Chitradurga hoysala

Kannada news portal

ಕಾಂಗ್ರೆಸ್ಸಿಗರು ಸ್ವತಂತ್ರ ಭಾರತದ ವಾರಸುದಾರರು : ರಾಜ್ಯಾದಲ್ಲಿ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ಅಲೆ ಜೋರು : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಾಸಲು ಸತೀಶ್

1 min read

ಕಾಂಗ್ರೆಸ್ಸಿಗರು ಸ್ವತಂತ್ರ ಭಾರತದ ವಾರಸುದಾರರು

ರಾಜ್ಯಾದಲ್ಲಿ ಬಿಜೆಪಿ ವಿರುದ್ಧ, ಕಾಂಗ್ರೆಸ್ ಪರ ಅಲೆ ಜೋರು

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ಸಾಸಲು ಸತೀಶ್

ಹೊಳಲ್ಕೆರೆಯಲ್ಲಿ ಸಂಘಟನಾ ಸಭೆ

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ, ಜು ೩೧:

ಸ್ವತಂತ್ರ ಚಳುವಳಿಯಲ್ಲಿ ಮುಂಚೂಣಿಯಲ್ಲಿ ನಿಂತು ಬಲಿದಾನದ ಮೂಲ ಬ್ರಿಟಿಷರ ಕಪಿಮುಷ್ಠಿಯಿಂದ ದೇಶವನ್ನು  ಮುಕ್ತಗೊಳಿಸಿದ ಕಾಂಗ್ರೆಸ್ಸಿಗರು ಭಾರತ ತಾಯಿಯ ನಿಜ ವಾರಸುದಾರರು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಸಾಸಲು ಸತೀಶ್ ಅಭಿಪ್ರಾಯಪಟ್ಟರು.

ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್  ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಂಘಟನಾ ಸಭೆಯಲ್ಲಿ ಮಾತನಾಡಿದರು.

ಆಗಸ್ಟ್ 15ರಂದು ಪಕ್ಷದ ವತಿಯಿಂದ ಬೆಂಗಳೂರಲ್ಲಿ 75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ರ್ಯಾಲಿ, ಆಗಸ್ಟ್ 3ರಂದು ದಾವಣಗೆರೆಯಲ್ಲಿ ಆಯೋಜಿಸಿರುವ ಸಿದ್ದರಾಮಯ್ಯ 75ನೇ ಜನ್ಮದಿನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಆಂಜನೇಯ ತುರ್ತು ಸಭೆ ಹಮ್ಮಿಕೊಂಡಿದ್ದು, ಈ ದಿಢೀರ್‌ ಸಭೆಯಲ್ಲಿ ಪಾಲ್ಗೊಂಡಿರುವ ಜನಸ್ತೋಮವೇ ಕಾಂಗ್ರೆಸ್ ಪರ ಅಲೆಗೆ ಸಾಕ್ಷಿ ಎಂದರು.

ದೇಶಕ್ಕೆ ಸ್ವತಂತ್ರ ತಂದುಕೊಡುವಲ್ಲಿ ಬಲಿದಾನದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದ್ದರೆ, ಬಿಜೆಪಿಗರು ಬ್ರಿಟಿಷ್ ಸರ್ಕಾರದ ಮುಂದೆ ಮಂಡಿಯೂರಿ ಕ್ಷಮಾಪಣೆ ಪತ್ರ ಬರೆದುಕೊಟ್ಟು, ಆಂಗ್ಲರ ಏಜೆಂಟ್ ಆಗಿ ದೇಶದ್ರೋಹ ಕೃತ್ಯದಲ್ಲಿ ಪಾಲ್ಗೊಂಡಿದ್ದರು. ಇಂತಹ ದ್ರೋಹಿಗಳು ಈಗ ಆಡಳಿತ ಚುಕ್ಕಾಣಿ ಹಿಡಿದು, ಬ್ರಿಟಿಷ್ ರೀತಿಯೇ ಆಡಳಿತ ನಡೆಸುತ್ತಿದ್ದಾರೆ ಎಂದು ದೂರಿದರು.

ಬ್ರಿಟಿಷ್ ರು ದೋಚಿದ್ದ ದೇಶವನ್ನು ಮರು ಸೃಷ್ಟಿಸಲು, ಅಭಿವೃದ್ಧಿಯತ್ತ ಕೊಂಡೊಯ್ಯಲು ನೆಹರು, ಇಂದಿರಾಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ ಎಲ್ಲ ಪ್ರಧಾನಮಂತ್ರಿಗಳು ಶ್ರಮಿಸಿದ್ದಾರೆ. ಆದರೆ ಈಗಿನ ಪಿಎಂ ನರೇಂದ್ರ ಮೋದಿ ದೇಶವನ್ನು ಲೂಟಿ ಹೊಡೆಯುವರಿಗೆ, ಉದ್ಯಮಿಗಳ ವಶಕ್ಕೆ ಒಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂದು ವಿದೇಶಿಗರು ದೇಶವನ್ನು ಲೂಟಿ ಮಾಡಿದರು, ಈಗ ಬಿಜೆಪಿಗರು 40 ಪರ್ಸೆಂಟ್ ಮೂಲಕ ದೋಚುತ್ತಿದ್ದಾರೆ ಎಂದು ದೂರಿದರು.

ಸಿದ್ದರಾಮಯ್ಯ ಅವಧಿಯಲ್ಲಿ ಜನಪರ ಆಡಳಿತ ಸೇರಿ ಎಲ್ಲ ಅವಧಿಯಲ್ಲೂ ಕಾಂಗ್ರೆಸ್ ಪಕ್ಷ, ಜನರ ಪ್ರಗತಿಗೆ ಅಧಿಕಾರ ನಡೆಸಿದೆ. ಆದರೆ, ಈಗಿನ ಬಿಜೆಪಿ ಸರ್ಕಾರ ಹಗಲು ದರೋಡೆಗೆ ನಿಂತಿದೆ ಎಂದ ಅವರು, ಮತ ಕೇಳುವ ಹಕ್ಕು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಇದೆ, ದೇಶದ ಆರ್ಥಿಕ ಪರಿಸ್ಥಿತಿಯನ್ಬು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಬಿಜೆಪಿಗೆ ನೈತಿಕತೆಯೇ ಇಲ್ಲ ಎಂದು ಕಿಡಿಕಾರಿದರು.

ಇದೇ ಕಾರಣಕ್ಕೆ ಭಯದಲ್ಲಿ ಸಿಲುಕಿರುವ ಬಿಜೆಪಿ ಸರ್ಕಾರ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ ಮುಂದೂಡುತ್ತಿದೆ ಎಂದರು.

ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ಮಾಡಿರುವ ಪಕ್ಷದ ರಾಜ್ಯದ ಹಿರಿಯ ನಾಯಕ ಎಚ್.ಆಂಜನೇಯ ಅವರ ಗೆಲುವು, ಇಲ್ಲಿ ಸೇರಿರುವ ಜನರನ್ನು ಕಂಡರೆ ನಿಶ್ಚಿತವಾಗಲಿದೆ ಎಂದರು.

ಈ ಬಾರಿ ದಾಖಲೆ ಮತಗಳ ಅಂತರದಲ್ಲಿ ಆಂಜನೇಯ ಗೆಲುವು ಖಚಿತವಾಗಿದ್ದು, ಉತ್ತಮ ಖಾತೆ ಮಂತ್ರಿ ಆಗಲಿದ್ದಾರೆ. ಇದರಿಂದ ಹೊಳಲ್ಕೆರೆ ಕ್ಷೇತ್ರ, ಚಿತ್ರದುರ್ಗ ಜಿಲ್ಲೆ ಮಾದರಿ ಆಗಿ ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಉನ್ನತ ಸಮಿತಿ ಸದಸ್ಯ, ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ದುಡ್ಡು ಲೂಟಿ ಮಾಡುವ ಮಾರ್ಗ ಬಿಜಿಪಿ ಶಾಸಕರು ಕಂಡುಕೊಂಡಿದ್ದಾರೆ.ಈ ಕಾರಣಕ್ಕೆ ಎಲ್ಲಿಯೂ ಬಡವರಿಗೆ ಮನೆ, ನಿವೇಶನ ನೀಡುವ ಕಾರ್ಯ ಕೈಗೊಳ್ಳುತ್ತಿಲ್ಲ. ಕೇವಲ ಕೆರೆ ಹೂಳು ಎತ್ತಲು ಆಸಕ್ತಿ ತೋರುತ್ತಿದ್ದಾರೆ. ಈ ಯೋಜನೆಗಳಲ್ಲಿ ಶೇ.70ರಷ್ಟು ಪರ್ಸೆಂಟ್ ಹಣ ಲಪಾಟಾಯಿಸುತ್ತಿದ್ದಾರೆ ಎಂದು ದೂರಿದರು.

ಬದ್ಧತೆ ರಹಿತ, ಜನ ವಿರೋಧಿ ಆಡಳಿತದಲ್ಲಿ ಮುಳುಗಿರುವ ಬಿಜೆಪಿ ಶಾಸಕರ ವಿರುದ್ಧ ಎಲ್ಕೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲೆ ಜಿಎಸ್.ಟಿ ಇಂದ ಜನರ ಬದುಕು ಮೂರಾಬಟ್ಟೆಯಾಗಿದೆ. ಸಿದ್ದರಾಮಯ್ಯ ಆಡಳಿತವನ್ನು ಜನ ಸ್ಮರಿಸುತ್ತಿದ್ದು, ಒಗ್ಗೂಡಿ ಹೊರಟರೇ ರಾಜ್ಯದಲ್ಲಿ ಕನಿಷ್ಠ 150ಕ್ಕೂ ಹೆಚ್ಚು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.

ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟಿಹಳ್ಳಿ ಶಿವಣ್ಣ, ಜಿಪಂ ಮಾಜಿ ಸದಸ್ಯರಾದ ಲೋಹಿತ್ ಕುಮಾರ್, ಡಿ.ಕೆ.ಶಿವಮೂರ್ತಿ, ಅಶೋಕ್, ರಂಗಸ್ವಾಮಿ, ತಾಳಿಕಟ್ಟೆ ಗಂಗಾಧರ್, ಡಾ. ಕೆ.ಅನಂತ್, ಪಪಂ ಮಾಜಿ ಅಧ್ಯಕ್ಷ ಅಲೀಮಣ್ಣ, ಹೊಸದುರ್ಗದ ಗೋ.ತಿಪ್ಪೇಶ್, ಮಧುಪಾಲೆಗೌಡ, ಲೋಕೇಶ್ ನಾಯ್ಕ್, ದುರುಗೇಶ್ ಪೂಜಾರ್ ಉಪಸ್ಥಿತರಿದ್ದರು.

Leave a Reply

Your email address will not be published.