಂಭ ಮಾಡಲಾಗಿದೆ ಕೃಷಿ ಸಚಿವರು ತಿಳಿಸಿದರು.
ನನ್ನ ಬೆಳೆ ನನ್ನ ಹಕ್ಕು ರೈತರ ಬೆಳೆ ಸಮೀಕ್ಷೆಗೆ ಕೇಂದ್ರ ಸರ್ಕಾರವು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೇಂದ್ರದ ಕೃಷಿ ಮಂತ್ರಿಗಳು ಬೆಳೆ ಸಮೀಕ್ಷೆ ಕಾರ್ಯವನ್ನು ದೇಶದಾದ್ಯಂತ ಎಲ್ಲ ರಾಜ್ಯಗಳಿಗೂ ವಿಸ್ತರಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ಹೇಗೆ?: ಮುಂಗಾರು ರೈತರ ಬೆಳೆ ಸಮೀಕ್ಷೆ 2021-22(Kharif season Farmer Crop Survey-2021-22) ಎಂಬ ಹೆಸರಿನ ಮೊಬೈಲ್ ಆಪ್ ಅನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ 2021-22 ವರ್ಷವನ್ನು ದಾಖಲಿಸಬೇಕು. ಮೊಬೈಲ್ ಒಟಿಪಿಯನ್ನು ನಮೂದಿಸಿ ನೊಂದಣಿ ಮಾಡಿಕೊಳ್ಳಕು. ಆಧಾರ್ ಸಂಖ್ಯೆಯನ್ನು ನಮೂದಿಸಿ ರೈತರ ಹೆಸರು, ಮೊಬೈಲ್ ಸಂಖ್ಯೆ ದಾಖಲಿಸಬೇಕು. ನಂತರ ಮಾಸ್ಟರ್ ವಿವರ ಡೌನ್‍ಲೋಡ್ ಹಾಗೂ ಪಹಣಿ ಡೌನ್‍ಲೋಡ್ ಮಾಡಬೇಕು.ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ನಂತರ ಸರ್ವೇ ನಂಬರ್, ಹಿಸ್ಸಾವನ್ನು ನಮೂದಿಸಿ ಸ್ವತಃ ಎಂದು ಆಯ್ಕೆ ಮಾಡಿ ಬೆಳೆಯ ವಿವರ ದಾಖಲಿಸಿ ಛಾಯಾಚಿತ್ರ ತೆಗೆದು ಅಪ್‍ಲೋಡ್ ಮಾಡಬೇಕು.
ಸಿಂಪರಣಿಗೆ ಆಧುನಿಕತೆ ಬಳಕೆ: ಹಿರಿಯೂರು ತಾಲ್ಲೂಕಿನ ಕೆ.ಆರ್.ಹಳ್ಳಿ ಗ್ರಾಮದ ರೈತ ಮಸಿಯಪ್ಪ ಅವರ ಜಮೀನಿನಲ್ಲಿ ಹತ್ತಿ ಬೆಳೆಯಲ್ಲಿ ಡ್ರೋನ್ ಮೂಲಕ 19:19:19 ಎನ್‍ಪಿಕೆ ದ್ರವ ರೂಪದ ರಸಗೊಬ್ಬರ ಸಿಂಪರಣೆ ಪ್ರಾತ್ಯಕ್ಷಿಕೆಗೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯೂರು ಶಾಸಕರಾದ ಪೂರ್ಣಿಮಾ ಕೆ.ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರಾದ ಪಿ.ರಮೇಶ್‍ಕುಮಾರ್ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ರೈತರು ಇದ್ದರು.

About The Author

Leave a Reply

Your email address will not be published. Required fields are marked *