April 18, 2024

Chitradurga hoysala

Kannada news portal

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ರೈತ ಮಕ್ಕಳು…………..

 

ಭೂಮಿಯ ಮೇಲೆ ನಡೆಯುವುದು, ನೀರಿನ ಮೇಲೆ ತೇಲುವುದು, ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವುದು ಮನುಷ್ಯನ ಕುತೂಹಲದ ಪ್ರಯಾಣದ ಕನಸುಗಳಲ್ಲಿ ಮುಖ್ಯವಾದವು.

ರಸ್ತೆ ಹೊರತುಪಡಿಸಿ ನೀರು ಮತ್ತು ಗಾಳಿಯಲ್ಲಿ ಸಂಚರಿಸುವುದು ತುಂಬಾ ದುಬಾರಿಯಾದುದು. ಆಧುನಿಕ ಕಾಲದಲ್ಲಿ ವಿಮಾನ ಸಂಚಾರ ತುಂಬಾ ಸುಲಭವಾಗಿದೆ. ಆದರೆ ಅದು ಶ್ರೀಮಂತರ ಪ್ರಯಾಣ ವ್ಯವಸ್ಥೆ ಎಂಬುದು ಮಾತ್ರ ಸತ್ಯ. ಏಕೆಂದರೆ ಭಾರತದಲ್ಲಿ ಕೇವಲ ‌3/4 ಶೇಕಡಾ ಜನರು ಮಾತ್ರ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ ಅದಕ್ಕಾಗಿ ವ್ಯಯಿಸುವ ಸಮಯ ಹಣ ಭೂಮಿ ಮುಂತಾದ ಸಂಪನ್ಮೂಲಗಳು ಮಾತ್ರ ಅತಿಹೆಚ್ಚು. ಅಂದರೆ ಕೇವಲ ಕೆಲವೇ ಜನರ ಹಿತಕ್ಕಾಗಿ ತುಂಬಾ ಶ್ರಮ ಪಡಬೇಕಾಗುತ್ತದೆ….

ಇಲ್ಲಿ ಮುಖ್ಯವಾಗಿ ರೈತ ಮಕ್ಕಳು ನೆನಪಾಗಲು ಕಾರಣ…….

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದ ಜಾಗ ಕೆಲವು ವರ್ಷಗಳ ಹಿಂದೆ ರೈತರ ಒಡೆತನದಲ್ಲಿತ್ತು. ಒಂದಷ್ಟು ಕೃಷಿ ಭೂಮಿ ಮತ್ತೊಂದಷ್ಟು ಕುರುಚಲು ಗಿಡಗಳ ಪಾಳು ಭೂಮಿ.

ವಿಮಾನ ನಿಲ್ದಾಣ ಮಾಡುವ ನಿರ್ಧಾರದ ನಂತರ ಆ ಜಾಗವನ್ನು ರೈತರಿಂದ ವಶಪಡಿಸಿಕೊಂಡು ಅದಕ್ಕೆ ಉತ್ತಮ ಪರಿಹಾರದ ಮೊತ್ತವನ್ನು ಅವರಿಗೆ ಕೊಡಲಾಯಿತು ಮತ್ತು ಅಲ್ಲಿನ ಸುತ್ತಮುತ್ತಲಿನ ಜಮೀನಿನ ಬೆಲೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಿ ಸಾಕಷ್ಟು ಹಣವಂತರು ಅದನ್ನು ರೈತರಿಂದ ಖರೀದಿಸಿದರು. ರಿಯಲ್ ಎಸ್ಟೇಟ್ ಒಂದು ದೊಡ್ಡ ಉದ್ಯಮ ಮತ್ತು ದಂಧೆಯಾಯಿತು……

ಸುಮಾರು ‌15/20 ವರ್ಷಗಳ ನಂತರ……….

ಯಾವ ರೈತರ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಹಣ ನೀಡಿತೋ, ಯಾವ ರೈತರು ಹಣದ ಆಸೆಗಾಗಿ ಅಥವಾ ಬದುಕಿನ ಅನಿವಾರ್ಯತೆಗಾಗಿ ತಮ್ಮ ಹೊಲ ಗದ್ದೆಗಳನ್ನು ಮಾರಿಕೊಂಡರೋ ಅವರಲ್ಲಿ ಬಹುಶಃ ಶೇಕಡಾ 70 ಕ್ಕೂ ಹೆಚ್ಚು ಜನರ ಬಳಿ ಜಮೀನೂ ಇಲ್ಲ ಅಥವಾ ಆಗ ಗಳಿಸಿದ ಹಣವೂ ಇಲ್ಲ. ಅವರಲ್ಲಿ ಬಹುತೇಕರು ಅದೇ ವಿಮಾನ ನಿಲ್ದಾಣ ಮತ್ತು ಅಲ್ಲಿನ ಸುತ್ತಮುತ್ತಲಿನ ವ್ಯಾಪಾರ ಕೇಂದ್ರಗಳಲ್ಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಕೆಲವರು ಮಾತ್ರ ಬಂದ ಹಣವನ್ನು ಸದುಪಯೋಗ ಪಡಿಸಿಕೊಂಡು ಮೊದಲಿಗಿಂತ ಉತ್ತಮ ಗುಣಮಟ್ಟ ಜೀವನ ನಡೆಸುತ್ತಿದ್ದಾರೆ….

ನಿಜವಾದ ಚಿಂತನೆ ಮತ್ತು ಅಧ್ಯಯನದ ಅವಶ್ಯಕತೆ ಇರುವುದು ಇಲ್ಲಿಯೇ……

ಇದು ನಾಗರಿಕ ಸಮಾಜದ ಸಹಜ ಗುಣ. ಸಾಮರ್ಥ್ಯ ಇರುವವರು, ಬುದ್ದಿವಂತರು, ಎಲ್ಲಾ ರೀತಿಯ ಶ್ರಮಜೀವಿಗಳು ಪರಿಸ್ಥಿತಿಯನ್ನು ಬೇಗ ಅರ್ಥಮಾಡಿಕೊಂಡು ದೂರದೃಷ್ಟಿಯಿಂದ ಅದರ ಲಾಭ ಪಡೆದು ಶ್ರೀಮಂತರಾಗಿ ಬದುಕುತ್ತಾರೆ ಇದು ಸರಿ ಎನ್ನುವ ಬಲಪಂಥೀಯ ವಾದ…..

ಅಥವಾ….

ಸಾಮಾಜಿಕ ಅಸಮಾನತೆ, ಸಂಕೀರ್ಣ ಜಾತಿ ವ್ಯವಸ್ಥೆಯ ಅಮಾನವೀಯತೆ, ದುರ್ಬಲರ‌‌ ಶೋಷಣೆ, ಹಣ ಅಧಿಕಾರ ಶಕ್ತಿ ಇರುವವರು ತಮ್ಮದೇ ಸಮುದಾಯಗಳನ್ನು ಧರ್ಮ ಅಥವಾ ಕಾನೂನು ಅಥವಾ ಸಂಪ್ರದಾಯದ ಹೆಸರಿನಲ್ಲಿ ವಂಚಿಸಿ ತಮ್ಮ ಸುಖಕ್ಕಾಗಿ ಈ ಜನರ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಳ್ಳುವರು ಎನ್ನುವ ಎಡಪಂಥೀಯ ವಾದ…..

ಈ ಎಡ ಬಲ ವಾದಗಳ ಜೊತೆಗೆ
ಅಂಬೇಡ್ಕರ್ ಬಸವಣ್ಣ ಗಾಂಧಿ ಲೋಹಿಯಾ ಮುಂತಾದವರ ಚಿಂತನೆಗಳು ಸಹ ಇಲ್ಲಿ ಒಂದಷ್ಟು ಪ್ರಸ್ತುತವಾಗುತ್ತದೆ.

ಹಾಗಾದರೆ ಅಭಿವೃದ್ಧಿಯ ಮಾನದಂಡ ಯಾವುದು ?….

ವಿಮಾನ ನಿಲ್ದಾಣಗಳ ಶ್ರೀಮಂತಿಕೆಯೇ ಅಥವಾ ರೈತ ಮಕ್ಕಳ ದುರ್ಗತಿಯೇ ?

ಹಣವೇ ಪ್ರಧಾನವಾದ ಸಮಾಜದಲ್ಲಿ ಇದರ ಬಗ್ಗೆ ಚಿಂತನೆಗೆ ಸಮಯವೂ ಸಿಗುತ್ತಿಲ್ಲ. ಕೆಲವರ ಬದುಕು ವಿಮಾನಗಳ ಹಾರಾಟದಂತೆ ವೇಗವಾಗಿ ಗಾಳಿಯಲ್ಲಿ ಹಾರಾಡುತ್ತಾ ಸಾಗುತ್ತಿದ್ದರೆ ಮತ್ತೆ ಕೆಲವರ ಬದುಕು ಜಟಕಾ ಬಂಡಿ………

ಎರಡರ ನಡುವೆ ಸಮನ್ವಯ ಸಾಧಿಸಬೇಕಾಗಿದ್ದ ಸರ್ಕಾರಗಳು ಕುರ್ಚಿಯ ಸುತ್ತ ಸುತ್ತುತ್ತಾ ತಮ್ಮ ಹಿತಾಸಕ್ತಿಗಳನ್ನು ಮಾತ್ರ ಕಾಯ್ದುಕೊಂಡಿವೆ……

ಈಗ ಯೋಚಿಸಬೇಕಾದ ಮತ್ತು ಕಾರ್ಯರೂಪಕ್ಕೆ ಇಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು…..

ಮಾನವೀಯ ಮೌಲ್ಯಗಳ ಪುನರುತ್ಥಾನದ ಕಾಲ್ನಡಿಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಾದು ಹೋಗುವಾಗ ಅಲ್ಲಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುವ ರೈತ ಮಕ್ಕಳನ್ನು ನೋಡಿದಾಗ ಒಂದು ಕಾಲದ ಭೂಮಿಯ ಒಡೆಯರು ಸ್ವಾಭಿಮಾನ ಮರೆತ ಪರಿಣಾಮ ಇಂದು ಅದೇ ಭೂಮಿಯಲ್ಲಿ ಕೂಲಿ ಕೆಲಸಗಾರರು. ಅನೇಕ ಭ್ರಷ್ಟ ವ್ಯಕ್ತಿಗಳ ಪ್ರಯಾಣದ ವಾಹನಗಳಿಗೆ ರಕ್ಷಣಾ ನಿಲ್ದಾಣ ಒದಗಿಸುವ ನತದೃಷ್ಟರು……

ಅದಕ್ಕಾಗಿಯೇ ಮಾನವೀಯ ಮೌಲ್ಯಗಳ ಪುನರುತ್ಥಾನ ಇಂದು ಅತ್ಯಂತ ಅವಶ್ಯಕ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ ಎಂದು ಆಶಿಸುತ್ತಾ……….

ವಿವೇಕಾನಂದ. ಹೆಚ್.ಕೆ.
9844013068

About The Author

Leave a Reply

Your email address will not be published. Required fields are marked *