Recent Posts

October 17, 2021

Chitradurga hoysala

Kannada news portal

ಅಪರೂಪದ ಕೃತಿ ಲೋಕಾರ್ಪಣೆ : ಡಾ. ಲೋಕೇಶ ಅಗಸನಕಟ್ಟೆಯವರ ವೈಷ್ಣವ ಜನತೋ (ಕಾದಂಬರಿ)

1 min read

ಅಪರೂಪದ ಕೃತಿ ಲೋಕಾರ್ಪಣೆ

ಡಾ. ಲೋಕೇಶ ಅಗಸನಕಟ್ಟೆಯವರ
ವೈಷ್ಣವ ಜನತೋ (ಕಾದಂಬರಿ)

ಗಾಂಧಿ ಮತ್ತು ಅಂಬೇಡ್ಕರರ ತತ್ವಸಿದ್ಧಾಂತವನ್ನು ಸಮನ್ವಯಗೊಳಿಸಿ ಜಾತ್ಯತೀತ ಸಮಾಜವೊಂದನ್ನು ಕಟ್ಟುವ ಸಂಭಾವ್ಯತೆಯ ಶೋಧ ಮಾಡಿ ಕಟ್ಟಿದ ಕನ್ನಡದ ಮೊದಲ ಕಾದಂಬರಿ ಚಿತ್ರದುರ್ಗದಲ್ಲಿ ಶನಿವಾರ ಲೋಕಾರ್ಪಣೆಗೊಳ್ಳಲಿದೆ.

ಗಾಂಧಿಗೆ ಪ್ರಿಯವಾದ ʻವೈಷ್ಣವ ಜನತೋʼ ಭಜನೆಯ ಶೀರ್ಷಿಕೆಯನ್ನು ಹೊಂದಿರುವ ಈ ಕಾದಂಬರಿಯ ರಚನೆಕಾರರು ಡಾ. ಲೋಕೇಶ ಅಗಸನಕಟ್ಟೆ. ಕಳೆದ ಮೂರು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಕಥೆ, ವಿಮರ್ಶೆ, ನಾಟಕ, ಕಾವ್ಯವನ್ನೂ ಬರೆದಿರುವ ಇವರ ಎರಡನೆಯ ಕಾದಂಬರಿ ಇದು.

ವಾಸ್ತವ ಮಾರ್ಗದಲ್ಲಿ ಬರೆದ, ಬಯಲುಸೀಮೆಯ ʻಮದುಮಗಳುʼ ಎಂದು ಗುರುತಿಸಿಕೊಂಡಿರುವ ಈ ಕಾದಂಬರಿಯು ಸಾಮಾಜಿಕ, ರಾಜಕೀಯ ಹಾಗೂ ಹಲವು ಸಾಂಸ್ಕೃತಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಅದನ್ನು ಕಥನಾತ್ಮಕ ದಾಟಿಯಲ್ಲಿ ಮಂಡಿಸಿರುವುದು ಒಂದು ವಿಶೇಷ.

ಮಧ್ಯಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಈ ಫಾಸಲೆಯಲ್ಲಿ ಸಂಭವಿಸಿದ ಚಾರಿತ್ರಿಕ ಘಟನೆಗಳನ್ನೂ, ಚಾರಿತ್ರಿಕ ವ್ಯಕ್ತಿಗಳನ್ನು ಕಾದಂಬರಿಯ ನೇಯ್ಗೆಯಲ್ಲಿ ಹೆಣೆದಿರುವುದು ಮಹತ್ವದ ಸಂಗತಿ. ನಿಜಲಿಂಗಪ್ಪ, ಹರ್ಡೇಕರ್‌ ಮಂಜಪ್ಪ, ಕಾಸಲ ವಿಶ್ವನಾಥಶೆಟ್ಟಿ, ಬಳ್ಳಾರಿ ಸಿದ್ಧಮ್ಮ, ದುಗ್ಗಪ್ಪ, ಪಂಪಾಪತಿ, ಕಾಂ.ಸುರೇಶ್‌ ಮೊದಲಾದವರು ಇಲ್ಲಿ ಕಾಣಿಸಿಕೊಳ್ಳುವುದು ಕೃತಿಯನ್ನು ವಿಶಿಷ್ಟವಾಗಿಸಿದೆ.

ಕಾದಂಬರಿಗೆ ಮುನ್ನುಡಿಯನ್ನು ಬರೆದಿರುವ ಬರಗೂರು ರಾಮಚಂದ್ರಪ್ಪನವರು ಹಲವಾರು ಸಾಂಸ್ಕೃತಿಕ ವಿಚಾರಗಳ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಕುರಿತು ಚರ್ಚಿಸಿದ್ದಾರೆ. ಕನ್ನಡದ ಮುಖ್ಯ ಚಿಂತಕರಾದ ಡಾ. ಕೆ.ವಿ. ನಾರಾಯಣ, ರಾಜೇಂದ್ರ ಚೆನ್ನಿ ಅವರು ಬೆನ್ನುಡಿಯನ್ನು ಬರೆದಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ.ಬಿ. ಕೃಷ್ಣಪ್ಪನವರ ಬಹುದಿನದ ಒಡನಾಡಿ ರುದ್ರಪ್ಪ ಹನಗವಾಡಿಯವರು ಈ ಕೃತಿಯನ್ನು ಲೋಕಾರ್ಪಣೆ ಮಾಡಲಿರುವರು. ಕೃತಿ ಕುರಿತು ಸಂಸ್ಕೃತಿ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್‌ ಮಾತನಾಡಲಿದ್ದಾರೆ. ಪ್ರೊ.ಎಸ್.ಜಿ. ಸಿದ್ಧರಾಮಯ್ಯನವರು ಅಧ್ಯಕ್ಷತೆ ವಹಿಸಲಿರುವ ಈ ಸಮಾರಂಭದ ಸಾನ್ನಿಧ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ.

ತರಾಸು ರಂಗಮಂದಿರದಲ್ಲಿ ದಿನಾಂಕ ೯-೧೦-೨೦೨೧ ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ಈ ಕಾದಂಬರಿ ಬಿಡುಗಡೆಗೊಳ್ಳಲಿದೆ. ಚಿತ್ರದುರ್ಗದ ಗೆಳೆಯರ ಬಳಗವು ಬಿಡುಗಡೆಯ ಸಿದ್ಧತೆ ನಡೆಸಿದೆ.

More Stories

Leave a Reply

Your email address will not be published. Required fields are marked *

You may have missed