June 27, 2022

Chitradurga hoysala

Kannada news portal

ಆಧುನಿಕ ಭಾರತದಲ್ಲಿ ಸ್ತ್ರೀವಾದ ಮತ್ತು ಶಿಕ್ಷಣ : ಒಳ್ಳೆಯ ಮಗಳು, ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ ಎಂದೆಲ್ಲಾ ಹೇಳಿಸಿಕೊಳ್ಳುತ್ತಾ ಬೆಳೆದ ಸಂಸ್ಕೃತಿಯ ಮಹಿಳೆಗೆ ಒಳ್ಳೆಯ ಕೆಲಸಗಾರ್ತಿ ಸ್ತ್ರೀ

1 min read

ಆಧುನಿಕ ಭಾರತದಲ್ಲಿ ಸ್ತ್ರೀವಾದ ಮತ್ತು ಶಿಕ್ಷಣ :

ಒಳ್ಳೆಯ ಮಗಳು, ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ ಎಂದೆಲ್ಲಾ ಹೇಳಿಸಿಕೊಳ್ಳುತ್ತಾ ಬೆಳೆದ ಸಂಸ್ಕೃತಿಯ ಮಹಿಳೆಗೆ ಒಳ್ಳೆಯ ಕೆಲಸಗಾರ್ತಿ ಸ್ತ್ರೀ……

ಆಧುನಿಕ ಭಾರತದಲ್ಲಿ ಸ್ತ್ರೀವಾದ ಮತ್ತು ಶಿಕ್ಷಣ
ಸ್ತ್ರೀವಾದ ಅಥವಾ ಫೆಮಿನಿಸಂ ಎಂಬುದು ಒಂದು ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತ. ಇದು ಪಾಶ್ಚಾತ್ಯ ನೆಲದಲ್ಲಿ ಮೂಡಿಬಂದದ್ದಾದರೂ ಜಗತ್ತಿನೆಲ್ಲೆಡೆಗೂ ಹಬ್ಬಿ ಪ್ರಚಲಿತದಲ್ಲಿರುವ ಸಿದ್ಧಾಂತವಾಗಿದೆ. ಇದು ಹೋರಾಟದ ಹಿನ್ನೆಲೆ ಹೊಂದಿರುವ ಸಿದ್ಧಾಂತ. ಮಹಿಳಾ ಸಮಸ್ಯೆಗಳು ಹಾಗೂ ಮಹಿಳೆಯರನ್ನು ಈ ಸಮಸ್ಯೆಗಳಿಂದ ವಿಮೋಚನೆಗೊಳಿಸುವುದೇ ಈ ಹೋರಾಟದ ಮೂಲ ಉದ್ದೇಶ. ಇತ್ತೀಚಿನವರೆವಿಗೂ ಸ್ತ್ರೀ ಪುರುಷರ ನಡುವೆ ಲಿಂಗಾಧಾರಿತ ತಾರತಮ್ಯವಿರುವ ವ್ಯವಸ್ಥೆ ಇತ್ತು. ಈ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ನಡೆಸುವ ಹಕ್ಕೊತ್ತಾಯ, ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಬದುಕಿನ ನೆಲೆಗಳಲ್ಲಿ ಸ್ತ್ರೀಪುರುಷರನ್ನು ಸಮಾನವಾಗಿ ಸ್ಥಾಪಿಸಬಲ್ಲ ವ್ಯವಸ್ಥೆಗಾಗಿ ನಡೆಸುವ ಹೋರಾಟ – ಇವುಗಳ ಹಿಂದಿರುವ ತಾತ್ವಿಕ ನೆಲೆಗಟ್ಟನ್ನು ಸ್ತ್ರೀವಾದ ಎನ್ನಬಹುದು.
ಮಹಿಳೆಯರು ತಮ್ಮ ಸ್ಥಾನಮಾನ ಹಾಗೂ ಹಕ್ಕುಗಳಿಗಾಗಿ ಯುರೋಪ್ ಖಂಡದ ಜರ್ಮನಿ, ನೆದರ್‌ಲ್ಯಾಂಡ್ಸ್, ಫ್ರಾನ್ಸ್ , ಇಟಲಿ ಮತ್ತು ಸ್ಯಾಂಡಿನೇವಿಯಾ ದೇಶಗಳಲ್ಲಿ ಹೋರಾಟ ಮಾಡಿದರು. ಈ ಹೋರಾಟ ಇತರ ಅನೇಕ ದೇಶಗಳಲ್ಲಿ, ಮುಖ್ಯವಾಗಿ ಬ್ರಿಟನ್ ಮತ್ತು ಉತ್ತರ ಅಮೆರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿಯೂ ನಡೆಯಿತು. ಈ ಎಲ್ಲ ಕಡೆಗಳಲ್ಲಿ ಆಯಾದೇಶದ ಸಾಂಸ್ಕೃತಿಕ ಹಿನ್ನೆಲೆಗೆ ಅನುಗುಣವಾಗಿ ನಡೆದ ಈ ಹೋರಾಟಕ್ಕೆ ಇನ್ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ವರ್ಷಗಳು ಕಳೆದಂತೆ ಈ ಹೋರಾಟಗಳು ಹೆಚ್ಚು ಶಕ್ತಿಯುತವಾಗುತ್ತಿವೆ. ಹೋರಾಟದ ತೀವ್ರತೆ ಹೆಚ್ಚಿದೆ. ಜೊತೆಗೆ ಸಮಸ್ಯೆಗಳು ಕೂಡಾ ಭಿನ್ನರೂಪವನ್ನು ಪಡೆಯುತ್ತಾ ಬಂದಿವೆ. ಸ್ತ್ರೀವಾದಿ ಸಂಘಟನೆಗಳು ಅಭಿಪ್ರಾಯಪಡುವಂತೆ ಲಿಂಗಭೇದ ನೀತಿಯಿಂದ ಮಹಿಳೆಯರ ಅನೇಕ ಸಮಸ್ಯೆಗಳು ಉದ್ಭವಿಸಿವೆ. ಮಹಿಳೆ ಅಥವಾ ಪುರುಷರ ನಡುವೆ ಸಹಜವಾದ ಕೆಲವು ಜೈವಿಕ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳು ಯಾವುದೇ ರೀತಿಯಲ್ಲಿ ಪುರುಷನನ್ನು ಶ್ರೇಷ್ಠವೆಂದೂ ಸ್ತ್ರೀಯನ್ನು ಕೀಳೆಂದು ಪ್ರಮಾಣೀಕರಿಸುವುದಿಲ್ಲ.
ಭಾರತದಲ್ಲಿ ಲಿಂಗ ಸಮಾನತೆಯ ಪರಿಕಲ್ಪನೆ ಪರಿಚಯವಾಗಿದ್ದು 19 ನೆಯ ಶತಮಾನದಲ್ಲಿ. ಭಾರತೀಯರು ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆಯಲು ಪ್ರಾರಂಭಿಸಿದಾಗ. ಭಾರತವು ಸ್ವಾತಂತ್ರ್ಯ ಪಡೆದ ನಂತರ ಸಂವಿಧಾನಾತ್ಮಕವಾಗಿ ಸಮಾನತೆಗೆ ಒತ್ತು ನೀಡಿತು. ಸರಕಾರವು ಸಮಾನತೆ ಲಿಂಗತ್ವ ಹಾಗೂ ಧಾರ್ಮಿಕ ನೆಲೆಯ ಭೇದಭಾವಗಳನ್ನು ಹೋಗಲಾಡಿಸುವ ಕಾನೂನು ಜಾರಿಗೆ ತಂದಿತು. ಏಳು ಪಂಚವಾರ್ಷಿಕ ಯೋಜನೆಗಳು ಮಹಿಳೆಯರಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿಗೆ ಒತ್ತುಕೊಟ್ಟರೆ ಎಂಟನೆಯ ಪಂಚವಾರ್ಷಿಕ ಯೋಜನೆಯು ಮಹಿಳೆಯರನ್ನು ಅಭಿವೃದ್ಧಿಯಲ್ಲಿ ಪಾಲುದಾರರು ಎಂದು ಘೋಷಿಸಿತು. ಇಲ್ಲಿ ಮತ್ತೆ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಭಾರತೀಯ ಸ್ತ್ರೀವಾದಕ್ಕೂ ಪಾಶ್ಚಾತ್ಯ ಸ್ತ್ರೀವಾದಕ್ಕೂ ಇರುವ ವ್ಯತ್ಯಾಸ. ಭಾರತೀಯ ವಾತಾವರಣದಲ್ಲಿ ಮಾನವಹಕ್ಕುಗಳ ನೆಲೆಯಲ್ಲಿ ಭಾರತೀಯ ಮಹಿಳೆ ಹಾಗೂ ಸ್ತ್ರೀವಾದವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಹಸಿವು , ಬಡತನ , ಅನಾರೋಗ್ಯ , ಶಿಶುಮರಣ, ಭೂಮಾಲೀಕರು ಮಹಿಳಾ ಕಾರ್ಮಿಕರ ದೈಹಿಕ ಶ್ರಮವನ್ನು ಉಪಯೋಗಿಸುವುದು, ಸಂಪ್ರದಾಯಗಳ ಅಮಾನವೀಯತೆ ಮತ್ತು ಹೊರೆ ಕಟ್ಟುಕಟ್ಟಳೆಗಳ ಕೊನೆಯಿಲ್ಲದ ಬೇಡಿಕೆ ಅಥವಾ ಕಾರಣವಿಲ್ಲದೆ ತೆಗಳಿಕೆ, ಹೀಗಳೆತ, ಹೊಡೆತ ಇವೆಲ್ಲವುಗಳ ಬಗ್ಗೆ ಭಾರತೀಯರ ಹಾಗೂ ಪಾಶ್ಚಿಮಾತ್ಯರ ಗ್ರಹಿಕೆ ಭಿನ್ನವಾಗಿದೆ.
ಕಾನೂನು ಕಟ್ಟಳೆಗಳ ನೆಲೆಯಲ್ಲಿ ಭಾರತೀಯ ಮಹಿಳೆಯರ ಸ್ಥಿತಿಗತಿ ಉತ್ತಮವಾಗಿದೆ ಎಂದು ಕಂಡುಬಂದರೂ ವಾಸ್ತವದಲ್ಲಿ ಹಾಗಿಲ್ಲ. ಮಹಿಳೆಯರಿಗೆ ನೀಡಿರುವ ಸವಲತ್ತುಗಳು ಪೂರ್ಣಪ್ರಮಾಣದಲ್ಲಿ ಅವರನ್ನು ತಲುಪಿಲ್ಲ. ನೂರಾರು ವರ್ಷಗಳಿಂದ ಪಾಲಿಸುತ್ತ ಬಂದಿರುವ ಕೆಲವು ಕಟ್ಟಳೆಗಳು ಆಚರಿಸುತ್ತಿರುವ ಸಂಪ್ರದಾಯಗಳು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡುಬಿಟ್ಟಿವೆ. ಧಾರ್ಮಿಕ ಕಾನೂನುಗಳು ಮತ್ತು ನಿರೀಕ್ಷೆಗಳು ಅಥವಾ ವೈಯಕ್ತಿಕ ಕಾನೂನುಗಳು (ಪ್ರತಿ ಧರ್ಮದಿಂದ ಮೂಡಿಬಂದವುಗಳು) ಭಾರತೀಯ ಸಂವಿಧಾನಾತ್ಮಕ ಕಾನೂನುಗಳಿಗೆ ಪೂರಕವಾಗಿಲ್ಲದ ಕಾರಣ ಮಹಿಳೆಯರಿಗೆ ಕಾನೂನುಬದ್ಧವಾಗಿ ದೊರಕಬೇಕಾದ ಹಕ್ಕುಗಳು ಹಾಗೂ ಅಧಿಕಾರ ಲಭ್ಯವಾಗುತ್ತಿಲ್ಲ! ಹೀಗಾದಾಗ್ಯೂ ಭಾರತ ಸರಕಾರ ಧಾರ್ಮಿಕ ಅಥವಾ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ.
ಆಧುನೀಕರಣ ಪ್ರಕ್ರಿಯೆಗೆ ಒಳಗಾದ ಭಾರತಕ್ಕೆ ಆಧುನಿಕ ಮೌಲ್ಯಗಳು ರೂಢಿಯಾದವು. ಆಧುನಿಕ ಅಭಿವೃದ್ಧಿಯ ದುಡಿಮೆ ವಲಯವು ಸಂಪೂರ್ಣವಾಗಿ ಪುರುಷರಿಗೆ ಮೀಸಲಿದ್ದು ಪುರುಷಕೇಂದ್ರಿತವಾಯಿತು. ಇಲ್ಲಿ ಸ್ತ್ರೀ ಪುರುಷರ ನಡುವಿನ ವಿಭಜನೆ ಸ್ಪಷ್ಟವಾಗಿ ಕಾಣುತ್ತದೆ. ದೇಶದ ಅಭಿವೃದ್ಧಿ ಸಾಮಾಜಿಕ ಜೀವನದ ಪಾಲುದಾರಿಕೆ ಹಾಗೂ ಉತ್ಪಾದನಾ ಕಾರ್ಯಗಳು ಪುರುಷರಿಗೆ ಸೀಮಿತವಾದ ವಲಯವಾಗಿದ್ದು ವಂಶಾಭಿವೃದ್ಧಿ , ಕುಟುಂಬದ ಲಾಲನೆ, ಪಾಲನೆ ಇವುಗಳು ಮಹಿಳೆಯ ಜವಾಬ್ದಾರಿ ವಲಯವಾಯಿತು. ಶಿಕ್ಷಣ ಕ್ಷೇತ್ರವೂ ತನ್ನ ನೀತಿ ಹಾಗೂ ಪಠ್ಯಕ್ರಮಗಳಲ್ಲಿ ಇದೇ ಮೌಲ್ಯವನ್ನು ಎತ್ತಿ ಹಿಡಿಯಿತು. ಈ ರೀತಿಯಲ್ಲಿ ಸ್ಪಷ್ಟ ವಿಭಜನೆಗೆ ಮನ್ನಣೆ ನೀಡಿತು. ಶಿಕ್ಷಣದ ಈ ಧೋರಣೆ ಮತ್ತು ಕ್ರಮಗಳು ಸ್ತ್ರೀವಾದಿ ನಿಲುವಿನ ವಿರೋಧ ದಿಕ್ಕಿನಲ್ಲಿ ನಡೆಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣದಲ್ಲಿ ಕೆಲವಾದರೂ ಪರಿಣಾಮಕಾರಿಯಾದ ಬದಲಾವಣೆಗಳನ್ನು ಕಾಣುತ್ತಿದ್ದೇವೆ.
ವಸಾಹತುಶಾಹಿ ಆಡಳಿತವು ಭಾರತವನ್ನು ಆಧುನೀಕರಣದ ಪ್ರಕ್ರಿಯೆಗೆ ಒಳಪಡಿಸುವುದರ ಜೊತೆಜೊತೆಯಲ್ಲಿಯೇ ಜಾಗತಿಕ ಮಾರುಕಟ್ಟೆಗೂ ಪರಿಚಯಿಸಿತು. ಬಂಡವಾಳಶಾಹಿಯು ಸಮಾಜದಲ್ಲಿ ತರುವ ಬದಲಾವಣೆಗಳು ಅತಂತ್ರತೆ ಇತ್ಯಾದಿಗಳು ಮನುಷ್ಯಜೀವನವನ್ನು ಸಾಕಷ್ಟು ಒತ್ತಡಕ್ಕೆ ದೂಡುವುದರ ಜೊತೆಗೆ ಮನುಷ್ಯನ ವ್ಯಕ್ತಿತ್ವವನ್ನು ಸಂಕೀರ್ಣಗೊಳಿಸುತ್ತದೆ. ಹಾಗಾಗಿ ಸಮಾಜದ ಮೌಲ್ಯಗಳು, ಜೀವನಕ್ರಮ, ಸಂಸ್ಕೃತಿ ಇವುಗಳೂ ಬದಲಾವಣೆಯನ್ನು ಹೊಂದುತ್ತವೆ. ಸ್ವಾಭಾವಿಕವಾಗಿಯೇ ಈ ಬದಲಾವಣೆಗಳು ಶಿಕ್ಷಣ ಕ್ಷೇತ್ರಕ್ಕೂ ವಿಸ್ತರಿಸುತ್ತವೆ. ಭಾರತದ ಸನ್ನಿವೇಶದಲ್ಲಿಯೂ ಇದು ನಿಜವಾಯಿತು. ಬಂಡವಾಳಶಾಹಿ ಸಮಾಜದಲ್ಲಿ ಹೆಚ್ಚಿನ ದುಡಿಮೆಯಿದೆ. ಮಹಿಳೆಯರು ಉದ್ಯಮವಲಯವನ್ನು ಪ್ರವೇಶಿಸುವಂತಾಯಿತು. ಪುರುಷರಿಗೆ ಮಾತ್ರ ಮೀಸಲಿದ್ದ ಈ ಕ್ಷೇತ್ರಕ್ಕೆ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡಲು ಎರಡು ಮುಖ್ಯ ಕಾರಣಗಳಿದ್ದವು. ಮೊದಲನೆಯದು, ಮಹಿಳೆಯರು ಮನೆಯೊಳಗಿದ್ದುಕೊಂಡೇ ಕೆಲಸವನ್ನು ಮಾಡುವುದು. ಎರಡನೆಯದು, ಕಡಿಮೆ ವೇತನಕ್ಕೆ ಅವರಿಂದ ಹೆಚ್ಚು ಕೆಲಸವನ್ನು ಮಾಡಿಸಲು ಸಾಧ್ಯವಿರುವುದು.
ಒಳ್ಳೆಯ ಮಗಳು, ಒಳ್ಳೆಯ ಹೆಂಡತಿ, ಒಳ್ಳೆಯ ತಾಯಿ ಎಂದೆಲ್ಲಾ ಹೇಳಿಸಿಕೊಳ್ಳುತ್ತಾ ಬೆಳೆದ ಸಂಸ್ಕೃತಿಯ ಮಹಿಳೆಗೆ ಒಳ್ಳೆಯ ಕೆಲಸಗಾರ್ತಿ ಎಂಬ ಬಿರುದಿನೊಂದಿಗೆ ಅಲ್ಪ ಸಂಬಳದ ಚಕಾರವೆತ್ತುವ ದಾರ್ಷ್ಟ್ಯ ಸ್ವಭಾವವಿಲ್ಲದಿರುವುದು ಉದ್ಯೋಗದಾತರಿಗೆ ಅನುಕೂಲವೇ ಆಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಉದ್ಯೋಗ ಅವಕಾಶಗಳು ಮೂಡಿದವು. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಅವಶ್ಯಕತೆ ಇದ್ದುದರಿಂದ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಯಿತು. ಬಂಡವಾಳಶಾಹಿಗೆ ಅನುಕೂಲಕರವಾಗಿ ಜಾಗತೀಕರಣವು ಮೂಡಿಬಂದಿತು. ಇದು ಮಾರುಕಟ್ಟೆಯ ವ್ಯಾಪ್ತಿಯನ್ನು ಹಿಗ್ಗಿಸಿತು. ಹೂಡಿಕೆ ಹಾಗೂ ಗಳಿಕೆಯೇ ಜಾಗತೀಕರಣದ ಮೂಲ ಉದ್ದೇಶವಾದರೂ ಅನಿವಾರ್ಯವೋ ಏನೋ ಎಂಬಂತೆ ಜನರ ಚಲನೆಯು ಜಗತ್ತಿನಾದ್ಯಂತ ಹರಡಿದುದರ ಫಲವಾಗಿ ಜ್ಞಾನ ಮಾದರಿಯ ಕೊಡುಕೊಳ್ಳುವಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎನ್ನಬಹುದು. ಈ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಸಾಕಷ್ಟು ಮಾರ್ಪಾಡುಗಳು ಆದವು. ಅಲ್ಲದೆ ಮಹಿಳೆಯರು ಶಿಕ್ಷಣರಂಗಕ್ಕೆ ಕಾಲಿರಿಸುವ ಈ ತಾಣವನ್ನು ಸ್ತ್ರೀವಾದವು ತನ್ನ ಲಾಭಕ್ಕೆ ಸ್ವಲ್ಪಮಟ್ಟಿಗೆ ಬಳಸಿಕೊಂಡಿದೆ ಎನ್ನಬಹುದು.
ಸ್ತ್ರೀವಾದಿ ನೆಲೆಯಲ್ಲಿ ಶಿಕ್ಷಣರಂಗದಲ್ಲಿ ಆದ ಬದಲಾವಣೆಗಳು ಪ್ರಮುಖವಾಗುತ್ತವೆ. ಶಾಲಾಶಿಕ್ಷಣ ಶಿಕ್ಷಣದ ಪ್ರಥಮ ಹಂತ. ಇಂದಿಗೂ ಭಾರತದಲ್ಲಿ ಹೆಣ್ಣುಮಕ್ಕಳಿಗಾಗಿಯೇ ಮೀಸಲಿಟ್ಟ ಶಾಲೆಗಳಿವೆ. ಹಾಗೆಯೇ ಗಂಡುಮಕ್ಕಳಿಗೆಂದೇ ಮೀಸಲಿಟ್ಟ ಶಾಲೆಗಳಿವೆ. ಈ ಬಗೆಯ ಮೀಸಲು ದೃಷ್ಟಿಯೇ ಲಿಂಗತ್ವಭೇದದ ಸೂಚಕವಾಗಿದೆ. ಇನ್ನು ಸಹಶಿಕ್ಷಣವಿರುವ ಶಾಲೆಗಳಲ್ಲಿ ಹೆಣ್ಣು – ಗಂಡು ಎಂಬ ಭೇದದಲ್ಲಿಯೇ ಅನೇಕ ಚಟುವಟಿಕೆಗಳು ನಡೆಯುತ್ತವೆ. ಹಾಗಾಗಿ ಸ್ತ್ರೀಪುರುಷ ಸಮಾನತೆಯ ಅಂಶಗಳು ಶಾಲಾಮಟ್ಟದಲ್ಲಿ ಪ್ರಬಂಧ, ಭಾಷಣಸ್ಪರ್ಧೆಗಳ ವಿಷಯವಾಗಿ ಮಹಿಳಾದಿನಾಚರಣೆಯ ಆಚರಣೆಯ ಮಟ್ಟಕ್ಕೆ ಸೀಮಿತವಾಗಿದೆ. ಪದವಿ ಶಿಕ್ಷಣವು ಶಾಲಾ ಮಟ್ಟಕ್ಕಿಂತ ಸ್ತ್ರೀವಾದಿ ನೆಲೆಯಲ್ಲಿ ಸ್ವಲ್ಪ ಭಿನ್ನವಾಗಿದೆ. ಕೆಲವು ವಿಶ್ವವಿದ್ಯಾನಿಲಯಗಳು ಸ್ತ್ರೀಸಮಾನತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪದವಿ ತರಗತಿಗಳಲ್ಲಿ ‘ಲಿಂಗಸಮಾನತೆ’ ಯ ವಿಷಯವನ್ನು ಕಡ್ಡಾಯ ವಿಷಯವಾಗಿ ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಿವೆ. ಸಾಹಿತ್ಯ ವಿಷಯದ ವಿದ್ಯಾರ್ಥಿಗಳು ಸಾಹಿತ್ಯವನ್ನು ಸ್ತ್ರೀವಾದಿ ನೆಲೆಯಲ್ಲಿ ಅಭ್ಯಾಸಿಸುವುದು, ಸ್ತ್ರೀವಾದದ ಅರಿವಿಗೆ ಪುಷ್ಟಿ ನೀಡುತ್ತದೆ. ಲಿಂಗತ್ವ – ಸೂಕ್ಷ್ಮತೆ ಹಾಗೂ ಮಹಿಳಾ ಹಕ್ಕುಗಳ ಬಗ್ಗೆ ಕಾರ್ಯಾಗಾರಗಳನ್ನು ಕಾಲೇಜುಗಳಲ್ಲಿ ನಡೆಸಲಾಗುತ್ತದೆ. ಮಹಿಳೆಯರ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ಕೆಲವೊಂದು ಕಾರ್ಯಕ್ರಮಗಳು ಈ ಹಂತದಲ್ಲಿ ನಡೆಯುತ್ತವೆ. ಪದವಿ ಮಟ್ಟದ ಎಲ್ಲ ಪ್ರಯತ್ನಗಳೂ ಮಹಿಳೆಯರ ತಾರತಮ್ಯದ ಕುರಿತು ಅರಿವು ಮೂಡಿಸುವುದಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅಂಶ ಗಮನಾರ್ಹ. ಸ್ತ್ರೀವಾದವೆನ್ನುವುದು ನಿಂತ ನೀರಾಗದೇ ಚಲನಶೀಲವಾಗಿದೆ. ಆದರೆ ಇಲ್ಲಿ ಒಂದು ಅಂಶವನ್ನು ಗಮನಿಸಬೇಕು ಸ್ತ್ರೀವಾದ ರಾಜಕೀಯ ಸಿದ್ಧಾಂತದ ದೃಷ್ಟಿಯಿಂದ ತನ್ನದೇ ಆದ ಮಿತಿಯನ್ನು ಹೊಂದಿದೆ. ಜಾಗತಿಕ ರಾಜಕೀಯ ಇತಿಮಿತಿಯ ಅರಿವಿದ್ದೇ ಅದು ಮಹಿಳೆಯರ ಸಮಾನತೆಯ ಹಕ್ಕೊತ್ತಾಯ ಹಾಗೂ ಹೋರಾಟವನ್ನು ನಡೆಸಬೇಕಾಗಿದೆ. ಇದು ಸ್ತ್ರೀವಾದದ ಅನಿವಾರ್ಯತೆ ಕೂಡ. ಬಹುಶಃ ಇಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರವನ್ನು ವಹಿಸಬೇಕಾಗುತ್ತದೆ. ಸ್ತ್ರೀವಾದವು ಕೇವಲ ಮಾಹಿತಿಯಾಗಿ ವಿಷಯ ಪ್ರಸರಣದ ವಸ್ತುವಾಗಿ ಮಾತ್ರ ಶಿಕ್ಷಣದಲ್ಲಿ ಮೂಡಿ ಬಂದು ಕೇವಲ ಜಡ ಅಥವಾ ತಟಸ್ಥ ಕ್ರಿಯೆಯಾಗಿದೆ. ಶಿಕ್ಷಣವು ವಿದ್ಯಾರ್ಥಿಗಳನ್ನು ಸ್ತ್ರೀವಾದದ ತಾತ್ವಿಕತೆಗೆ ಪ್ರೇರೇಪಿಸುವ ನಿಟ್ಟಿನಲ್ಲಿರಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಸ್ತ್ರೀವಾದವು ಶಿಕ್ಷಣದಲ್ಲಿ ಕೇವಲ ಮಾಹಿತಿಯಾಗಿ ಉಳಿದು, ಸಮಾಜದಲ್ಲಿ ಸಮಾನತೆಯ ನೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರಲು ಕಷ್ಟಸಾಧ್ಯವಾಗುತ್ತದೆ.

ಟಿ.ಪಿ.ಉಮೇಶ್, ಶಿಕ್ಷಕರು, ಹೊಳಲ್ಕೆರೆ

Leave a Reply

Your email address will not be published. Required fields are marked *