Chitradurga hoysala

Kannada news portal

– ಇದು ನಾಡಿನ ಪ್ರತಿಷ್ಟಿತ ದೈನಿಕ “ಪ್ರಜಾವಾಣಿ ” ಕಾರ್ಯಕಾರಿ ಸಂಪಾದಕ ರವೀಂದ್ರ ಭಟ್ಟ ಐನಕೈ ರ ಮನದಾಳದ ಮಾತು. -ಹಳೇಬೀಡು ರಾಮಪ್ರಸಾದ್.

1 min read

“ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಯ ಪುಟಸಂಖ್ಯೆ ಹೆಚ್ಚಳ ಎಂಬುದು ಕನಸಿನ ಮಾತು,ಇರುವಸ್ಟರಲ್ಲಿಯೇ ಓದುಗರಿಗೆ ಹೆಚ್ಚಿನದನ್ನು ಕಟ್ಟಿ ಕೊಡುವ ಸವಾಲಿಗೆ ಪತ್ರಕರ್ತರು ಸಿದ್ದರಾಗಬೇಕಾದ ಅನಿವಾರ್ಯತೆ ಇದೆ”

— ಇದು ನಾಡಿನ ಪ್ರತಿಷ್ಟಿತ ದೈನಿಕ “ಪ್ರಜಾವಾಣಿ” ಕಾರ್ಯಕಾರಿ ಸಂಪಾದಕ ರವೀಂದ್ರ ಭಟ್ಟ ಐನಕೈ ರ ಮನದಾಳದ ಮಾತು.

ಮೊನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ವರ್ಣರಂಜಿವಾಗಿ ಏರ್ಪಾಡಾಗಿದ್ದ ಮಾಜೀ ಸಚಿವ ಹೆಚ್.ಆಂಜನೇಯರ ಮಗಳು ಅರುಂಧತಿ ಹಾಗೂ ರವಿವರ್ಮರ ವಿವಾಹ ನಿಶ್ಚಿತಾರ್ಥದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಾಗ ವ್ಯಕ್ತವಾದ ಅಭಿಮತವಿದು.

“ಮುದ್ರಣ ಕಾಗದ ಟನ್ ಗೆ ಸಾವಿರವಾಗಿದೆ , ಜೊತೆಗೆ ಕರ ಬೇರೆ. ಪತ್ರಿಕೆ ಸಿದ್ದಪಡಿಸುವ ವೆಚ್ಚದಲ್ಲಿ ಶೇಕಡಾ ಅರವತ್ತು ಇಲ್ಲಿಯೇ ಖತಂ. ಹಾಗೆಂದು ಓದುಗರಿಗೆ ಮತ್ತಸ್ಟು ಹೊರೆ ವರ್ಗಾಯಿಸಲಾಗದು. ಜಾಹೀರಾತುಗಳ ಬಲದಿಂದ ಮುನ್ನಡೆಸಬೇಕಾಗಿದೆ ” ಎನ್ನುವ ಭಟ್ಟರು ” ಎಲೆಕ್ಟ್ರಾನಿಕ್ ಮಾಧ್ಯಮ – ಸಾಮಾಜಿಕ ಮಾಧ್ಯಮಗಳು ತೀವ್ರಗತಿಯಲ್ಲಿ ಮಾಹಿತಿ ನೀಡುತ್ತಿವೆ ಎನಿಸಿದರೂ , ಪಕ್ಕಾ ಮಾಹಿತಿಗಾಗಿ ಮರುದಿನದ ಪತ್ರಿಕೆಗಳನ್ನು ನೋಡಿಯೇ ಖಾತರಿ ಪಡಿಸಿಕೊಳ್ಲುವ ಮನೋಭಾವ ಹೆಚ್ಚಿರುವುದರಿಂದ ಉಸಿರಾಡುತ್ತಿವೆ , ಎಂದಿಗೂ ಪ್ರಸ್ತುತವಾಗಿರುತ್ತದೆ “ಎಂಬ ಆಶಾಭಾವನೆಯನ್ನೊ ವ್ಯಕ್ತಪಡಿಸುತ್ತಾರೆ.

“ದೈನಿಕ ಪುರವಣಿಗಳ ನಿಲುಗಡೆ ,ಮತ್ತಿತರ ಮಿತಿಯ ನಡುವೆಯೂ ಪ್ರತಿನಿತ್ಯ ಪುಟದಸ್ಟು ವಿಶೇಷ ಬರಹ ಕೊಡುವ ಪ್ರಯತ್ನ ನಮ್ಮಿಂದಾಗುತ್ತಿವೆ.ಇಷ್ಟಾದರೂ ನಮ್ಮ ಭಾನುವಾರದ ಪುರವಣಿ ಯ ಹೆಚ್ಚುಗಾರಿಕೆ ತುಸುವೂ ಕಮ್ಮಿಯಾಗಿಲ್ಲ” ಎಂಬ ಸಂತಸವೂ ಭಟ್ಟ ರದು.

2013 – 18 ರ ಸಿದ್ದರಾಮಯ್ಯ ಸಂಪುಟದಲ್ಲಿ ರಾಜ್ಯದ ಪ್ರಭಾವಿ ಸಚಿವರಾಗಿದ್ದ ಹೆಚ್. ಆಂಜನೇಯ , ತಾವು ಬಹುವಾಗಿ ಮೆಚ್ಚುವ ನಾಯಕಿ ಇಂದಿರಾಗಾಂಧಿ ಯವರ ಜನುಮದಿನದ ಸವಿನೆನಪಿಗಾಗಿ ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಹೊಳಲ್ಕೆರೆಯಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಿದ್ದು ಮಾತ್ರವಲ್ಲದೆ , ಸ್ವಯಂ ತಮ್ಮ ಮೊದಲ ಮಗಳು ಅನುಪಮಾಳ ವಿವಾಹವನ್ನೂ ಅಲ್ಲಿಯೇ ಮಾಡುವ ಐತಿಹಾಸಿಕ ಕಾರ್ಯದ ಮೂಲಕ ಸಂಚಲನವನ್ನೇ ಉಂಟು ಮಾಡಿದ್ದರು. ತತ್ರಾಪಿ ಗ್ರಾಮಪಂಚಾಯ್ತಿ ಸದಸ್ಯನೇ ಅಧಿಕಾರದ ಡೌಲು ತೋರುವ ಈ ದಿನಮಾನದಲ್ಲಿ , ಸಚಿವರೊಬ್ಬರು ಹೀಗೆ ಮಾಡಲುಂಟೆ ? ಎಂದು ಅಭಿಮಾನಿಗಳಿರಲಿ , ವಿರೋಧಿಗಳೂ ಮೂಗಿನ ಮೇಲೆ ಬೆರಳಿರಿಸಿದ್ದುಂಟು.

ಇದೀಗ ಬದಲಾದ ಕಾಲಘಟ್ಟದಲ್ಲಿ ಎರಡನೇ( ಜೊತೆಗೆ ಕೊನೆಯ) ಮಗಳು ಅರುಂಧತಿಯ ವಿವಾಹ ನಿಶ್ಚಿತಾರ್ಥವನ್ನು ಎರಡೂ ಕುಟುಂಬದ ಸದಸ್ಯರು ಹಾಗೂ ಸೀಮಿತ ಮಿತ್ರರ ಸಮ್ಮುಖದಲ್ಲಿ ನೆರವೇರಿಸಬೇಕೆಂದು ಆಂಜನೇಯ ಹಾಗೂ ಶ್ರೀಮತಿ ವಿಜಯಾ ಆಂಜನೇಯ ದಂಪತಿ ನಿರ್ಧಾರ ಕಾರ್ಯರೂಪಕ್ಕೆ ಬಂದದ್ದು ಮೊನ್ನೆ ಶುಕ್ರವಾರ.

ನನ್ನ – ಆಂಜನೇಯರ ವಿಶ್ವಾಸಕ್ಕೆ ಮುಂದಿನ ವರ್ಷವೊಂದು ಕಳೆದರೆ ಭರ್ತಿ ಐದು ದಶಕ ! ಈ ಮಧ್ಯೆ ಏನೆಲ್ಲಾ ಏರಿಳಿತಗಳಾಗಿ ಹೋಗಿರಬಹುದು , ಮುಂದೂ ಆಗಬಹುದು. ಆದರೆ ಅಭಿಮಾನದ ಗಂಟು ಸಡಿಲಾಗಿಲ್ಲ. ಹೀಗಾಗಿ ಎರಡೂ ಕುಟುಂಬದಲ್ಲಿ ಜರುಗುವ ಶುಭಾಶುಭ ಕಾರ್ಯಗಳಲ್ಲಿ ಪರಸ್ಪರರೀರ್ವರ ಹಾಜರಿ ಶತಸಿದ್ದ ! ಈ ಅಲಿಖಿತ ಒಪ್ಪಂದದ ಪ್ರಕಾರ ಬೆಂಗಳೂರಿಗೆ ಹೊರಟ ನನ್ನ ಬೆಂಗಾವಲಿಗೆ ಮಗ ಅಭಿ – ಸೊಸೆ ಸುಪ್ರಿಯಾ.

ಆಂಜನೇಯರ ವಿಚಾರಗಳನ್ನು ಒಪ್ಪದಿರುವವರಿರಬಹುದು ,ರಾಜಕೀಯ ಕೆಸೆರೆರಚಾಟ ಆಗಿರಬಹುದು , ಆಕ್ಶೇಪಣೆಗಳು ಹಲವಾರಿರಬಹುದು , ಆದರೆ ಜಾತಿ , ಮತ ಮತ್ತಿತರ ತಾರತಮ್ಯ ತೋರದೆ ನೊಂದವರ ನೆರವಿಗೆ ಧಾವಿಸುವ ಅವರ ಮಾನವೀಯ ಅಂತಃಕರಣ ಮೆಚ್ಚದವರಿಲ್ಲ.ಹೀಗಾಗಿಯೇ
ಆಂಜನೇಯ ಅಧಿಕಾರದಲ್ಲಿರಲಿ , ಇಲ್ಲದಿರಲಿ ಅವರ ಸುತ್ತಲೂ ಅಭಿಮಾನಿಗಳ ದಂಡು ಯಾವಾಗಲೂ ಸುತ್ತುವರಿದೇ ಇರುತ್ತದೆ.

ಈಗಲೂ ಅದೇ ಪುನರಪಿಯಾಯಿತು.ರಾಜಕೀಯ ಪಕ್ಷಗಳ ಮುಖಂಡರೂ ಸೇರಿದಂತೆ ಎಲ್ಲರನ್ನೂ ಮದುವೆಗೆ ಕರೆಯೋಣ , ಈಗ ಆಪ್ತೇಸ್ಟರ ನಡುವೆ ನೆರವೇರಿಸಿ ಬಿಡೋಣ ಎಂಬುದು ಕಾರ್ಯಗತಕ್ಕೆ ಬರಲಿಲ್ಲ , ಭರ್ಜರಿಯಾಗಿಯೇ ನಡೆಯಿತು.

ಬಂದವರನ್ನು ಆಂಜನೇಯ ದಂಪತಿ ಆತ್ಮೀಯವಾಗಿ ಸ್ವಾಗತಿಸಿ , ರಸಗವಳ ಹಾಕಿಸಿ ಸತ್ಕರಿಸಿದರು , ಸಂತಸಪಟ್ಟರು.

ಪ್ರಿಯ ಆಂಜನೇಯ,ಮಗಳ ವಿವಾಹ ಕಾರ್ಯ ಶೀಘ್ರ ನೆರವೇರಲಿ,ಅಭಿಮಾನಿಗಳಿಗೆ ಮತ್ತೊಂದು ಭೂರಿ ಭೋಜನವಾಗಲಿ.

ಶುಭಾಶಯಗಳು .

-ಹಳೇಬೀಡು ರಾಮಪ್ರಸಾದ್.

Leave a Reply

Your email address will not be published.