April 20, 2024

Chitradurga hoysala

Kannada news portal

ಬಳ್ಳಾರಿಯ ಶೇಖ್‍ಷಾವಲಿ ಎಂಬ ಮುಸ್ಲಿಂ ಯುವಕ ಸಮಾಜ ಸೇವಾದೀಕ್ಷೆ ಪಡೆದು ಮರುಳಶಂಕರ ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ

1 min read

ಬಳ್ಳಾರಿಯ ಶೇಖ್‍ಷಾವಲಿ ಎಂಬ ಮುಸ್ಲಿಂ ಯುವಕ ಸಮಾಜ ಸೇವಾದೀಕ್ಷೆ ಪಡೆದು ಮರುಳಶಂಕರ ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ

ಚಿತ್ರದುರ್ಗ:

ಮುಸ್ಲಿಂ ಸಮಾಜದ ಉಪ ಪಂಗಡವಾದ ನದಾಫ್ ಸಮುದಾಯದವರು ತಡವಾಗಿಯಾದರೂ ಮುರುಘಾಮಠಕ್ಕೆ ಬಂದು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಂಘಟನೆಯಾಗಲು ಬಂದಿದ್ದು ಸಂತೋಷವಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀ ಮುರುಘಾಮಠದಲ್ಲಿಂದು ನಡೆದ ನದಾಫ್-ಪಿಂಜಾರ ಸಮಾಜದಿಂದ ಕೊರೋನಾ ವಾರಿಯರ್ಸ್‍ರವರಿಗೆ ಸನ್ಮಾನ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಶುನಾಳ ಶರೀಫರು ನಾಡಿನ ಮಹಾನ್ ತತ್ವಪದಕಾರರು, ತತ್ತ್ವಪದಗಳನ್ನು ರಚಿಸಿ ನಾಡಿಗೆ ಕೀರ್ತಿ ತಂದ ಸಂತರಾಗಿದ್ದಾರೆ. ಅಷ್ಟೇ ಅಲ್ಲದೇ 12ನೇ ಶತಮಾನದಲ್ಲಿ ಮರುಳಶಂಕರ ದೇವರು ಎಂಬ ಶರಣರು ಮೂಲತಃ ಮುಸ್ಲಿಂ ಸಮಾಜಕ್ಕೆ ಸೇರಿದ ಇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಒಬ್ಬ ಶ್ರೇಷ್ಠ ಶರಣರಾಗಿ ಇತಿಹಾಸವಾಗಿದ್ದಾರೆ. ಮುರುಘಾಮಠದಿಂದ ಪ್ರತಿಯೊಂದು ಜನಾಂಗಕ್ಕೂ ಜಂಗಮದೀಕ್ಷೆಯನ್ನು ನೀಡಿ ಗುರುಪೀಠಗಳನ್ನು ಸ್ಥಾಪಿಸಲಾಗಿದೆ. 2001ರಲ್ಲಿ ಬಳ್ಳಾರಿಯ ಶೇಖ್‍ಷಾವಲಿ ಎಂಬ ಮುಸ್ಲಿಂ ಯುವಕ ಸಮಾಜ ಸೇವಾದೀಕ್ಷೆಯನ್ನು ಪಡೆದು ಮರುಳಶಂಕರ ಸ್ವಾಮೀಜಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ ಎಂದರು.
ಸಮ್ಮುಖ ವಹಿಸಿದ್ದ ರಾಣೇಬೆನ್ನೂರಿನ ಶ್ರೀ ಬಸವ ಮರುಳಶಂಕರ ಸ್ವಾಮಿಗಳು ಮಾತನಾಡಿ, 2001ರಲ್ಲಿ ನಾನು ಮುರುಘಾ ಶರಣರಿಂದ ಸಮಾಜಸೇವಾದೀಕ್ಷೆ ಪಡೆದು, ಗುರುಗಳ ಮಾರ್ಗದರ್ಶನದಲ್ಲಿ ನದಾಫ್ ಸಮಾಜವನ್ನು ಸಂಘಟನೆ ಮಾಡುತ್ತಿರುವೆ. ಪಿಂಜಾರ ಸಮುದಾಯದಲ್ಲಿ ಬಡವರು, ಶ್ರಮಿಕರು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಕೊಡೇಕಲ್ ಸ್ವಾಮಿಗಳು ಮಾತನಾಡಿ, ಪಿಂಜಾರ ಸಮುದಾಯಕ್ಕೆ ಇದುವರೆಗೂ ಸಾಮಾಜಿಕ ನ್ಯಾಯ ದೊರೆತಿಲ್ಲ. ನಮ್ಮ ಆಶ್ರಮದಿಂದ ನೂರಾರು ಅನಾಥರಿಗೆ ಪಿಂಜಾರ ಸಮುದಾಯದಿಂದ ಉಚಿತ ಶಿಕ್ಷಣವನ್ನು ಕೊಡಲಾಗುತ್ತಿದೆ. ಜಾತಿಭೇದ ಮರೆತು ಸಮಾಜಕ್ಕೆ ಕೆಲಸ ಮಾಡಬೇಕೆಂದರು.
ಧಾರವಾಡ ಸಂಗಮಾನಂದ ಸ್ವಾಮಿಗಳು ಮಾತನಾಡಿ, ಮುರುಘಾ ಶರಣರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಂಘಟಿತರಾಗಿ ಸಮಾಜವನ್ನು ಮುನ್ನಡೆಸೋಣ ಎಂದರು.
ರಾಜ್ಯಾಧ್ಯಕ್ಷ ಅಬ್ದುಲ್ ದರ್ಗಾ ಮಾತನಾಡಿದರು. ಬಾಗಲಕೋಟೆ ಶರೀಫ್ ಶಾಸ್ತ್ರಿಗಳು ಪ್ರವಚನ ನೀಡಿದರು. ಪಿಂಜಾರ ಸಮಾಜದ ಕೊರೋನಾ ವಾರಿಯರ್ಸ್‍ಗಳಿಗೆ ಸನ್ಮಾನ ಮಾಡಲಾಯಿತು.
ಯರನಾಳ ಶ್ರೀ ಸಂಗನಬಸವ ಸ್ವಾಮಿಗಳು, ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು, ದಾವಣಗೆರೆಯ ಶ್ರೀ ಬಸವಪ್ರಭು ಸ್ವಾಮಿಗಳು, ಡಾಬಸ್‍ಪೇಟೆಯ ಶ್ರೀ ಬಸವರಮಾನಂದ ಸ್ವಾಮಿಗಳು, ಚಳ್ಳಕೆರೆಯ ಶ್ರೀ ಬಸವಕಿರಣ ಸ್ವಾಮಿಗಳು ಕಾರ್ಯಕ್ರಮದಲ್ಲಿದ್ದರು.

About The Author

Leave a Reply

Your email address will not be published. Required fields are marked *