Chitradurga hoysala

Kannada news portal

ಉದ್ಘಾಟನಾ ಸಮಾರಂಭದ ವರದಿ ಮಾಡಲು ಹೋಗಿ,ಅವರೇ ಅತಿಥಿಯಾದರು…..?

1 min read

ಉದ್ಘಾಟನಾ ಸಮಾರಂಭದ ವರದಿ ಮಾಡಲು ಹೋಗಿ,
ನಾನೇ ಅತಿಥಿಯಾದ ವಿಚಿತ್ರ ಕಥೆಯಿದು.

ಚಿತ್ರದುರ್ಗ ಹೊಯ್ಸಳ ಸುದ್ದಿ /

ದಾವಣಗೆರೆ:

ಎಪ್ಪತ್ತರ ದಶಕದ ಕೊನೆಯ ದಿನಗಳು. ಆ ದಿನಗಳಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡು ಓಡಾಡುತ್ತಿದ್ದ ರುದ್ರಪ್ಪ ಒಂದು ದಿನ ನನ್ನ ಪತ್ರಿಕಾಲಯಕ್ಕೆ ಆಹ್ವಾನ ಪತ್ರಿಕೆಯೊಂದಿಗೆ ಬಂದರು. ತಾವೀಗ ಚಿತ್ರ ತಯಾರಿಕೆ, ಹಂಚಿಕೆ ಮೊದಲಾದ ಕಾರ್ಯಗಳಲ್ಲಿ ತೊಡಗಿದ್ದು, ಮರುದಿನ ದಾವಣಗೆರೆಯಲ್ಲಿ ತುಂಗಭದ್ರ ಫ಼ಿಲಂಸ್ ಹೆಸರಿನ ಸಂಸ್ಥೆ ಆರಂಭಿಸುತ್ತಿದ್ದೇನೆ. ಚಿತ್ರರಂಗದ ಗಣ್ಯರು ಬರಲಿದ್ದಾರೆ, ನೀವು ಅವಶ್ಯ ಬರಲೇಬೇಕು ಎಂಬ ಆಗ್ರಹ ಪೂರ್ವಕ ಒತ್ತಾಯ ಮಾಡಿದರು. ನಮ್ಮ ಮಿತ್ರಮಂಡಳಿಯಲ್ಲಿ ಓಡಾಡಿಕೊಂಡಿದ್ದ ರುದ್ರಪ್ಪನವರಿಗೆ ನಾನೇ ಬಂದು ವರದಿ ಮಾಡುವ ಬರವಸೆ ಇತ್ತೇ.

ಮರು ಮುಂಜಾನೆ ಹತ್ತೂವರೆಗೆ ಕಾರ್ಯಕ್ರಮ. ಗಂಟೆ ಹನ್ನೊಂದಾಯಿತು. ಹನ್ನೆರಡಾಯಿತು. ಬೆಂಗಳೂರಿನಿಂದ ಬರಬೇಕಿದ್ದ ಚಿತ್ರತಾರೆಯರ ಸುಳಿವಿಲ್ಲ. ಗಂಟೆ ಒಂದೂ ಹೊಡೆಯಿತು. ಸೇರಿದ್ದ ಅಭಿಮಾನಿಗಳು ಸಹಜವಾಗಿಯೇ ಗದ್ದಲವಾರಂಭಿಸಿದರು.ಮೊಬೈಲ್ ಬಿಡಿ, ಎಸ್.ಟಿ.ಡಿ. ಸವಲತ್ತೂ ಇಲ್ಲದೆ ಟ್ರಂಕ್ ಕಾಲ್ ಬುಕ್ ಮಾಡಿ ಕಾಯುತ್ತಾ ಕೂರಬೇಕಿದ್ದ ಆ ದಿನಗಳಲ್ಲಿ, ರುದ್ರಪ್ಪ ಮಾಡಿದ ಫ಼ೊನಿನ ಸಂಪರ್ಕವೇ ಸಿಗಲಿಲ್ಲ. ಮತ್ತೂ ಒಂದೆರಡು ಗಂಟೆಗಳು ಉರುಳಿದ್ದಸ್ಟೇ ಆಯ್ತೆ ವಿನಾ ಬೆಂಗಳೂರಿಗರು ಬರಲೂ ಇಲ್ಲ, ಅವರ ಸುದ್ದಿಯೂ ತಿಳಿಯಲಿಲ್ಲ. ಕಾದು – ಕಾದು ಸುಸ್ತಾಗಿ ವ್ಯವಸ್ಥಾಪಕರಿಗೆ ಹಿಡಿಶಾಪ ಹಾಕುತ್ತಾ ಚಿತ್ರತಾರೆಯರ ಅಭಿಮಾನಿ ವೃಂದ ಮುಕ್ಕಾಲು ಪಾಲು ಕರಗಿದರೂ, ಉಳಿದಿದ್ದವರಿಗಾದರೂ ಕಾರ್ಯಕ್ರಮ ಮಾಡಿ ಎಂಬ ಆಗ್ರಹ ಕೂಡಾ ಶುರುವಾಯಿತು. ಆಗ ಸ್ಥಳಕ್ಕೆ ಬಂದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಬಸವರಾಜ ಇಂಗಿನ್ “ಅನವಶ್ಯಕವಾಗಿ ಜನರನ್ನು ಕೆರಳಿಸಿ ಅನಾಹುತಕ್ಕೆ ದಾರಿ ಮಾಡಿಕೊಡುವುದು ಬೇಡ. ಹೇಗಾದ್ರೂ ಕಾರ್ಯಕ್ರಮ ಅಂತ ಮಾಡಿ ಮುಗಿಸಿ. ಬಂದೂಬಸ್ತ್‌ಗೆ ನಾವಿಲ್ಲೇ ಇರ್ತೇವಲ್ಲಾ” ಎಂಬ ಸಲಹೆಯಂತೆ ನಡೆದದ್ದು ಈ ಚಿತ್ರದಲ್ಲಿನ ಕಾರ್ಯಕ್ರಮ.

ಕನ್ನಡ ಚಳುವಳಿ ನಾಯಕರಾದ ಬಂಕಾಪುರದ ಚನ್ನಬಸಪ್ಪ ಉದ್ಘಾಟನೆ. ಮತ್ತೊಬ್ಬ ನಾಯಕ ನೂ.ತಿ.ನಾರಾಯಣ ರಾವ್ ಅಧ್ಯಕ್ಷತೆ. ನಾನೇ ಅತಿಥಿ. ಭಾರತಿ ವಾದ್ಯವೃಂದದ ಆನಂದ ಕುಮಾರ್‌ರಿಂದ ಲಘು ಸಂಗೀತ.

ಲೇಖನ :
ಹಳೇಬೀಡು ರಾಮ್ ಪ್ರಸಾದ್,ದಾವಣಗೆರೆ

Leave a Reply

Your email address will not be published.