Chitradurga hoysala

Kannada news portal

ಯುವಕರ ಭವಿಷ್ಯ ಅಗ್ನಿಗೆ ಆಹುತಿ : ದೇಶದ ಸೈನ್ಯದ ಪಾವಿತ್ರ್ಯತೆಗೆ ಧಕ್ಕೆ : ಮಾಜಿ ಸಚಿವ ಎಚ್.ಆಂಜನೇಯ ಆರೋಪ

1 min read

ಯುವಕರ ಭವಿಷ್ಯ ಅಗ್ನಿಗೆ ಆಹುತಿ

ಅಗ್ನಿಪಥ್ ಯೋಜನೆ ದೇಶಕ್ಕೆ ಕಂಟಕ

ದೇಶದ ಸೈನ್ಯದ ಪಾವಿತ್ರ್ಯತೆಗೆ ಧಕ್ಕೆ

ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಚಿತ್ರದುರ್ಗ :

ದೇಶದ ಸೈನ್ಯಕ್ಕೆ ದೊಡ್ಡ ಇತಿಹಾಸ, ಗೌರವ ಇದ್ದು, ಅದರ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನದ ಫಲವೇ ಅಗ್ನಿಪಥ್ ಯೋಜನೆ ಆಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂಜನೇಯ ಅವರು, ದೇಶದ ಸೈನ್ಯಕ್ಕೆ ಗೌರವ ತಂದುಕೊಟ್ಟವರು ಅನೇಕರು. ಅದರ ಶಕ್ತಿ ಹೆಚ್ಚಿಸಲು ನೆಹರು, ಸರ್ಧಾರ್ ವಲ್ಲಭಬಾಯ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾಗಾಂದಿ, ರಾಜೀವ್ ಗಾಂಧಿ. ವಿ.ಪಿ.ಸಿಂಗ್, ಐ.ಕೆ.ಗುಜ್ರಾಲ್, ನರಸಿಂಹರಾವ್, ವಾಜಪೇಯಿ, ದೇವೇಗೌಡರು, ಮನಮೋಹನ್ ಸಿಂಗ್ ಸೇರಿ ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳು ಹಾಗೂ ರಕ್ಷಣಾ ಸಚಿವರು ಶ್ರಮಿಸಿದ್ದಾರೆ.

ಕಾಲಕಾಲಕ್ಕೆ ಸೈನ್ಯಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸಿದ್ದಾರೆ. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಅಗ್ನಿಪಥ್ ಯೋಜನೆ ಮೂಲಕ ಸೈನ್ಯದಲ್ಲೂ ಗುತ್ತಿಗೆ ಪದ್ಧತಿ  ಜಾರಿಗೊಳಿಸಿ, ದೇಶದ ಭದ್ರತೆಗೆ ಕಂಟಕ ತಂದೊಡ್ಡಿದ್ದಾರೆ.

18ರಿಂದ 22 ವರ್ಷದ ಯುವಜನರ ಸೇರ್ಪಡೆಗೆ ಯೋಜನೆ ರೂಪಿಸಿದ್ದಾರೆ. ಆದರೆ, ಈ ವಯೋಮಾನ ಶಿಕ್ಷಣದ ಮೂಲಕ ಭವಿಷ್ಯ ರೂಪಿಸಿಕೊಳ್ಳುವ ಪ್ರಮುಖ ಕಾಲಘಟ್ಟ ಎಂಬುದನ್ನು ಬಿಜೆಪಿ ಸರ್ಕಾರ ಮರೆತಿದೆ.

ಈ ವೇಳೆ ಸೈನ್ಯಕ್ಕೆ ಸೇರಿ 26ನೇ ವರ್ಷಕ್ಕೆ ಸೈನ್ಯದಿಂದ ಹೊರಬರುವ ಪೀಳಿಗೆ ಇತ್ತ ಶಿಕ್ಷಣ ಮುಂದುವರಿಸಲು ಸಾಧ್ಯವಾಗದೆ, ನಾಲ್ಕೈದು ವರ್ಷದ ಸೇನಾ ವೃತ್ತಿ ಬಳಿಕ ನಿರುದ್ಯೋಗಿಗಳಾಗುತ್ತಾರೆ. ಅಗ್ನಿಪಥ್ ಯೋಜನೆ ಯುವ ಪೀಳಿಗೆ ಭವಿಷ್ಯವನ್ನು ಅಗ್ನಿಗೆ ಆಹುತಿ ಮಾಡುವಂತಹದ್ದಾಗಿದೆ.

ಇದರಿಂದ ದೇಶದಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಈ ಸಾಮಾನ್ಯ ತಿಳುವಳಿಕೆ ದೇಶದ ಭದ್ರತೆ ಕ್ಷೇತ್ರದಲ್ಲಿ ಯೋಜನೆ ರೂಪಿಸುವವರಿಗೆ ಇಲ್ಲದಿರುವುದು ದುರಂತ.

ನೋಟು ಬ್ಯಾನ್, ಜಿಎಸ್.ಟಿ, ಹಾಗೂ ಕೋವಿಡ್ ಸಂದರ್ಭದಲ್ಲಿ ದಿಢೀರ್ ಲಾಕ್ ಡೌನ್ ಘೋಷಣೆ ಮಾಡಿ ಜನರ ಬದುಕನ್ನು ಕಿತ್ತುಕೊಂಡಂತೆ ಅಗ್ನಿಪಥ್ ಯೋಜನೆ ಆಗಲಿದೆ. ಪ್ರಮುಖವಾಗಿ ದೇಶದ ಭದ್ರತೆಗೆ ದೊಡ್ಡ ಕಂಟಕ ಆಗಲಿದೆ.
ಅವೈಜ್ಞಾನಿಕ ಕೃಷಿ ಕಾಯ್ದೆ ಹಿಂಪಡೆಯಲು ವಿಳಂಭ, ಹಠಮಾರಿತನ ಬಿಜೆಪಿ ಮಾಡಿದ್ದರ ಪರಿಣಾಮ ಕೋಟ್ಯಂತರ ರೈತರು ವರ್ಷಾನುಗಟ್ಟಲೇ ಪ್ರತಿಭಟನೆ ನಡೆಸಿದರು. ನೂರಾರು ಮಂದಿ ರೈತರ ಸಾವು ಆಯಿತು.

ಇದೇ ಹಾದಿಯಲ್ಲಿ ಅಗ್ನಿಪಥ್ ಯೋಜನೆಗೆ ದೇಶದಲ್ಲಿ ವಿರೋಧ ವ್ಯಕ್ತವಾಗಿದೆ. ಯುವಜನ ಬೀದಿಗಿಳಿದು ಹೋರಾಟವನ್ನು ದೇಶದ ವಿವಿಧೆಡೆ ಆರಂಭಿಸಿದ್ದು, ತೀವ್ರತೆಗೆ ಹೋಗುವ ಮುನ್ನವೇ ಸರ್ಕಾರ ತನ್ನ ಹಠಮಾರಿತನ‌ ಕೈಬಿಟ್ಡು, ಯೋಜನೆ ಹಿಂಪಡೆಯಬೇಕು.
ಬಿಜೆಪಿ ಸರ್ಕಾರಕ್ಕೆ ದೇಶ ಹಾಗೂ ಯುವಜನರ ಹಿತದ ಬದ್ಧತೆ ಇದ್ದರೆ, ಮೊದಲಿನಂತೆ ಕಾಲಕಾಲಕ್ಕೆ ಸೇನಾ ನೆಮಕಾತಿ  ಪ್ರಕ್ರಿಯೆ ಮುಂದುವರಿಸಲಿ.

15 ವರ್ಷದ ಸೇವೆ ಬಳಿಕ ಸ್ವಯಂ ನಿವೃತ್ತಿಗೆ ಅವಕಾಶ, ಬಳಿಕ  ನಿವೃತ್ತಿ ವೇತನ, ಜಮೀನು, ಸರ್ಕಾರಿ ಉದ್ಯೊಗದಲ್ಲಿ ಮೀಸಲಾತಿ ಸೌಲಭ್ಯ ವನ್ನು ಈ ಹಿಂದೆಯೇ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದನ್ನು, ಯಾವುದೇ ಸ್ವಯಂ ಪ್ರತಿಷ್ಟೆ ಇಲ್ಲದೆ ದೇಶದ ಹಿತದೃಷ್ಟಿಯಿಂದ ಮುಂದುವರಿಸಬೇಕು ಎಂದು ಆಂಜನೇಯ ಆಗ್ರಹಿಸಿದರು.

ಈಗಾಗಲೇ ಮಂದಿರ, ಮಸೀದಿ, ಚರ್ಚ್, ಜಾತಿ, ಧರ್ಮಗಳನ್ನು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಂಡು ದೇಶದ ಜನರಲ್ಲಿ ವಿಷ ಬೀಜ ಬಿಜೆಪಿ ಬಿತ್ತಿದೆ. ಈಗ ಸೈನ್ಯ ಕ್ಷೇತ್ರವನ್ನೂ  ರಾಜಕೀಯ ಕಾರಣಕ್ಕೆ ಅಭದ್ರತೆಗೆ ಸಿಲುಕಿಸುವ ಪ್ರಯತ್ನ ನಿಜಕ್ಕೂ ದೇಶಭಕ್ತರಲ್ಲಿ ಆತಂಕ ತಂದೊಡ್ಡಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಸಿಲಿಂಡರ್ ಸಬ್ಸಿಡಿಗೆ ಕತ್ತರಿ, ಪೆಟ್ರೋಲ್ ಬೆಲೆ ಗಗನಕ್ಕೆ, ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿತ, ನಿರುದ್ಯೋಗ ಹೆಚ್ಳಳ ಮೂಲಕ ಜನಸಾಮಾನ್ಯರ ಬದುಕು ಮೂರಾಬಟ್ಟೆಗೆ ತಂದು ನಿಲ್ಲಿಸಿರುವ ಬಿಜೆಪಿ ಸರ್ಕಾರಕ್ಕೆ ದೇಶದ ಹಿತಕ್ಕಿಂತ ರಾಜಕಾರಣ, ಅಧಿಕಾರವೇ ಮುಖ್ಯವಾಗಿದೆ ಎಂದು ಆಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಪ್ರತಿ ವ್ಯಕ್ತಿಯ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಜಮೆ, ದೇಶದ ಭದ್ರತೆ ಹೆಚ್ಚಳಕ್ಕೆ ಸೇನಾ ನೇಮಕಾತಿಗೆ ಪ್ರಮುಖ ಆದ್ಯತೆ, ಪೆಟ್ರೋಲ್ ಬೆಲೆ 35 ರೂಪಾಯಿಗೆ ಇಳಿತ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತೆವೆ ಎಂದು ಸಾಲು ಸಾಲು ಸುಳ್ಳಿ ಹೇಳಿ ಅಧಿಕಾರಕ್ಜೆ ಬಂದ ಬಿಜೆಪಿ ಸರ್ಕಾರ, ತಾನೇ ಹೇಳಿದ ಒಂದೂ ಭರವಸೆಯನ್ನು ಈಡೇರಿಸಿಲ್ಲ. ಬದಲಿಗೆ ದೇಶದಲ್ಲಿ ಜನರನ್ನು ಜಾತಿ, ಧರ್ಮದ ಹೆಸರಲ್ಲಿ ಇಬ್ಭಾಗ ಮಾಡುವ ಪ್ರಯತ್ನವನ್ನು ನಿರಂತರ ಮಾಡುತ್ತಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿಸುತ್ತಿದೆ ಎಂದು ಆಂಜನೇಯ ಆರೋಪಿಸಿದರು.

ಕೋವಿಡ್ ಸೋಂಕು ಚೀನಾ ದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ದೇಶದಲ್ಲೂ ಮುಂಜಾಗ್ರತೆ ಕ್ರಮಕೈಗೊಳ್ಳುವಂತೆ ದೇಶದ ಯುವಜನರ ಆಶಾಕಿರಣ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದರೆ, ರಾಹುಲ್ ಅವರನ್ನು ಅಂದು ಅಪಹಾಸ್ಯ ಮಾಡಿದರು. ಆದರೆ ದೇಶದಲ್ಲಿ ಕೋವಿಡ್ ತೀವ್ರತೆ ಬಳಿಕ ರಾಹುಲ್ ಗಾಂಧಿ ಅವರ ಸಲಹೆ ಸ್ವಿಕರಿಸಿದ್ದರೆ ಕರೋನಾ ಸೋಂಕು ದೇಶಕ್ಕೆ ಕಾಲಿಡುತ್ತಿರಲಿಲ್ಲ, ಸಾವು-ನೋವು ಆಗುತ್ತಿರಲಿಲ್ಲ, ಕಾರ್ಮಿಕರು ಬೀದಿಗೆ ಬೀಳುತ್ತಿರಲಿಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬಂದಿತು. ಈಗಲೂ ಕೂಡ  ಅಗ್ನಿಪಥ್ ಯೋಜನೆ ಅಪಾಯ ಕುರಿತು ದೂರದೃಷ್ಡಿ ಚಿಂತನೆವುಳ್ಳ ರಾಹುಲ್ ಗಾಂಧಿ ಸೇರಿ ಅನೇಕ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಇವರ ಸಲಹೆಯನ್ನು ಬಿಜೆಪಿ ಸರ್ಕಾರ ಸ್ವಿಕರಿಸಿ, ಯೋಜನೆ ರದ್ದುಪಡಿಸಬೇಕು. ಇಲ್ಲದಿದ್ದರೆ ಕೋವಿಡ್ ಸೊಂಕು ದೇಶಕ್ಕೆ ಹಬ್ಬಿ ಲಕ್ಷಾಂತರ ಜನರ ಸಾವು, ಕೋಟ್ಯಂತರ ಜನರ ಬದುಕು ಕಿತ್ತುಕೊಂಡ ರೀತಿ ಈ ಯೋಜನೆ ಅಪಾಯ ತಂದೊಡ್ಡಲಿದೆ. ಆದ್ದರಿಂದ ಸ್ವಯಂ ಪ್ರತಿಷ್ಠೆ ಕೈಬಿಟ್ಟು ಯೋಜನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

27ಕ್ಕೆ ದೇಶದಾದ್ಯಂತ ಪ್ರತಿಭಟನೆ

ಯುವನಾಯಕ ರಾಹುಲ್ ಗಾಂಧಿ ಅವರ ಕರೆ ಮೇರೆಗೆ ದೇಶದ ಭದ್ರತೆಗೆ ಕಂಟಕ ಆಗಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಜೂ.27ರಂದು ದೇಶದಾದ್ಯಂತ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರದಲ್ಲೂ ಪ್ರತಿಭಟನೆ ಅಂದು ಬೆಳಗ್ಗೆ ನಡೆಯಲಿದೆ. ಹಾಲಿ-ಮಾಜಿ ಶಾಸಕರು, ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜನವಿರೋಧಿ ಯೋಜನೆ ವಿರೋಧಿಸಬೇಕು. ಪ್ರತಿಭಟನೆಯಲ್ಲಿ ಜನಪರ ಸಂಘಟನೆಗಳ ಪದಾಧಿಕಾರಿಗಳು, ರೈತ, ಕಾರ್ಮಿಕ ಸೇರಿ ವಿವಿಧ ಸಂಘಟನೆಗಳ ಮುಖಂಡರು ಸ್ವಯಂ ಪಾಲ್ಗೊಂಡು ದೇಶ ವಿರೋಧಿ ಯೋಜನೆ ರದ್ದುಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು. ಈ ಮೂಲಕ ದೇಶಭಕ್ತಿ ಪ್ರದರ್ಶಿಸಬೇಕು ಎಂದು ಆಂಜನೇಯ ಮನವಿ ಮಾಡಿದರು.

ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶ್ ಮೂರ್ತಿ ಮತ್ತು ಆರ್.ನರಸಿಂಹರಾಜು, ಎಸ್.ಸಿ ಸೆಲ್ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಮೊಳಕಾಲ್ಮೂರು, ಕೆಪಿಸಿಸಿ ಎಸ್. ಟಿ ವಿಭಾಗದ ರಾಜ್ಯ ಕಾರ್ಯದರ್ಶಿ ಟಿ. ಶರಣಪ್ಪ,  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *