ಆದಿವಾಲ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತ ಅಧ್ಯಕ್ಷರ ಭೇಟಿ
1 min readಹಿರಿಯೂರು: ಮಂಗಳವಾರದಂದು ಚಿತ್ರದುರ್ಗ ಜಿ ಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ರವರು ಮತ್ತು ವಾಣೀವಿಲಾಸಪುರ ಕ್ಷೇತ್ರದ ಜಿ ಪಂ ಸದಸ್ಯರಾದ ಆರ್. ನಾಗೇಂದ್ರನಾಯ್ಕ ರವರು ಆದಿವಾಲ ಗ್ರಾಮ ಪಂಚಾಯಿತಿ ಕಚೇರಿಗೆ ಬೇಟಿ ನೀಡಿ ಕಳೆದ ಎರಡು ವರ್ಷದ 14ನೇ ಹಣಕಾಸು ಖರ್ಚು-ವೆಚ್ಚ, ನಿವೇಶನಗಳ ಈ ಸ್ವತ್ತು (E-SVATTU) ಮಾಡುವುದರ ಬಗ್ಗೆ ಹಾಗೂ ಗ್ರಾಮ ನೈರ್ಮಲ್ಯಿಕರಣದ ಬಗ್ಗೆ ಪರಿಶೀಲಿಸಿದರು.
ಈ ಸಂಧರ್ಭದಲ್ಲಿ ಜಿ ಪಂ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಸುರೇಶ್ ಬಾಬು ರವರು ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ -19 ಸೋಂಕು ಹೆಚ್ಚಾಗಿ ಹರಡುತ್ತಿರುವುದರಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಮತ್ತು ಗ್ರಾಮದಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡಬೇಕೆಂದು ತಿಳಿಸಿದರು ಮತ್ತು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ನಿರ್ಮಿಸಬೇಕೆಂದು ಮತ್ತು ಬೇರೆ ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಗ್ರಾಮದಲ್ಲಿ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು. ಜಿ ಪಂ ಸದಸ್ಯರಾದ ಆರ್. ನಾಗೇಂದ್ರನಾಯ್ಕ ರವರು ಮಾತನಾಡಿ ಆದಿವಾಲ ಗ್ರಾಮದಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಆಗಿರುವ ಸಿ. ಸಿ. ರಸ್ತೆ ಕಳಪೆ ಕಾಮಗಾರಿಯಾಗಿದ್ದು, ಮೇಲ್ನೋಟಕ್ಕೆ ಗುಣಮಟ್ಟ ಇಲ್ಲದಿರುವುದು ಕಂಡುಬರುತ್ತದೆ. ಆದ್ದರಿಂದ ಈ ಕೂಡಲೇ ಕಾಮಗಾರಿ ತಪಾಸಣೆ ಮಾಡಲು ಸಂಬಂಧಪಟ್ಟ ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಬೇಕೆಂದು ಒತ್ತಾಯಿಸಿದರು. ಕಳೆದ ವರ್ಷ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದುದರಿಂದ ಟ್ರಾಕ್ಟರ್ ಟ್ಯಾಂಕರ್ ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲಾಗಿರುತ್ತದೆ. ಆದರೆ ಈವರೆಗೂ ನೀರು ಸರಬರಾಜುದಾರರಿಗೆ ಬಿಲ್ಲನ್ನು ಪಾವತಿ ಮಾಡದಿರುವುದಿಲ್ಲ, ಆದ್ದರಿಂದ ನೀರು ಸರಬರಾಜುದಾರರಿಗೆ ತಕ್ಷಣ ಬಿಲ್ ಪಾವತಿಸಬೇಕೆಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಆದಿವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿವೇಶನಗಳ ಈ-ಸ್ವತ್ತುಗಳನ್ನು ಪಂಚಾಯಿತಿ ಕಚೇರಿಯಲ್ಲಿ ಮಾಡದಿರುವುದು ಕಂಡುಬಂದಿದ್ದು, ಕಂಪ್ಯೂಟರ್ ಆಪರೇಟರ್ ಇದ್ದರೂ ಸಹ ತಾಂತ್ರಿಕ ತೊಂದರೆ ಇದೆ ಎಂದು ಸಬೂಬು ಹೇಳಿ ದಾಖಲಾತಿಗನ್ನು ಅಪ್ಲೋಡ್ ಮಾಡಲು ಹಿರಿಯೂರು ನಗರಕ್ಕೆ ಕಳುಹಿಸುತ್ತಿರುವುದು ಕಂಡುಬಂದಿರುತ್ತದೆ. ಹಾಗಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗಳು ತತ್ ಕ್ಷಣವೇ ಹಿರಿಯೂರು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಗಳಿಗೆ ಸೂಕ್ತ ತರಬೇತಿ ನೀಡಬೇಕೆಂದು ಸೂಚಿಸಿದರು.