March 28, 2024

Chitradurga hoysala

Kannada news portal

ಎರಡು ಕೋರ್ಸ್‍ಗಳಲ್ಲಿ ಇದೇ ವರ್ಷ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭ; ಉನ್ನತ ಶಿಕ್ಷಣ ಸಚಿವರಾದ ಡಾ; ಸಿ.ಎನ್.ಅಶ್ವಥ್‍ನಾರಾಯಣ

1 min read

ಎರಡು ಕೋರ್ಸ್‍ಗಳಲ್ಲಿ ಇದೇ ವರ್ಷ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆರಂಭ; ಉನ್ನತ ಶಿಕ್ಷಣ ಸಚಿವರಾದ ಡಾ; ಸಿ.ಎನ್.ಅಶ್ವಥ್‍ನಾರಾಯಣ.

ಚಿತ್ರದುರ್ಗ,ಸೆಪ್ಟೆಂಬರ್18:
ಚಳ್ಳಕೆರೆ ನೂತನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ಕೋರ್ಸ್‍ಗಳಲ್ಲಿ ಇದೇ ವರ್ಷ ಕಾಲೇಜು ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ; ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
ಅವರು ಇಂದು (ಸೆ.18) ಚಳ್ಳಕೆರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಕಟ್ಟಡ ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು ಅತ್ಯುತ್ತಮವಾದ ಸುಸಜ್ಜಿತವಾದ ಕಟ್ಟಡ ಇದಾಗಿದೆ. 15 ಎಕರೆ ವಿಸ್ತೀರ್ಣದಲ್ಲಿ ಕ್ಯಾಂಪಸ್ ಇದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಯುವ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ವರ್ಷ ಆರ್ಟಿಫಿಷಿಯಲ್ ಇಂಟಲಿಜೆಂಟ್ ಮತ್ತು ಮಷಿನ್ ಲರ್ನಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್‍ನೊಂದಿಗೆ ಕಾಲೇಜು ಆರಂಭವಾಗಲಿದೆ. ಇತ್ತೀಚಿನ ದಿನಗಳಲ್ಲಿ ರೋಬೋಟ್ ತಾಂತ್ರಿಕತೆ ಹೆಚ್ಚುತ್ತಿದೆ ಹಾಗೂ ಆಟೋಮೊಬೈಲ್‍ನಲ್ಲಿ ಇಂಧನ ವಾಹನಗಳ ಉತ್ಪಾದನೆ ಕಡಿಮೆ ಮಾಡಲಾಗುತ್ತಿದ್ದು ವಿದ್ಯುತ್ ಚಾಲಿತ ಹಾಗೂ ಸಿಎನ್‍ಜಿ ಸೇರಿದಂತೆ ಹೈಬ್ರೀಡ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್‍ಗೆ ಹೆಚ್ಚಿನ ಮಹತ್ವ ಬರಲಿದೆ. ಆಟೋ ಮೊಬೈಲ್ ಉತ್ಪಾದಕ ಪ್ಯಾಕೇಜ್ ಆಗಿ ಸರ್ಕಾರ 26 ಸಾವಿರ ಕೋಟಿಯಷ್ಟು ಆರ್ಥಿಕ ಪ್ಯಾಕೇಜ್ ನೀಡಿದೆ ಎಂದರು.
ರಾಜ್ಯದಲ್ಲಿ 25 ಕಡೆ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಇದನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹಾಗೂ ಚಿತ್ರದುರ್ಗದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವವರಿಗೆ ಉದ್ಯೋಗ ಭರವಸೆ ಇರುತ್ತದೆ. ಜಾಗತಿಕ ಮಟ್ಟದಲ್ಲಿ ಈ ಸಂಸ್ಥೆಯಿಂದ ಮಾಡಿದ ಸ್ಪರ್ಧೆಯಲ್ಲಿ ಐದು ಪ್ರಶಸ್ತಿಗಳನ್ನು ಪಡೆಯಲಾಗಿರುತ್ತದೆ. ಈ ಸಂಸ್ಥೆಗಳನ್ನು ನಡೆಸಲು ದೊಡ್ಡ ದೊಡ್ಡ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗೆ ಉದ್ಯೋಗ ಖಾತರಿ ಇರುತ್ತದೆ. ಈ ಜಿಲ್ಲೆಯ ಯುವ ಸಮೂಹ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಎಲ್ಲಾ ರಂಗಗಳಲ್ಲಿ ಶಿಕ್ಷಣ, ಕೌಶಲ್ಯತೆ ಬಂದಾಗ ಆರ್ಥಿಕ ಅಭಿವೃದ್ದಿಯಾಗುತ್ತದೆ. ಶಿಕ್ಷಣ ಇದ್ದಾಗ ಅದರ ಕೌಶಲ್ಯತೆ ಹೆಚ್ಚುತ್ತದೆ. ಕೃಷಿಯಲ್ಲಿಯು ತಾಂತ್ರಿಕತೆಯನ್ನು ಬಳಕೆ ಮಾಡಿಕೊಂಡಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದೆ ಎಂದು ತಾಂತ್ರಿಕತೆ ಮಹತ್ವದ ಬಗ್ಗೆ ತಿಳಿಸಿದರು.
ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಮಾತನಾಡಿ ಕೊರೋನಾ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆ ಮಾಡಲಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಇದೇ ರೀತಿ ಹಲವಾರು ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲಾಗಿದೆ.
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ವ್ಯಾಸಂಗ ಮಾಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಈಗಾಗಲೇ ಪ್ರಧಾನಮಂತ್ರಿಗಳು ಕೌಶಲ್ಯಾಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ ವಿವಿಧ ಕೋರ್ಸ್‍ಗಳನ್ನು ತೆರೆಯಲಾಗಿದ್ದು ಈ ಮೂಲಕ ಉದ್ಯೋಗಾವಕಾಶ ಹೆಚ್ಚಿಸಲಾಗಿದೆ ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿಯವರು ಮಾತನಾಡಿ ದಲಿತರಿಗೆ, ರೈತರಿಗೆ ತಾಂತ್ರಿಕ ಸ್ಪರ್ಶವಾಗಬೇಕು. ಇದರಿಂದ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಎಂಎಸ್‍ಎಂಇ ರಡಿ ದೇಶದಲ್ಲಿ ಪ್ರತಿ ವರ್ಷ 50 ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು ಉದ್ಯೋಗಾವಕಾಶ ಕಲ್ಪಿಸಿದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಟಿ.ರಘುಮೂರ್ತಿಯವರು ಮಾತನಾಡಿ 15 ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ 10 ಎಕರೆ ಜಾಗದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಟಿಟಿಸಿ ಕೇಂದ್ರದಿಂದ ತಾಲ್ಲೂಕಿನ ಯುವ ಸಮೂಹಕ್ಕೆ ಅನುಕೂಲವಾಗಲಿದೆ.
ಕಲವೊಂದು ಕಾರಣದಿಂದ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರ ಮಾಡಲಾಗಿತ್ತು. ಪುನಃ ಒತ್ತಾಯದ ಮೇರೆಗೆ ವಾಪಸ್ ಪಡೆದು ವಿಶ್ವವಿದ್ಯಾನಿಲಯದ ಕಾಲೇಜಾಗಿ ಉಳಿಸಲಾಗಿದೆ. ಇಂಜಿನಿಯರಿಂಗ್, ಜಿಟಿಟಿಸಿ 2018 ಕ್ಕಿಂತ ಮುಂಚೆ ಮಂಜೂರಾದರೂ 2018-19, 19-20 ರಲ್ಲಿ ಹೆಚ್ಚಿನ ಪ್ರಗತಿ ಈ ಕಾಲೇಜುಗಳ ನಿರ್ಮಾಣದಲ್ಲಿ ಕಾಣಬಹುದಾಗಿದ್ದು ಕ್ಷೇತ್ರದ ಜನರು ಇದರ ಅನುಕೂಲ ಮಾಡಿಕೊಳ್ಳಬೇಕೆಂದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ; ವೈ.ಎ.ನಾರಾಯಣಸ್ವಾಮಿ, ಡಾ; ಕೆ.ಚಿದಾನಂದಗೌಡ, ನಗರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ಜಯತುಬಿ, ಜಿಟಿಟಿಸಿ ಡಾ; ರಮೇಶ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಬೇನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *