ಅವೈಜ್ಞಾನಿಕ ಬೆಳೆ ಸಮೀಕ್ಷೆಯಿಂದ ಬೆಳೆ ಪರಿಹಾರ ವಿಮೆಯಿಂದ, ವಂಚಿತ ರೈತರು ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ
ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವರದಿಯಿಂದ ರೈತರಿಗೆ ಅನ್ಯಾಯ: ಸಿ ಶಿವಲಿಂಗಪ್ಪ
ಚಿತ್ರದುರ್ಗ ಹೊಯ್ಸಳ ನ್ಯೂಸ್/
ಚಳ್ಳಕೆರೆ:
ತಾಲ್ಲೂಕಿನಲ್ಲಿ 2023-24ನೇ ವರ್ಷದಲ್ಲಿ ಐದಾರು ದಶಕಗಳು ಕಂಡರಿಯದಂತಹ ಭೀಕರ ಕ್ಷಾಮ ತಲೆದೋರಿದ್ದರಿಂದ ಚಳ್ಳಕೆರೆ ತಾಲ್ಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದರು ಸಹ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ಅವೈಜ್ಞಾನಿಕ ಬೆಳೆ ಸಮೀಕ್ಷೆಯಿಂದ ಬೆಳೆ ಪರಿಹಾರ ವಿಮೆಯಿಂದ, ವಂಚಿತರಾದ ರೈತರು ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದೇವೆ ಎಂದು ಶೇಂಗಾ ತೊಗರಿ ಬೆಳೆ ಸಂಘದ ಅಧ್ಯಕ್ಷ ಸಿ ಶಿವಲಿಂಗಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಕನಿಷ್ಟ ಮಳೆ ಸುರಿಯದೆ, ಅತೀ ಹೆಚ್ಚು ಅನಾವೃಷ್ಟಿಯಿಂದಾಗಿ ಮುಂಗಾರು ಹಂಗಾಮಿನ ಮಳೆಯಾಶ್ರಿತ ಶೇಂಗಾ, ತೊಗರಿ ಮುಂತಾದ ಎಲ್ಲಾ ಬೆಳೆಗಳ ಎದೆ ಒಣಗಿ ನೆಲ ಕಚ್ಚಿವೆ ಎಂದು ಕೃಷಿ ಸಚಿವರು ಬರ ವೀಕ್ಷಿಸಿದ ಸಂದರ್ಭದಲ್ಲಿ ದಾಖಲಿಸಿರುವ ವರದಿಯಿಂದ ಬರಗಾಲಗೋಷಣೆ ಮಾಡಿ ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳಲ್ಲಿ ಮಳೆಯಾಶ್ರಿತ ಶೇಂಗಾ ಬೆಳೆ ನಷ್ಟವಾದ ವಾಸ್ತವ ವರದಿ ನೀಡಿದ್ದರಿಂದ ವಿಮೆ ಹಣ ಬಂದಿದೆ. ಆದರೆ, ಸೋಮಗುದ್ದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಶೇಂಗಾ ಬೆಳೆ ನಷ್ಟವಾಗಿಲ್ಲವೆಂದು ನಿರ್ಲಕ್ಷ್ಯ ಧೋರಣೆಯಿಂದ ಅಧಿಕಾರಿಗಳು ವರದಿ ನೀಡಿದ್ದರಿಂದ ಬೆಳೆ ವಿಮೆ ಬಂದಿರುವುದಿಲ್ಲ.
ತಾಲ್ಲೂಕಿನ ತಳಕು. ನಾಯಕನಹಟ್ಟಿ, ಪರಶುರಾಂಪುರ ಹೋಬಳಿಗಳಲ್ಲಿ ಮಳೆಯಾಶ್ರಿತ ತೊಗರಿ ಬೆಳೆ ನಷ್ಟವಾದ ವಾಸ್ತವ ವರದಿ ನೀಡಿದ್ದರಿಂದ ವಿಮೆ ಹಣ ಬಂದಿದೆ. ಆದರೆ ತಾಲ್ಲೂಕಿನ ಕಸಬಾ ಹೋಬಳಿಯ ವ್ಯಾಪ್ತಿಯಲ್ಲಿ ತೊಗರಿ ಬೆಳೆ ನಷ್ಟವಾಗಿಲ್ಲವೆಂಬ ವರದಿಯನ್ನು ಅಧಿಕಾರಿಗಳು ನೀಡಿದ್ದರಿಂದ ಬೆಳೆ ವಿಮೆ ಬಂದಿರುವುದಿಲ್ಲ. ಇದರಿಂದ 2593 ರೈತರಿಗೆ ಅನ್ಯಾಯವಾಗಿದೆ ಎಂದು ರೈತರ ಮನವಿಗೆ ಜಿಲ್ಲಾಧಿಕಾರಿಗಳು,ಚಳ್ಳಕೆರೆ ತಾಲ್ಲೂಕಿನ ತಳಕು, ನಾಯಕನಹಟ್ಟಿ, ಪರಶುರಾಂಪುರ ಹೋಬಳಿಗಳಲ್ಲಿ ಕನಿಷ್ಟ ಮಳೆ ದಾಖಲಾಗಿರುವಂತೆ, ಕಸಬಾ ಹೋಬಳಿಯಲ್ಲೂ ಕನಿಷ್ಠ ಮಳೆ ದಾಖಲಾಗಿದೆ. ಹೆಚ್ಚಿನ ಮಳೆ ಬಂದಿರುವುದಿಲ್ಲ ಮತ್ತು ಸೋಮುಗುದ್ದು ಗ್ರಾಮ ಪಂಚಾಯಿತಿಯಲ್ಲೂ ಇನ್ನುಳಿದ 39 ಗ್ರಾಮ ಪಂಚಾಯಿತಿಗಳಂತೆ ಕನಿಷ್ಟ ಮಳೆ ಬಂದಿದೆ. ಆದ್ದರಿಂದ ಚಳ್ಳಕೆರೆ ತಾಲ್ಲೂಕಿನ ಸೋಮಗುದ್ದು ಪಂಚಾಯಿತಿ ವ್ಯಾಪ್ತಿಯ ಮಳೆಯಾಶ್ರಿತ ಶೇಂಗಾ ಮತ್ತು ಚಳ್ಳಕೆರೆ ಕಸಬಾ ಹೋಬಳಿ ವ್ಯಾಪ್ತಿಯ ಮಳೆಯಾಶ್ರಿತ ತೊಗರಿ ಬೆಳೆಗಳಿಗೆ ಚಳ್ಳಕೆರೆ ತಾಲ್ಲೂಕಿನ ಉಳಿದ ಗ್ರಾಮ ಪಂಚಾಯಿತಿಗಳ ಮತ್ತು ಹೋಬಳಿಗಳ ಸರಾಸರಿ ಇಳುವರಿಯನ್ನು ಪರಿಗಣಿಸಿ ನಿಯಮಾನುಸಾರ ಮರು ಪರಿಶೀಲಿಸಲು ಆದೇಶಿಸಿದ್ದರು.
ಕಸಬಾ ಹೋಬಳಿಯ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಳೆಯಾಶ್ರಿತ ತೊಗರಿ ಬೆಳೆಯನ್ನು ಅಧಿಕಾರಿಗಳು ಸಮೀಕ್ಷೆ ಮಾಡಿರುವ 10 ಜಮೀನುಗಳಿಗೆ ರೈತರು ಖುದ್ದಾಗಿ ಹೋಗಿ ಪರಿಶೀಲಿಸಿದಾಗ ಕಂಡು ಬಂದ ವಾಸ್ತವ ಸಂಗತಿ -ಕನಿಷ್ಠ ಮಳೆ ಇಲ್ಲದೆ ಬೆಳೆ ಒಣಗುತ್ತಿರುವಾಗ ಕೆಲವರು ನೀರಿನ ವೆಚ್ಚ ಭರಿಸಿ, ಪಕ್ಕದ ಜಮೀನನಲ್ಲಿರುವ ಕೊಳವೆ ಬಾವಿಯ ನೀರಿನಿಂದ ಉತ್ತಮವಾಗಿ ಬೆಳೆದ ತೊಗರಿ ಹೊಲಗಳಲ್ಲಿ ಅಧಿಕಾರಿಗಳು 4 ಕಡೆ ಬೆಳೆ ಕಟಾವು ಪ್ರಯೋಗ ಮಾಡಿ ಬೆಳೆ ನಷ್ಟವಾಗಿಲ್ಲವೆಂದು ಅವೈಜ್ಞಾನಿಕ ವರದಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಸಬಾ ಹೋಬಳಿ ವ್ಯಾಪ್ತಿಯ ಮಳೆ ಆಶ್ರಿತ ತೊಗರಿ ಮತ್ತು ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆ ಆಶ್ರಿತ ಶೇಂಗಾ ಬೆಳೆಗಳಲ್ಲಿ 16 ತಾಕುಗಳನ್ನು ಬೆಳೆ ಕಟಾವು ಪ್ರಯೋಗಗಳಿಗೆ ಆಯ್ಕೆ ಮಾಡಿಕೊಳ್ಳದೆ, ನೀರಿನ ನೆರವಿನಿಂದ ಬೆಳೆದ 9 ಜಮೀನಿನ ಬೆಳೆಗಳನ್ನು ಬೆಳೆ ಸಮೀಕ್ಷೆ ಮಾಡಿದ್ದರಿಂದ ಬೆಳೆ ವಿಮೆ ಬಂದಿರುವುದಿಲ್ಲ. ಆದ್ದರಿಂದ ಪರಿಶೀಲಿಸಿ ಬೆಳೆ ವಿಮೆದಾರರಿಗೆ ನಷ್ಟ ಪರಿಹಾರವನ್ನು ಕೊಡಿಸಿಕೊಡಲು ಶೇಂಗಾ ತೊಗರಿ ಬೆಳೆ ಸಂಘದ ಪದಾಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ವಾಸ್ತವ ಸ್ಥಿತಿಗತಿ ತಿಳಿದಾಗ ವಿಶ್ವೇಶ್ವರ ಪುರದ ಲೋಕೇಶ್ ಅವರ ಪಾಳು ಜಮೀನಿಗೆ ತೊಗರಿ ಸಮೀಕ್ಷೆ ನಡೆಸಿದ್ದಾರೆ ಪುಟ್ಟಮ್ಮ, ಲೋಳಕ್ಷಮ್ಮ ಅವರು ತೊಗರಿ ಬಿತ್ತನೆ ಮಾಡಿದ್ದರು ಆದರೆ ಸಮೀಕ್ಷೆಯಲ್ಲಿ ಈರುಳ್ಳಿ ಶೇಂಗಾ ಮಾಡಿದ್ದಾರೆ ಎಂದು ರೈತರು ತಿಳಿಸಿದ್ದು. ಅನ್ಯಾಯ ಆದ ರೈತರು ನ್ಯಾಯ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದೇವೆ ಇಲ್ಲಿ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ್, ಪ್ರಕಾಶ್ ಒಡೆಯರ್ ವಕೀಲರು,ಭರತೇಶ ರೆಡ್ಡಿ ಕರಿಕೆರೆ, ವಿಡಪಾನ ಕುಂಟೆ ಸಿದ್ದೇಶ ರೆಡ್ಡಿ, ದಯಾನಂದ ಮೂರ್ತಿ, ಗೊಪನಹಳ್ಳಿ ರಂಗಸ್ವಾಮಿ, ವಿ ವೀರಣ್ಣ, ಎಲ್. ಐ. ಸಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
