March 29, 2024

Chitradurga hoysala

Kannada news portal

ಜನಾಂಗದ ಅಭಿವೃದ್ಧಿಗೆ ಇಟ್ಟ ಹೆಜ್ಜೆ ಇತಿಹಾಸ ನಿರ್ಮಿಸುವಂತಿರಬೇಕು : ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

1 min read

ಜನಾಂಗದ ಅಭಿವೃದ್ಧಿಗೆ ಇಟ್ಟಹೆಜ್ಜೆ ಇತಿಹಾಸ ನಿರ್ಮಿಸುವಂತಿರಬೇಕು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ.

ಸೆ.12 ರಂದು ರಾಜ್ಯ ಸರ್ಕಾರಿ ಭೋವಿ ನೌಕರರ ಸಮ್ಮೇಳನ ಮತ್ತು ಹಿರಿಯ ಐ.ಎ.ಎಸ್ ಆಧಿಕಾರಿ ಮಂಜುನಾಥ ಪ್ರಸಾದ್ ಅವರಿಗೆ ಸನ್ಮಾನ…

ಚಿತ್ರದುರ್ಗ:
ಸಮಾಜ ಹಾಗೂ ಜನಾಂಗದ ಅಭಿವೃದ್ಧಿಗೆ ಇಟ್ಟ ಹೆಜ್ಜೆ ಇತಿಹಾಸ ನಿರ್ಮಿಸುವಂತಿರಬೇಕು ಎಂದು ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ಭೋವಿ ನೌಕರರ ಸಮ್ಮೇಳನ ಮತ್ತು ಮಂಜುನಾಥ ಪ್ರಸಾದ್ ಅವರಿಗೆ ಅಭಿನಂದಿಸುವ ಸಮಾರಂಭ ಕುರಿತು ಆಯೋಜಿಸಿದ್ದ ಸಭೆ ಸಾನಿಧ್ಯವಹಿಸಿ ಮಾತನಾಡಿದ ಅವರು, ಸಂಘಟನೆಗಳಲ್ಲಿ ಒಡಕು ಬರಬಾರದು, ಸಂಘಟನೆಯ ಉದ್ದೇಶ ಮತ್ತು ಆಶೆಯಗಳಿಗೆ ಪೂರಕವಾಗಿ ಕೆಲಸ ಮಾಡಿದರೆ ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಒಗ್ಗಟ್ಟಿನಿಂದ ಸಂಘಟನೆ ಕಟ್ಟಿ ಅದನ್ನು ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿರುತ್ತದೆ. ಅದನ್ನು ಅರಿತು ಜೀವನವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಘಟನೆ ಎಂದರೆ ಕೂಡುವುದು ಎಂದು, ಕೂಡಿ ಬೆಳೆದರೆ ಉತ್ತುಂಗದ ಗುರಿಯನ್ನು ಮುಟ್ಟುವ ಕೆಲಸವಾಗುತ್ತದೆ. ಸಂಘಟನೆ ಹೊಡೆದು ಹೋದರೆ ಉದ್ದೇಶಿತ ಕಾರ್ಯಗಳು ವಿಫಲವಾಗುತ್ತವೆ. ಭವಿಷ್ಯವನ್ನು ರೂಪಿಸಿಕೊಳ್ಳಲು ಸಂಘಟನೆಯನ್ನು ಕಟ್ಟಬೇಕೆ ವಿನಃ ಸ್ವಾರ್ಥಕ್ಕಾಗಿ ಸಂಘಟನೆಯನ್ನು ಬಲಿಕೊಡಬಾರದು. ಜನಾಂಗದ ಅಭಿವೃದ್ಧಿಗಾಗಿ ಕಟ್ಟುವ ಸಂಘಟನೆಗಳಲ್ಲಿ ಅನೇಕ ಭಿನ್ನಾಭಿಪ್ರಾಯಗಳು ಮೂಡುತ್ತವೆ. ಅಂತಹ ಸಂದರ್ಭದಲ್ಲಿ ಸತ್ಯಗಳನ್ನು ಮತ್ತು ವಾಸ್ತವಗಳನ್ನು ಚರ್ಚಿಸಿ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಮಾಜವನ್ನು ಸಂಘಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಮಾತನಾಡಿ, ವಡ್ಡರು ಕೂಡಿಕೆಟ್ಟರು ಎನ್ನುವ ಮಾತನ್ನು ಹುಸಿಗೊಳಿಸುವ ರೀತಿಯಲ್ಲಿ ಸಮಾಜವನ್ನು ಸಂಘಟನೆ ಮಾಡಬೇಕಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೊದಲು ಸಂಘಟಿಸಬೇಕಿದೆ. ಆ ಸಂಘಟನೆಯನ್ನು ಬಲಗೊಳಿಸುವ ಮೂಲಕ ರಾಜ್ಯಮಟ್ಟದಲ್ಲಿ ಸಂಘಟನೆಯನ್ನು ಬೆಳೆಸುವ ಕಾರ್ಯಕ್ಕೆ ಪ್ರತಿಯೊಬ್ಬ ನೌಕರರು ಶ್ರಮಿಸಬೇಕು. ಸಂಘಟನೆ ಮಾಡುವ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಬಲಿಯಾಗದೇ ಸಂಘಟನೆಯನ್ನಷ್ಟೆ ದೃಷ್ಠಿಯಲ್ಲಿಟ್ಟುಕೊಂಡು ಸಮುದಾಯದ ನೌಕರರನ್ನು ಒಗ್ಗೂಡಿಸಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಶಿವರುದ್ರಯ್ಯ ಮಾತನಾಡಿ, ಸಂಘಟನೆಯಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ಸಿಗುವುದಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಒಳ್ಳೆ ಕಾರ್ಯಗಳನ್ನು ಮಾಡಬೇಕು. ಒಳ್ಳೆಯ ಕಾರ್ಯಗಳನ್ನು ಯಾರು ಮಾಡುತ್ತಾರೋ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಅಂತಹ ಕೆಲಸಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ಭೋವಿ ನೌಕರರ ಸಂಘದ ಪ್ರತಿಯೊಬ್ಬ ಕಾರ್ಯಕರ್ತರು ಸಿದ್ಧರಿರಬೇಕು ಎಂದು ಹೇಳಿದರು.
ಭೋವಿ ಜನಾಂಗದ ನಿವೃತ್ತ ಅಂಚಿನಲ್ಲಿರುವ ನೌಕರರನ್ನು ಮತ್ತು ಐ.ಎ.ಎಸ್ ಹಾಗೂ ಕೆ.ಎ.ಎಸ್. ಶ್ರೇಣಿಯ ಅಧಿಕಾರಿಗಳನ್ನು ಹಾಗೂ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಸೆಪ್ಟೆಂಬರ್-೧೨ ರಂದು ಸನ್ಮಾನಿಸಲು ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕಾರಿಪುರದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಿನ್ನಪ್ಪ, ಗದಗಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಲಕ್ಷ್ಮಣ್ ಗುಂಚಿಕರ್, ಹುಬ್ಬಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ್‌ ಗಜ್ಜಿ, ಹಿರಿಯೂರು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ರಾಜ್ಯದ ೨೦ ಜಿಲ್ಲೆಯ ಭೋವಿ ನೌಕರರ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *