ಹೆಸರಿಗಷ್ಟೇ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ
ಶುದ್ಧ ಕುಡಿಯುವ ನೀರಿಗಾಗಿ ರೋಗಿಗಳ ಪರದಾಟ
ಶುದ್ಧ ನೀರಿನ ಘಟಕ ಕೆಟ್ಟು ನಿಂತರು ದುರಸ್ತಿ ಗೊಳಿಸದೆ ನಿದ್ದೆಗೆ ಜಾರಿದ ನಗರಸಭೆ ಅಧಿಕಾರಿಗಳು
ಸಂಪಾದಕರು: ಸಿ.ಎನ್.ಕುಮಾರ್,
ಚಿತ್ರದುರ್ಗ ಹೊಯ್ಸಳ ನ್ಯೂಸ್ /
ವರದಿ: ದ್ಯಾಮಕುಮಾರ್,
ಚಳ್ಳಕೆರೆ:
ನಗರದ ಹೃದಯ ಭಾಗದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹೆಸರಿಗಷ್ಟೇ ಶುದ್ಧ ಕುಡಿಯುವ ನೀರಿನ ಘಟಕವಾಗಿದ್ದು ಇದು ಕೆಟ್ಟು ನಿಂತು ತಿಂಗಳು ಕಳೆದರೂ ದುರಸ್ತಿ ಗೊಳಿಸದೆ ನಗರಸಭೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ.ಇದರಿಂದ ದಿನ ನಿತ್ಯ ಆಸ್ಪತ್ರೆಗೆ ಬರುವ ರೋಗಿಗಳು ಕುಡಿಯುವ ನೀರಿಗಾಗಿ ದಿನನಿತ್ಯ ಪರದಾಟ ನೆಡೆಸುವ ಜೊತೆಗೆ ಹೋಟೆಲ್ ಹಾಗೂ ಬೇಕರಿ ಅಂಗಡಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ಇರುವುದರಿಂದ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ರೋಗಿಗಳು ಆಸ್ಪತ್ರೆಗೆ ಬಂದು ಹೋಗುತ್ತಿದ್ದು ಆಸ್ಪತ್ರೆಗೆ ಬರುವವರು ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ.
ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಅನುಕೂಲಕ್ಕಾಗಿ ನಗರಸಭೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದ್ದು ಕೇವಲ ಹೆಸರಿಗೆ ನಿರ್ಮಾಣ ಮಾಡಿದ್ದಾರೆ ಎಂಬಂತಾಗಿದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಒಳ ಹಾಗು ಹೊರರೋಗಿಗಳು ಕುಡಿಯುವ ನೀರು ಬೇಕಾದಲ್ಲಿ ಆಸ್ಪತ್ರೆ ಮುಂಬಾಗದ ಫುಟ್ಪಾತ್ ಹೋಟೆಲ್ ಹಾಗೂ ಬೇಕರಿಗಳಲ್ಲಿ ದೊರೆಯುವ ಬಾಟಲ್ ನೀರಿಗೆ ಹಣತೆತ್ತು ತರಬೇಕಾದ ಪರಿಸ್ಥಿತಿ ಇರುವುದರಿಂದ ರೋಗಿಗಳ ಸಂಬಂಧಿಕರು ದಿನನಿತ್ಯ 100ರಿಂದ 200 ರೂ ಗಳವರೆಗೆ ಕೇವಲ ನೀರಿಗಾಗಿ ಭರಿಸುವ ಸ್ಥಿತಿ ತಾಲ್ಲೂಕು ಆಸ್ಪತ್ರೆಯಲ್ಲಿ ನಡೆಯುತ್ತಿದೆ.
ಇದರ ಜೊತೆಗೆ ರಾತ್ರಿ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಮತ್ತು ಅವರ ಜೊತೆಯಲ್ಲಿ ಇರುವವರಿಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲದೆ ಪಾರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ರಾತ್ರಿ ಸಮಯದಲ್ಲಿ ಹೋಟೆಲ್ ಗಳು ಬಂದ್ ಆಗಿದ್ದಾಗ ರೋಗಿಗಳು ಮಾತ್ರೆ ನುಂಗಲು ಹಾಗೂ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ರೋಗಿಗಳು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗುವ ರೋಗಿಗಳಿಗೆ ಹೆರಿಗೆಯ ಬಳಿಕ ಕುಡಿಯಲು ಹಾಗೂ ಬಳಸಲು ಬಿಸಿ ನೀರಿನ ಅಗತ್ಯತೆ ಇದೆ ಬಾಣಂತಿಯರಿಗೆ ಬಿಸಿ ನೀರಿಗಾಗಿ ಯಾವುದೇ ವ್ಯವಸ್ಥೆ ಆಸ್ಪತ್ರೆಯಲ್ಲಿ ಇಲ್ಲದಿರುವುದರಿಂದ ಬಿಸಿನೀರಿಗೂ ಹೋಟೆಲ್ ಗಳನ್ನು ಆಶ್ರಯಿಸಬೇಕಾಗಿದ್ದು ಹೋಟೆಲ್ ಗಳಲ್ಲಿ ಗಂಜಿ ಹಾಗೂ ಬಿಸಿನೀರಿಗಾಗಿ ರೋಗಿಗಳು ದುಪ್ಪಟ್ಟು ಹಣ ನೀಡಬೇಕಾಗಿದೆ.
ಆಸ್ಪತ್ರೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಪದೇ ಪದೇ ಕೆಟ್ಟು ಹೋಗುತ್ತಿದ್ದು ಸರಿಯಾದ ನಿರ್ವಹಣೆ ಮಾಡದೆ ಇರುವುದರಿಂದ ರೋಗಿಗಳಿಗೆ ಅನಾನುಕೂಲ ಉಂಟಾಗುತ್ತಿದ್ದು ದಿನನಿತ್ಯ ರೋಗಿಗಳು ಕುಡಿಯುವ ನೀರು ಸಿಗದೇ ನಗರಸಭೆ ಸಿಬ್ಬಂದಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಪಡಿಸಿ ರೋಗಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಿ ಕೊಡುವರೆ ಎಂದು ಕಾದುನೋಡಬೇಕಿದೆ.
