April 30, 2024

Chitradurga hoysala

Kannada news portal

7 ಬಾರಿ ಗೆದ್ದಿರುವ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಕುಂಚಿಟಿಗರ ಆಗ್ರಹ..

1 min read

7 ಬಾರಿ ಗೆದ್ದಿರುವ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಲು ಕುಂಚಿಟಿಗರ ಆಗ್ರಹ…

 

ವರದಿ:ಭರತ್ ಭಾರ್ಗವ್.ಸಿ.ಕೆ

ಬೆಂಗಳೂರು:

ಶಿರಾ ವಿಧಾನಸಭಾ ಕ್ಷೇತ್ರದಿಂದ 7ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಟಿ.ಬಿ.ಜಯಚಂದ್ರ ಅವರಿಗೆ ಡಿಸಿಎಂ ಅಥವಾ ಕ್ಯಾಬಿನೆಟ್ ದರ್ಜೆಯ ಉತ್ತಮ ಖಾತೆ ನೀಡುವಂತೆ ರಾಜ್ಯದ ಹಲವು ಕುಂಚಿಟಿಗ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ವಕೀಲರಾಗಿ ವೃತ್ತಿ ಆರಂಭಿಸಿ ಉತ್ತಮ ಹೆಸರು ಪಡೆದಿದ್ದ ಜಯಚಂದ್ರ ಅವರು 1978ರಲ್ಲಿ ನಡೆದ ಚುನಾವಣೆಯಲ್ಲಿ ವಿಧಾನಸಭೆಗೆ ಆಯ್ಕೆ ಆಗುವ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಆಯ್ಕೆ ಆಗುವ ಮೂಲಕ ಜಿಲ್ಲೆಯಲ್ಲೇ ಅತ್ಯಂತ ಹಿರಿಯ ಮುತ್ಸದ್ದಿ ಕಾಂಗ್ರೆಸ್ ನಾಯಕರಾಗಿದ್ದಾರೆ.
ಸಾರ್ವಜನಿಕವಾಗಿ ಅತ್ಯಂತ ಪರಿಶುದ್ಧರಾಗಿರುವ ಕೃಷಿ ಕುಟುಂಬದ ಟಿ.ಬಿ.ಜಯಚಂದ್ರ ಅವರು ಹಿಂದುಳಿದ ಬುಡಕಟ್ಟು ಸಮಾಜವಾದ ಕುಂಚಿಟಿಗ ಜಾತಿಯನ್ನು ಪ್ರತಿನಿಧಿಸುತ್ತಿದ್ದು ಇವರನ್ನು ಒಕ್ಕಲಿಗ ಕೋಟಾದಡಿ ನೋಡದೇ ಕುಂಚಿಟಿಗ ಜಾತಿ ಕೋಟಾದಡಿ ಕ್ಯಾಬಿನೆಟ್ ದರ್ಜೆ ನೀಡಿ ಉತ್ತಮ ಖಾತೆ ನೀಡುವಂತೆ ಕುಂಚಿಟಿಗ ಸಂಘ ಸಂಸ್ಥೆಗಳು ಒತ್ತಾಯಿಸಿವೆ.
2013 ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಕುಂಚಿಟಿಗ ಸಮಾಜವು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದೆ. ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಹಾವೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಸೇರಿದಂತೆ ರಾಜ್ಯದ 17 ಜಿಲ್ಲೆಗಳ 40ಕ್ಕೂ ಹೆಚ್ಚಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕುಂಚಿಟಿಗ ಜಾತಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು ಬಹುತೇಕ ಕಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಲು ಕುಂಚಿಟಿಗ ಸಮಾಜದವರು ಸಹಕಾರಿಯಾಗಿದ್ದಾರೆ.
ಕಾಂಗ್ರೆಸ್ ಪಕ್ಷವು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಿದ್ದು ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. 2023ರ ವಿಧಾನಸಭೆಗೆ ಕೇವಲ ಒಬ್ಬ ಕುಂಚಿಟಿಗ ಜಾತಿಯ ಟಿ.ಬಿ.ಜಯಚಂದ್ರ ಅವರು ಆಯ್ಕೆಯಾಗಿದ್ದು ಇವರಿಗೆ ಡಿಸಿಎಂ ಅಥವಾ ಉತ್ತಮ ಖಾತೆಯನ್ನು ನೀಡಿ ಸಮಾಜಕ್ಕೆ ಶಕ್ತಿ ತುಂಬಬೇಕಾಗಿದೆ.

ಈಗಾಗಲೇ ಎರಡು ಬಾರಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಜಯಚಂದ್ರ ಅವರು ದಕ್ಷ, ಪ್ರಮಾಣಿಕ ಮತ್ತು ಪಾರದರ್ಶಕವಾಗಿ ಆಡಳಿತ ನೀಡುವ ಮೂಲಕ ಉತ್ತಮ ಹೆಸರುಗಳಿಸಿದ್ದಾರೆ.
ಉನ್ನತ ಶಿಕ್ಷಣ, ಕೃಷಿ, ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ, ಮುಜರಾಯಿ, ಪಶುಸಂಗೋಪನೆ ಸೇರಿದಂತೆ ಹಲವು ಖಾತೆಗಳನ್ನು ಸಮರ್ಥವಾಗಿ ಜಯಚಂದ್ರ ಅವರು ನಿಭಾಯಿಸಿದ್ದಾರೆ. ಅಷ್ಟೇ ಅಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಮತ್ತು ಸಿದ್ದರಾಮಯ್ಯನವರ ಜೊತೆ ವಿರೋಧ ಪಕ್ಷದ ಉಪ ನಾಯಕರಾಗಿ ಅತ್ಯಂತ ಸಮರ್ಥವಾಗಿ ಆಡಳಿತ ರೂಢ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ.
2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವರಾಗಿ ದಕ್ಷ ರೀತಿಯಲ್ಲಿ ಆಡಳಿತ ನೀಡಿದಲ್ಲದೆ ಸುಮಾರು 18 ಕ್ಯಾಬಿನೆಟ್ ಸಬ್ ಕಮಿಟಿಗಳ ಅಧ್ಯಕ್ಷರಾಗಿ, 4 ಕ್ಯಾಬಿನೆಟ್ ಸಬ್ ಕಮಿಟಿಗಳ ಉಪಾಧ್ಯಕ್ಷರಾಗಿ, ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಆಡಳಿತ ಮಾಡಿದ್ದಲ್ಲದೆ ಸಿದ್ದರಾಮಯ್ಯನವರ ಸರ್ಕಾರದ ಘನತೆ ದೊಡ್ಡ ಮಟ್ಟದಲ್ಲಿ ಹೆಚ್ಚಲು ಜಯಚಂದ್ರ ಅವರು ಪ್ರಮಾಣಿಕ ಸೇವೆ ಕೂಡಾ ಕಾರಣವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕೃಷ್ಣ ಕೊಳ ನೀರಾವರಿ ಸಮಿತಿ ರಚನೆ ಮಾಡಿಕೊಂಡು ನಿರಂತರವಾಗಿ ನೀರಾವರಿ ಯೋಜನೆಗಳಿಗಾಗಿ ಹೋರಾಟ ಮಾಡಿದ್ದಾರೆ. ಅಲ್ಲದೆ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎತ್ತಿನ ಹೊಳೆ ಯೋಜನೆಗಳನ್ನು ಚಿತ್ರದುರ್ಗ, ತಮಕೂರು ಸೇರಿದಂತೆ ಹಲವು ಬಯಲು ಸೀಮೆ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಕ್ಕಾಗಿ ಅನುಷ್ಠಾನ ಮಾಡಲು ಸಾಕಷ್ಟು ಶ್ರಮಿಸುವ ಮೂಲಕ ಬಯಲು ಸೀಮೆ ಇಂದು ಹಸಿರಿನಿಂದ ಕೂಡಿದೆ. ಅಲ್ಲದೆ ಸಣ್ಣ ನೀರಾವರಿ ಇಲಾಖೆಯಲ್ಲಿ ಜಯಚಂದ್ರ ಅವರು ಮಾಡಿದಂತಹ ನೂರಾರು ಬ್ಯಾರೇಜ್ ಕಂ ಚೆಕ್ ಡ್ಯಾಂಗಳ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಿದೆ ಎನ್ನುವುದನ್ನು ಮರೆಯುವಂತಿಲ್ಲ ಎಂದು ಅವರ ತಿಳಿಸಿದ್ದಾರೆ.
ಶಾಸಕ ಜಯಚಂದ್ರ ಅವರು 11 ಸಲ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 7 ಸಲ ಆಯ್ಕೆಯಾಗಿದ್ದಾರೆ. ಶಿರಾ ಉಪಚುನಾವಣೆ ಸೇರಿದಂತೆ ಮೂರು ಚುನಾವಣೆಯಲ್ಲಿ ಸೋತಿದ್ದ ಜಯಚಂದ್ರ ಈ ಬಾರಿ ಹೆಚ್ಚಿನ ಮತಗಳನ್ನು ಪಡೆದು ಆಯ್ಕೆಯಾಗುವ ಮೂಲಕ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹೀಗಾಗಿ ಸಹಜವಾಗಿ ಅವರಿಗೆ ಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಅವರು ಆಗ್ರಹ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳಸುವಲ್ಲಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಜಯಚಂದ್ರ ಅವರು ಮುಖ್ಯ ಪಾತ್ರವಹಿಸಿದ್ದಾರೆ. ಈ ಹಿಂದೆ ಎರಡು ಬಾರಿ ಸಚಿವ ಸ್ಥಾನರಾಗಿ ಯಾವುದೇ ಕಳಂಕ ಇಲ್ಲದೇ ಯಶಸ್ವಿಯಾಗಿ ನಿಭಾಯಿಸಿದ್ದು ಇವರ ಪಾರದರ್ಶಕ ಆಡಳಿತಕ್ಕೆ ಕೈಗನ್ನಡಿಯಾಗಿದೆ.
ರಾಜ್ಯದಲ್ಲಿ ಕುಂಚಿಟಿಗ ಸಮಾಜವು ಮುಖ್ಯವಾಹಿನಿಗೆ ತರಲು ಹಾಗೂ ರಾಜ್ಯದಲ್ಲಿರುವ ಕುಂಚಿಟಿಗ ಸಮಾಜದ ಸಮಗ್ರ ಅಭಿವೃದ್ದಿಗೆ ಸಹಕರಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿ.ಎಲ್‌.ಪಿ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಇವರಲ್ಲಿ ಕರ್ನಾಟಕ ರಾಜ್ಯ ಕುಂಚಿಟಿಗ ಮೀಸಲಾತಿ ಹೋರಾಟ ಮತ್ತು ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ.ಹೆಂಜಾರಪ್ಪ, ಅಖಿಲ ಕುಂಚಿಟಿಗ ಮಹಾ ಮಂಡಲ ರಾಜ್ಯಾಧ್ಯಕ್ಷ ರಂಗಹನುಮಯ್ಯ, ಮಾಜಿ ಅಧ್ಯಕ್ಷ ಕೆ.ಬಸವಾನಂದ, ಕುಂಚ ಪರಿವಾರದ ರಾಜ್ಯಾಧ್ಯಕ್ಷ ಶಿವಭದ್ರಯ್ಯ, ಕೌಶಲಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,

ಎಚ್.ಸತೀಶ್ ಕುಮಾರ್ ಮಂಡೇರ್ ಸೇರಿದಂತೆ ಮತ್ತಿತರರು ಈ ಮೂಲಕ ಒತ್ತಾಯಿಸಿದ್ದಾರೆ.

About The Author

Leave a Reply

Your email address will not be published. Required fields are marked *