April 25, 2024

Chitradurga hoysala

Kannada news portal

ಮೀಸಲಾತಿ ಕುರಿತು ಹಿಂದುಳಿ ವರ್ಗಗಳಲ್ಲಿ ಅರಿವು ಮೂಡಿಸಬೇಕು: ದಿನೇಶ್ ಅಮಿನ್ ಮಟ್ಟು

1 min read

ಮೀಸಲಾತಿ ಕುರಿತು ಹಿಂದುಳಿ ವರ್ಗಗಳಲ್ಲಿ ಅರಿವು ಮೂಡಿಸಬೇಕು: ದಿನೇಶ್ ಅಮಿನ್ ಮಟ್ಟು

ಚಿತ್ರದುರ್ಗ:

ನಾವು ಸಣ್ಣ ಸಣ್ಣ ಸ್ಟಡಿ ಸರ್ಕಲ್ ಗಳನ್ನು ಮಾಡಿ, 50 ಜನರ ಗುಂಪು ಸೇರಿ ಅವರಿಗೆ ತರಬೇತಿ ನೀಡಬೇಕು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಹೇಳಿದರು.

ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಪರಿಶಿಷ್ಟರು, ಅಲೆಮಾರಿ, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮುದಾಯದ ತಲ್ಲಣಗಳು ವಿಷಯದ ಕುರಿತು ಮಾತಾಡಿದ ಅವರು, ಕಳೆದ ಕೆಲವು ದಶಕಗಳಿಂದ ಹಿಂದುಳಿದವರ ವಿಷಯದ ಕುರಿತು ನಾವುನಾವೇ ಮಾತಾಡುತ್ತಿದ್ದೇವೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮೀಸಲಾತಿ, ಸಾಮಾಜಿಕ ನ್ಯಾಯ ವಿಷಯದ ಕುರಿತು ಮಾತಾಡುವಾಗ ಹಿಂದುಳಿದ ವರ್ಗಗಳು ಯಾರು ಎಂದು ಯೋಚಿಸಬೇಕು. ಸಾಮಾನ್ಯವಾಗಿ ಹಿಂದುಳಿದವರು ಎಂದರೆ, ಕುರುಬುರು, ಮಡಿವಾಳರು ಮೊದಲಾದವರು ಎಂಬ ಕಲ್ಪನೆ ಇದೆ. ಕರ್ನಾಟಕದ ಮಟ್ಟಿಗೆ 95% ಜನ ಮೀಸಲಾತಿಯಡಿ ಬರುತ್ತಾರೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ ಲಿಂಗಾಯತರು, ಒಕ್ಕಲಿಗರೂ ಇದ್ದಾರೆ. ಮೀಸಲಾತಿಯ ಫಲಾನುಭವಿಗಳಾದ ಲಿಂಗಾಯತರು ಮತ್ತು ಒಕ್ಕಲಿರಿಗೂ ನಾವು ತಿಳಿಸಬೇಕಿದೆ. ವಿದ್ಯಾಸಿರಿ ಯೋಜನೆಯನ್ನು ಹಿಂದುಳಿದ ಜಾತಿಗಳಿಗೆ ಮಾಡಿಕೊಟ್ಟರು ಎಂಬ ಆರೋಪವಿದೆ. ಇದರ ಫಲಾನುಭವಿಗಳೇ ಇದರ ವಿರುದ್ಧವಿದ್ದಾರೆ. ಮೀಸಲಾತಿಯ ಒಳಿತು ಕುರಿತು ನೀವು ಕೂಡ ಮಾತಾಡಬೇಕು ಎಂದು ಮೀಸಲಾತಿಯ ಫಲಾನುಭವಿಗಳಿಗೆ ತಿಳಿಸಿಕೊಡಬೇಕು ಎಂದರು.
ರಾಜಕೀಯ ಮೀಸಲಾತಿಗಾಗಿ ಆಯೋಗ ರಚಿಸಿ ನಿಜವಾದ ಫಲಾನುಭವಿಗಳನ್ನು ಗುರುತಿಸಿ, ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದನ್ನೇ ನೆಪವಾಗಿರಿಸಿಕೊಂಡು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡುತ್ತಿದೆ ಎಂದರು.

ಶೇ.50ರಷ್ಟು ಮೀಸಲಾತಿ ಮೀರಬೇಕೆ ಬೇಡವೇ ಎಂಬ ಚರ್ಚೆ ನಡೆಯಬೇಕು. ಮಂಡಲ್ ವರದಿಯನ್ನು ವಿ.ಪಿ.ಸಿಂಗ್ ಜಾರಿಗೆ ತಂದಾಗ ಬೀದಿಯಲ್ಲಿ ಬೆಂಕಿಹಚ್ಚಿಕೊಂಡರು. ಈಗ ಮೀಸಲಾತಿ ಕುರಿತು ಸಂಸತ್ ನಲ್ಲಿ ಚರ್ಚೆ ಬಂದಾಗ, ಹಿಂದುಳಿದ ಜಾತಿಗಳಿಗೆ ಸಾಂವಿಧಾನಿಕ ವಿಚಾರ ಬಂದಾಗ ಯಾವೊಬ್ಬರೂ ವಿರೋಧಿಸಲಿಲ್ಲ. ಒಂದು ಕಾಲದಲ್ಲಿ ಇದೇ ರಾಜಕಾರಣಿಗಳು ಬೀದಿಯಲ್ಲಿ ಬೆಂಕಿಹಚ್ಚಿಕೊಳ್ಳಲು ಪ್ರೇರೇಪಿಸಿದ್ದರು. ಇಂದು ಯಾವ ರಾಜಕಾರಣಿಯೂ ಬಹಿರಂಗವಾಗಿ ಮೀಸಲಾತಿಯನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಇದು ಅಂತರಂಗದಲ್ಲಿ ಆದ ಬದಲಾವಣೆಯಾದರೆ ಒಳ್ಳೆಯದು ಎಂದರು.

ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಸೋಷಿಯಲ್ ಇಂಜಿನಿಯರಿಂಗ್ ನಡೆದಿದೆ. ಅದು ಹಿಂದುಳಿದ ಜಾತಿಗಳನ್ನು ಒಡೆಯುವ ರಾಜಕಾರಣ. ಇದಕ್ಕೆ ನಾವು ಅವರನ್ನು ದೂರುತ್ತ ಕುಳಿತುಕೊಳ್ಳುವುದಲ್ಲ, ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ಒಡೆಯಲು ದೇಶದಲ್ಲಿ ಸೋಷಿಯಲ್ ಇಂಜಿನಿಯರಿಂಗ್ ಅನ್ನು ನಕಾರಾತ್ಮಕವಾಗಿ ಬಳಸಲಾಗುತ್ತಿದೆ. ಪಟೇಲ್ ಸಮುದಾಯ ಆರ್ಥಿಕ ಮೀಸಲಾತಿ ಕೇಳುತ್ತಿದ್ದಾರೆ. ಅವರು ಭೂಮಾಲೀಕರು, ವ್ಯಾಪಾರಿಗಳು, ಎನ್.ಆರ್.ಐಗಳು ಇದ್ದಾರೆ. ಕರ್ನಾಟದಲ್ಲಿ ಮೀಸಲಾತಿಯನ್ನು 2ಎನಲ್ಲಿ ಕೊಡಿ ಎಂದು ಪಂಚಮಸಾಲಿಗಳು ಕೇಳುತ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾದರರನ್ನು ಸೇರಿಸಿದರು. ಪ್ರತಿಭಟನೆ ಕಾರಣಕ್ಕೆ ಹಿಂಪಡೆದರು. ಪಂಚಮಸಾಲಿಗಳಿಗೆ 2ಎಗೆ ಸೇರಿಸುವ ಬೇಡಿಕೆ ನಿಲ್ಲುವುದಿಲ್ಲ. ಬಣಜಿಗರು, ಒಕ್ಕಲಿಗರು ಕೂಡ ಇದನ್ನು ಕೇಳುತ್ತಾರೆ. ಸಾಮಾಜಿಕ ನ್ಯಾಯದ ಕಲ್ಪನೆಯನ್ನೇ ವಿವಾದಕ್ಕೆ ತಿರುಗಿಸಿ, ಜನಸಾಮಾನ್ಯರೆ ಮೀಸಲಾತಿಯನ್ನು ವಿರೋಧಿಸುವಂತೆ ಮಾಡಲಾಗುತ್ತದೆ ಎಂದರು.ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ಕೊಡುವಾಗ ಯಾರೂ ಬೀದಿಗಿಳಿಯಲಿಲ್ಲ. 123ನೇ ತಿದ್ದುಪಡಿ ಮೂಲಕ ಇದನ್ನು ಜಾರಿಗೆ ತಂದದ್ದು ಸಂವಿಧಾನ ವಿರೋಧಿ. ಸಾಮಾಜಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು. ಆದರೆ, ಇಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲಾಗಿದೆ ಎಂದರು.
ಕರ್ನಾಟಕದಲ್ಲಿ ಶೇ.5ರಷ್ಟು ಜನರಿಗೆ ಮೀಸಲಾತಿ ಇಲ್ಲ. ಇವರಿಗೆ ಕರ್ನಾಟದಲ್ಲಿ 10% ಮೀಸಲಾತಿ. ಸಂಸತ್ತಿನಲ್ಲಿ ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳೂ ವಿರೋಧಿಸಲಿಲ್ಲ. ಇದನ್ನು ಆರಂಭಿಸಿದವರು ಪಿ.ವಿ.ನರಸಿಂಹರಾವ್. ಅದನ್ನು ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿತು. ಉತ್ತರಪ್ರದೇಶದಲ್ಲಿ ಬ್ರಾಹ್ಮಣರು, ಠಾಕೂರರು ಇದರ ಫಲಾನುಭವಿಗಳು. ಅದರ ವಿರುದ್ಧ ದೊಡ್ಡ ಪ್ರತಿಭಟನೆಗಳು ನಡೆಯಲಿಲ್ಲ ಎಂದರು.ಮೀಸಲಾತಿ ಪ್ರಮಾಣವನ್ನು ಶೇ. 80ಕ್ಕೆ ಏರಿಸಬೇಕು. ಶೇ. 80ಕ್ಕೆ ಮೀಸಲಾತಿ ಏರಿಸಿದರೆ ಎಲ್ಲ ಜಾತಿಯ ಜನರಿಗೆ ಜನಸಂಖ್ಯೆ ಆಧಾರದಲ್ಲಿ ಅವಕಾಶಗಳು ಸಿಗುತ್ತವೆ. ಮೀಸಲಾತಿ ಎಂದರೆ ಬಡತನ ನಿರ್ಮೂಲನ ಯೋಜನೆಯಲ್ಲ. ಏಕೆಂದರೆ ಬಡ ಬ್ರಾಹ್ಮಣನಿಗೂ ಬಡ ದಲಿತನಿಗೂ ಸಮಾನತೆ ಇಲ್ಲ. ಏಕೆಂದರೆ ಬ್ರಾಹ್ಮಣ ‘ಬ್ರಾಹ್ಮಣ ಫಲಾಹಾರ ಮಂದಿರ’ ತೆರೆಯಬಹುದು. ಆದರೆ ದಲಿತರಿಗೆ ಈ ಅವಕಾಶವಿಲ್ಲ ಎಂದರು.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗೆ ಒತ್ತಾಯಿಸಬೇಕು. ಸರ್ಕಾರ ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲವನ್ನೂ ಖಾಸಗೀಕರಿಸುತ್ತಿದೆ. ಆದ್ದರಿಂದ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಮತ್ತು ಖಾಸಗಿಯಲ್ಲಿ ಮೀಸಲಾತಿ ಜಾರಿಗೆ ಒತ್ತಾಯಿಸುವುದನ್ನು ನಾವು ಜೀವನ್ಮರಣದ ಪ್ರಶ್ನೆಯಾಗಿ ಸ್ವೀಕರಿಸಬೇಕು ಎಂದರು.

About The Author

Leave a Reply

Your email address will not be published. Required fields are marked *