April 24, 2024

Chitradurga hoysala

Kannada news portal

ಜಲಜೀವನ್ ಮಿಷನ್ ಯೋಜನೆಯಡಿ ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿಗಳಿಗೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಅನುಮೋದನೆ

1 min read


ಜಲಜೀವನ್ ಮಿಷನ್ ಯೋಜನೆಯಡಿ ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿಗಳಿಗೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಅನುಮೋದನೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲ ಜನವಸತಿ ಪ್ರದೇಶ ಸೇರಿದಂತೆ 1597 ಗ್ರಾಮಗಳಿದ್ದು, ಈ ಎಲ್ಲ ಗ್ರಾಮಗಳಿಗೂ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಳ ಸಂಪರ್ಕ ಕಲ್ಪಿಸಲು ಕ್ರಿಯಾ ಯೋಜನೆಗೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಅನುಮೋದನೆ ನೀಡಿತು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಜಲಜೀವನ್ ಮಿಷನ್ ಯೋಜನೆ ಬ್ಯಾಚ್-1ರಲ್ಲಿ 29 ಜನವಸತಿ, ಬ್ಯಾಚ್-2ರಲ್ಲಿ 644 ಜನವಸತಿ ಪ್ರದೇಶಗಳು ಹಾಗೂ ಬ್ಯಾಚ್-3ರಲ್ಲಿ 133 ಜನವಸತಿ ಪ್ರದೇಶಗಳಿಗೆ ಕಾರ್ಯಾತ್ಮಕ ನಳ ನೀರು ಕಲ್ಪಿಸಲು ಅನುಮೋದನೆಯಾಗಿದ್ದು, ಬ್ಯಾಚ್-4ರಡಿ ಇನ್ನೂ 811 ಜನವಸತಿ ಪ್ರದೇಶಗಳಿಗೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯಲು ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ನೀಡಲಾಯಿತು. ಇದಲ್ಲದೆ ಜಿಲ್ಲೆಯಲ್ಲಿನ ಬಾಕಿ ಉಳಿದಿರುವ ಆರು ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಜೆಜೆಎಂನಡಿ 323 ಕೇಂದ್ರಗಳಿಗೆ ನೀರು ಸಂಪರ್ಕ ಕಲ್ಪಿಸಲು ಸಭೆ ಅನುಮೋದನೆ ನೀಡಿತು ಹಾಗೂ ಜಿಲ್ಲೆಯಲ್ಲಿನ ಎಲ್ಲ ಹಾಸ್ಟೆಲ್‍ಗಳಿಗೂ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕು. ಈ ಹಿನ್ನಲೆಯಲ್ಲಿ ಪ್ರತಿ ಅಂಗನವಾಡಿಗೂ ರೂ.15,000/- ಹಾಗೂ ಹಾಸ್ಟೆಲ್ ಹಾಗೂ ಶಾಲೆಗಳಿಗೆ ರೂ.20,000/- ಅನುದಾನ ನೀಡಲಾಗುತ್ತಿದೆ ಎಂದು ಡಾ.ಕೆ.ನಂದಿನಿದೇವಿ ಅವರು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಕೃಷಿ ಉಪನಿರ್ದೇಶಕ ಹುಲಿರಾಜ್, ಜಿಲ್ಲಾ ವಾರ್ತಾಧಿಕಾರಿ ಬಿ.ಧನಂಜಯ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿತ್ರದುರ್ಗ ವಿಭಾಗದ ಸಹಾಯಕ ಇಂಜಿನಿಯರ್ ಪುರುಷೋತ್ತಮ್, ಭದ್ರಾ ಮೇಲ್ದಂಡೆ ಇಂಜಿನಿಯರ್ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು

About The Author

Leave a Reply

Your email address will not be published. Required fields are marked *