April 25, 2024

Chitradurga hoysala

Kannada news portal



ಜೈ ಭೀಮ್:ಹೋರಾಟಕ್ಕೆ ಕಾನೂನು ಒಂದು ಮಹಾನ್ ಸಾಧನ

ಜೈ ಭೀಮ್; ಟಿ.ಜೆ. ಜ್ಞಾನವೆಲ್ ಅವರ ವಿರಚಿತ ಮತ್ತು ನಿರ್ದೇಶಿತ ಚಲನಚಿತ್ರ ಭಾರತೀಯ ಸಿನಿಮಾರಂಗದ ಅತ್ಯೂತ್ತಮ ಚಿತ್ರವೆಂದರೆ ತಪ್ಪಾಗಲಿಕ್ಕಿಲ್ಲ, ಕಾರಣ ತಳಸಮುದಾಯದ ಮೇಲಾಗುವ ದೌರ್ಜನ್ಯ ಸಿನಿಮಾದ ವಿಷಯವಾಗಿರುವುದು ವಿಶೇಷ. ಸಮಾಜವನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ ಸಿನಿಮಾ ಕ್ಷೇತ್ರವು ಕಾಲ್ಪನಿಕ ಅಂಶಗಳನ್ನು ಕಡಿಮೆ ಮಾಡಿ ವಾಸ್ತವಿಕತೆಯನ್ನು ಜನ ಸಾಮಾನ್ಯರಿಗೆ ತಿಳಿಸುವ ಅಗತ್ಯವಿದೆ ಎನ್ನುವ ಕೂಗು ಕೇಳುತ್ತಿರುವ ಸಮಯದಲ್ಲಿ ಈ ತರಹದ ಸಿನಿಮಾ ನಿಜಕ್ಕೂ ಅವಲೋಕನಿಯ.

ಇದು ತಮಿಳಿನ ಅಸುರನ್, ಕರ್ಣನ್ ಮತ್ತು ಹಿಂದಿಯ ಆರ್ಟಿಕಲ್-15 ಸಿನಿಮಾಗಳ ಸಾಲಿಗೆ ಸೇರುವ ಮತ್ತೊಂದು ಚಿತ್ರ ಭಾರತದ ಜಾತಿಯತೆಯ ದಬ್ಬಾಳಿಕೆಯನ್ನು ಮತ್ತು ಅಮಾನವೀಯ ನೈಜ ಚಿತ್ರಣದ ರೂಪಕ. 1995ರಲ್ಲಿ ತಮಿಳುನಾಡಿನ ಇಲಿ ಮತ್ತು ಹಾವು ಹಿಡಿಯುವ ಇರುಲಾ ಎಂಬ ಬುಡಕಟ್ಟು ಜನರ ಮೇಲೆ ನಡೆದ ಪೋಲಿಸರ ದೌರ್ಜನ್ಯದ ನೈಜ ಘಟನೆ ಆಧಾರಿತ ಚಿತ್ರವೇ ಜೈ ಭೀಮ್.
ಸಿನಿಮಾದ ಮೊದಲ ದೃಷ್ಯವೇ ಜೈಲಿನಿಂದ ಶಿಕ್ಷೆ ಪೂರೈಸಿ ಹೊರಬರುತ್ತಿರುವವರನ್ನು ಪೋಲಿಸರು ಅವರ ಜಾತಿ ಆಧಾರಿತ ಗುಂಪುಗಳನ್ನಾಗಿ ಮಾಡಿ ಗೌಂಡರ್, ಮೊದಲಯಾರ್ ಮತ್ತು ನಾಯ್ಡು ಜಾತಿಯವರನ್ನು ಮನೆಗೆ ಕಳುಹಿಸಿ ಕೊರವರು ಮತ್ತು ಇರುಲಾ ಜಾತಿಯವರನ್ನು ಮತ್ತೊಮ್ಮೆ ಸುಳ್ಳು ಕೇಸ್ ದಾಖಲಿಸಿ ಮತ್ತೆ ಜೈಲಿಗೆ ಕಳುಹಿಸುವುದು. ತಳ ಸಮುದಾಯದ ಬುಡಕಟ್ಟು ಜನರನ್ನು ಯಾರು ಕೇಳುವವರಿಲ್ಲ ಎನ್ನುವ ಪೋಲಿಸ್ ಅಧಿಕಾರಿ ವರ್ಗದ ದೌರ್ಜನ್ಯವನ್ನು ತೆರೆದಿಡುತ್ತದೆ.
ಇರುಲಾ ಜನಾಂಗದವರು ನಿಸರ್ಗ ಪ್ರೇಮಿಗಳು ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸುವವರು ಹಾಗೆಯೆ ವೈಜ್ಞಾನಿಕ ಜ್ಞಾನವುಳ್ಳವರು ಏಕೆಂದರೆ ಆಯುರ್ವೇದ ಸಸ್ಯಗಳ ಅಪಾರ ಜ್ಞಾನ ಮತ್ತು ತಿಳುವಳಿಕೆ ಇರುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಅವರಲ್ಲಿಯ ಸಮುದಾಯದ ಒಗ್ಗಟ್ಟನ್ನು, ಕಠಿಣ ಹಾಗು ತ್ಯಾಗಮಯಿ ಜೀವನ ಮತ್ತು ಸರಳತೆಯನ್ನು ಬಹಳ ಸಹಜವಾಗಿ ದೃಶ್ಯಿಕರಿಸಲಾಗಿದೆ.
ತಳಸಮುದಾಯದ ಜನರಿಗೆ ಇರಲು ಒಂದಿಷ್ಟು ಅವಕಾಶ ನೀಡಿದ್ದೇ ದೊಡ್ಡದಾಯಿತು ಎನ್ನುವ ಜಮೀನ್ದಾರರ ಅಹಂ ಮನೋಭಾವನೆಯನ್ನು ಬಹಳ ಪ್ರಖರವಾಗಿ ಚಿತ್ತಿಸಿರುವುದು ಈ ಚಿತ್ರದ ಮತೊಂದು ಹೆಗ್ಗಳಿಕೆ. ಸ್ವಾತಂತ್ರ ದೊರೆತು 75 ವರ್ಷಗಳಾದರೂ ಇನ್ನೂ ಈ ದೇಶದ ಅದೆಷ್ಟೋ ಜನರ ಕರಾಳ ಬದುಕು ಮತ್ತು ಅವರ ಮೇಲೆ ನಡೆಯುವ ದೌರ್ಜನ್ಯ ನೈಜ ಭಾರತದ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.ಚಿತ್ರದ ನಾಯಕ ಕಥೆಯಾಗಿದೆ ಮತ್ತು ಬರುವ ಪಾತ್ರಗಳು ಹಾಗು ಸನ್ನಿವೇಶಗಳು ಪ್ರತಿಯೊಬ್ಬ ವೀಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಜಾತಿಯತೆಯ ಪ್ರಖರತೆ ಯಾವ ಮಟ್ಟಕ್ಕೆ ತೋರಿಸಲಾಗಿದೆ ಎಂದರೆ ಭಾರತದಲ್ಲಿ ಜಾತಿಯತೆಯೇ ಇಲ್ಲ ಎಂದು ವಾದಿಸುವ ಅದೆಷ್ಟೋ ಅಂಧ ಬುದ್ಧಿ ಜೀವಿಗಳಿಗೆ ಜಾತಿಯತೆಯ ನೇರ ದರ್ಶನವಾಗುತ್ತದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಎಲ್ಲಾ ಬುಡಕಟ್ಟು ಜನರಿಗೆ ಚುನಾವಣಾ ಕಾರ್ಡ ದೊರೆತರೆ ಇನ್ನು ಮುಂದೆ ಅವರೆಲ್ಲರ ಮನೆಗೆ ಹೋಗಿ ವೋಟ್ ಕೇಳಬೇಕಾಗುತ್ತದೆ ಅದಕ್ಕೆ ಜ್ಞಾನವನ್ನು ಮೂಡಿಸುತ್ತಿರುವ ವಯಸ್ಕರ ಶಿಕ್ಷಣವನ್ನೇ ನಿಲ್ಲಿಸಬೇಕು ಎನ್ನುವ ಚಿತ್ರದ ದೃಶ್ಯ ಭಾರತದ ಜೀವಂತ ಜಾತಿಯತೆಗೆ ಹಿಡಿದ ಕನ್ನಡಿಯಾಗಿದೆ.
ಇಡೀ ಆಡಳಿತ ಯಂತ್ರವನ್ನು ಎದುರು ಹಾಕಿ ಧ್ವನಿಯಿಲ್ಲದ ಸಮುದಾಯದ ಬೆನ್ನುಗೆ ನಿಲ್ಲುವುದು, ಮತ್ತು ಅವರಿಗೆ ನ್ಯಾಯ ಕೊಡಿಸುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆದಿವಾಸಿ ಜನರಿಗೆ ಈ ವ್ಯವಸ್ಥೆ ನೀಡುವ ಕಿರುಕುಳ, ಅವರ ಸಂಕಷ್ಟ ಮತ್ತು ಶೋಷಕರ ನಿರ್ದಯತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ನ್ಯಾಯವಾದಿಯಾಗಿ ಚಂದ್ರು ಮುಖ್ಯ ಪಾತ್ರದಲ್ಲಿ ಸೂಂiÀರ್i ಮನೋಘ್ನವಾಗಿ ಅಭಿನಯಿಸಿದ್ದಾರೆ. ಪೋಲಿಸರ ಮೇಲೆ ಯಾಕೆ ದ್ವೇಷ ಎನ್ನುವ ಪ್ರಶ್ನೆಗೆ ನ್ಯಾಯವಾದಿ ಚಂದ್ರು ಅವರು ‘ಸಮೂಹದ ಮೇಲೆ ಪ್ರೀತಿ ಅದಕ್ಕೆ ಹೋರಾಟ’ ಎನ್ನುವ ತೀಕ್ಷ್ಣ ಮತ್ತು ಅರ್ಥಗರ್ಭಿತವಾದ ಉತ್ತರ ನೋಡುಗರನ್ನು ಚಿಂತಿಸುವಂತೆ ಮಾಡುವುದು.
2000 ವರ್ಷಗಳಿಂದ ಭಾರತ ಅಸ್ಪøಷ್ಯತೆಯಿಂದ ಬಳಲುತ್ತಿದೆ ಆದರೆ ಯಾರೂ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವ ಡಾ.ಬಿ.ಆರ್ ಅಂಬೇಡ್ಕರ್ ಅವರ ನೈಜ ಧ್ವನಿ ಚಿತ್ರದಲ್ಲಿ ಒಮ್ಮೆ ಬಳಸಿಕೊಂಡಿದ್ದು ನಿರ್ದೇಶಕನ ನಿಪುಣತೆಗೆ ಜೈಕಾರವೆ ಸರಿ. ಜಾತಿ ಹೆಸರುಗಳನ್ನು ಬಳಸಿ ಇವರು ಕಳ್ಳರಿದ್ದಾರೆ ಎಂದು ಹೇಳಕೂಡದು, ಏಕೆಂದರೆ ಎಲ್ಲಾ ಜಾತಿಗಳಲ್ಲಿಯೂ ದೊಡ್ಡ ಕಳ್ಳರಿದ್ದಾರೆ ಎನ್ನುವ ಸಂಭಾಷಣೆ ಗಟ್ಟಿಯಾಗಿದ್ದು, ಹೋರಾಟಕ್ಕೆ ಅನೇಕ ಅಸ್ತ್ರಗಳಿದ್ದು, ಕಾನೂನು ಒಂದು ದೊಡ್ಡ ಆಯುಧ ಎಂಬುದನ್ನು ಸಾರಿ ಹೇಳಿ ಚಿತ್ರದ ಮೂಲಕ ದೃಢಪಡಿಸಲಾಗಿದೆ.
ಅಡ್ವೊಕೇಟ ಜನರಲ್ ಹೇಳುವ “ಒಂದು ಬುಡಕಟ್ಟು ಹೆಣ್ಣು ಹೈಕೋರ್ಟವರೆಗು ಬರಲು ಬಿಟ್ಟಿದ್ದಿರಲ್ಲಾ” ಎನ್ನುವ ಉದ್ಧಟತನದ ವಿಕೃತ ಮನೋಭಾವವನ್ನು ಸಿನಿಮಾ ತೆರೆದಿಡುತ್ತದೆ. ಒಳ್ಳೆಯವರಾಗಲಿ ಕೆಟ್ಟವರಾಗಲಿ ಸರ್ಕಾರದ ಅಡಿಯಲ್ಲಿ ಸೇವೆ ಮಾಡುವ ಎಲ್ಲರೂ ಸರ್ಕಾರದ ಭಾಗವೇ ಮತ್ತು ಕೆಲವರು ತಪ್ಪು ಮಾಡಿದಾಗ ಸರ್ಕಾರದಲ್ಲಿರುವ ಮೆಲಾಧಿಕಾರಿಗಳು ಹೇಗೆ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎನ್ನುವುದನ್ನು ಬಹಳ ವಿವರವಾಗಿ ತೋರಿಸಲಾಗಿದೆ.
ಶಿಕ್ಷಣದಿಂದ ಸ್ವಾಭಿಮಾನಿಗಳಾಗಿ ಬದುಕಬಹುದು ಮತ್ತು ನಮ್ಮ ಹೋರಾಟವನ್ನು ನಾವು ಮಾಡಬಹುದು ಎಂದು ತೋರಿಸುವಲ್ಲಿ ಈ ಚಿತ್ರ ಗೆದ್ದಿದೆ. ಇಡಿ ಸಿನಿಮಾದಲ್ಲಿ ಒಂದೂ ಅನಾವಶ್ಯಕ ಸನ್ನಿವೇಶವಿದೆಯೆಂದು ಅನ್ನುಸುವದಿಲ್ಲ. ಪ್ರತಿ ಸನ್ನಿವೇಶವೂ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಡಿಯಲ್ಲಿ ಚಿತ್ರಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಮತ್ತು ಅವರ ಸಂದೇಶ ಚಿತ್ರದ ಪ್ರತಿ ಫ್ರೇಮ್‍ನಲ್ಲಿಯೂ ಪ್ರತಿಬಿಂಬಿಸುತ್ತದೆ. ಹೋರಾಟದ ನೆಲೆಯಿಲ್ಲದೆ ಬದಲಾವಣೆ ಮತ್ತು ಹಕ್ಕುಗಳನ್ನು ಸಾಧಿಸಲಾಗುವುದಿಲ್ಲ, ದೇಶದ ಜನರಲ್ಲಿ ಅರಿವಿಲ್ಲದೇ ಪ್ರಜಾಪ್ರಭುತ್ವ ಯಶಸ್ಸಾಗುವುದಿಲ್ಲ. ಹೋರಾಟಕ್ಕೆ ಕಾನೂನು ಒಂದು ಮಹಾನ್ ಸಾಧನ ಎನ್ನುವುದೇ ಈ ಚಿತ್ರದ ಸಾರ.
ಸೂರ್ಯ ಮತ್ತು ಜ್ಯೋತಿಕ ದಂಪತಿಗಳು ಈ ಚಿತ್ರದ ನಿರ್ಮಾಪಕರು ಅವರ ಈ ಕಾರ್ಯ ಮತ್ತು ಧೈರ್ಯ ಶ್ಲಾಘನೀಯ. ಈ ತರಹದ ಪ್ರಯತ್ನಗಳು ಎಲ್ಲಾ ಭಾಷೆಗಳ ನಟರು ಮತ್ತು ನಿರ್ದೇಶಕರು ಮಾಡಬೇಕಾದ ಅನಿವಾರ್ಯತೆ ಎದ್ದು ಕಾಣುತ್ತದೆ. ಕೇವಲ ಮನರಂಜನೆಗಾಗಿ ತಯಾರಿಸುವ ಚಿತ್ರಗಳ ಬದಲು ಪ್ರತಿಯೊಬ್ಬ ನಟ-ನಟಿಯರು ಸಮಾಜಕ್ಕೆ ಹಾಗು ದೇಶಕ್ಕೆ ಪೂರಕವಾಗಿರುವ ನೈಜ ಪರಿಸ್ಥಿತಿಗಳ ಆಧಾರದ ಮೇಲೆ ಅವಲೋಕನ ಮತ್ತು ಅರಿವು ಮೂಡಿಸುವ ಪ್ರಯತ್ನಗಳು ಹೆಚ್ಚಾಗಲಿ ಎಂಬ ಆಶಯದೊಂದಿಗೆ.

ಡಾ. ಜಗನ್ನಾಥ ಕೆ. ಡಾಂಗೆ, ಶಿಕ್ಷಣ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ.


About The Author

Leave a Reply

Your email address will not be published. Required fields are marked *