April 24, 2024

Chitradurga hoysala

Kannada news portal

ಮೂರನೇ ಅಲೆ ನಿಯಂತ್ರಣಕ್ಕೆ ಕ್ರಮ: ಕೋವಿಡ್ ಮಾರ್ಗಸೂಚಿ ಪಾಲಿಸಲು ಖಡಕ್ ಸೂಚನೆ – ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಾಕೀತು .

1 min read


ಮೂರನೇ ಅಲೆ ನಿಯಂತ್ರಣಕ್ಕೆ ಕ್ರಮ: ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆ

ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಚಿತ್ರದುರ್ಗ :
ಕೋವಿಡ್-19 ಸಂಭಾವ್ಯ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಅನುಷ್ಠಾನವಾಗಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್-19 ಸಂಭಾವ್ಯ ಮೂರನೇ ಅಲೆ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಸಂಭಾವ್ಯ ಮೂರನೇ ಅಲೆ ತಡೆಗಟ್ಟುವ ಉದ್ದೇಶದಿಂದ ಬೆಡ್ ವ್ಯವಸ್ಥೆ, ಇದಕ್ಕೆ ಬೇಕಾದ ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ದತೆಗಳನ್ನು ಕೈಗೊಳ್ಳುವಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ತಾಕೀತು ಮಾಡಿದರು.
ಎರಡನೇ ಅಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಪರಿಶ್ರಮಿಸಲಾಗಿದೆ. ಅದು ಸಾಂಭಾವ್ಯ ಅಲೆಯಲ್ಲಿ ಆಗಬಾರದು. ನಗರ ಮಟ್ಟದಿಂದ ಗ್ರಾಮ ಮಟ್ಟದವರೆಗೂ ಸರ್ವೇಲೆನ್ಸ್ ಚಟುವಟಿಕೆಗಳನ್ನು ನಿರಂತರವಾಗಿ ನಡೆಯಬೇಕು.ವಿದೇಶ, ಹೊರರಾಜ್ಯ, ಹೊರಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವರ ಕುರಿತು ನಿಗಾವಹಿಸಬೇಕು. ಇದಕ್ಕಾಗಿ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆಯಿಂದ ತಂಡ ರಚಿಸಲಾಗುತ್ತದೆ. ಸಾರ್ವಜನಿಕರು ಈಗಾಗಲೇ ಮಾಸ್ಕ್ ಧರಿಸುವುದನ್ನೇ ಮರೆತಿದ್ದಾರೆ.ಹಾಗಾಗಿ ಮದುವೆ ಸಮಾರಂಭ, ಸಾರ್ವಜನಿ ಸ್ಥಳಗಳಲ್ಲಿ ದೈಹಿಕ ಅಂತರ ಕಾಪಾಡುವುದರ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೇ ಇರುವವರ ಮೇಲೆ ದಂಡಾಸ್ತ್ರ ಪ್ರಯೋಗಿಸಲಾಗುತ್ತದೆ. ವಿಶೇಷವಾಗಿ ಒಳಾಂಗಣ ಪ್ರದೇಶಗಳಲ್ಲಿ ನಡೆಯುವ ಸಭೆ ಸಮಾರಂಭಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ನಿಗಾವಹಿಸಬೇಕು ಎಂದು ಹೇಳಿದರು.
ಸಂಭಾವ್ಯ ಕೋವಿಡ್ ಅಲೆಯನ್ನು ತಡೆಗಟ್ಟಲು ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲು ಸ್ಥಳ ನಿಗದಿಪಡಿಸಕೊಂಡಿರಬೇಕು ಮತ್ತು ಡಾಬಾ, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಸಂಬಂಧಿಸಿದ ಮಾಲೀಕರು ಥರ್ಮಲ್ ಸ್ಕಾನರ್ ಮೂಲಕ ತಪಾಸಣೆಗೆ ಒಳಪಡಿಸಬೇಕು ಎಂದರು.
ಆಯುಷ್ಮಾನ್ ಭಾರತ್ ಯೋಜನೆಯಡಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿರಬೇಕು. ಇದಕ್ಕಾಗಿ ಆನ್‍ಲೈನ್ ಬೆಡ್ ಮ್ಯಾನೇಜ್‍ಮೆಂಟ್ ಸಿದ್ದತೆ ಮಾಡಿಕೊಂಡಿರಬೇಕು. ಖಾಸಗಿ ಆಸ್ಪತ್ರೆಗಳು ಇದಕ್ಕಾಗಿ ಮೀಸಲಿರುವ ಬೆಡ್‍ಗಳ ವಿವರ ನೀಡಬೇಕು. ಜಿಲ್ಲೆಯಲ್ಲಿ 50ಕ್ಕಿಂತ ಹೆಚ್ಚು ಬೆಡ್‍ಗಳನ್ನು ಹೊಂದಿರುವ 16 ಖಾಸಗಿ ಆಸ್ಪತ್ರೆಗಳು ಇದ್ದು, ಈ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್‍ಗಾಗಿ ಬೆಡ್‍ಗಳನ್ನು ಮೀಸಲಿಡಬೇಕು. ಜೊತೆಗೆ ಆಕ್ಸಿಜನ್ ಉತ್ಪದನಾ ಘಟಕಗಳನ್ನು ಹೊಂದಿರಬೇಕು. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಸೇರಿದಂತೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಒಟ್ಟು 8 ಕಡೆ ಆಕ್ಸಿಜನ್ ಘಟಕಗಳಿದ್ದು, ಈಗಾಗಲೇ 6 ಘಟಕಗಳು ಕಾರ್ಯಾರಂಭಗೊಂಡಿದ್ದು, ಹೊಸದುರ್ಗ ಮತ್ತು ಹೊಳಲ್ಕೆರೆ ಕಾರ್ಯಾರಂಭ ಮಾಡಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶಿ ಮಾತನಾಡಿ, ಕೋವಿಡ್ ಪರೀಕ್ಷೆಗಾಗಿ ಇದುವರೆಗೂ 8,83,963 ಸ್ಯಾಂಪಲ್‍ಗಳನ್ನು ಸಂಗ್ರಹಿಸಲಾಗಿದ್ದು, ಅದರಲ್ಲಿ 36,737 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 209 ಜನ ಕೋವಿಡ್‍ನಿಂದ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 41 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಕಳೆದ 10 ದಿನಗಳಿಂದ ಒಟ್ಟು 16 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಎಂದು ಹೇಳಿದರು.
ಓಮಿಕ್ರಾನ್ ಸಾರ್ಸ್ ಕೋವಿ-2 ಓಮಿಕ್ರಾನ್‍ನ ಪ್ರಭೇಧವಾಗಿದ್ದು, ಕೋವಿಡ್-19 ಹರಡುವ ಕ್ಷಮತೆ ಹೊಂದಿರುತ್ತದೆ. ಈ ರೋಗದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈ ಪ್ರಬೇಧವು ಮನುಕುಲಕ್ಕೆ ಮಾರಕವಾಗಿರಬಹುದು ಎಂದು ತಿಳಿಸಿರುತ್ತಾರೆ. ಇದು 30 ತರಹದ ಲಕ್ಷಣಗಳನ್ನು ಹೊಂದಿದ್ದು, ಅತೀ ವೇಗವಾಗಿ ಹರಡಬಲ್ಲ ರೋಗವಾಗಿದೆ. ಈ ರೋಗದಲ್ಲಿ ವಾಸನೆ ಅಥವಾ ರುಚಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅತೀವ ಸುಸ್ತು, ಮೈಕೈ ನೋವು ಕಂಡುಬರುವುದಾಗಿ ತಿಳಿಸಲಾಗಿದೆ. ಇದನ್ನು ತಡೆಗಟ್ಟಲು ಮಾಸ್ಕ್, ಸಾಮಾಜಿಕ ಅಂತರ, ಕೋವಿಡ್ ಲಸಿಕೆ, ಶುದ್ಧಗಾಳಿ ಸೇವನೆ ಇದಕ್ಕೆ ಮದ್ದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಪರಶುರಾಮ್ ಶಿನ್ನಾಳಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜ, ಬಸವೇಶ್ವರ ವೈದ್ಯಕೀಯ ಕಾಲೇಜು ಅಧೀಕ್ಷಕ ಡಾ.ಪಾಲಾಕ್ಷಯ್ಯ, ತಹಶೀಲ್ದಾರ್ ಸತ್ಯನಾರಾಯಣ, ತಾಲ್ಲೂಕು ಆರೋಗ್ಯಾಧಿಕಾರಿಗಳು, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

About The Author

Leave a Reply

Your email address will not be published. Required fields are marked *