April 20, 2024

Chitradurga hoysala

Kannada news portal

ತ್ಯಾಗಮೂರ್ತಿ ವ್ಯಕ್ತಿತ್ವದ ನಿಜಲಿಂಗಪ್ಪ … : ಎಸ್• ಎನ್ ರ ಬದುಕಿನ ಮೈಲುಗಲ್ಲುಗಳು 

1 min read

ತ್ಯಾಗಮೂರ್ತಿ ವ್ಯಕ್ತಿತ್ವದ ನಿಜಲಿಂಗಪ್ಪ …

ಚಿತ್ರದುರ್ಗ ಹೊಯ್ಸಳ ನ್ಯೂಸ್/ ವೆಬ್ ವರದಿ: ಸಿ.ಕೆ.ಭರತ್ ಭಾರ್ಗವ,

ಇದೇ ಡಿಸೆಂಬರ್ ೧೦ರ ಭಾನುವಾರ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ನಿಜಲಿಂಗಪ್ಪ ಅವರ ೧೨೧ ಜನ್ಮದಿನ., ಪ್ರಸ್ತುತ ಕರ್ನಾಟಕ ಸುವರ್ಣ ಸಂಭ್ರಮ ವರ್ಷ,ಅದರ ಪ್ರಥಮ ಮುಖ್ಯ ಮಂತ್ರಿಗಳು,. ಕರ್ನಾಟಕ ಏಕೀಕರಣಕ್ಕೆ ಹೋರಾಟ ನಡೆಸಿದವರಲ್ಲಿ ಪ್ರಮುಖರು ಆಗಿರುವುದರಿಂದ ‘ರಾಷ್ಟ್ರ ನೇತಾರ’ ಕೃತಿಯಲ್ಲಿನ ಬಿ.ಪುಟ್ಟಸ್ವಾಮಯ್ಯ ಅವರ ಎಸ್ .ಎನ್.ಜೀವನ ದರ್ಶನ ಲೇಖನದ ಆಯ್ದ ಭಾಗವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ.

ರುದ್ರಮೂರ್ತಿ. ಎಂ.ಜೆ
*****
ತ್ಯಾಗಮೂರ್ತಿ ವ್ಯಕ್ತಿತ್ವದ ನಿಜಲಿಂಗಪ್ಪ …

ಹಲವು ವರ್ಷಗಳ ದೀರ್ಘ ತಪಸ್ಸು ಸಿದ್ದಿಸಿದ ಸಾಧಕ .ತನ್ನ ಕನಸನ್ನೆಲ್ಲ ಅಲ್ಪಕಾಲದಲ್ಲೇ ಆಗಗೊಳಿಸುವ ಅನಂತ ಉತ್ಸಾಹದಿಂದ ಮುನ್ನಡೆಯುವುದು ಸ್ವಾಭಾವಿಕ. ಆಗ ಆ ರಥದ ವೇಗವನ್ನು ಅನುಸರಿಸಲಾಗದವರು ಹಿಂದುಳಿಯುವುದೂ, ಕೆಲವೊಮ್ಮೆ ರಥವನ್ನು
ಹಿನ್ನೆಳೆಯಲೆತ್ನಿಸುವುದೂ,ಅದಾಗದಾಗ ವೇಗವನ್ನೇ ಖಂಡಿಸುವುದೂ ವಾಸ್ತವ.ಅದು ಕಾಲಧರ್ಮ.
ಅದಕ್ಕೆ ಅಪವಾದನೆನಿಸದಂತೆ ,ಅಖಂಡ ಕರ್ನಾಟಕ ಮಹಾರಥವನ್ನು ಮುನ್ನಡೆಸುತ್ತಿದ್ದ ನಾಡ ಮಹಾರಥಿ ನಿಜಲಿಂಗಪ್ಪನವರು ಹದಿನೆಂಟು ತಿಂಗಳ ಕಾಲ ಮುನ್ನಡೆದ ತಮ್ಮ ರಾಜ್ಯ ರಥವು ಜಗ್ಗುತ್ತಿರುವುದನ್ನು ಕಂಡರು. ಕಾಣದ ಕೈ ತನ್ನನ್ನು ಎಚ್ಚರಿಸುತ್ತಿದೆ ಎಂದು ಆ ಸಾಧಕ ಅರಿತರು.
ರಥವನ್ನೇರಿದ ನಿಷ್ಕಾಮ ಕರ್ಮಯೋಗಿ ಅದೇ ಭಾವನೆಯಿಂದ ರಥದಿಂದಿಳಿದರು.ಗೀತಾಚಾರ್ಯನ ಸಂದೇಶವನ್ನು ಕೃತಿಗಿಳಿಸಿದರು.
ವಿಶಾಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಪದವಿಗೆ ನಿಜಲಿಂಗಪ್ಪನವರು ರಾಜೀನಾಮೆ ಕೊಟ್ಟರು. ಅಧಿಕಾರ ಸ್ವೀಕಾರದಷ್ಟೇ ಗಂಭೀರವಾಗಿ ಅಧಿಕಾರವನ್ನು ತ್ಯಜಿಸಿದ ನಿಜಲಿಂಗಪ್ಪನವರ ನಿಲುವು ಚಿರಸ್ಮರಣೀಯ ಆದರ್ಶ, ಮಹೋನ್ನತ ಉದಾಹರಣೆ.
ಜನಸೇವೆಯೇ ಬಾಳ ಗುರಿಯಾದ ಅವರಿಗೆ ಜನತೆಯಲ್ಲಿ ಇನ್ನೂ ಅಧಿಕವಾಗಿ ಬೆರೆತು ದುಡಿಯುವ ಬಾಳಿನ ಅವಕಾಶ ದೊರೆಯಿತೆಂದು ಆನಂದವಾಗಿತ್ತು.
ದಿನಾಂಕ ೧೬•೬•೫೮ ರಲ್ಲಿ ಶ್ರೀ. ಜತ್ತಿಯವರಿಗೆ ಅಧಿಕಾರ ವಹಿಸಿಕೊಟ್ಟ ಮೇಲೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ನಿಜಲಿಂಗಪ್ಪನವರು ಆಡಿದ ನುಡಿಗಳು ಅವರ ಸದಿಚ್ಛೆ, ಸ್ವಾರ್ಥತ್ಯಾಗ, ಸೇವಾ ಮನೋಭಾವಗಳನ್ನು ವ್ಯಕ್ತಪಡಿಸುತ್ತವೆ .
ಮೇ ೧೬- ಕರ್ನಾಟಕ ಉದಯವಾದ ಮೇಲೆ ಒಂದೂವರೆ ವರ್ಷಕಾಲ ನೂತನ ರಾಜ್ಯದ ಆಡಳಿತವನ್ನು ನಿರ್ವಹಿಸಿ ಭದ್ರವಾದ ಬುನಾದಿಯನ್ನು ಹಾಕಿದ್ದೇವೆ ಎಂದು ಹೆಮ್ಮೆಯೊಡನೆ ಇಂದಿನಿಂದ ಅಧಿಕಾರ ಸ್ಥಾನವನ್ನು ಬಿಟ್ಟುಕೊಟ್ಟ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಈ ಉತ್ತಮ ಕಾರ್ಯವನ್ನು ಮುಂದುವರೆಸಲು ನೀವು ಸಹಾಯ ಮಾಡಬೇಕು ಎಂದು ರಾಜ್ಯದ ಜನತೆಯನ್ನು ಪ್ರಾರ್ಥಿಸಿದರು.
ದೆಹಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿ ಹಿಂದಿರುಗಿದ್ದ ಅವರು ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಗುಂಪೊಂದಿದೆಯೆಂಬ ಎಂಬ ಆಪಾದನೆಯನ್ನು ನಿರಾಕರಿಸಿ, ಇವೆಲ್ಲಕ್ಕಿಂತ ಮಿಗಿಲಾಗಿ ರಾಜ್ಯದಲ್ಲಿ ಸುಭದ್ರ ಸರ್ಕಾರ ಸ್ಥಾಪಿಸಬೇಕೆಂಬ ಇಚ್ಛೆಯೇ ರಾಜೀನಾಮೆಯ ಕಾರಣವೆಂದು ಸ್ಪಷ್ಟಪಡಿಸಿದರು.
ಈ ರಾಜೀನಾಮೆಯ ಸುದ್ದಿ ಕೇಳಿ ಕೇಂದ್ರ ಸರ್ಕಾರ ಬೆರಗಾಯಿತು ನಿಜಲಿಂಗಪ್ಪನವರ ಸೇವೆಯನ್ನು ಕಾತುರದಿಂದ ಪ್ರತೀಕ್ಷಿಸುತ್ತಿದ್ದ ಕನ್ನಡ ಜನತೆ ತಲ್ಲಣಿಸಿತು. ಜನತೆ ಇಂತಹ ಅನುಪಮ ತ್ಯಾಗದ ಸೇವೆಯನ್ನು ಪಡೆಯಲಾರದೆ ಹೋದ ಕನ್ನಡಿಗರ ದೌರ್ಭಾಗ್ಯವನ್ನು ಕಂಡು ನೊಂದರು. ಸಾಂತ್ವನಪರ ಸಂದೇಶಗಳ ಸುರಿಮಳೆಯೇ ಆಯಿತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಪತ್ರಿಕೆಗಳಾದ ಸ್ಟೇಟ್ಸ್ ಮನ್ ,ಟೈಮ್ಸ್ ಆಫ್ ಇಂಡಿಯಾ, ಹಿಂದೂ, ಮಯ್ಸ್ ಟ್ರಿಬ್ಮೂನ್, ಹಿಂದುಸ್ಥಾನ್ ಟೈಮ್ಸ್, ಮುಂತಾದವು ಪ್ರಶಂಸಾ ಲೇಖನಗಳನ್ನು ಬರೆದುದು ಗಮನಾರ್ಹ .
ಹನ್ನೊಂದು ತಿಂಗಳ ಹಿಂದೆ ಮಹಾ ಚುನಾವಣೆಗಳ ನಂತರ ನಿಜಲಿಂಗಪ್ಪನವರು ಹಸನ್ಮುಖರಾಗಿ ಹೇಗೆ ಮುಖ್ಯಮಂತ್ರಿ ಪದವಿಯನ್ನು ವಹಿಸಿಕೊಂಡರೋ ಹಾಗೆ ಅವರು ರಾಜೀನಾಮೆಯ ಬಳಿಕ ಮುಖ್ಯಮಂತ್ರಿಯ ಅಧಿಕೃತ ನಿವಾಸವನ್ನು ಬಿಟ್ಟು ವಿಧಾನಸಭೆಯ ಸಾಮಾನ್ಯ ಸದಸ್ಯರಂತೆ ಗೆಳೆಯರೊಬ್ಬರ ಕಾರಿನಲ್ಲಿ ಸ್ವಸ್ಥಳವಾದ ಚಿತ್ರದುರ್ಗಕ್ಕೆ ತೆರಳಿದರು. ಅದಕ್ಕಾಗಿ ಅವರು ಸರ್ಕಾರೀ ಕಾರನ್ನು ಉಪಯೋಗಿಸಿಕೊಳ್ಳಬಹುದಾಗಿದ್ದರೂ ಹಾಗೆ ಮಾಡುವುದು ಪ್ರಾಮಾಣಿಕ ವರ್ತನೆಯಲ್ಲವೆಂದು ಭಾವಿಸಿದುದು ಅವರ ನಿಸ್ವಾರ್ಥ ಸೇವಾ ಬುದ್ಧಿಯ ದಯೋತಕವಾಗಿದೆ. ಆಗ ಅವರಲ್ಲಿ ಯಾವ ದುಗುಡ ದುಮ್ಮಾನಗಳೂ ತೋರಲಿಲ್ಲ. ಯಾವುದೋ ಭಾರವಾದ ಹೊರೆ ಇಳಿಸಿದರಂತೆ ಪಂಜರದಿಂದ ಹೊರಬಿದ್ದ ಹಕ್ಕಿಯಂತೆ ಹೊರಟಿದ್ದರು. ಅದಕ್ಕೆ ಕೊಂಚ ಮೊದಲು ಅವರ ಗೆಳೆಯರೂ, ಹಿತೈಷಿಗಳು ಅವರನ್ನು ಬೀಳ್ಕೊಳ್ಳಲು ಮುಖ್ಯಮಂತ್ರಿಯ ಅಧಿಕೃತ ನಿವಾಸಕ್ಕೆ ಬಂದಾಗ ಊಟ ಮಾಡಿ ಸುಖನಿದ್ದೆಯಲ್ಲಿದ್ದ ಅವರು ಆ ಗೆಳೆಯರ ದೃಷ್ಟಿಗೆ ತ್ಯಾಗದ ಮೂರ್ತಿಯಂತೆ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.
ಕರ್ನಾಟಕಕ್ಕೆ ಆದ ಹಾನಿ ಭಾರತಕ್ಕೆ ಲಾಭವಾಗಿ ಪರಿಣಮಿಸಿತು. ಕೇಂದ್ರ ಸರ್ಕಾರ ನಿಜಲಿಂಗಪ್ಪನವರ ಸೇವೆಯನ್ನು ಬಳಸಿಕೊಳ್ಳ ಬಯಸಿ, ಸಹಕಾರಿ ಕೃಷಿಪದ್ಧತಿಯ ಅಧ್ಯಯನ ತಂಡದ ಮುಖ್ಯಸ್ಥರನ್ನಾಗಿ ನೇಮಿಸಿತು. ಆ ವಿಚಾರದಲ್ಲಿ ನಿಜಲಿಂಗಪ್ಪನವರು ಒಂದು ಸುಧೀರ್ಘ ಸಮಗ್ರ ವರದಿಯನ್ನು ಒಪ್ಪಿಸಿದರು. ಆಮೇಲೆ ಅವರು ದಿ ಇಂಡಿಯನ್ ಆಯಿಲ್ ಕಂಪನಿಯ ಗೌರವ ಅಧ್ಯಕ್ಷರಾಗಿ ಕೆಲವು ವರ್ಷಗಳ ಕಾಲ ದುಡಿದರು.

ಎಸ್• ಎನ್ ರ ಬದುಕಿನ ಮೈಲುಗಲ್ಲುಗಳು

೧೦•೧೨•೧೯೦೨ : ಜನನ- ಹರಪನಹಳ್ಳಿ ತಾಲ್ಲೂಕಿನ ಹಲವಾಗಲು
ಗ್ರಾಮ
೧೯೧೯ : ಪ್ರಥಮ ಬಾರಿಗೆ ಗಾಂಧೀಜಿಯವರ ಭೇಟಿ
೧೯೨೪ : ಬಿ.ಎ. ಪದವೀಧರ
೧೯೨೬ : ಚಿತ್ರದುರ್ಗದಲ್ಲಿ ವಕೀಲ ವೃತ್ತಿ ಪ್ರಾರಂಭ
೨೫•೫•೧೯೨೭ •ದಾವಣಗೆರೆಯ ಬೆಳ್ಳೂಡಿ ಮನೆತನದ
ಮುರಿಗೆಮ್ಮನವರೊಂದಿಗೆ ವಿವಾಹ
೧೯೨೮ : ಪ್ರಥಮ ಪುತ್ರಿ ಪಾರ್ವತಮ್ಮನವರ ಜನನ ೧೯೩೬ : ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ಸಿನ ಉಪಾಧ್ಯಕ್ಷ ೧೮•೯•೧೯೩೯ : ತುರುವನೂರಿನಲ್ಲಿ “ಈಚಲುವನ ಸತ್ಯಾಗ್ರಹ”
ಮತ್ತು ಜೈಲುವಾಸ
೧೯೪೦: ಬ್ರಿಟಿಷ್ ಸರ್ಕಾರದಿಂದ ವಕೀಲ ಸನ್ನದು ರದ್ದು
೯•೮•೧೯೪೨ : ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ
ಭಾಗವಹಿಸಿದಾಗ ಬಂಧನ
೧೯೪೪ : ಮೈಸೂರು ಕಾಂಗ್ರೆಸ್ ಅಧ್ಯಕ್ಷ
೧೯೪೬ : ಕಾನ್ಸಿಟ್ಯೂಟ್ ಅಸೆಂಬ್ಲಿ ಸದಸ್ಯ
೧೯೪೬ -೧೯೫೪ :ಮೈಸೂರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ
೧೯೫೨-೧೯೫೬ ಚಿತ್ರದುರ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
೧•೧೧•೧೯೫೬ : ವಿಶಾಲ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ
೧೯೫೭ : ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿಯಾಗಿ
ಮುಂದುವರಿಕೆ
೧೫•೧೧•೧೯೫೯: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ
೧೯೬೨ : ಹೊಸದುರ್ಗ ಚುನಾವಣೆಯಲ್ಲಿ ಸೋಲು ಮತ್ತು
ಬಾಗಲಕೋಟೆ ಯಿಂದ ವಿಧಾನಸಭೆಗೆ ಆಯ್ಕೆ
ಮುಖ್ಯಮಂತ್ರಿಯಾಗಿ ಮುಂದುವರಿಕೆ
೧೯೬೭ : ಅವಿರೋಧವಾಗಿ ಶಿಗ್ಗಾಂವ್ ಕ್ಷೇತ್ರದಿಂದ
ಆಯ್ಕೆ, ಮತ್ತೊಂದು ಭಾರಿ
ಮುಖ್ಯಮಂತ್ರಿಯಾಗಿ ಮುಂದುವರಿಕೆ
೧೨•೩•೧೯೬೭ : ರಕ್ಷಣಾ ನಿಧಿಗೋಸ್ಕರ (ಚೀಣಾ ಯುದ್ಧ)
ಬಿಜಾಪುರದಲ್ಲಿ ಬಂಗಾರದ ತುಲಾಭಾರ
೭•೧೨•೧೯೬೭: ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ
(ಕರ್ನಾಟಕದಿಂದ ಪ್ರಥಮ ಬಾರಿಗೆ ಆದವರು)
೨೩•೭•೧೯೬೮ ಜಪಾನ್ ಪ್ರವಾಸ
೧೨•೫•೧೯೬೯ : ಯರೋಪ್ ಪ್ರವಾಸ
ಜುಲೈ ೧೯೬೯ ; ಬೆಂಗಳೂರಿನಲ್ಲಿ ಐತಿಹಾಸಿಕ ಅಖಿಲ ಭಾರತ
ಕಾಂಗ್ರೆಸ್ ಅಧಿವೇಶನ
ಡಿಸೆಂಬರ್ ೧೯೬೯: ಅಖಿಲ ಭಾರತ ಕಾಂಗ್ರೆಸ್ ಪಕ್ಷ ವಿಭಜನೆ
೧೯೭೧ : ಅಖಿಲ ಭಾರತ ಕಾಂಗ್ರೆಸ್ (ಸಂಸ್ಥಾ) ವಿಧ್ಯುಕ್ತ
ಸ್ಥಾಪನೆ
೬•೩•೧೯೮೫: ಜನತಾ ಪಕ್ಷದಿಂದ ಹೊರಕ್ಕೆ ಹಾಗೂ
ರಾಜೀನಾಮೆ
೧೦•೧೦•೧೯೮೮ : ಪತ್ನಿ ಮುರಿಗೆಮ್ಮ ಅವರ ದೇಹಾಂತ್ಯ
೧೯೯೦ : ಸರ್ದಾರ ವಲ್ಲಭಭಾಯಿ ಪಟೇಲ್ ಸಂಸ್ಥೆಯ
ಅಧ್ಯಕ್ಷ
೨•೧೦•೧೯೯೯ : “ಕರ್ನಾಟಕ ರತ್ನ” ಪ್ರಶಸ್ತಿ
೨೦•೬•೨೦೦೦ : ಕಾಲು ಮುರಿತದಿಂದಾಗಿ ಚಿಕಿತ್ಸೆಗಾಗಿ ಬೌರಿಂಗ್
ಆಸ್ಪತ್ರೆಗೆ ದಾಖಲು
೨೫•೭•೨೦೦೦ : ಆಸ್ಪತ್ರೆಯಿಂದ ಚಿತ್ರದುರ್ಗದ ಮನೆಗೆ
೮•೮•೨೦೦೦ : ದೇಹಾಂತ್ಯ
*****

About The Author

Leave a Reply

Your email address will not be published. Required fields are marked *