Chitradurga hoysala

Kannada news portal

ಜೀವನ ಸಮೃದ್ಧಿಗೆ ದೈವಿ ಗುಣಗಳ ಅವಶ್ಯಕತೆಯಿದೆ : ಶ್ರೀ ರಂಭಾಪುರಿ ಜಗದ್ಗುರುಗಳು

1 min read

ಜೀವನ ಸಮೃದ್ಧಿಗೆ ದೈವಿ ಗುಣಗಳ ಅವಶ್ಯಕತೆಯಿದೆ :

ಶ್ರೀ ರಂಭಾಪುರಿ ಜಗದ್ಗುರುಗಳು

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಕಲಬುರ್ಗಿ – ಎಪ್ರೀಲ-30.

ಮಾನವ ಜೀವನ ಅಮೂಲ್ಯ. ಅರಿವು ಆದರ್ಶಗಳಿಂದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಜೀವನ ಸಮೃದ್ಧಿಗೆ ದೈವಿ ಗುಣಗಳ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ತಾಲೂಕಿನ ನದಿಸಿಣ್ಣೂರು ಶ್ರೀ ಮಹಾಲಕ್ಷ್ಮಿ ದೇವಿ 5ನೇ ವರುಷದ ಜಾತ್ರಾ ಮಹೋತ್ಸವ ಹಾಗೂ ನೂತನ ರಥ ಉದ್ಘಾಟನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಜೀವನದಲ್ಲಿ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಎಂಬ ಚತುರ್ವಿಧ ಪುರುಷಾರ್ಥಗಳನ್ನು ಸಂಪಾದಿಸಬೇಕು. ಆದರೆ ಮನುಷ್ಯ ಸಂಪತ್ತು ಮತ್ತು ಕಾಮನೆಗಳನ್ನಷ್ಟೇ ಬಯಸಿ ಬಾಳುತ್ತಿದ್ದಾನೆ.ಸಾರ್ಥಕ ಬದುಕಿಗೆ ಧರ್ಮವೇ ಮೂಲಾಧಾರ. ಸಂಪತ್ತು ಇಲ್ಲದೇ ಬಾಳಲಾಗದು. ಆ ಸಂಪತ್ತಿಗಾಗಿ ಜೀವ ಶ್ರಮಿಸಬೇಕಾಗುತ್ತದೆ. ಸಂಪಾದಿಸಿದ ಸಂಪತ್ತು ಸತ್ಕಾರ್ಯಗಳಿಗೆ ವಿನಿಯೋಗವಾಗಬೇಕು. ಅನ್ಯಾಯ ಅಧರ್ಮಗಳಿಗೆ ಸಂಪತ್ತು ಕಳೆದು ಹೋಗುತ್ತಿರುವುದು ನೋವಿನ ಸಂಗತಿಯಾಗಿದೆ. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಜೀವನವನ್ನೇ ಅಮೂಲ್ಯ ಸಂಪತ್ತೆಂದು
ಬೋಧಿಸಿದ್ದಾರೆ. ಆಧ್ಯಾತ್ಮದ ಅರಿವಿನ ಮೂಲಕ ಪ್ರಪಂಚ ಮತ್ತು ಪಾರಮಾರ್ಥಿಕ ಅರಿತು ಬಾಳಬೇಕಾಗಿದೆ. ಶ್ರೀ ಅಭಿನವ ಗುರುರಾಜೇಂದ್ರ ಮುತ್ಯಾ ಅವರು ಮಹಾಲಕ್ಷ್ಮೀ ದೇವಿ ದೇವಾಲಯ ಸ್ಥಾಪಿಸುವುದರ ಮೂಲಕ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಶಾಂತಿಯ ಬದುಕಿಗೆ ಕಾರಣರಾಗುತ್ತಿರುವುದನ್ನು ಕಂಡು ಹರುಷವಾಗಿದೆ ಎಂದರು.

ಹೊನ್ನಕಿರಣಗಿ ಚಂದ್ರಗುಂಡ ಶಿವಾಚಾರ್ಯರು, ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯರು, ಸ್ಟೇಷನ್ ಬಬಲಾದ ಶಿವಮೂರ್ತಿ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು.

ತೊನಸಳ್ಳಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು, ದಂಡಗುಂಡದ ಸಂಗನಬಸವ ಶಿವಾಚಾರ್ಯರು, ನವಿಲುಕಲ್ಲು ಸೋಮನಾಥ ಶಿವಾಚಾರ್ಯರು, ನೀಲುಗಲ್ಲ ರೇಣುಕ ಶಾಂತಮಲ್ಲ ಶಿವಾಚಾರ್ಯರು ಉಪಸ್ಥಿತರಿದ್ದರು. ಅಫಜಲಪುರ
ಶಾಸಕ ಎಂ.ವೈ.ಪಾಟೀಲ ಕಲ್ಯಾಣ ಮಂಟಪಕ್ಕೆ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಧ್ವನಿ ಸುರುಳಿ ಬಿಡುಗಡೆ ಮಾಡಿದರು.

ಶಿವಶರಣಪ್ಪ ಸೀರಿ, ಸೂರ್ಯಕಾಂತ ಕುಲಾರೆ, ಶಿವಶರಣಪ್ಪ ಹೂಗಾರ,ಅರುಣಕುಮಾರ ಹೂಗಾರ, ಅರವಿಂದ ಹೂಗಾರ,ಶಂಕರ ಹೂಗಾರ ಮೊದಲಾದ ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು. ಸಮಾಂಭದ ನಂತರ ಮಹಾಲಕ್ಷ್ಮೀ ದೇವಿ ರಥೋತ್ಸವ ಸಂಭ್ರಮದಿಂದ ಜರುಗಿತು. ಎಂದು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ, ವಾರ್ತಾ ಸಂಯೋಜನಾಧಿಕಾರಿ, ಸಿ.ಎಚ್. ಬಾಳನಗೌಡ್ರ ರವರು ತಿಳಿಸಿದ್ದರು.

Leave a Reply

Your email address will not be published. Required fields are marked *