ಉತ್ತಮ ಫಲಿತಾಂಶಕ್ಕೆ ಪ್ರಾಮಾಣಿಕ ಕೆಲಸ ನಿರ್ವಹಿಸಿ : ಶಾಸಕ ಬಿ.ಜಿ.ಗೋವಿಂದಪ್ಪ
ಸಂಪಾದಕರು: ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್/
ವರದಿ:ಕಾವೇರಿ ಮಂಜಮ್ಮನವರ್,
ಹೊಸದುರ್ಗ :
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಮತ್ತು ತಾಲೂಕು ಶಿಕ್ಷಕರ ದಿನಾಚರಣೆ ಆಚರಣೆ ಸಮಿತಿ ವತಿಯಿಂದ ಶುಕ್ರವಾರ ನಡೆದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕರು ಹಾಗೂ ಆಹಾರ ನಾಗರಿಕ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಾಜಿ ಶಿಕ್ಷಣ ಸಚಿವ ದಿವಂಗತ ಗೋವಿಂದಗೌಡ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದೇ ಶಾಲೆಯ ಇಂಗ್ಲಿಷ್ ಶಿಕ್ಷಕ ಶಿವಶಂಕರ್ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಭವ್ಯ ಭಾರತದ ಪರಂಪರೆಯನ್ನು ಉಳಿಸಿ-ಬೆಳೆಸುವ ಕಾರ್ಯ ನಿಮ್ಮಿಂದಾಗಬೇಕು. ಮುಂದಿನ ದಿನಗಳಲ್ಲಿ ಒಳ್ಳೆಯ ಫಲಿತಾಂಶ ಬರುವಂತೆ ನೋಡಿಕೊಳ್ಳಿ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಹ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಚಿತ್ರಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮೋಹನ್ ಮಾತನಾಡಿ, ಬದಲಾಗುತ್ತಿರುವ ಸಂದರ್ಭಗಳಿಗೆ ಶಿಕ್ಷಕರು ಹೊಂದಿಕೊಳ್ಳುವುದು ಅವಶ್ಯಕ. ನಾವೆಲ್ಲರೂ ಇಂದು ಎಐ ಯುಗದಲ್ಲಿ ಬದುಕುತ್ತಿದ್ದೇವೆ. ಬಹಳಷ್ಟು ಜನರಲ್ಲಿ ಎಐ ಬಗ್ಗೆ ತಿರಸ್ಕಾರ
ಮಾಡುತ್ತಿರುವುದು ಸರಿಯಲ್ಲ.ತಾಂತ್ರಿಕತೆ ಬೆಳದಂತೆ ಅದಕ್ಕೆ ಹೊಂದಿಕೊಳ್ಳುವುದು ನಮ್ಮೆಲ್ಲರಿಗೂ ಅನಿವಾರ್ಯವಾಗಿದೆ. ತರಗತಿಗಳು ಯುನಿವರ್ಸಲ್ ಇದ್ದಂತೆ. ನಿತ್ಯವೂ ಹೊಸತನ್ನು ಕಲಿಸುತ್ತಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ತಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸುವ ಅವಶ್ಯಕತೆ ಎದುರಾಗಿದೆ. ಕೌಶಲದ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತೆಗೆಯುವವನೇ ನಿಜವಾದ ಶಿಕ್ಷಕ. ಪಾಠಗಳನ್ನು ಸಮಕಾಲಿನ ಸಂದರ್ಭಕ್ಕೆ ಅನುಗುಣವಾಗಿ ಭೋದಿಸಬೇಕು.ಅಲ್ಲದೇ, ಪಠ್ಯಕ್ಕೆ ಜೀವ ತುಂಬಬೇಕು. ಇವು ಓದುಗನಿಗೆ ನಿತ್ಯವೂ ಹೊಸತು ನೀಡುತ್ತದೆ. ನಿಜವಾದ ಶಿಕ್ಷಣ ವಿದ್ಯಾರ್ಥಿಗಳಲ್ಲಿನ ತಪ್ಪು ಗ್ರಹಿಕೆಯ ಮನೋಭಾವನೆ ಸರಿಪಡಿಸಿ, ಸದ್ವಿಚಾರಗಳನ್ನು ಬಿತ್ತುತ್ತದೆ.ಅಂತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡೋಣ ಎಂದು ಸಲಹೆ ನೀಡಿದರು.
6 ಶಾಲೆಗಳಿಗೆ ಅತ್ಯುತ್ತಮ ಶಾಲಾ ಪ್ರಶಸ್ತಿ;
ಜಿಲ್ಲಾ ಮತ್ತು ತಾಲೂಕು ಮಟ್ಟದ 5 ಅಧಿಕಾರಿಗಳನ್ನೊಳಗೊಂಡ ತಂಡ ಪ್ರತಿ ವರ್ಷವೂ ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ, ತಮಗೆ ಉತ್ತಮವೆನಿಸಿದ ಶಾಲೆಗಳನ್ನು ಅತ್ಯುತ್ತಮ ಪ್ರಶಸ್ತಿಗೆ ಆಯ್ಕೆಮಾಡುತ್ತದೆ. ಅದರಂತೆಯೇ, ಪ್ರಸಕ್ತ 2025ನೇ ಸಾಲಿನಲ್ಲಿ ಬ್ಯಾಡರಹಳ್ಳಿ ಮತ್ತು ಕ್ಯಾದಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, ಹಾಗಲಕೆರೆ ಮತ್ತು ಕಬ್ಬಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲಾ ವಿಭಾಗದಲ್ಲಿ ಲಕ್ಕಿಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಬಾಗೂರು ಪರಪ್ಪಸ್ವಾಮಿ ಗ್ರಾಮಾಂತರ ಪ್ರೌಢಶಾಲೆಗಳಿಗೆ ಪ್ರಶಸ್ತಿ ನೀಡಿ, ಮುಖ್ಯ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ, ಗೌರವ ನೀಡಲಾಯಿತು.
ಈ ವೇಳೆ ಪ್ರಾಸ್ತಾವಿಕವಾಗಿ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಕೆ. ಶ್ರೀನಿವಾಸ್ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಅತಿಥಿಗಳನ್ನ ಸ್ವಾಗತಿಸಿದರು. ಪುರಸಭಾ ಅಧ್ಯಕ್ಷೆ ರಾಜೇಶ್ವರಿ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಉಪಾಧ್ಯಕ್ಷೆ ಗೀತಾ ಗಜೇಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಿ.ಸುನಿಲ್ ಕುಮಾರ್, ಕ.ರಾ.ಸ.ನೌ.ಸಂಘದ ತಾಲೂಕು ಅಧ್ಯಕ್ಷ ಶಾಂತಕುಮಾರ್, ಶಿಕ್ಷಣ ಸಂಯೋಜಕರಾದ ಶಶಿಧರ್, ಯತೀಶ್, ಕೆಂಚಪ್ಪ, ಅಕ್ಷರ ದಾಸೋಹದ ನಿರ್ದೇಶಕ ಶಾಂತಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ನೌಕರರ ಸಂಘದ ನಿರ್ದೇಶಕರಾದ ದಿವಾಕರ್, ಅನಂತ್ ಮತ್ತು ಮಲ್ಲೇಶ್ ಸೇರಿದಂತೆ ವಿವಿಧ ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ಶಿಕ್ಷಕರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
