ಚಕ್ರಗಳೇ ಇಲ್ಲದ ಬಸ್‌ಗೆ ಫಿಟ್‌ನೆಸ್! ಸಾರಿಗೆ ಇಲಾಖೆಯೊಳಗಿನ ಸಂಧಿ ಬಯಲು ಮಾಡಿದ ದಾಖಲೆ
ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ:
ರಸ್ತೆಗೆ ಇಳಿಯುವ ಸಾಧ್ಯತೆಯೇ ಇಲ್ಲದ, ಚಕ್ರಗಳೇ ಇಲ್ಲದ ಖಾಸಗಿ ಬಸ್‌ಗೆ ಅಧಿಕೃತವಾಗಿ ಫಿಟ್‌ನೆಸ್ ಪ್ರಮಾಣ ಪತ್ರ ನೀಡಲಾಗಿದೆ ಎಂಬ ಆಘಾತಕಾರಿ ಪ್ರಕರಣ ಸಾರಿಗೆ ಇಲಾಖೆಯೊಳಗಿನ ಭ್ರಷ್ಟಾಚಾರ, ಸಂಧಿ ಹಾಗೂ ಕರ್ತವ್ಯಲೋಪ ಬಹಿರಂಗವಾಗಿದೆ.
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮದ ವಿಶ್ವಭಾರತಿ ಶಾಲೆಯ ಆವರಣದಲ್ಲಿ ಕಳೆದ ಎರಡು ವರ್ಷಗಳಿಂದ ನಿಂತಿರುವ ಕೆಎ–16–8346 ಸಂಖ್ಯೆಯ ಖಾಸಗಿ ಬಸ್, ಆರ್‌ಸಿ ಸೆರೆಂಡರ್ ಸ್ಥಿತಿಯಲ್ಲಿದ್ದು ಸಂಪೂರ್ಣ ದುಸ್ಥಿತಿಯಲ್ಲಿದೆ. ವಾಹನದ ಚಕ್ರಗಳೇ ಇಲ್ಲ, ರಸ್ತೆ ಸಂಚಾರಕ್ಕೆ ಬರದ ವಾಹನಕ್ಕೆ ದಿ 28-12-2025 ರಂದು ಕೋಲಾರ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಫಿಟ್‌ನೆಸ್ ನೀಡಲಾಗಿದೆ ಎನ್ನುವುದು ಅಚ್ಚರಿ ಮಾತ್ರವಲ್ಲ, ಆತಂಕಕಾರಿ ಸಂಗತಿಯಾಗಿದೆ.
ಈ ಪ್ರಕರಣದಲ್ಲಿ ಮತ್ತಷ್ಟು ಗಂಭೀರ ಅಂಶವೆಂದರೆ, ಚಿತ್ರದುರ್ಗ ಮೋಟಾರ್ ವಾಹನ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರೂ, ಆ ವರದಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿ ಫಿಟ್‌ನೆಸ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದೆ ಇದು ಸರಳ ನಿಯಮ ಉಲ್ಲಂಘನೆಯಲ್ಲ ಅಧಿಕಾರಿಗಳ ಸಂಧಿಯಿಲ್ಲದೆ ಇಂತಹ ಪ್ರಮಾಣ ಪತ್ರ ಹೊರಬರಲು ಸಾಧ್ಯವೇ ಇಲ್ಲ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಫಿಟ್‌ನೆಸ್ ನೀಡಿದ ವೇಳೆ ಬಸ್ ಸ್ಥಳದಲ್ಲೇ ಪರಿಶೀಲನೆ ನಡೆಸಲಾಯಿತೇ? ಪರಿಶೀಲನೆ ನಡೆಸಿದ ಅಧಿಕಾರಿಗಳು ಯಾರು? ದಾಖಲೆಗಳಲ್ಲಿ ಸುಳ್ಳು ಮಾಹಿತಿ ನಮೂದಿಸಲಾಗಿದೆಯೇ? ಎಂಬ ಪ್ರಶ್ನೆಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ. ಉತ್ತರಿಸಬೇಕಾದವರು ಮಾತ್ರ ಮೌನ ವಹಿಸಿರುವುದು ಅನುಮಾನವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಈ ಕುರಿತು ಚೌಳೂರು ಗ್ರಾಮದ ಪ್ರವೀಣ್ ಕುಮಾರ್ ಅವರು, ಇದು ಸಾರ್ವಜನಿಕರ ಜೀವದೊಂದಿಗೆ ಆಟವಾಡುವ ಕೃತ್ಯ. ತಪ್ಪಿತಸ್ಥ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ, ಕಾನೂನು ರೀತಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಾರಿಗೆ ಇಲಾಖೆಯ ಮೇಲಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ದಾಖಲೆಗಳ ಪರಿಶೀಲನೆ, ಸ್ಥಳೀಯ ಅಧಿಕಾರಿಗಳ ವಿಚಾರಣೆ ಹಾಗೂ ಫಿಟ್‌ನೆಸ್ ನೀಡಿದ ಪ್ರಕ್ರಿಯೆಯ ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
