ಸರ್ಕಾರಿ ನೌಕರರಲ್ಲಿ ಕಾರ್ಯಕ್ಷಮತೆ,ಸೌಹಾರ್ದತೆಯನ್ನು ಉತ್ತೇಜಿಸುವ ಕ್ರೀಡೆ ಸಹಕಾರಿ
ಸಂಪಾದಕರು : ಸಿಎನ್ ಕುಮಾರ್ ,
ವರದಿ : ಡ್ಯಾಮ್ ಕುಮಾರ್ ,
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:
ದಿನನಿತ್ಯದ ಒತ್ತಡಭರಿತ ಆಡಳಿತಾತ್ಮಕ ಕೆಲಸದ ನಡುವೆಯೂ ಸರ್ಕಾರಿ ನೌಕರರ ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಹಾಗೂ ಪರಸ್ಪರ ಸೌಹಾರ್ದತೆಯನ್ನು ಬೆಳೆಸಲು ಕ್ರೀಡೆ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸುರೇಶ್ ಹೇಳಿದ್ದರು.
ಚಳ್ಳಕೆರೆ ನಗರದ ಹೆಚ್. ಪಿ.ಪಿ.ಸಿ. ಕಾಲೇಜಿನ ಡಿ ಸುಧಾಕರ್ ಕ್ರೀಡಾಗಣದಲ್ಲಿ ಸರ್ಕಾರಿ ನೌಕರರ ಸಂಘದಿಂದ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ನೌಕರರ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟಿನ ಆಯೋಜನೆ ಮಾಡಲಾಗಿದ್ದು ಇದರ ಎರಡನೇ ದಿನ ಮುಖ್ಯ ಅತಿಥಿಗಳಾಗಿ ಬಾಗವಹಿಸಿಮಾತನಾಡಿದ ಅವರು
ವಿವಿಧ ಇಲಾಖೆಗಳ ಸರ್ಕಾರಿ ನೌಕರರನ್ನು ಒಳಗೊಂಡ 13 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದು, ಇದರಲ್ಲಿ ನೌಕರರೊಳಗಿನ ಕ್ರೀಡಾ ಪ್ರತಿಭೆ, ವೈಯಕ್ತಿಕ ನೈಪುಣ್ಯತೆ ಮತ್ತು ಕ್ರೀಡಾ ಭಾವವನ್ನು ಹೊರಹಾಕುವ ವೇದಿಕೆಯಾಗಿದ್ದುದು ವಿಶೇಷವಾಗಿದೆ. ಆಡಳಿತದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ನೌಕರರು ಒಂದೇ ಮೈದಾನದಲ್ಲಿ ಒಂದೇ ತಂಡದ ಸದಸ್ಯರಾಗಿ ಆಡುತ್ತಿರುವುದು ಇಲಾಖೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದರಿಂದ ವರ್ಷಕ್ಕೆ ಕನಿಷ್ಠ ಎರಡು ಬಾರಿ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿದರೆ, ಒತ್ತಡದ ಕೆಲಸ ಮಾಡುವ ನೌಕರರಿಗೆ ಮಾನಸಿಕ ವಿಶ್ರಾಂತಿ ಸಿಗುತ್ತದೆ. ಇದರಿಂದ ಅವರ ಬುದ್ಧಿಶಕ್ತಿ, ಕಾರ್ಯೋತ್ಸಾಹ ಮತ್ತು ನಿರ್ಧಾರ ಸಾಮರ್ಥ್ಯ ಹೆಚ್ಚಾಗಿ ಸಾರ್ವಜನಿಕ ಸೇವೆಯ ಗುಣಮಟ್ಟವೂ ಸುಧಾರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಟಿ. ವೀರೇಶ್ ಮಾತನಾಡಿ, ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಇಲಾಖೆಗಳ ನೌಕರರನ್ನು ಒಳಗೊಂಡ ತಂಡಗಳನ್ನು ರಚಿಸಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇಂತಹ ಚಟುವಟಿಕೆಗಳು ನೌಕರರಲ್ಲಿ ಪರಸ್ಪರ ವಿಶ್ವಾಸವನ್ನು ಹೆಚ್ಚಿಸಿ, ಒತ್ತಡದ ವೃತ್ತಿ ಬದುಕಿಗೆ ಅಗತ್ಯವಾದ ಮಾನಸಿಕ ಸಮತೋಲನವನ್ನು ಕಾಪಾಡಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಟೂರ್ನಿಯಲ್ಲಿ ಪೊಲೀಸ್, ಅರಣ್ಯ, ಅಗ್ನಿಶಾಮಕ ದಳ, ಶಿಕ್ಷಣ, ಸಮಾಜ ಕಲ್ಯಾಣ, ಗ್ರಾಮೀಣ ಅಭಿವೃದ್ಧಿ, ಆರೋಗ್ಯ ಹಾಗೂ ನ್ಯಾಯಾಂಗ ಇಲಾಖೆಗಳ ನೌಕರರು ಭಾಗವಹಿಸಿದ್ದು, ಸರ್ಕಾರಿ ವ್ಯವಸ್ಥೆಯ ವಿವಿಧ ಅಂಗಗಳು ಕ್ರೀಡೆಯ ಮೂಲಕ ಒಂದೇ ವೇದಿಕೆಯಲ್ಲಿ ಬೆಸೆಯುವ ಅಪರೂಪದ ಸಂದರ್ಭ ನಿರ್ಮಾಣವಾಗಿದೆ.
