April 19, 2024

Chitradurga hoysala

Kannada news portal

ಮಠಾಧೀಶರಿಗೆ ಬಿಜೆಪಿಯಿಂದ ಅವಮಾನ ಸಿದ್ದರಾಮಯ್ಯ ಅವರ ಹೇಳಿಕೆ ತಿರುಚಿ, ಹಿಂದು ಧರ್ಮಾಧಿಕಾರಿಗಳಿಗೆ ಅಗೌರವ ಜನರ ಗಮನ ಬೇರೆಡೆ ಸೆಳೆಯಲು ವಿವಾದಗಳಿಗೆ ಜನ್ಮ ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

1 min read


ಮಠಾಧೀಶರಿಗೆ ಬಿಜೆಪಿಯಿಂದ ಅವಮಾನ

ಸಿದ್ದರಾಮಯ್ಯ ಅವರ ಹೇಳಿಕೆ ತಿರುಚಿ, ಹಿಂದು ಧರ್ಮಾಧಿಕಾರಿಗಳಿಗೆ ಅಗೌರವ

ಜನರ ಗಮನ ಬೇರೆಡೆ ಸೆಳೆಯಲು ವಿವಾದಗಳಿಗೆ ಜನ್ಮ

ಮಾಜಿ ಸಚಿವ ಹೆಚ್.ಆಂಜನೇಯ ಆರೋಪ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:

ನಮ್ಮ ತಾಯಂದಿರು, ಮಠಾಧೀಶರು, ವಿವಿಧ ಧರ್ಮದ ಜನರು ತಲೆ ಮೇಲೆ ಹಾಕುವ ಬಟ್ಟೆ (ದುಪ್ಪಟ) ಗೌರವದ ಸೂಚಕ ಎಂದು ಸಿದ್ದರಾಮಯ್ಯ ಹೇಳಿದ್ದ ಮಾತನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆರೋಪಿಸಿದ್ದಾರೆ.

ಶಾಲೆಯೊಂದರ ಮುಖ್ಯಶಿಕ್ಷಕರು , ಪಿಟಿ ಮಾಸ್ಟರ್ ಬಗೆಹರಿಸಬೇಕಿದ್ದ ಹಿಜಾಬ್ ಎಂಬ ಸಣ್ಣ ವಿಷಯ ನಾಡಿನಲ್ಲಿ ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಸಿ, ಕೋರ್ಟ್ ಮೆಟ್ಟಲೇರಿ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ರೀತಿ ಆಗಿದೆ.
ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ಮನಸ್ಸಿನಲ್ಲಿರುವ ವಿಷದ ನಂಜು ಕಾರಣ.
ಈಗ ಹಿಜಾಬ್ ವಿವಾದ ತಣ್ಣಗಾಗುತ್ತಿದ್ದಂತೆ ಆತಂಕಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಅದನ್ನು ಜೀವಂತವಾಗಿ ಇಡುವ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಅವರು ದೇಶದ ಮಠಾಧೀಶರು, ತಾಯಂದಿರು ಗೌರವದ ಸೂಚಕವಾಗಿ ತಲೆ ಮೇಲೆ ಬಟ್ಟೆ ಹಾಕುತ್ತಾರೆ ಎಂದು ಹೇಳಿದ ಮಾತನ್ನೇ ತಿರುಚುವ ಕೆಲಸಕ್ಕೆ ಕೈ ಹಾಕಿದೆ.

ಈ ಮೂಲಕ ನಾಡಿನ ಮಠಾಧೀಶರನ್ನು ಅವಮಾನಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಹೇಳದ ಮಾತನ್ನು ಬಿಜೆಪಿ ನಾಯಕರೇ ಹೇಳಿ,  ನಮ್ಮ ಧರ್ಮಾಧಿಕಾರಿಗಳಿಗೆ ಅಪಮಾನ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ.

ನಾಡಿನ ಅಪರೂಪದ ರಾಜಕಾರಣಿ ಸಿದ್ದರಾಮಯ್ಯ, ತಮ್ಮ ಐದು ವರ್ಷದ ಆಡಳಿತದಲ್ಲಿ ಅನೇಕ ಜನಪರ ಕಾರ್ಯ ಮಾಡಿದ್ದಾರೆ.
ಬಸವಣ್ಣನ ಜನ್ಮದಿನದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಕಡ್ಡಾಯವಾಗಿ ಹಾಕಬೇಕೆಂದು ಆದೇಶ ಹೊರಡಿಸಿದವರು.
ಸಂತರು, ಸನ್ಯಾಸಿಗಳು, ಧರ್ಮಾಧಿಕಾರಿಗಳ ಸಲಹೆ, ಮಾತಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದರು.
ಇದೇ ಕಾರಣಕ್ಕೆ ಸಿರಿಗೆರೆ ಶ್ರೀಗಳ ಸಲಹೆಯಂತೆ ಭರಮಸಾಗರ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಬಜೆಟ್  ನಲ್ಲಿ ಘೋಷಿಸಿದ್ದರು.
ಮುರುಘಾ ಮಠದ ಬಳಿ ಬೃಹತ್ ಬಸವಣ್ಣನ ಪ್ರತಿಮೆ ನಿರ್ಮಾಣಕ್ಕೆ ಹತ್ತು ಕೋಟಿ ರೂಪಾಯಿ ಅನುದಾನ ಕೊಟ್ಟಿದ್ದರು.

ಈ ರೀತಿ ಮಠಾಧೀಶರು, ಧರ್ಮವನ್ನು ಗೌರವಿಸುವ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಭರದಲ್ಲಿ ನಮ್ಮ ಮಠಾಧೀಶರನ್ನು ಅಪಮಾನಿಸುವ ಬಿಜೆಪಿ ನಡೆ ಧರ್ಮ ವಿರೋಧಿ ಆಗಿದೆ.

ಇನ್ನೂ ಸಿದ್ದರಾಮಯ್ಯ ಏಕಾಂಗಿ ಆಗಿದ್ದಾರೆ ಎಂಬ ಹೇಳಿಕೆ ಮೂಲಕ ರಾಜಕೀಯ ಲಾಭ ಪಡೆಯಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ಅಜ್ಞಾನ.
ಎಂದೂ ಸಿದ್ದರಾಮಯ್ಯ ಏಕಾಂಗಿ ಆಗಿಲ್ಲ, ಮುಂದೆಯೋ ಆಗುವುದಿಲ್ಲ. ಅವರ ಬೆಂಬಲಿಗರ ಪಡೆ ಜಾತ್ಯತೀತವಾಗಿ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದೆ. ಅವರ ವಿರುದ್ಧ ಏನೇ ತಂತ್ರ, ಕುತಂತ್ರ ಬಿಜೆಪಿ ಮಾಡಿದರು ಅದು ಫಲಿಸದು. ಜನ ಒಪ್ಪಲಾರರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸ್ಪಷ್ಟ ನುಡಿಯೇ ಸಿದ್ದರಾಮಯ್ಯ ಬೆನ್ನಿಗೆ ಇಡೀ ಕಾಂಗ್ರೆಸ್ ಪಕ್ಷ ಇದೆ ಎಂಬುದಕ್ಕೆ ಸಾಕ್ಷಿ.
ಈ ರೀತಿಯ ವಿವಾದ, ಸುಳ್ಳು ಸುದ್ಧಿ ಹಿಂದೆ ಬಿಜೆಪಿ ತನ್ನ ಆಡಳಿತ ವೈಪಲ್ಯ ಮರೆಮಾಚುವುದು ಮೂಲ ಗುರಿ ಆಗಿದೆ.

ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೆ ಆಡಳಿತ ವೈಫಲ್ಯ ಕಂಡಿರುವ ಬಿಜೆಪಿ ವಿರುದ್ಧ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ, ಸಿಲಿಂಡರ್ ಬೆಲೆ ಪ್ರಥಮಬಾರಿಗೆ ದಾಖಲೆ ಮಟ್ಟದಲ್ಲಿ ಗಗನಕ್ಕೆ ಏರಿದೆ.

ಅಗತ್ಯ ವಸ್ತಗಳು ಜನರ ಬಳಕೆಗೆ ಸಿಗುವ ದರದಲ್ಲಿ ಲಭ್ಯವಾಗುತ್ತಿಲ್ಲ. ಜೊತೆಗೆ ರಾಷ್ಟ್ರ ಧ್ವಜ ಬದಲಾವಣೆ ಮಾಡಲಾಗುವುದು ಎಂಬ ಈಶ್ವರಪ್ಪ ಹೇಳಿಕೆ. ಈ ರೀತಿ ಜನ ವಿರೋಧಿ ನಡೆ, ದೇಶ ವಿರೋಧಿ ಪ್ರಕರಣಗಳು ಬಿಜೆಪಿ ನಾಯಕರಿಂದಲೇ ಆಗುತ್ತಿದೆ. ಇದರ ವಿರುದ್ಧ ಜನ ದಂಗೆ ಎಳುವಂತೆ ಮಾಡಿದೆ.
ಇದರಿಂದ ಆತಂಕಗೊಂಡಿರುವ ಬಿಜೆಪಿ ನಾಯಕರು ಇಲ್ಲಸಲ್ಲದ ವಿವಾದ ಹುಟ್ಟು ಹಾಕುತ್ತಿದ್ದಾರೆ.
ಮಂತ್ರಿಸ್ಥಾನ ಸಿಗದ ಹಿರಿಯ ಶಾಸಕರ ಅಸಮಾಧಾನ, , ಸಚಿವರಿಂದ ಶಾಸಕರು, ಪಕ್ಷದ ಪ್ರಮುಖರಿಗೆ ಅಗೌರವ. ಈ ಕುರಿತು ಬಹಿರಂಗ ಅಕ್ರೋಶ, ಬಿಟ್ ಕಾಯಿನ್ ಹಗರಣ, 40% ಕಮಿಷನ್ ಹೀಗೆ ಸಾಲು ಸಾಲು ಹಗರಣಗಳು ಬಿಜೆಪಿ ನಾಯಕರನ್ನು ದಿಗ್ಭ್ರಮೆಗೊಳಿಸಿದೆ. ಇದರಿಂದ ಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇಪ್ಪತ್ತು ಸೀಟು ಕೂಡ ಪಡೆಯುವುದಿಲ್ಲ ಎಂಬ ವಿಷಯ ಬಹಿರಂಗವಾಗಿದೆ ಹಾಗೂ ರಾಜ್ಯದ ಎಲ್ಲೆಡೆ ಸಿದ್ದರಾಮಯ್ಯ ಅವರ ಐದು ವರ್ಷದ ಆಡಳಿತವನ್ನು ಜನ ನೆನಪು ಮಾಡಿಕೊಳ್ಳುತ್ತಿರುವುದು ಬಿಜೆಪಿ ನಾಯಕರನ್ನು ಆತಂಕಕ್ಕೆ ದೂಡಿದೆ.
ಇದೇ ಕಾರಣಕ್ಕೆ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಈ ರೀತಿ ವಿವಾದಗಳನ್ನು ಹುಟ್ಟು ಹಾಕುತ್ತಿದೆ. ರಾಜ್ಯದಲ್ಲಿ ಏಕೈಕ ಜನಾಕರ್ಷಣೆ ನಾಯಕ, ಜನಪ್ರಿಯತೆಯಲ್ಲಿ ಎತ್ತರದ ಸ್ಥಾನದಲ್ಲಿರುವ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಂಜನೇಯ ದೂರಿದ್ದಾರೆ.

About The Author

Leave a Reply

Your email address will not be published. Required fields are marked *