April 20, 2024

Chitradurga hoysala

Kannada news portal

“ಸ್ವಾಮಿ ವಿವೇಕಾನಂದ ಭಾರತದ ಸ್ವಾಭಿಮಾನ ಮತ್ತು ರಾಷ್ಟ್ರೀಯತೆಯ ಸಂಕೇತ”….

1 min read



“ಸ್ವಾಮಿ ವಿವೇಕಾನಂದ ಭಾರತದ ಸ್ವಾಭಿಮಾನ ಮತ್ತು ರಾಷ್ಟ್ರೀಯತೆಯ ಸಂಕೇತ”….

ಪ್ರತಿ ವರ್ಷ ಜನವರಿ 12 ರಂದು ಸ್ವಾಮಿ ವಿವೇಕಾನಂದ ರ ಜನ್ಮ ದಿನವನ್ನು ದೇಶದಲ್ಲಿ “ರಾಷ್ಟ್ರೀಯ ಯುವದಿನ” ವನ್ನಾಗಿ ಆಚರಿಸಲಾಗುತ್ತದೆ. ಜನವರಿ 12, 1863 ರಲ್ಲಿ ಕಲ್ಕತ್ತಾ ದಲ್ಲಿ ಜನಿಸಿದ ಸ್ವಾಮಿ ವಿವೇಕಾನಂದ ರ ಬಾಲ್ಯದ ಹೆಸರು ನರೇಂದ್ರ ನಾಥ ದತ್ತಾ.
“ಏಳಿ ! ಎದ್ದೇಳಿ !! ಗುರಿ ಮುಟ್ಟುವ ತನಕ ನಿಲ್ಲದಿರಿ”…!!! ಎಂಬ ದಿವ್ಯ ವಾಣಿಯ ಮೂಲಕ ಇಡೀ ಭಾರತದ ಸ್ವಾಭಿಮಾನವನ್ನು ಜಾಗೃತ ಗೊಳಿಸಿದ ಸ್ವಾಮಿ ವಿವೇಕಾನಂದರು ಭಾರತದ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ,ಮತ್ತು ರಾಜಕೀಯ ವ್ಯವಸ್ಥೆಯ ಬಗ್ಗೆ ಹೊಂದಿದ್ದ ಪ್ರಖರ ಚಿಂತನೆಗಳ ಮೂಲಕ ಭಾರತವು ಅಂದು ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದರು.
ರಾಷ್ಟ್ರ ಮತ್ತು ರಾಷ್ಟ್ರೀಯತೆ ಬಗ್ಗೆ ವಿವರಿಸುತ್ತಾ ರಾಷ್ಟ್ರ ಎಂದರೆ ಸಮಾನತೆ, ಸ್ವಾತಂತ್ರ್ಯ ತತ್ವದ ಆಧಾರದ ಮೇಲೆ ರೂಪಗೊಂಡಿರುವ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ. ಯಾರ ಅಧೀನಕ್ಕೂ ಒಳಪಡದೇ ಸರ್ವತಂತ್ರ ಸ್ವತಂತ್ರ ವಾಗಿರುವ ದೇಶವು ಮಾತ್ರ ಸದೃಢ ದೇಶವಾಗಿ ಹೊರಹೊಮ್ಮಲು ಸಾಧ್ಯ. ಭಾರತ ದೇಶ ಶಕ್ತಿಶಾಲಿ ದೇಶವಾಗಿ ಬೆಳೆಯಲು ಪ್ರತಿಯೊಬ್ಬ ಭಾರತೀಯರೂ ತ್ಯಾಗ,ನಿಸ್ವಾರ್ಥ ಮತ್ತು ಪ್ರಾಮಾಣಿಕತೆಯಿಂದ ದೇಶ ಸೇವೆ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
1893 ರಲ್ಲಿ ಅಮೆರಿಕಾದ ಚಿಕಾಗೋ ಧರ್ಮ ಸಂಸತ್ತಿನಲ್ಲಿ ಭಾಗವಹಿಸಿ ಭಾರತೀಯ ಧರ್ಮದ ಸತ್ವ ಮತ್ತು ಸಂದೇಶ ವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದರು.ಈ ಮೂಲಕ ಇಡೀ ವಿಶ್ವವೇ ಭಾರತ ದೇಶದ ಬಗ್ಗೆ ಹೆಮ್ಮೆಯಿಂದ ಗೌರವಿಸುವಂತೆ ಮಾಡಿದರು. ವಿವೇಕಾನಂದರು ಅಂದು ಮೂಡಿಸಿದ ಧಾರ್ಮಿಕ ಜಾಗೃತಿಯು ಭಾರತೀಯರು ಬ್ರಿಟೀಷರ ವಿರುದ್ಧ ನಡೆಸುತ್ತಿದ್ದ ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತಷ್ಟು ಹುರುಪಿನಿಂದ ಹೋರಾಡುವಂತೆ ಪ್ರೇರೇಪಿಸಿತು.
ಭಾರತೀಯರ ರಾಷ್ಟ್ರೀಯತೆಯ ನ್ನು ಜಾಗೃತ ಗೊಳಿಸಿದ ಸ್ವಾಮಿ ವಿವೇಕಾನಂದ ರ ಚಿಂತನೆಗಳು:
1.ಸ್ವಯಂ ಜಾಗೃತಿ ಮತ್ತು ಸ್ವ ನಂಬಿಕೆ.
2.ಏಳಿ, ಎದ್ದೇಳಿ ಮತ್ತು ಗುರಿ ಮುಟ್ಟುವ ತನಕ ನಿಲ್ಲದಿರಿ.
3.ಸಂಪೂರ್ಣ ಸಮರ್ಪಣೆ- ಭಾರತ ಮಾತೆಯ ಸೇವೆಗಾಗಿ ಜೀವನ ತ್ಯಾಗ.
4.ಸದೃಢತೆ ಮತ್ತು ನಿರ್ಭಿತಿಯ ಹೋರಾಟ
5.ರಾಷ್ಟ್ರ ಮತ್ತು ರಾಷ್ಟ್ರ ದ ಜನತೆಯ ಬಗ್ಗೆ ಅತೀವ ಪ್ರೀತಿ
6.ಭಾರತದ ಆಂತರಿಕ ಸಮಗ್ರತೆ
7.ಸಮಾನ ಹಕ್ಕುಗಳು ಮತ್ತು ಕರ್ತವ್ಯ ಗಳು
8.ರಾಷ್ಟ್ರದ ನಿಜವಾದ ಸಮಸ್ಯೆಗಳ ಬಗ್ಗೆ ಜಾಗೃತಿ
9.ಸಮಾಜದ ಅಭಿವೃದ್ಧಿ ಮತ್ತು ಶಿಕ್ಷಣ
10.ಯುವ ಜನಾಂಗದ ಜಾಗೃತಿ, ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಗುಣ, ಮೌಲ್ಯಗಳ ವೃದ್ಧಿ.
ಸ್ವಾಮಿ ವಿವೇಕಾನಂದ ರ ಚಿಂತನೆಗಳು ಮುಖ್ಯವಾಗಿ ಪ್ರಾಮಾಣಿಕತೆ, ಸ್ವಾಭಿಮಾನ, ತ್ಯಾಗ, ರಾಷ್ಟ್ರ ಭಕ್ತಿ, ರಾಷ್ಟ್ರಕ್ಕಾಗಿ ನಿಸ್ವಾರ್ಥ ಸೇವೆ ಈ ಮೌಲ್ಯಗಳನ್ನು ಭಾರತೀಯರಲ್ಲಿ ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಮೂಡಿಸುವ ಮೂಲಕ ರಾಷ್ಟ್ರದ ನಿಜವಾದ ಸಮಸ್ಯೆಗಳಾದ ಜಾತೀಯತೆ, ಶೋಷಣೆ, ತಾರತಮ್ಯ, ಬಡತನ, ಅನಕ್ಷರತೆ ಇವುಗಳ ನಿರ್ಮೂಲನೆಗೆ ಪ್ರಾಮಾಣಿಕತೆಯಿಂದ ದುಡಿಯುವಂತೆ ಕರೆ ನೀಡಿದರು. ತಮ್ಮ ಪ್ರಖರ ಚಿಂತನೆಗಳ ಮೂಲಕ ಯುವ ಜನತೆಯ ಆದರ್ಶ ಮತ್ತು ಜೀವನ ವಿಧಾನ ವಾಗಿರುವ ಸ್ವಾಮಿ ವಿವೇಕಾನಂದ ರ ಚಿಂತನೆಗಳನ್ನು ನಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಾವು ಆಚರಿಸುತ್ತಿರುವ “ರಾಷ್ಟ್ರೀಯ ಯುವ ದಿನ ” ಅರ್ಥ ಪೂರ್ಣವಾಗಲಿದೆ.
ಇಂದಿನ ಸಾಮಾಜಿಕ, ರಾಜಕೀಯ, ಆಡಳಿತ ವ್ಯವಸ್ಥೆ ಯಲ್ಲಿ ಮಿತಿ ಮೀರಿ ತಾಂಡವ ವಾಡುತ್ತಿರುವ “ಭ್ರಷ್ಟಾಚಾರ” ದ ವೈರಸ್ ಗೆ ವಿವೇಕಾನಂದ ರ “ಪ್ರಾಮಾಣಿಕತೆ” ಯ ಚಿಂತನೆ ಯು ಪರಿಹಾರ ಕ್ರಮವಾಗಬೇಕಿದೆ. ರಾಷ್ಟ್ರ ಭಕ್ತಿ ಮತ್ತು ರಾಷ್ಟ್ರೀಯತೆ ಪರಿಕಲ್ಪನೆ ಗಳು ಇಂದು ಸಂಕುಚಿತ ಅರ್ಥಕ್ಕೆ ಸೀಮಿತಗೊಂಡಿವೆ. ರಾಷ್ಟ್ರ ಭಕ್ತಿ ಎಂದರೆ ಕೇವಲ ರಾಷ್ಟ್ರಗೀತೆ ಹಾಡುವುದು, ರಾಷ್ಟ್ರ ಧ್ವಜ ಕ್ಕೆ ಮತ್ತು ರಾಷ್ಟ್ರ ಲಾಂಛನಗಳಿಗೆ ಗೌರವ ನೀಡುವುದು ಎಂಬಂತಾಗಿದೆ, ರಾಷ್ಟ್ರ ಭಕ್ತಿ ಎಂದರೆ ಇವುಗಳನ್ನೂ ಒಳಗೊಂಡಂತೆ ಪ್ರಾಮಾಣಿಕತೆ ಯಿಂದ, ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದೂ ಆಗಿರುತ್ತದೆ ಎಂಬುದನ್ನು ನಾವು ಅರಿಯಬೇಕಿದೆ. ಹಾಗೆಯೇ ರಾಷ್ಟ್ರ ನಿರ್ಮಾಣ ಎಂದರೆ ಎಲ್ಲರಿಗೂ ಸಮಾನ ಅವಕಾಶ, ಸ್ವಾತಂತ್ರ್ಯ, ವ್ಯಕ್ತಿ ಗೌರವ ದೊರೆಯುವಂತೆ ಮಾಡಿ, ಶೋಷಣೆ ರಹಿತ, ತಾರತಮ್ಯ ರಹಿತ ಸಮಾಜದ ನಿರ್ಮಾಣ ಮಾಡುವುದೇ ಆಗಿದೆ. ರಾಷ್ಟ್ರದ ಅಭಿವೃದ್ಧಿ ಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡಾಗ ಮಾತ್ರ ಅದನ್ನು ನಿಜವಾದ ರಾಷ್ಟ್ರ ನಿರ್ಮಾಣ ಎಂದು ಪರಿಗಣಿಸಲಾಗುತ್ತದೆ.
ಸ್ವಾಮಿ ವಿವೇಕಾನಂದ ರ ಚಿಂತನೆಗಳು ನಮ್ಮನ್ನು ಪ್ರಾಮಾಣಿಕತೆಯಿಂದ, ಭ್ರಷ್ಟಾಚಾರ ರಹಿತವಾಗಿ, ನಿಸ್ವಾರ್ಥ ಮನೋಭಾವನೆ ಯಿಂದ ಕಾರ್ಯ ನಿರ್ವಹಿಸುವಂತೆ ಮಾಡಬೇಕಿದೆ. ನಿಜವಾದ ರಾಷ್ಟ್ರ ಪ್ರೇಮ ಪ್ರಾಮಾಣಿಕ ಸೇವೆಯೇ ಆಗಿದೆ ಎಂಬುದು ವಿವೇಕಾನಂದ ರ ಚಿಂತನೆಗಳಿಂದ ನಾವು ಮನಗಾಣಬೇಕಿದೆ. ಹಾಗೆಯೇ ಒಂದು ರಾಷ್ಟ ಎಂದರೆ ಕೇವಲ ಒಂದು ಪಕ್ಷ, ಒಬ್ಬ ನಾಯಕ ಎಂಬ ಭ್ರಮೆ ಯಿಂದ ನಾವು ಹೊರಬರಬೇಕಿದೆ.ಕಾರಣ ವಿವೇಕಾನಂದ ರ ಪ್ರಕಾರ ರಾಷ್ಟ್ರ ಎಂದರೆ- “ಬಡವರು, ಶ್ರೀಮಂತರು, ಎಲ್ಲಾ ಜಾತಿ, ಜನಾಂಗ, ಎಲ್ಲಾ ಧರ್ಮ ಗಳನ್ನು ಒಳಗೊಂಡಿರುವ ಒಂದು ಅರ್ಥ ಪೂರ್ಣ ವ್ಯವಸ್ಥೆ ಯಾಗಿದೆ”.
ಸ್ವಾಮಿ ವಿವೇಕಾನಂದ ರ ಜನ್ಮ ದಿನಾಚರಣೆಯ ನ್ನು “ರಾಷ್ಟ್ರೀಯ ಯುವ ದಿನ”ವನ್ನಾಗಿ ಆಚರಿಸುತ್ತಿರುವ ಈ ಸಂಧರ್ಭದಲ್ಲಿ ವಿವೇಕಾನಂದ ರ ಚಿಂತನೆಗಳ ಅಧ್ಯಯನ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ನಮ್ಮಲ್ಲಿರುವ ಸಂಕುಚಿತ ಮನೋಭಾವನೆ ದೂರವಾಗಿ ವಿಶಾಲ ಚಿಂತನೆಗಳು ಮೂಡಿದಾಗ ಮಾತ್ರ “ರಾಷ್ಟ್ರೀಯ ಯುವ ದಿನ” ಕ್ಕೆ ನಿಜವಾದ ಅರ್ಥ ಬರುತ್ತದೆ.

ಆಯೇಷಾ ಸುಲ್ತಾನ್.
ಎಸ್.ಜೆ. ಎಂ. ಕಾಲೇಜ್,
ಚಂದ್ರವಳ್ಳಿ, ಚಿತ್ರದುರ್ಗ.

About The Author

Leave a Reply

Your email address will not be published. Required fields are marked *