March 28, 2024

Chitradurga hoysala

Kannada news portal

ಸಿದ್ದು ಜನಪ್ರಿಯತೆ ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಲಿತ ವರ್ಗ ಬಿಜೆಪಿ ಷಡ್ಯಂತರ ಅರಿಯದಷ್ಟು ದಡ್ಡರಲ್ಲ. ಸಿದ್ದರಾಮಯ್ಯ ನೀಡಿದ ಕೊಡುಗೆ ಮರೆಸಲು ಯಾರಿಂದಲೂ ಸಾಧ್ಯವಿಲ್ಲ. ಅರಸು ನಂತರ ಅಹಿಂದ ವರ್ಗದ ಕಣ್ಮಣ : ಮಾಜಿ ಸಚಿವ ಎಚ್.ಆಂಜನೇಯ ಆರೋಪ

1 min read



ಸಿದ್ದು ಜನಪ್ರಿಯತೆ ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ.

ದಲಿತ ವರ್ಗ ಬಿಜೆಪಿ ಷಡ್ಯಂತರ ಅರಿಯದಷ್ಟು ದಡ್ಡರಲ್ಲ.

ಸಿದ್ದರಾಮಯ್ಯ ನೀಡಿದ ಕೊಡುಗೆ ಮರೆಸಲು ಯಾರಿಂದಲೂ ಸಾಧ್ಯವಿಲ್ಲ.

ಅರಸು ನಂತರ ಅಹಿಂದ ವರ್ಗದ ಕಣ್ಮಣ : ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಚಿತ್ರದುರ್ಗ: ಅ.4
ದೇವರಾಜ ಅರಸು ನಂತರ ಅಹಿಂದ ವರ್ಗಕ್ಕೆ ಹೆಚ್ಚು ಉಪಕಾರ ಮಾಡಿದ ಮುಖ್ಯಮಂತ್ರಿ ಎಂಬಹೆಗ್ಗಳಿಗೆ ಸಿದ್ದರಾಮಯ್ಯ ಪಾತ್ರರಾಗಿದ್ದು, ಸಿದ್ದರಾಮಯ್ಯ ಅವರ ಜನಪ್ರಿಯತೆ ಕಂಡು
ಅಸೂಯೆ, ಭೀತಿಗೊಂಡಿರುವ ಬಿಜೆಪಿ ಅವರ ವಿರುದ್ಧ ಷಡ್ಯಂತರ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ.

ದಲಿತರಷ್ಟೇ ಅಲ್ಲ ಅಲ್ಪಸಂಖ್ಯಾತ, ಹಿಂದುಳಿದ ವರ್ಗದವರು ಸ್ವಹಿತಾಸಕ್ತಿಗಾಗಿ ಬಿಜೆಪಿಯ ಜನವಿರೋಧಿ ನಡೆ ಕಂಡು ಕೂಡ ಅ ಪಕ್ಷದಲ್ಲಿ ಮೌನವಾಗಿ ಅಧಿಕಾರಕ್ಕಾಗಿ ಇದ್ದಾರೆ.
ಇದರಲ್ಲಿ ಎರಡು ಮಾತಿಲ್ಲ. ರಾಜ್ಯ, ದೇಶದಲ್ಲಿ ಜಾತಿ-ಜಾತಿ, ಧರ್ಮ-ಧರ್ಮ ಮಧ್ಯೆ ಕಂದಕ, ದ್ವೆಷಭಾವನೆ ಬಿಜೆಪಿ
ಬಿತ್ತುತ್ತಿದೆ. ದಲಿತ ವಿರೋಧಿ ನೀತಿ ಕೈಗೊಂಡಿದೆ. ಆದರೂ ಬಿಜೆಪಿಯಲ್ಲಿ ಇರುವ ಅಹಿಂದ ವರ್ಗದ ಜನ ಬಾಯಿಬಿಡುತ್ತಿಲ್ಲ. ಒಂದು ಕಡೆ ಅನಂತ್ ಕುಮಾರ್ ಹೆಗಡೆ, ಸಂವಿಧಾನ ಬದಲಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ, ಮತ್ತೊಂದು ಕಡೆ ಸದಾಶಿವ ಆಯೋಗದ ವರದಿ ಜಾರಿಗೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಚಿವ ಪ್ರಭು ಚಹ್ವಾಣ್ ಹೇಳುತ್ತಾರೆ.

ಈ ಮಧ್ಯೆ ಎಸ್ಸಿ, ಎಸ್ಟಿಗೆ ನೀಡುತ್ತಿದ್ದ ಐದು ಲಕ್ಷ ಸಬ್ಸಿಡಿ 1ಲಕ್ಷಕ್ಕೆ ಇಳಿಸಲಾಗಿದೆ. ವಿದ್ಯಾರ್ಥಿ ವೇತನ, ಹಾಸ್ಟೇಲ್ ಸೌಲಭ್ಯಕ್ಕೆ ಸದ್ದಿಲ್ಲದೆ ನಿಧಾನಗತಿಯಲ್ಲಿ ಕಡಿತ ಮಾಡಲಾಗುತ್ತಿದೆ.ದಲಿತರ ಮೇಲೆ ದೌರ್ಜನ್ಯ, ಮಹಿಳೆ-ಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ. ದಲಿತ ವರ್ಗಕ್ಕೆ ಸಾಲಸೌಲಭ್ಯಕ್ಕೆ ಕಡಿವಾಣ ಹಾಕಿದ್ದರ ಜತೆಗೆ ಸಣ್ಣ ಸಾಲ ನೀಡಲು ಸತಾಯಿಸಲಾಗುತ್ತಿದೆ.

ಉಪಮುಖ್ಯಮಂತ್ರಿ ಸ್ಥಾನ ಶ್ರೀರಾಮುಲುಗೆ ನೀಡುತ್ತೆವೆ, ಎಸ್ಟಿ ಮೀಸಲಾತಿ ಶೇ.7.5 ಗೆ ಹೆಚ್ಚಳ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ನಾಯಕ ಸಮುದಾಯಕ್ಕೆ ಬಿಜೆಪಿ ವಂಚನೆ
ಮಾಡಿದೆ. ದಲಿತ ವರ್ಗದ ಗೋವಿಂದ ಜಾರಜೋಳ ಅವರಿಗೆ ನೀಡಿದ್ದ ಉಪಮುಖ್ಯಮಂತ್ರಿ ಹುದ್ದೆ ಕಿತ್ತುಕೊಳ್ಳಲಾಗಿದೆ.

ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ಕಿತ್ತುಕೊಳ್ಳುವ ಕೆಲಸವನ್ನು ಪರೋಕ್ಷವಾಗಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಬಿಎಸ್‍ಎನ್‍ಎಲ್ ಸೇರಿದಂತೆ ಹತ್ತಾರು ಸರ್ಕಾರಿ ಸೌಮ್ಯದ ಸಂಸ್ಥೆಗಳಲ್ಲಿ ಕೆಲಸಕ್ಕೆ ಮೀಸಲಾತಿಯಡಿ ಸೇರುವ ಅವಕಾಶ ಪರಿಶಿಷ್ಟ ಜಾತಿ, ವರ್ಗದ ಜನರಿಂದ ಕಿತ್ತುಕೊಳ್ಳಲಾಗಿದೆ.

ಇಷ್ಟೇಲ್ಲ ದಲಿತ ವರ್ಗದ ವಿರೋಧಿ ನೀತಿ ಕೈಗೊಳ್ಳುತ್ತಿದ್ದರೂ ಬಿಜೆಪಿಯಲ್ಲಿ ಇರುವ ದಲಿತ ವರ್ಗ ಮೌನವಾಗಿರುವುದನ್ನು ಕಂಡು ನೋವು ಹಾಗೂ ದಲಿತಪರ ಕಾಳಜಿಯಿಂದ ಸಿದ್ದರಾಮಯ್ಯ ಮಾತನಾಡಿದ್ದಾರೆ.

ಸಿದ್ದರಾಮಯ್ಯ ಅವರ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಅಷ್ಟೇ ಅಲ್ಲದೆ ಎಲ್ಲ ವರ್ಗದ ಬಡವರ ಪರ ಅವರ ಬದ್ಧತೆ ಪ್ರಶ್ನಾತೀತ. ಯಾರೊಬ್ಬರೂ ಹಸಿವಿನಿಂದ ಬಳಲುಬಾರದು ಎಂದು ಅನ್ನಭಾಗ್ಯ ಯೋಜನೆ, ಇಂದಿರಾ ಕ್ಯಾಂಟೀನ್ ಸೌಲಭ್ಯ ಜಾರಿಗೊಳಿಸಿದ್ದು ಸಿದ್ದರಾಮಯ್ಯ.

ಸಿದ್ದರಾಮಯ್ಯ ಅವರ ಐದು ವರ್ಷ ಆಡಳಿತ ಅಹಿಂದ ಹಾಗೂ ಎಲ್ಲ ವರ್ಗದ ಬಡಜನರ ಪಾಲಿಗೆ ಸುವರ್ಣಯುಗ ಆಗಿತ್ತು. ಎಸ್.ಸಿ.ಎಸ್.ಪಿ-ಎಸ್.ಟಿ.ಎಸ್.ಪಿ ಕಾಯ್ದೆ ಜಾರಿ, ಎಸ್ಸಿ,
ಎಸ್ಟಿ ವರ್ಗಕ್ಕೆ ಕಾಮಗಾರಿ ನಡೆಸಲು ಗುತ್ತಿಗೆಯಲ್ಲು ಮೀಸಲಾತಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ದಲಿತ ವರ್ಗ ಮಾಡಿದ್ದ ಸಾಲ ಮನ್ನಾ ಮಾಡಿದ್ದು, ಮಾದಿಗ ಸಮುದಾಯದ ಪ್ರಗತಿಗೆ ಆದಿಜಾಂಬವ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿ ನಿಗಮ,
ಕಾಡುಗೊಲ್ಲ ಸಮುದಾಯವನ್ನು ಜಾತಿಪಟ್ಟಿಗೆ ಸೇರಿಸುವ ಜತೆಗೆ ಎಸ್ಟಿಗೆ ಸೇರಿಸಲು ಶಿಫಾರಸ್ಸು, ಹೀಗೆ ನೂರಾರು ಸಣ್ಣ ಪುಟ್ಟ ಜಾತಿಗಳ ಜತೆಗೆ ಮಾದಿಗ, ಛಲವಾದಿ, ಭೋವಿ, ನಾಯಕ, ಲಂಬಾಣ ಹೀಗೆ ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಸಮುದಾಯಗಳಿಗೆ ನ್ಯಾಯಯುತವಾಗಿ ಧಕ್ಕಬಹುದಾದ ಸೌಲಭ್ಯ ದೊರಕಿಸಲು ಜಾತ್ಯತೀತವಾಗಿ ಶ್ರಮಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ, ವಿಧಾನಸೌಧದ ಎದುರು ವಾಲ್ಮೀಕಿ ಪುತ್ಥಳಿ ಹೀಗೆ ಸಾಲು ಸಾಲು ಜನಪರ, ಶೋಷಿತ, ದಲಿತ ವರ್ಗದಲ್ಲಿ ಸ್ವಾಭಿಮಾನ ಹುಟ್ಟುಹಾಕಲು ತಮ್ಮ ಅಧಿಕಾರವಧಿಯಲ್ಲಿ ಶ್ರಮಿಸಿದ ವ್ಯಕ್ತಿ ಸಿದ್ದರಾಮಯ್ಯ.ನನ್ನಂತಹ ವ್ಯಕ್ತಿಗೆ ಬೃಹತ್ ಮೊತ್ತದ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿ ಅ ಮೂಲಕ ರಾಜ್ಯದಲ್ಲಿ ಯಾರೊಬ್ಬರೂ ಹಾಸ್ಟೆಲ್ ಸೌಲಭ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವಂತೆ ಸೂಚಿಸಿ, ಅದನ್ನು ನನ್ನ ಮೂಲಕ ಅನುಷ್ಠಾನಗೊಳಿಸುವಲ್ಲಿ ಯಶಸಸ್ವಿಯಾದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಣ ದುರ್ಬಳಕೆಗೆ ಕಡಿವಾಣ ಹಾಕಲು ದೇಶದಲ್ಲಿ ಪ್ರಥಮ ಬಾರಿಗೆ ಕಾಯ್ದೆ ಜಾರಿಯನ್ನು ನಾನು ವಿಧಾನಸೌಧದಲ್ಲಿ ಮಂಡಿಸಲು ಕಾರಣಕರ್ತರಾದರು.ಯಾವುದೇ ನೊಂದ ವರ್ಗದ ಪರ ಯೋಜನೆ ಸಿದ್ಧಪಡಿಸಿಕೊಂಡು ಸಿದ್ದರಾಮಯ್ಯ ಅವರ ಬಳಿ ಹೋದರೆ, ನನ್ನ ಬೆನ್ನುತಟ್ಟಿ ಇದು ಒಳ್ಳೇ ಯೋಜನೆ ಎಂದು ತಕ್ಷಣವೇ ಸಹಿ ಹಾಕಿ ಅನುಷ್ಠಾನಗೊಳ್ಳಲು ಕಾರಣಕರ್ತರಾಗಿದ್ದರು. ಸಿದ್ದರಾಮಯ್ಯ ಅವರ ಐದು ವರ್ಷದ ಅಧಿಕಾರವಧಿ ಎಲ್ಲ ಬಡ ಜನರ ಪಾಲಿಗೆ ಸುವರ್ಣ ಯುಗವಾಗಿತ್ತು.

ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನ ಸಿದ್ದರಾಮಯ್ಯ ಆಡಳಿತವನ್ನು ಬಯಸುತ್ತಿದ್ದಾರೆ. ಇದರಿಂದ ಭೀತಿಗೆ ಒಳಗಾಗಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ವಿರುದ್ಧ ಷಡ್ಯಂತರನಡೆಸುತ್ತಿದ್ದಾರೆ. ದಲಿತ ವರ್ಗವನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದು, ಬಿಜೆಪಿ ಪಿತೂರಿ ಅರಿಯದಷ್ಟು ದಲಿತ ವರ್ಗ ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಬೇಕು.

ಬೆಲೆ ಏರಿಕೆ, ಜನಪರ ಯೋಜನೆಗಳಿಗೆ ಕಡಿವಾಣ, ಜನವಿರೋಧಿ ನೀತಿಗಳ ಜಾರಿಯಿಂದ ಬೇಸತ್ತಿರುವ ಜನ ಬಿಜೆಪಿಯನ್ನು ಶಫಿಸುತ್ತಿದ್ದಾರೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ತಂತ್ರಗಾರಿಕೆ ಮಾಡುತ್ತಿದ್ದು, ಇದು ಫಲಿಸುವುದಿಲ್ಲ. ಈಗಾಗಲೇ ಹಾನಗಲ್ ಉಪಚುನಾವಣೆಯಲ್ಲಿ ಜನ ಉತ್ತರ ನೀಡಿದ್ದು, ಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಗೆಲ್ಲಿಸಲು ಮತದಾರರು ಕಾಯುತ್ತಿದ್ದಾರೆ.
ಇದನ್ನು ಅರಿತಿರುವ ಬಿಜೆಪಿಯವರು ಸಿದ್ದರಾಮಯ್ಯ ವರ್ಚಸ್ಸು ಕಡಿಮೆ ಮಾಡಲು ಇಲ್ಲಸಲ್ಲದ,ಕ್ಷುಲ್ಲಕ ವಿಷಯವನ್ನು ಮುಂದಿಟ್ಟುಕೊಂಡು ಷಡ್ಯಂತರ ನಡೆಸುತ್ತಿದ್ದಾರೆ ಎಂದು ಮಾಜಿ
ಸಚಿವ ಎಚ್.ಆಂಜನೇಯ ಆರೋಪಿಸಿದ್ದಾರೆ.

About The Author

Leave a Reply

Your email address will not be published. Required fields are marked *