April 17, 2024

Chitradurga hoysala

Kannada news portal

ಮಾತಿನಿಂದ ಸಾಧನೆಯು ಮಾತಿನಿಂದ ಅವಸಾನವೂ

1 min read

CHITRADURGA HOYSALA NEWS/

ಮಾತಿನಿಂದ ಸಾಧನೆಯು ಮಾತಿನಿಂದ ಅವಸಾನವೂ

ನುಡಿದರೆ ಮುತ್ತಿನ ಹಾರದಂತಿರಬೇಕು! ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು! ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು! ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ? ಬಸವಣ್ಣನವರ ಈ ವಚನ ನುಡಿ ಹೇಗಿರಬೇಕೆಂಬ ಔಚಿತ್ಯವನ್ನು ಮನೋಜ್ಞವಾಗಿ ಹೇಳುತ್ತದೆ. ಮಾತು ಮುತ್ತು ಮಾತೇ ಮೃತ್ಯು! ಎಂಬ ನುಡಿಗಟ್ಟಿನಂತೆ ಮಾತಿನಿಂದ ಸಾಧನೆಯೂ ಇದೆ ಅವಸಾನವೂ ಇದೆ; ಆನಂದವು ಇದೆ ಆಹಾಕಾರವೂ ಇದೆ.

ಮಾತಿನಿಂ ನಗೆನುತಿಯು। ಮಾತಿನಿಂ ಹಗೆಯುತಿಯು। ಮಾತಿನಿಂ ಸರ್ವಸಂಪದವು। ಮಾತೆ ಮಾಣಿಕ್ಯವು ಸರ್ವಜ್ಞ! ಮಾತಿನಿಂದ ಘಟಿಸಬಹುದಾದ ಸಂಕಟ ಹಾಗು ಸಂತಸವನ್ನು ಬಹುಶಃ ಈ ಲೇಖನದ ಓದುಗರೆಲ್ಲರು ಅನುಭವಿಸಿಯೇ ಇರುತ್ತಾರೆ. ಮಾತು ಬಲ್ಲವನೇ ಮಾನವ. ಮಾತು ಮರೆತವರೇ ದಾನವ. ಮಾತು ಮನುಷ್ಯತ್ವಕ್ಕೆ ಶೋಭೆ. ಅದು ವ್ಯಕ್ತಿತ್ವದ ಪ್ರತಿಭೆ. ಮಾತು ಎಂದರೆ ಆ ಪದದದಲ್ಲಿಯೇ ಇರುವಂತೆ ಮಾನವನ ತುಡಿತ ಮಿಡಿತಗಳ ಅಭಿವ್ಯಕ್ತಿಯೇ ಆಗಿದೆ. ಸಂಜ್ಞೆ ಭಾಷೆಯಿಂದ ಧ್ವನಿ ಭಾಷೆಗೆ ಬದಲಾಗಲು ಸಾವಿರಾರು ವರ್ಷಗಳು ಸಂದಿವೆ. ಧ್ವನಿಯುತ ಭಾಷೆ ಲಿಪಿ ಅಥವಾ ಲೇಖನ ಭಾಷೆಯಾಗಲು ಮತ್ತೆ ಸಾವಿರಾರು ವರ್ಷಗಳೇ ಕಳೆದಿವೆ. ಇತರರ ಭಾವನೆಗಳ ಅರ್ಥಮಾಡಿಕೊಳ್ಳಲು ಭಾವನೆಗಳ ಅರ್ಥಮಾಡಿಸಲು ಯಾವತ್ತು ಭಾಷೆಯೊಂದು ಪ್ರಮುಖ ಸಾಧನವಾಗಿದೆ.

ಮಾತು ಆಡಿದರೆ ಹೋಯಿತು ಮುತ್ತು ಹೊಡೆದರೆ ಹೋಯಿತು ಗಾದೆ ಮಾತು ಮಾತಿನ ಅಗಾಧ ಶಕ್ತಿ ಸಾಧ್ಯತೆಗಳ ಧ್ವನಿಸುತ್ತದೆ. ಮಾತು ಮನುಷ್ಯರ ನಡುವೆ ಸಂಪರ್ಕ ಸಂವಹನಕ್ಕೆ ಅತೀ ಅಗತ್ಯ. ಮೃದು ಮಧುರ ನಯ ವಿನಯ ಮಾತಿನ ವೈಖರಿಯ ಮೇಲೆ ಸಂಬಂಧಗಳು ಸಾಂಗವಾಗಿ ಸಾಗುವವು. ಸಂಬಂಧಗಳು ಬಹುತೇಕ ಬಿರುಕು ಬಿಡುವುದು ಮಾತಿನ ಒರಟುತನ ಜಿಗುಟುತನ ಕಟುತನಗಳಿಂದ. ಮಾತು ಸಹಜ ಸತ್ವಯುತವಾಗಿದ್ದು ಮೂಲೋಕ ಗೆಲ್ಲುವಂತಿರಬೇಕು. ಮಾತು ಭಕ್ತಿಯು ಹೌದು ಶಕ್ತಿಯೂ ಹೌದು ಯುಕ್ತಿಯು ಹೌದು ಮುಕ್ತಿಯೂ ಹೌದು.

ದೇವರ ಪ್ರಾರ್ಥಿಸಲು ಮೊರೆಯಿಡಲು ಮೌನದ ಧ್ಯಾನದಲ್ಲು ಓಂಕಾರವನ್ನೋ ಮಂತ್ರ ಶ್ಲೋಕಗಳನ್ನೊ ಇಷ್ಟ ದೇವತಾ ಸ್ತೋತ್ರವನ್ನೋ ಗುನುಗುನಿಸುತ್ತೇವೆ. ದೇವರ ಒಲಿಸಿಕೊಳ್ಳಲು ಭಾಷೆಯೊಂದು ಬೇಕೇ ಬೇಕು. ದೇವ ಭಾಷೆಯೆಂದು ಸಂಸ್ಕೃತವನ್ನು ಕರೆಯಲಾಗುತ್ತದೆ. ಸಂಸ್ಕೃತ ಪ್ರಪಂಚದ ಎಲ್ಲಾ ಭಾಷೆಗಳ ತಾಯಿ ಸ್ಥಾನದಲ್ಲಿದೆ. ಮೂರು ಸಾವಿರ ವರ್ಷಗಳಷ್ಟು ಇತಿಹಾಸವಿರುವ ಸಂಸ್ಕೃತ ಇಂದಿಗೂ ಅಂದಿನ ವ್ಯಾಕರಣ ನಿಯಮಗಳೊಂದಿಗೇ ಅಗಾಧ ಶಬ್ಧಸಂಪತ್ತು ಮತ್ತು ಭಾಷೆ ಪ್ರೌಢಿಮೆ ಹೊಂದಿದೆ. ಇತರ ಭಾರತೀಯ ಭಾಷೆಗಳ ಶಬ್ದಭಂಡಾರಕ್ಕೆ ಮತ್ತು ವ್ಯಾಕರಣ ಚೌಕಟ್ಟಿಗೆ ಸಂಸ್ಕೃತ ಭಾಷೆ ಹಾಗು ವ್ಯಾಕರಣದ ಕೊಡುಗೆ ಅಪಾರವಾದುದು. ನಂತರದ ಅನೇಕ ವರ್ಷಗಳಲ್ಲಿ ಸ್ಥಳೀಯವಾಗಿ ಪಾಳಿ, ಪ್ರಾಕೃತ, ಖರೋಷ್ಟಿ ಮುಂತಾದವು ಜನಭಾಷೆಯಾಗಿ ಬಳಕೆಯಲ್ಲಿದ್ದು ದೇವ ದೇವಾನುದೇವತೆಗಳ ಪ್ರಾರ್ಥನೆಗೆ ಧರ್ಮ ಶಾಸನಗಳ ಬರಹಕ್ಕೆ ಬಳಕೆಯಾದವು. ನಮ್ಮ ಮಾತೃಭಾಷೆ ಕನ್ನಡವು ಲಿಪಿಯ ದೃಷ್ಟಿಯಿಂದ ಸಾವಿರದ ಐನೂರು ವರ್ಷಗಳ ಪುರಾತನತೆ ಹೊಂದಿದೆ. ಭಾರತದಲ್ಲಿ ಆರ್ಯ ಭಾಷೆಗಳೆಂದು ಸಂಸ್ಕೃತ, ಹಿಂದಿ, ಗುಜರಾತಿ, ಮರಾಠಿ, ಗುಜರಾತಿ, ಭೋಜಪುರಿ, ಅಸ್ಸಾಮಿ, ಬಂಗಾಳಿ ಮುಂತಾದ ಭಾಷೆಗಳಿದ್ದರೆ ದ್ರಾವಿಡ ಭಾಷೆಗಳಾಗಿ ಕನ್ನಡ ತೆಲುಗು ತಮಿಳು ಮಲಯಾಳಿ ಕೊಂಕಣಿ ತುಳು ಕೊಡವ ಭಾಷೆಗಳು ಬೆಳೆದು ಬಂದಿವೆ. ಲಿಪಿಸಹಿತ ಭಾಷೆಗಳು ಕೆಲವಾದರೆ ಲಿಪಿರಹಿತ ಭಾಷೆಗಳೇ ಅಧಿಕ. ಭಾಷೆಗಳ ಇತಿಹಾಸ ಬಹಳ ದೊಡ್ಡದು.

ಭಾಷೆಯ ಉದ್ಭವ ಬಳಕೆ ಮತ್ತು ಊರ್ಜಿತದಲ್ಲಿ ಮನುಷ್ಯರದೆ ಪಾತ್ರವಿದೆ. ಪ್ರಾಣಿ ಪಕ್ಷಿ ಜಲಚರಗಳು ಯಾವತ್ತು ಭಾಷೆಗಳ ಗೋಜಿಗೆ ಹೋಗಿಲ್ಲ. ಅವುಗಳ ಭಾಷೆ ಬಹುತೇಕ ಧ್ವನಿ ಸಂಜ್ಞೆಯಲ್ಲೇ ಉಳಿದಿರುವುದು ಗೋಚರ. ಮಾನವ ಮಾತ್ರ ತನ್ನ ಪರಿಸರದ ವ್ಯಕ್ತಿಗಳ ಜೊತೆ ಸಂವಹನಕ್ಕೆ ಸಂಪರ್ಕಕ್ಕೆ; ವ್ಯವಹಾರ ವಾಣಿಜ್ಯಕ್ಕೆ ಒಂದು ನಿಗದಿತ ಭಾಷೆಯ ಸೃಷ್ಟಿಸಿಕೊಂಡಿರುವರು. ಧ್ವನಿ ಸಂಜ್ಞೆಗಳಿಗೆ ಲಿಪಿ ಸಂಕೇತಗಳ ಸೃಷ್ಟಿಸಿ ಮೌಖಿಕ ಜೊತೆಗೆ ಬರವಣಿಗೆಯ ಭಾಷೆಯನ್ನೂ ರೂಢಿಸಿಕೊಂಡಿರುವರು. ಭಾಷೆ ಆಯಾ ಪರಿಸರ ಮತ್ತು ಸಮುದಾಯದ ಮೇಲೆ ವಿಭಿನ್ನತೆಯನ್ನು ಕಾಯ್ದುಕೊಂಡಿದೆ.

ಭಾಷೆಯು ಮಾನವರ ಅಸ್ತಿತ್ವಕ್ಕೆ ನೆಲೆಯಾಗಿದೆ. ಮಾನವರ ಕೌಟುಂಬಿಕ ಸಾಮಾಜಿಕ ಧಾರ್ಮಿಕ ರಾಜಕೀಯ ಆರ್ಥಿಕ ಶೈಕ್ಷಣಿಕ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಭಾರತೀಯ ನಾಗರೀಕತೆಯಾದ ಸಿಂಧು ಲಿಪಿಯ ಅರ್ಥ ಇನ್ನೂ ನಿಗೂಢವಾದರು ಅಂದಿನ ಚಿಹ್ನೆಗಳ ಭಾಷೆ ಮಾನವರ ಜ್ಞಾನಾಧಾರಿತ ಕೌಶಲಗಳ ಅಗಾಧತೆಯ ಕುರಿತು ಅಚ್ಚರಿ ಉಂಟುಮಾಡುತ್ತದೆ. ಈಜಿಪ್ಟ್‌ ಮೆಸಪಟೋಮಿಯಾ ಮಾಯಾ ಇಂಕಾ ಚೀನೀ ಲಿಪಿಗಳು ಅಂದಿನ ನಾಗರೀಕತೆಯ ದರ್ಶನ ಮಾಡಿಸುತ್ತವೆ. ಈಗ ಚಂದ್ರನ ಮೇಲಿಳಿದ ಪ್ರಜ್ಞಾನ ರೋವರ್ ಭಾರತದ ಮುದ್ರೆಯನ್ನು ಶಶಿಯ ಮುಖದ ಮೇಲೆ ಒತ್ತುವ ಮೂಲಕ ಮುಂದಿನ ಮಾನವ ಜನಾಂಗಕ್ಕೆ ಲಿಪಿಯ ವಿಶ್ವರೂಪವನ್ನು ಶಾಶ್ವತವಾಗಿ ಉಳಿಸುವ ಪ್ರಯತ್ನವಾಗಿದೆ.

ಏನೇನೆಲ್ಲ ವಿಸ್ಮಯಗಳ ಹೊಂದಿದ ಭಾಷೆಯನ್ನು ವ್ಯವಸ್ಥಿತವಾಗಿ ಬಳಸಿದರೆ ವ್ಯಕ್ತಿಯ ವ್ಯಕ್ತಿತ್ವ ಉಳಿಯುವುದು. ಹಾಡು ಹಳೆಯದಾದರೇನು ಭಾವ ನವನವೀನ. ಪದಪುಂಜಗಳು ಸವಕಲಾದರು ಅವುಗಳಿಗೆ ನೂತನ ಭಾವ ಅರ್ಥ ಸಾಧ್ಯತೆಗಳ ತುಂಬುವುದು ಮಾನವನ ವೈಶಿಷ್ಟ್ಯ. ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ. ಮಾತು ಹೊತ್ತಿನ ತುತ್ತಾಗಬೇಕು ತೊತ್ತಾಗಬಾರದು. ಇತಿಹಾಸ ಮಾತಿನ ಮೇಲೆ ನಿಂತಿದೆ. ಸಂಕಷ್ಟದಿಂದ ಪಾರು ಮಾಡಿದ ಜನಸಾಮಾನ್ಯರ ಇತಿಹಾಸವೂ ಅಜರಾಮರವಾಗಿದೆ. ಸಂಕಷ್ಟಕ್ಕೆ ದೂಡಿದ ನಾಯಕರ ಇತಿಹಾಸ ಅಸಹ್ಯಕರವಾಗಿ ಪುಟಪುಟಗಳಲ್ಲಿ ನರಳುತ್ತಿದೆ. ಮಾತು ತನುಮನ ಅರಳುವಂತಿರಲಿ ಮತ್ತೆ ಮೆಲುಕು ಹಾಕುವಂತಿರಲಿ. ವ್ಯಕ್ತಿ ಮೃತನಾದರು ಮಾತು ಮುತ್ತಂತೆ ಹೊಳೆಯುತ್ತ ಬೆಲೆಬಾಳುವಂತಿರಲಿ.

ಟಿ.ಪಿ.ಉಮೇಶ್
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು
ತೊಡರನಾಳು, ಹೊಳಲ್ಕೆರೆ .ತಾ. ಚಿತ್ರದುರ್ಗ .ಜಿ.
9008461178

About The Author

Leave a Reply

Your email address will not be published. Required fields are marked *