April 18, 2024

Chitradurga hoysala

Kannada news portal

ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶಗೆ ಅಭಿನಂದನೆ ಮತ್ತು ಕೃತಿಗಳ ಲೋಕಾರ್ಪಣೆ

1 min read

ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶಗೆ ಅಭಿನಂದನೆ ಮತ್ತು ಕೃತಿಗಳ ಲೋಕಾರ್ಪಣೆ

ಹೊಳಲ್ಕೆರೆ: ದಿನಾಂಕ 11.09.2021 ರಂದು ಹೊಳಲ್ಕೆರೆಯಲ್ಲಿ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗು ಸಾಧು ಲಿಂಗಾಯತ ಸಮಾಜದ ಆಶ್ರಯದಲ್ಲಿ ರಾಷ್ಟ್ರ ರಾಜ್ಯ ಹಾಗು ಜಿಲ್ಲಾ ಉತ್ತಮ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಅಭಿನಂದನೆ ಹಾಗು ಶರಣ ಟಿ.ಪಿ.ಉಮೇಶ್ ರವರ ಪುಸ್ತಕಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ಧ ಸಿರಿಗೆರೆ ತರಳಬಾಳು ಸಾಣೆಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ದೇವರಿಗೆ ಬೀಗ, ವಚನವಾಣಿ, ಅಪ್ಪ ಕೊಡಿಸಿದ ಮೊದಲ ಪುಸ್ತಕ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿ ಶಿಕ್ಷಕರನ್ನು ಗೌರವಿಸಿದರು. ಶಿಕ್ಷಕರು ರಾಷ್ಟ್ರದ ಶಿಲ್ಪಿಗಳು ಅವರೇ ಮಕ್ಕಳ ಭವಿಷ್ಯದ ನಿರ್ಮಾಪಕರು. ಶಿಕ್ಷಕರ ಯೋಗ್ಯತೆಯ ಮೇಲೆ ಸಮಾಜದ ಯೋಗ್ಯತೆ ನಿರ್ಧಾರಿತವಾಗುತ್ತದೆ. ಗುರುಗಳು ಸಕಲ ಕಲೆಗಳ ತವರು. ಯಾವತ್ತು ಕ್ರಿಯಾಶೀಲ ಚಿಂತನೆಗಳನ್ನು ಮೈಗೂಡಿಸಿಕೊಂಡು ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಬಿಡುವಿನ ಸಮಯದಲ್ಲಿ ಸಮಾಜೋಪಯೋಗಿ ಕಾರ್ಯದಲ್ಲಿ ಮಗ್ನರಾಗಬೇಕು. ಸಮಾಜದ ಸರ್ವ ಸದಸ್ಯರು ಒಗ್ಗಟ್ಟಾಗಿ ನಡೆಯಬೇಕು. ನೈತಿಕ ಆಧ್ಯಾತ್ಮಿಕ ಬಲ ವೃದ್ಧಿಗೊಳಿಸಿಕೊಳ್ಳಬೇಕು. ಅಕ್ಷರ ಜ್ಞಾನದ ಜೊತೆ ಸಾಂಸ್ಕೃತಿಕ ಅರಿವು ಬೆಳೆಸಿಕೊಳ್ಳಬೇಕು. ಟಿ.ಪಿ.ಉಮೇಶ್ ರವರು ಉತ್ತಮ ಸಜ್ಜನ ಶಿಕ್ಷಕರಾಗಿರುವುದರ ಜೊತೆ ಬರವಣಿಗೆಯಲ್ಲಿಯೂ ಪ್ರತಿಭೆ ಹೊಂದಿದ್ದಾರೆ. ಈ ಕೃತಿಗಳು ಅವರ ಸೃಜನಶೀಲ ವ್ಯಕ್ತಿತ್ವದ ದ್ಯೋತಕಗಳು. ತಮ್ಮ ಚಿಂತನೆಗಳನ್ನು ದಾಖಲಿಸುವ ಕೆಲಸ ಮಾಡಿದ್ದಾರೆ. ಮುಂದೆ ಇನ್ನು ಹೆಚ್ಚಿನ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ಉಪನ್ಯಾಸ ನೀಡಿದ ನಿವೃತ್ತ ಪ್ರಾಚಾರ್ಯರಾದ ಐ.ಜಿ.ಚಂದ್ರಶೇಖರಯ್ಯ ಅವರು ಮನುಷ್ಯ ಹಾಲುಂಡು ಹಾಲಾಹಲ ಕಕ್ಕುವ ಕೆಲಸ ಮಾಡಬಾರದು. ಸಂಘಟನೆಗಳು ಮಾನವ ಸಮಾಜದ ಉದ್ಧಾರಕ್ಕೆ ಶ್ರಮಿಸಬೇಕು ವಿಘಟಿಸುವ ದುಷ್ಟ ಸನ್ನಾಹಗಳ ಅಡಗಿಸಬೇಕು. ಹಣಕ್ಕಿಂತ ಗುಣಕ್ಕೆ ಪ್ರಾಧಾನ್ಯತೆ ನೀಡಿ ಅಕ್ಷರದ ಅರಿವಿನ ಮೂಲಕ ಮತ್ತೆ ಕಲ್ಯಾಣದಂತ ಸಮಾಜ ನಿರ್ಮಿಸುವತ್ತ ಸಾಗಬೇಕು. ಉಮೇಶರವರು ಹಾಗು ನಾಗರಾಜುರವರು ರಾಜ್ಯ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ ಪಡೆದು ಸಮಾಜಕ್ಕೆ ನಾಡಿಗೆ ಕೀರ್ತಿ ತಂದಿದ್ದಾರೆ. ಎಲ್ಲ ಶಿಕ್ಷಕರು ಉತ್ತಮತೆಯ ಕಡೆಯಿಂದ ಅತ್ಯುತ್ತಮ ಕಾರ್ಯದ ಕಡೆಗೆ ಸಾಗಬೇಕು. ಹೆಚ್ಚು ಅಧ್ಯಯನ ಮಕ್ಕಳ ಕುರಿತು ಕಾಳಜಿ ಸಮಾಜದ ಕುರಿತು ಕಳಕಳಿ ಸದಾ ಕಾಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಿ.ಎಂ.ನಾಗರಾಜ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಪಿ.ಉಮೇಶ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬಸವಂತಕುಮಾರ ಹಾಗು ರೇಷ್ಮಾ ಫರ್ವೀನರವರನ್ನು ಮತ್ತು ತಾಲ್ಲೋಕಿನ ವಿವಿಧ ಶಾಲೆಗಳ 24 ಜನ ಕ್ರಿಯಾಶೀಲ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಅಭಿಪ್ರಾಯ ವ್ಯಕ್ತಪಡಿಸಿದ ಟಿ.ಪಿ.ಉಮೇಶ್ ಮಕ್ಕಳೆಮಗೆ ದೇಶ ಮಕ್ಕಳೆಮಗೆ ವಿಶ್ವ ಮಕ್ಕಳೇ ಭವಿಷ್ಯ, ಶಾಲೆ ಸಮಾಜ ಸರ್ಕಾರ ನನಗೆ ಏನು ಕೊಟ್ಟಿತು ಎಂಬುದಕ್ಕಿಂತ ಶಾಲೆಗೆ ಸಮಾಜಕ್ಕೆ ಸರ್ಕಾರಕ್ಕೆ ನಾನು ಏನು ನೀಡಿದೆ ಎಂದು ಪ್ರಶ್ನಿಸಿಕೊಳ್ಳುವೆ. ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ನನ್ನ ಜೀವನ ಮುಡಿಪಾಗಿಟ್ಟಿರುವೆ ಎಂದು ತಿಳಿಸಿ ಪ್ರೋತ್ಸಾಹಿಸುವ ಕುಟುಂಬದವರನ್ನು ಇಲಾಖೆ ಅಧಿಕಾರಿಗಳನ್ನು ಸಮಾಜ ಬಾಂಧವರನ್ನು ಶಿಕ್ಷಕ ಮಿತ್ರರನ್ನು ಸ್ಮರಿಸಿ ಕೃತಜ್ಞತೆ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತರಳಬಾಳು ನೌಕರರ ಸಂಘದ ಅಧ್ಯಕ್ಷರಾದ ಜಿ.ಎ. ದೇವರಾಜಯ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಲೋಕೇಶ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಿ.ಎಂ.ಶಿವಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷರಾದ ಕೆ.ಎಂ.ಶಿವಕುಮಾರ್, ಜಿ.ಎನ್.ನಾಗಲಿಂಗಪ್ಪ, ಕೆ.ಎಂ.ರುದ್ರಪ್ಪ, ತರಳಬಾಳು ಸಂಘದ ಕಾರ್ಯದರ್ಶಿ ಜಿ.ಆರ್. ಬಸವರಾಜಪ್ಪ, ಉಪಾಧ್ಯಕ್ಷರಾದ ಜಗದೀಶ ಬಾಬು, ಖಜಾಂಚಿ ಎಂ.ಪ್ರಕಾಶ ಮತ್ತು ಎಲ್ಲ ನಿರ್ದೇಶಕರು ತಾಲ್ಲೂಕಿನ ಶಿಕ್ಷಕರು ಉಪಸ್ಥಿತರಿದ್ದರು. ಸರ್ವರಿಗು ಉಪಾಹಾರ ವ್ಯವಸ್ಥೆಯನ್ನು ನೀಲಕಂಠಪ್ಪರ ಮಗ ಕಾಂತರಾಜ್ ನಿರ್ವಹಿಸಿದರು. ಗಿರಿಜಮ್ಮ ಹಾಗು ಟಿ.ಬಿ.ಅನಿತಾ ವಚನಗೀತೆ ಹಾಡಿದರು, ಎಂ.ಸಿ.ರುದ್ರಯ್ಯ ಪ್ರಾಸ್ತಾವಿಕ ನುಡಿದರು, ಎಸ್.ಜಿ.ಹಾಲೇಶ ಕಾರ್ಯಕ್ರಮ ನಿರೂಪಿಸಿದರು, ಜೈಪ್ರಕಾಶ್ ವಂದಿಸಿದರು.

About The Author

Leave a Reply

Your email address will not be published. Required fields are marked *