May 20, 2024

Chitradurga hoysala

Kannada news portal

ಮುಜರಾಯಿ ತಹಶೀಲ್ದಾರ್ ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು:

1 min read

ಮುಜರಾಯಿ  ಧಾರ್ಮಿಕ ದತ್ತಿ ತಹಶೀಲ್ದಾರ್ ವೆಂಕಟೇಶ್,- ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು:

ನ್ಯಾಯಾಲಯದ ವಿಚಾರಣೆಗೆ ಕಡತ ಮಂಡಿಸದೇ ಕರ್ತವ್ಯ ಲೋಪ:

ಚಿತ್ರದುರ್ಗ ಹೊಯ್ಸಳ ನ್ಯೂಸ್/

ಚಿತ್ರದುರ್ಗ:
ಚಳ್ಳಕೆರೆ ತಾಲ್ಲೂಕು ಗೌರಸಮುದ್ರ ಮಾರಮ್ಮ ದೇವಾಲಯಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ನ್ಯಾಯಾಲಯದ ವಿಚಾರಣೆಗೆ ಮಂಡಿಸದೆ ಕರ್ತವ್ಯ ಲೋಪವೆಸಗಿರುವ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ಅವರ ವಿರುದ್ಧ ಅಕ್ಟೋಬರ್ 11 ರಂದು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ಪತ್ರಾಂಕಿತ ಸಹಾಯಕರಾದ ಸಂತೋಷ್ ಕುಮಾರ್ ಜಿ. ಅವರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿಗೆ ಅನುಗುಣವಾಗಿ ಎಫ್‍ಐಆರ್ ದಾಖಲಾಗಿದೆ. ಗೌರಸಮುದ್ರ ಮಾರಮ್ಮ ದೇವಾಲಯದ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಕರಣದ ಕಡತವು ಜಿಲ್ಲಾಧಿಕಾರಿ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಕಚೇರಿಯಲ್ಲಿ ಇರುತ್ತದೆ. ಇವರು ಕಡತವನ್ನು 2023ರ ಸೆಪ್ಟೆಂಬರ್ 08 ರಂದು ಹಾಗೂ ಸೆಪ್ಟೆಂಬರ್ 27 ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ವಿಚಾರಣೆಗೆ ಹಾಜರುಪಡಿಸಿರುವುದಿಲ್ಲ. ನ್ಯಾಯಾಲಯದ ವಿಚಾರಣೆಗೆ ಕಡತವನ್ನು ಹಾಜರು ಪಡಿಸದ ಕಾರಣ 2023 ರ ಸೆಪ್ಟೆಂಬರ್ 30 ರಂದು ಜಿಲ್ಲಾಧಿಕಾರಿಗಳು ಕಾರಣ ಕೇಳಿ ನೋಟೀಸ್ ಅನ್ನು ಜಾರಿ ಮಾಡಿದ್ದರು. ಅದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಮುಂದಿನ ವಿಚಾರಣೆ ಒಳಗಾಗಿ ಕತಡವನ್ನು ಹಾಜರುಪಡಿಸುತ್ತೇವೆ ಎಂಬುದಾಗಿ ಉತ್ತರ ನೀಡಿದ್ದರು. ಪ್ರಕರಣವು 2023ರ ಅಕ್ಟೋಬರ್ 11ರಂದು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿ, ಅಧಿಕಾರಿ, ಸಿಬ್ಬಂದಿ ಕಡತವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಿಲ್ಲ. ವಾದಿಗಳ ಪರ ವಕೀಲರು ವಕಾಲತನ್ನು ವಹಿಸಿದ್ದು, ವಕೀಲರು ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು, ಆದರೆ, ನ್ಯಾಯಾಲಯದ ಬೆಂಚ್ ಕ್ಲರ್ಕ್ ಅವರು ನ್ಯಾಯಾಲಯದಲ್ಲಿ ಕಡತ ಸಲ್ಲಿಸಿಲ್ಲ ಎಂಬುದಾಗಿ ತಿಳಿಸಿದ್ದು, ಜಿಲ್ಲಾಧಿಕಾರಿಗಳು ಸಿಬ್ಬಂದಿಗೆ ಕಡತದ ಬಗ್ಗೆ ವಿಚಾರಣೆ ಮಾಡಲಾಗಿ ಸಿಬ್ಬಂದಿಯವರು ಕಡತವು ಕಳೆದುಹೋಗಿರುತ್ತದೆ ಎಂದು ತಿಳಿಸಿರುತ್ತಾರೆ.

ಸಿಬ್ಬಂದಿಯವರು ನ್ಯಾಯಾಲಯದ ವಿಚಾರಣೆ ದಿನ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಗೌರಸಮುದ್ರ ಮಾರಮ್ಮ ದೇವಾಲಯದ ಪ್ರಕರಣದ ಕಡತ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಪ್ರಕರಣದ ಕಡತವನ್ನು ಹಾಜರುಪಡಿಸಿ, ಪ್ರಕರಣದ ಸಂಬಂಧ ವಾಸ್ತವಾಂಶದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ಸಿಬ್ಬಂದಿಯ ಕರ್ತವ್ಯವಾಗಿದ್ದು, ನ್ಯಾಯಾಲಯಕ್ಕೆ ಕಡತ ಹಾಜರುಪಡಿಸದೇ, ತಮ್ಮ ಸುಪರ್ದಿಯಲ್ಲಿದ್ದ ಕಡತವನ್ನು ಕಳೆದು ಹಾಕಿ, ಪಕ್ಷಗಾರರ, ನ್ಯಾಯವಾದಿಗಳಿಗೆ ತೊಂದರೆಯನ್ನುಂಟು ಮಾಡಿ, ತಮ್ಮ ಕರ್ತವ್ಯದಲ್ಲಿ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ತೋರಿರುವುದು ಅಪರಾಧವಾಗಿರುತ್ತದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಜರಾಯಿ ಶಾಖೆಯ ಧಾರ್ಮಿಕ ದತ್ತಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ವೀರಭದ್ರಪ್ಪ ಅವರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
========

About The Author

Leave a Reply

Your email address will not be published. Required fields are marked *