April 20, 2024

Chitradurga hoysala

Kannada news portal

ಬೆಳೆ ಕಟಾವು ಪ್ರಯೋಗ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ:ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜೆ

1 min read


ಬೆಳೆ ಕಟಾವು ಪ್ರಯೋಗ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ:ಜಿಲ್ಲಾಧಿಕಾರಿ ದಿವ್ಯಪ್ರಭು ಜೆ.ಆರ್.ಜೆ

CHITRADURGAHOYSSLA NEWS:

ಚಿತ್ರದುರ್ಗ(ಕರ್ನಾಟಕ ವಾರ್ತೆ)ಜುಲೈ.19:

ಸರಿಯಾದ ಸಮಯದಲ್ಲಿ ಬೆಳೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುವುದರಿಂದ, ರೈತರಿಗೆ ಬೆಳೆ ವಿಮೆ ಪರಿಹಾರ ದೊರಕುವಲ್ಲಿ ನಷ್ಟ ಉಂಟಾಗುತ್ತದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬಂದರೆ, ನಿರ್ಲಕ್ಷ್ಯ ತೋರಿದ ಅಧಿಕಾರಿ ವಿರುದ್ಧ ನಿರ್ಧಾಕ್ಷಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಮೊದಲನೇ ತ್ರೈಮಾಸಿಕ ಕೃಷಿ ಅಂಕಿ ಅಂಶಗಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ಪ್ರತಿ ಬೆಳೆ ವಿಮೆಯ ಮೊತ್ತ ನಿರ್ಧರಿಸುತ್ತವೆ. ಹೊಬಳಿ, ತಾಲ್ಲೂಕು ಮಟ್ಟದ ಬೆಳೆ ವಿಮೆ ನಿಗದಿಗೆ ಸ್ಥಳೀಯವಾಗಿ ನಡೆಸಿದ ಬೆಳೆ ಕಟಾವು ಪ್ರಯೋಗವೇ ಆಧಾರ. ಇದರಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ತುಂಬಬೇಕು. ಬೆಳೆ ಕಟಾವು ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಕಟಾವು ಪ್ರಯೋಗ ಕೈಗೊಳ್ಳಬೇಕು ಎಂದು ಸೂಚಿಸಿದರು.

ನಷ್ಟ ಪರಿಹಾರ ತುಂಬಲು ವೇತನದಲ್ಲಿ ಕಟಾವು:
***************

ಬೆಳ ಕಟಾವು ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲಕ್ಷ್ಯದಿಂದ ತಪ್ಪಾಗಿ ಮಾಹಿತಿ ತುಂಬಿದರೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆ ಮಾಡಲಾಗುವುದು. ಇದರಿಂದಾಗಿ ರೈತರಿಗೆ ಬೆಳೆ ವಿಮೆಯ ಮೊತ್ತ ದೊರಕದೇ ಹೋದಲ್ಲಿ ಅಥವಾ ಕಡಿಮೆ ಮೊತ್ತ ದೊರೆತರೆ, ಕಟಾವು ಪ್ರಯೋಗ ಕೈಗೊಂಡ ಅಧಿಕಾರಿಯ ವೇತನದಲ್ಲಿ ಕಟಾವುಗೊಳಿಸಿ, ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾವುದು, ಅಧಿಕಾರಿಗಳು ಎಚ್ಚೆತ್ತುಕೊಂಡು, ಜಾಗ್ರತೆ ವಹಿಸಿ ಬೆಳೆ ಕಟಾವು ಪ್ರಯೋಗಳನ್ನು ನಿರ್ವಹಿಸಬೇಕು ಎಂದು ಎಚ್ಚರಿಸಿದರು.

ಸಬೂಬು ಸಲ್ಲದು ಬೆಳೆ ಕಟಾವು ಪ್ರಯೋಗ ಕಡ್ಡಾಯ:

ಕೃಷಿ, ತೋಟಗಾರಿಕೆ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಬೆಳೆ ಕಟಾವುಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಯಾವುದೇ ಸಬೂಬು ಸಲ್ಲದು. ಬೆಳೆ ಕಟಾವು ಪ್ರಯೋಗ ಕಡ್ಡಾಯವಾಗಿ ಕೈಗೊಳ್ಳಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಲಾಗುವುದು. ಶಿಸ್ತುಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.

ಅಕ್ರಮಗಳಿಗೆ ಕಡಿವಾಣ :

ಬೆಳೆ ಕಟಾವು ಹಾಗೂ ನೋಂದಣಿಯಲ್ಲಿ ಅಕ್ರಮಗಳು ಕಂಡು ಬಂದಿವೆ. ರೈತರ ಫ್ರೂಟ್ಸ್ ಐಡಿ ಆಧರಿಸಿ, ಬೆಂಬಲ ಬೆಲೆ ಅಡಿ ಸರ್ಕಾರಿಂದ ಬೆಳೆಗಳನ್ನು ಖರೀದಿ ಮಾಡಲಾಗುತ್ತದೆ, ಆಹಾರ ಇಲಾಖೆಯ ತಂತ್ರಾಂಶ ಫ್ರೂಟ್ಸ್ ಐಡಿ ಆಧರಿಸಿ ಬೆಳೆಗಳನ್ನು ಕೊಳ್ಳುವುದರಿಂದ, ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಖರೀದಿ ಪ್ರಕ್ರಿಯ ವೇಳೆಯಲ್ಲಿ ಫ್ರೂಟ್ಸ್ ಐಡಿ ತಿದ್ದುವ ಕೆಲಸ ಮಾಡಬಾರದು ಎಂದರು.
ಬೆಳ ಕಟಾವು ನಡೆಸುವ ಮುಖ್ಯ ಉದ್ದೇಶ, ಯಾವುದೇ ರೀತಿಯಲ್ಲಿ ನಷ್ಟ ವಾಗಬಾರದು. ಅಂಕಿ ಅಂಶಗಳು ನಿಖರವಾಗಿ ತಿಳಿಯಬೇಕು ಎಂಬುದಾಗಿದೆ. ಬೆಳೆ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ವಿಮಾ ಕಂಪನಿಯ ಅಧಿಕಾರಿಗಳು ಸಹ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ಇರಬೇಕು. ಪ್ರತಿ ತಾಲೂಕು ವ್ಯಾಪ್ತಿಗೆ ಮೂರರಿಂದ ನಾಲ್ಕು ಪ್ರತಿನಿಧಿಗಳನ್ನು ನೇಮಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮಾನಾಯ್ಕ್, ಕೃಷಿ ಗಣತಿ ಕಾರ್ಯದಲ್ಲಿ ಜಿಲ್ಲೆ ರಾಜ್ಯಕ್ಕೆ 2ನೇ ಸ್ಥಾನಗಳಿಸಿದೆ. ಈ ಬಾರಿ 2023-2024 ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 4202 ಬೆಳೆ ಕಟಾವು ಪ್ರಯೋಗಗಳನ್ನು ಮಾಡಲು ಗುರಿ ನೀಡಲಾಗಿದೆ. ಮೊಳಕಾಲ್ಮೂರು 466, ಚಳ್ಳಕೆರೆ 926, ಚಿತ್ರದುರ್ಗ 752, ಹೊಳಲ್ಕೆರೆ 550, ಹೊಸದುರ್ಗ 552 ಹಾಗೂ ಹಿರಿಯೂರು 956 ಬೆಳೆ ಕಟಾವು ಪ್ರಯೋಗಳನ್ನು ಕೈಗೊಳ್ಳಬೇಕಿದೆ. ಇದುವರೆಗೂ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ಬಿತ್ತನೆ ನಡೆಯದಿರುವುದರಿಂದ ನಮೂನೆ 1 ರಲ್ಲಿ ಯಾವುದೇ ಪ್ರಯೋಗದ ಮಾಹಿತಿಯನ್ನು 5 ತಾಲ್ಲೂಕುಗಳಲ್ಲಿ ನೀಡಿಲ್ಲ. ಹೊಸದುರ್ಗ ತಾಲೂಕಿನಲ್ಲಿ 28 ನಮೂನೆ-1 ಮಾಹಿತಿಯನ್ನು ನೀಡಲಾಗಿದೆ. ಕಂದಾಯ ಇಲಾಖೆ 2004, ಕೃಷಿ ಇಲಾಖೆ 544, ತೋಟಗಾರಿಕೆ 542 ಹಾಗೂ ಗಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ಯ ಇಲಾಖೆಗೆ 1112 ಪ್ರಯೋಗಳನ್ನು ಹಂಚಿಕೆ ಮಾಡಲಾಗಿದೆ. ಶೇ.15 ರಷ್ಟು ಪ್ರಯೋಗಗಳ ಮೇಲ್ವಿಚಾರಣೆಗಾಗಿ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಲಾಗಿದೆ. ಪ್ರತಿ ತಾಲೂಕುಗಳಲ್ಲಿ ತಹಶೀಲ್ದಾರ ನೇತೃತ್ವದಲ್ಲಿ ಪ್ರತಿ ಮಾಹೆ ಬೆಳೆ ಕಟಾವು ಪ್ರಯೋಗ ಸಭೆಗಳನ್ನು ನಡೆಸಬೇಕು. ರಾಜ್ಯ ಹಾಗೂ ಕೇಂದ್ರ ವಲಯದ ಕಟಾವು ನಡೆಸಲು ಜಿಲ್ಲೆಯಲ್ಲಿ 20 ಗ್ರಾಮಗಳನ್ನು ಆಯ್ಕೆ ಮಾಡಲು ನಿರ್ದೇಶನ ಬಂದಿದೆ. ಗ್ರಾಮಗಳನ್ನು ಶೀಘ್ರವೇ ಆಯ್ಕೆ ಮಾಡಲಾಗುವುದು ಎಂದರು.
ತೋಟಗಾರಿಕೆ ಬೆಳಗಳ ಕಟಾವು ಮಾಹಿತಿಯನ್ನು ರಾಜ್ಯಕ್ಕೆ ಸಲ್ಲಿಸಲು ಜುಲೈ 31 ಕಡೆಯ ದಿನವಾಗಿದೆ. ಈ ಹಿನ್ನಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜುಲೈ 25 ರ ಒಳಗಾಗಿ ಕಟಾವು ಪ್ರಯೋಗ ಪೂರ್ಣಗೊಳಿಸಿ ಮಾಹಿತಿ ನೀಡುವಂತೆ ಸಭೆಯಲ್ಲಿ ತಿಳಿಸಿಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಸಹಾಯಕ ಅಂಕಿ ಸಂಖ್ಯೆ ಅಧಿಕಾರಿ ಅಶ್ವತ್ಧಾಮ ಸೇರಿದಂತೆ ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು, ಅಗ್ರಿ ಕಲ್ಚರ್ ಇನ್‍ಶ್ಯೂರೆನ್ಸ್ ಕಂಪನಿಯ ಜಿಲ್ಲಾ ಪ್ರತಿನಿಧಿ ಧರ್ಮರಾಜ್ ಇದ್ದರು.

About The Author

Leave a Reply

Your email address will not be published. Required fields are marked *