ಮೀನುಗಾರರಿಗೆ ಸರ್ಕಾರದಿಂದ ಸೌಲಭ್ಯ – ಶಾಸಕ ಬಿ.ಜಿ. ಗೋವಿಂದಪ್ಪಮೀನುಗಾರರಿಗೆ
ಚಿತ್ರದುರ್ಗ ಹೊಯ್ಸಳ ಸುದ್ದಿ
ಹೊಸದುರ್ಗ :
ಕಳೆದ ಬಾರಿ ಜಲಾಶಯಗಳಲ್ಲಿ ನೀರು ಇರಲಿಲ್ಲ ಆದರೆ ಈ ಬಾರಿ ಬಂದ ಮಳೆಗೆ ಜಲಾಶಯಗಳು ತುಂಬಿವೆ. ಈ ಭಾಗದ ಜನರ ಸಾಕಷ್ಟು ಜಮೀನುಗಳು ಮುಳುಗಡೆಯಾಗಿದ್ದರಿಂದ ಮೀನುಗಾರಿಕೆಗೆ ಉತ್ತೇಜಿನ ಕೊಡುವ ನಿಟ್ಟಿನಲ್ಲಿ ಸಂಘವು ಮೀನು ಮರಿಗಳನ್ನ ಬಿಡುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ ಎಂದು ಶಾಸಕ ಹಾಗೂ ಆಹಾರ ನಾಗರಿಕ ಸರಬರಾಜು ನಿಗಮ ಮಂಡಳಿಯ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ತಾಲೂಕಿನ ವಾಣಿ ವಿಲಾಸ ಮೀನುಗಾರರ ಸಹಕಾರ ಸಂಘದಿಂದ ತಾಲೂಕಿನ ವಾಣಿವಿಲಾಸ ಜಲಾಶಯದ ಹಿನ್ನೀರಿನ ಪ್ರದೇಶಗಳಾದ ಹಿಂಡೆ ದೇವರಹಟ್ಟಿ,ಅರೇಹಳ್ಳಿ ಹಾಗೂ ಕಪ್ಪಗೆರೆ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸುಮಾರು 12 ಲಕ್ಷ ಬಲಿತ ಮೀನಿನ ಮರಿಗಳನ್ನ ನೀರಿಗೆ ಅರ್ಪಿಸಿದ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೀನುಗಾರರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ತರಿಸಿಕೊಡುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಮೀನುಗಾರರ ಫಲಾನುಭವಿಗಳಿಗೆ ಬರುವ ಬಲೆ, ಜಾಕೆಟ್ ಮತ್ತಿತರ ಕಿಟ್ ಗಳನ್ನ ಆಯಾಭಾಗದ ಜನಪ್ರತಿನಿಧಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ವಿತರಣೆ ಮಾಡುವ ಕೆಲಸವನ್ನು ಸಂಘದವರು ಪಾರದರ್ಶಕವಾಗಿ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ಸಂಘದ ಅಧ್ಯಕ್ಷ ಕೃಪಾಕರ ರೆಡ್ಡಿ ಡಿ ರಾಯ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಿರಂಜನ್ ಹಾಗೂ ಸಂಘದ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
