
ಕುಂಚಿಟಿಗ ಮಠಕ್ಕೆ ಕಂಟಕವಾದ ಕರಡಿ, ಚಿರತೆ
ವರದಿ : ಕಾವೇರಿಮಂಜಮ್ಮನವರ್
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಹೊಸದುರ್ಗ :
ಪಟ್ಟಣದ ಹೊರ ಹೊಲಯದಲ್ಲಿರುವ ಶ್ರೀ ಜಗದ್ಗುರು ಕುಂಚಟಿಗ ಮಹಾ ಸಂಸ್ಥಾನ ಮಠದ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಬಿಟ್ಟು ಬಿಡದೆ ಚಿರತೆ ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯರಲ್ಲಿ ಆತಂಕ ಮೂಡಿದೆ.
ಶ್ರೀಮಠದ ಸುತ್ತಮುತ್ತ ಕಳೆದ ಬುಧುವಾರ, ಗುರುವಾರ ಜನಸಂದಣಿ ಇರುವ ಹೊತ್ತಿನಲ್ಲೆ ಚಿರತೆ, ಕರಡಿಗಳು ಪ್ರತ್ಯಕ್ಷವಾಗುತ್ತಿದ್ದು ಸ್ಥಳೀಯ ಸಾರ್ವಜನಿಕರು ವಾಯು ವಿಹಾರಕ್ಕೆ ಎಂದು ಮಠದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ ಎಂದು ಸ್ಥಳಿಯರು ತಿಳಿಸಿದರು.
ಮಠದ ಸಮೀಪ ಕಳೆದ ಒಂದು ವಾರದಿಂದ ಚಿರತೆ ಪ್ರತ್ಯಕ್ಷವಾಗಿ ಬಂಡೆಯ ಮೇಲೆ ಕೂತಿರುವಂತಹ ದೃಶ್ಯಗಳು ಕಂಡುಬರುತ್ತವೆ. ಕೆಲವು ಬಾರಿ ನಮ್ಮ ಮೊಬೈಲಿನಲ್ಲಿ ದೃಶ್ಯವನ್ನು ಕೂಡ ಸೆರೆಹಿಡಿದಿದ್ದೇವೆ. ಜನಸಂದೆಣಿ ಇರುವಂತಹ ಶ್ರೀಮಠಕ್ಕೆ ಅಕ್ಕ ಪಕ್ಕ ಇಂತಹ ವಾತಾವರಣವಿದ್ದಾಗ ಅರಣ್ಯ ಇಲಾಖೆ ಸೂಕ್ಷ್ಮವಾಗಿ ಕೆಲಸ ನಿರ್ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದಲ್ಲಿ ಇದುವರೆಗೂ ಯಾವುದೇ ಅನಾಹುತಗಳು ನಡೆಯದಂತೆ ಎಚ್ಚರವಹಿಸಿ ನಮ್ಮ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ.ಕೆಲವು ಸ್ಥಳಗಳು ಗುಡ್ಡಗಳ ಸಮೀಪವೇ ಇದ್ದ ಕಾರಣ ಕಾಡು ಪ್ರಾಣಿಗಳು ಗುಡ್ಡಗಾಡಿ ನಲ್ಲೆ ವಾಸಿಸಬೇಕು.
ಆದರೂ ನಿರಂತರವಾಗಿ ಕರಡಿ, ಚಿರತೆಗಳನ್ನು ಸೆರೆಹಿಡಿದು ಬೇರೆ ಕಾಡುಗಳಿಗೆ ಸುರಕ್ಷಿತವಾಗಿ ಬಿಡಲಾಗುತ್ತಿದೆ . ಕುಂಚಿಟಿಗ ಮಠದ ಹತ್ತಿರ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮಲ್ಲಿ ಬೋನ್ಗಳ ಕಡಿಮೆ ಇದ್ದು ಅತಿ ಅವಶ್ಯಕತೆ ಇರುವ ಜಾಗದಲ್ಲಿ ಅಳವಡಿಸಿ ಜನರ ಸುರಕ್ಷತೆಯನ್ನು ಕಾಪಾಡುತ್ತಿದ್ದೇವೆ. ಹೆಚ್ಚುವರಿ ಬೋನ್ಗಳಿಗಾಗಿ ಇಲಾಖೆಗೂ ಕೂಡ ಈಗಾಗಲೇ ಮನವಿ ಸಲ್ಲಿಸಿದ್ದೇವೆ ಎಂದು ಹೊಸದುರ್ಗ ಅರಣ್ಯ ಇಲಾಖೆ ಅಧಿಕಾರಿ ಸುನಿಲ್ ಕುಮಾರ್ ಮಾಹಿತಿ ನೀಡಿದರು.
