April 25, 2024

Chitradurga hoysala

Kannada news portal

ಮಾದರಿ ಪತ್ರಕರ್ತ ಗುಡಿಹಳ್ಳಿ ನಾಗರಾಜ್:ಮಾಜಿ ಸಚಿವ ಆಂಜನೇಯ

1 min read

ಮಾದರಿ ಪತ್ರಕರ್ತ ಗುಡಿಹಳ್ಳಿ ನಾಗರಾಜ್:

ಮಾಜಿ ಸಚಿವ ಆಂಜನೇಯ

ಹರಪನಹಳ್ಳಿ ತಾಲೂಕು ಗುಡಿಹಳ್ಳಿ ಎಂಬ ಹಳ್ಳಿಯ ನಾಗರಾಜ್ ತನ್ನಲ್ಲಿನ ವೃತ್ತಿ ಬದ್ಧತೆ, ಸಮಾಜಮುಖಿ ಕಾರ್ಯಗಳಿಂದ ತನ್ನ ಹೆಸರಿನೊಂದಿಗೆ ಹುಟ್ಟೂರು ಗುಡಿಹಳ್ಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿ ತಂದುಕೊಟ್ಟ ಅಪರೂಪದ ಪತ್ರಕರ್ತ.

90ರ ದಶಕದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಪತ್ರಿಕೆ ವರದಿಗಾರರಾಗಿದ್ದ ವೇಳೆ ಅವರು ದಲಿತ ಚಳವಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ ರೀತಿ ಬಹಳ ಗಮನಸೆಳೆಯಿತು.

ಪತ್ರಿಕಾ ವೃತ್ತಿಗೆ ಧಕ್ಕೆ ಆಗದಂತೆ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರು, ತಮ್ಮ ಬದುಕಿನ ಕೊನೆ ಉಸಿರು ಇರುವವರೆಗೂ ರಂಗ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದು ಅವರ ಕ್ರಿಯಾಶೀಲತೆಗೆ ಸಾಕ್ಷಿ.

ಕೇವಲ ಪತ್ರಿಕಾ ವರದಿಗಳಿಗೆ ಸೀಮಿತವಾಗದೆ ಒಬ್ಬ ಪ್ರಬುದ್ಧ ಬರಹಗಾರರಾಗಿ ಗುರುತಿಸಿಕೊಂಡಿದ್ದ ಗುಡಿಹಳ್ಳಿ ನಾಗರಾಜ್, ರಂಗಭೂಮಿ ಕುರಿತು ಹಲವು ಕೃತಿಗಳನ್ನು ಹೊರತಂದಿರುವುದು ವಿಶೇಷ.

ಒಬ್ಬ ಪತ್ರಕರ್ತ ಕೇವಲ ದಿನದಿನತ್ಯ ಕಾರ್ಯಕ್ರಮಗಳ ಸುದ್ದಿಗೆ ಸೀಮಿತವಾಗಿರದೇ ಸಮಾಜಮುಖಿ ಬರಹಗಳಲ್ಲಿ ತೊಡಗಿಸಿಕೊಳ್ಳಬೇಕು, ಶೋಷಿತ ವರ್ಗದ ಧ್ವನಿಯಾಗಿ ಪತ್ರಿಕೆಯನ್ನು ರೂಪುಗೊಳಿಸಬೇಕೆಂಬ ತುಡಿತ ಹೊಂದಿದ್ದ ಅವರು, ಅದೇ ರೀತಿ ವರದಿಗಳ ಮೂಲಕ ಎಲ್ಲ ವರ್ಗದ ನೊಂದ ಜನರ ವರ್ಗಕ್ಕೆ ನ್ಯಾಯ ಕೊಡಿಸಲು ವರದಿ ಮಾಡುತ್ತಿದ್ದರು.

ರಂಗಭೂಮಿ, ಸಾಹಿತ್ಯ ಕ್ಷೇತ್ರ ಸೇರಿದಂತೆ ವಿವಿಧ ರೀತಿ ಸಾಂಸ್ಕೃತಿಕ ಚಟುವಟಿಕೆಗಳ ಉಳಿವು, ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದ ಗುಡಿಹಳ್ಳಿ ಅವರು, ಎಲೆಮರೆ ಕಾಯಿಯಂತಿದ್ದ ಕಲಾವಿದರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸುತ್ತಿದ್ದರು.

ತಮ್ಮ ಕೊನೆ ಉಸಿರು ಇರುವವರೆಗೂ ಅವರ ಸಮಾಜಮುಖಿ ಕಾರ್ಯಗಳು ಮಾದರಿ ಪತ್ರಕರ್ತರನ್ನಾಗಿ ಅವರನ್ನು ಗುರುತಿಸುವಂತೆ ಮಾಡಿದೆ. ಅವರ ಅಗಲಿಕೆ ನಿಜಕ್ಕೂ ನಮ್ಮಂತಹ ರಾಜಕಾರಣಿಗಳಿಗೆ ತುಂಬಲಾರದ ನಷ್ಟವಾಗಿದೆ. ಮೀಗಿಲಾಗಿ ಸ್ವತಃ ತಮ್ಮ ಪ್ರತಿಭೆ ಹೇಳಿಕೊಳ್ಳಲು ಹಿಂಜರಿಕೆ ಸ್ವಭಾವದ ಕಲಾವಿದರಿಗೆ ತುಂಬಲಾರದ ನಷ್ಟವಾಗಿದೆ.

ಗುಡಿಹಳ್ಳಿ ನಾಗರಾಜ್ ಅವರ ನಿಧನ ರಂಗಭೂಮಿ, ಪತ್ರಿಕಾ ಕ್ಷೇತ್ರ, ಸಾಹಿತ್ಯ ಚಟುವಟಿಕೆ, ಅಲಕ್ಷಿತ ಸಮುದಾಯದ ಕಲಾವಿದರಿಗೆ ಬಹಳಷ್ಟು ನಷ್ಟವನ್ನುಂಟು ಮಾಡಿದೆ.

ಇವರು ಹಾಕಿಕೊಟ್ಟ ಹಾದಿಯಲ್ಲಿ ಯುವ ಪತ್ರಕರ್ತರು, ರಂಗಕರ್ಮಿಗಳು ಸಾಗುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕೆಂದು ಕೋರುತ್ತೇನೆ.

About The Author

Leave a Reply

Your email address will not be published. Required fields are marked *