Chitradurga hoysala

Kannada news portal

ದೀಪದ ಹುಳಗಳಂತೆ ಪತ್ರಕರ್ತರು ಭದ್ರತೆ ಇಲ್ಲದೆ ಸಾಯುವ ಸಂಕಟ..

1 min read

 

ದೀಪದ ಹುಳಗಳಂತೆ ಪತ್ರಕರ್ತರು ಭದ್ರತೆ ಇಲ್ಲದೆ ಸಾಯುವ ಸಂಕಟ..

✍️Shivakumar uppin

ದೀಪಕ್ಕೆ ಆಕರ್ಷಿತರಾಗಿ ತಾಲೂಕಿನಲ್ಲಿ ಯಾವುದಾದರೊಂದು ಪತ್ರಿಕೆ ಹಿಡಕೊಂಡು ಆ ಕಡೆ, ಈ ಕಡೆ ಓಡಾಡಿ, ನಮಸ್ಕಾರ ಹೇಳಿಸಿಕೊಂಡು ಕೊನೆಗೆ ಪತ್ರಿಕೆ ಬಿಲ್ ಕಟ್ಟಲಾಗದೇ ಒದ್ದಾಡಿ ಹೋಗೋದು. ಬ್ಯುರೊ ಚೀಫುಗಳು, ಅದರ ಮಾಲೀಕರು ಆರಾಮಾಗೇ ಇರ್ತಾರೆ. ಜಾಹೀರಾತು ಕೊಡಿಸಿ ಕೊಡಿಸಿ ಇವೇ ಸ್ಟ್ರಿಂಜರ್‌ಗಳೇ ಸಣ್ಣ ಆಗ್ತವೆ. ಆದಾಯ ಇರಲ್ಲ, ಪಗಾರ ಬರಲ್ಲ. ಆ ಆಫೀಸರ್, ಈ ಎಂಎಲ್‌ಎ ಕೊಟ್ಟಿದ್ದೇ ಬಂತು. ಇವರು ವರದಿಗಾರ ಅನ್ನೋ ಸುಳ್ಳೇ ಖಷಿಯಲ್ಲೇ ಸತ್ತಿದ್ದೇ ಗೊತ್ತಾಗಲ್ಲ. ಇವರನ್ನು ರಾಜಕಾರಣಿಗಳು ಚಂದಗೆ ಉಪಯೋಗಿಸಿಕೊಳ್ಳುತ್ತಾರೆ. ನಾವೆಲ್ಲ ಪತ್ರಿಕೆಯಲ್ಲಿ ಇದ್ದರಷ್ಟೇ ಬೆಲೆ. ಇಲ್ಲ ನಾಯಿನೂ ಮೂಸಲ್ಲ! ಹಿಂಗಿದೆ ವ್ಯವಸ್ಥೆ. ಸತ್ತ ಮೇಲೆ ಹಾರ, ಆ ಕಡೆ ಈಡೆ ದೀಪ, ಹಲವರ ಶ್ರದ್ಧಾಂಜಲಿ. ‘ಭಾಳ ಛೊಲೊ ರೀ ಪಾಪ.. ಏನೂ ಮಾಡ್ಕೊಳ್ಳಲಿಲ್ಲ ಖೋಡಿ’ ಅನ್ನೋ ಮಣ್ಣು ಕೊಡಲು ಬಂದವರ ಮಾತು!
ದಿನಾ ಪಾರ್ಟಿ, ಅವರಿವರ ಗೆಳೆತನ. ಸಮಾಜದಲ್ಲಿ ಪ್ರಮುಖರೆಂಬ ಭ್ರಮೆ, ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಲ್ಲಿ ಕುರ್ಚಿ. ಇವೇ ಇವರ ಆಸ್ತಿ. ಆದರೆ ಆರಾಮಾಗಿ ಇರೋ ಶ್ಯಾಣ್ಯಾರೂ ಅಷ್ಟಿಷ್ಟು ‘ಮಾಡಿ’ಕೊಂಡೂ ಇದ್ದಾರೆ. ಆ ವರ್ಗ ಬೇರೆ. ಆದರೆ ಹಲವರ ಕತೆ ಚಿಂತಾಜನಕ. ಆ ಸಾಲಿಗೆ ನಮ್ಮ ಜಿಲ್ಲೆಯ ಮಿತ್ರನೊಬ್ಬ ಸೇರಿದ..
ಸಿಂದಗಿಯ ಪತ್ರಕರ್ತ ಮಿತ್ರ ಮುಗುಗೇಶ್ ಹಿಟ್ಟಿ ಇನ್ನಿಲ್ಲ ಅಂತ ಕೇಳಿ ಸಂಕಟವಾಯಿತು. ಸದಾ ನಗುತ್ತ, ನಿರಮ್ಮಳವಾಗಿ ಮಾತಾಡುತ್ತ ಹತ್ತಿರ ಬರುತ್ತಿದ್ದ ಹಿಟ್ಟಿ ಅಪಾಯಕಾರಿ ಅಲ್ಲದ ಮನುಷ್ಯನಾಗಿ ಬದುಕಿ ಹೋದರು. ಒಂದಿಲ್ಲೊಂದು ಪತ್ರಿಕೆ ವರದಿಗಾರಿಕೆ ಮಾಡುತ್ತ ಚಾಲ್ತಿಯಲ್ಲಿದ್ದ. ಅನೇಕ ಪತ್ರಕರ್ತರಂತೆ ದಿನಚರಿಯಲ್ಲಿ ಶಿಸ್ತಿಲ್ಲದೆ ಅನಾರೋಗ್ಯಕ್ಕೆ ಬಲಿಯಾಗಬೇಕಾಯಿತು ಎನ್ನುವುದು ಖೇದಕರ. ಹೋಗಿ ಬಾ ನನ್ನ ಗೆಳೆಯ.. ಈ ಲೋಕದ ಜನರು ಸರಿ ಇಲ್ಲ. ನಾನೇನು ನಿನಗೆ ಮಣ್ಣು ಕೊಡಲು ಬರಲ್ಲ, ನೀನು ಜೀವಂತವಾಗೇ ಇರು ನನ್ನಲ್ಲಿ.

ಶಿವಕುಮಾರ್ ಉಪ್ಪಿನ,
ಪತ್ರಕರ್ತ-ಬರಹಗಾರ,
ವಿಜಯಪುರ.

Leave a Reply

Your email address will not be published.