ಮಳೆ ಹಾನಿ: ಪರಿಹಾರ ಮಂಜೂರಾತಿಗೆ ಸೂಚನೆ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
1 min readಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ನಿಖರವಾಗಿ ಪರಿಶೀಲನೆ ನಡೆಸಿ, ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನುಸಾರ ಅರ್ಹರಿಗೆ ಕಾಲಮಿತಿಯೊಳಗೆ ಬೆಳೆ ಹಾನಿ, ಮನೆ, ಜಾನುವಾರು ಹಾನಿ ಪರಿಹಾರವನ್ನು ಮಂಜೂರು ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದ್ದಾರೆ.
ಮುಖ್ಯ ಕಾರ್ಯದರ್ಶಿಗಳು ಆಗಸ್ಟ್ 06 ರಂದು ನೀಡಿದ ವಿಡಿಯೋ ಸಂವಾದದಲ್ಲಿ ನೀಡಿದ ಆದೇಶದಂತೆ ಜಿಲ್ಲೆಯಲ್ಲಿ ಹವಾಮಾನ ವೈಪರಿತ್ಯದಿಂದ ಕೆಲವೊಂದು ಹೋಬಳಿ, ಪಂಚಾಯಿತಿ, ಗ್ರಾಮಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನಲೆಯಲ್ಲಿ ಅತಿವೃಷ್ಠಿ ಉಂಟಾಗಿ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ, ಮನೆ ಮತ್ತು ಜಾನುವಾರು ಹಾನಿಯ ಬಗ್ಗೆ ವರದಿಗಳಾಗಿರುತ್ತವೆ. ಪ್ರಕೃತಿ ವಿಕೋಪದಿಂದಾಗಿ ಉಂಟಾದ ಹಾನಿಯಲ್ಲಿ ಅರ್ಹರಿಗೆ ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ಮಾರ್ಗಸೂಚಿ ಅನುಸರಿಸಿ ಪರಿಹಾರ ಮಂಜೂರಾತಿಗೆ ಅವಕಾಶವಿರುತ್ತದೆ.
ಜಿಲ್ಲೆಯಲ್ಲಿ ಇತ್ತೀಚಿಗೆ ಬೀಳುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಹಾನಿಗಳ ಬಗ್ಗೆ ಸಕ್ಷಮ ಪ್ರಾಧಿಕಾರಿಗಳು ಖುದ್ದು, ಪರಿಶೀಲನೆ ನಡೆಸಿ, ನಿಖರ ಹಾನಿಯ ಪ್ರಮಾಣವನ್ನು ಗುರುತಿಸಿದೇ ಇದ್ದಲ್ಲಿ ಹಾನಿಯ ನಷ್ಟವನ್ನು ಅಂದಾಜಿಸಲು ಹಾಗೂ ಅರ್ಹರಿಗೆ ಸಕಾಲದಲ್ಲಿ ಪರಿಹಾರ ವಿತರಿಸಲು ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ಹಾನಿಯಾದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ, ಮನೆ ಮತ್ತು ಜಾನುವಾರುಗಳ ಬಗ್ಗೆ ಆಗಸ್ಟ್ 08 ಹಾಗೂ 09 ರಂದು ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆಯನ್ನು ನಡೆಸಿ, ನಿಖರ ಹಾನಿಯ ಪ್ರಮಾಣವನ್ನು ಅನುಸರಿಸಿ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನುಸಾರ ದೊರೆಯಬಹುದಾದ ಪರಿಹಾರ ಮೊತ್ತವನ್ನು ಅರ್ಹರಿಗೆ ಕಾಲಮಿತಿಯೊಳಗೆ ತಲುಪಿಸುವ ಕಾರ್ಯವನ್ನು ಕೈಗೊಳ್ಳಲು ಕೋರಿದೆ.
ನಿಖರ ಹಾನಿಯ ವಿವರಗಳನ್ನು ಜಿಪಿಎಸ್ ಛಾಯಚಿತ್ರ ಸಹಿತ ಹಾಗೂ ಪರಿಹಾರ ಪಾವತಿ ಬಗ್ಗೆ ವಿವರಗಳನ್ನು ಪ್ರತಿ ಸೋಮವಾರ ಕ್ರೂಢೀಕೃತ ವರದಿಯನ್ನು ತಪ್ಪದೇ ಈ ಪ್ರಾಧಿಕಾರಕ್ಕೆ ನೀಡಲು ಸೂಚಿಸಿದೆ.