April 20, 2024

Chitradurga hoysala

Kannada news portal

ಶಿವಮೊಗ್ಗ    ಆರ್.ಎಸ್.ಎಸ್.ನ ಭದ್ರ ಕೋಟೆಯಾಗಿತ್ತು ಅದನ್ನು ಮೊದಲ ಬಾರಿಗೆ ಛಿದ್ರ ಮಾಡಿದ್ದು ಲಂಕೇಶ್ : ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ

1 min read

ಲಂಕೇಶ್ ಬರವಣಿಗೆ ಸರ್ಕಾರವನ್ನೇ ಬೀಳಿಸುವಷ್ಟು ಪ್ರಭಾವ ಹೊಂದಿತ್ತು : ಕತೆಗಾರ, ಪತ್ರಕರ್ತ ಜಡೆಕುಂಟೆ ಮಂಜುನಾಥ್

 

ಶಿವಮೊಗ್ಗ    ಆರ್.ಎಸ್.ಎಸ್.ನ ಭದ್ರ ಕೋಟೆಯಾಗಿತ್ತು ಅದನ್ನು ಮೊದಲ ಬಾರಿಗೆ ಛಿದ್ರ ಮಾಡಿದ್ದು ಲಂಕೇಶ್ : ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ

 

 

ಚಿತ್ರದುರ್ಗ:

ಲಂಕೇಶ್‍ರವರ ಒಂದು ಸಂಪಾದಕೀಯದ ಬರವಣಿಗೆ ಸರ್ಕಾರವನ್ನೇ ಬೀಳಿಸುವಷ್ಟು ಪ್ರಭಾವ ಹೊಂದಿತ್ತು ಎಂದು ಕತೆಗಾರ, ಪತ್ರಕರ್ತ ಜಡೆಕುಂಟೆ ಮಂಜುನಾಥ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ`ಮತ್ತೆ ಮತ್ತೆ ಲಂಕೇಶ್ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಮಾತನಾಡಿ
ತಮ್ಮ ಬರವಣಿಗೆ ಮೂಲಕ ಒಂದು ತಲೆಮಾರನ್ನು
ಎಚ್ಚರಿಸಿ, ಸಾಹಿತ್ಯಕವಾಗಿ ಬರಹಗಾರನ್ನಾಗಿ ಬೆಳೆಸಿದ್ದವರು. ಪತ್ರಕರ್ತರಾಗಿ ನೇರ, ನಡೆಯಿಂದ ಸರಕಾರಗಳಿಗೆ ಬಿಸಿ ತುಪ್ಪವಾಗಿದ್ದರು.

`ತಮ್ಮ ಟಾಬ್ಲಾಯ್ಡ್ ಪತ್ರಿಕೆಗೆ ಹೊಸ ಸ್ವರೂಪ, ಆಯಾಮ ನೀಡಿದ್ದರು. ಈ ಕಾಲಘಟ್ಟದ ಪತ್ರಕರ್ತರು, ಬರಹಗಾರರು ಲಂಕೇಶ್‍ರನ್ನು ಓದಿಕೊಳ್ಳಬೇಕು. ಹಿಂದೊಮ್ಮೆ ಲಂಕೇಶರ ವಿಚಾರ ವೇದಿಕೆ ರೂಪಿಸಿದ್ದೆವು. ಅದಕ್ಕೆ ಡಾ.ಬಿ.ಎಂ.ಶರಬೇಂದ್ರಯ್ಯ ಒತ್ತಾಸೆಯಾಗಿದ್ದರು. ಅಲ್ಲಿ ಅನೇಕ ಭಿನ್ನಾಭಿ ಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸ್ಥಗಿತಗೊಂಡಿದ್ದು ಬೇಸರದ ವಿಚಾರ ಎಂದರು.

ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ` ಲಂಕೇಶ್ ರವರು ನನ್ನ ಇಡೀ ಬದುಕಿನ ಆಲೋಚನಾ ಕ್ರಮವನ್ನೇ ಬದಲಾಯಿಸಿದವರು. ಅವರು ಕಟ್ಟಿದ ಪ್ರಗತಿ ರಂಗದ ಜತೆ ನನ್ನ ಒಡನಾಟ ಇತ್ತು. ಇಡೀ ಶಿವಮೊಗ್ಗ ಆರ್.ಎಸ್.ಎಸ್.ನ ಭದ್ರ ಕೋಟೆಯಾಗಿತ್ತು ಅದನ್ನು ಮೊದಲ ಬಾರಿಗೆ ಛಿದ್ರ ಮಾಡಿದ್ದು ಲಂಕೇಶ್ ರವರು
ರಾಜಕೀಯ ಪಕ್ಷಗಳು ಪ್ರಗತಿ ರಂಗದ ಪ್ರಣಾಳಿಕೆಯನ್ನು ಅಳವಡಿಸಿ ಕೊಂಡಿದ್ದಲ್ಲಿ ಇಡೀ ಕರ್ನಾಟಕದ ಚಿತ್ರಣವೇ ಬದಲಾಗುತ್ತಿತ್ತು. ತಮ್ಮ ಆಲೋಚನೆಗಳಿಂದ ನಾಡನ್ನು ಪ್ರಭಾವಿಸಿದ ಲಂಕೇಶರು ಅಂಬೇಡ್ಕರ್ ಚಿಂತನೆಗಳಿಗೆ ದಲಿತ ಚಳುವಳಿಗಳಿಗೇಕೆ ಮಹತ್ವ ಕೊಡಲಿಲ್ಲ ಎನ್ನುವ ಕೊರಗು ಇನ್ನೂ ಇದೆ’ ಎಂದರು.

ಉಪನ್ಯಾಸಕ ಡಾ.ಗುರುನಾಥ್ ಮಾತನಾಡಿ`ಲಂಕೇಶ್‍ರವರು ಇಡೀ ಕರ್ನಾಟಕದ ಮೇಷ್ಟ್ರು ಆಗಿದ್ದರು. ಹುಟ್ಟು ಹಬ್ಬದ ನೆಪದಲ್ಲಿ ಸ್ಮರಿಸುತ್ತಿರುವುದು ಔಚಿತ್ಯಪೂರ್ಣವಾದುದು. ಲಂಕೇಶರು ತಮ್ಮ ಸಾಹಿತ್ಯ ಕೃಷಿ, ಪತ್ರಿಕಾ ಕೃಷಿಯ ಮೂಲಕ ತಮಗೇ ಅರಿವಿಲ್ಲದೇ ನಾಡಿನಾದ್ಯಂತ ಆ ತಲೆಮಾರಿನ ಬರಹಗಾರರನ್ನು ಪ್ರಭಾವಿಸಿ, ಬೆಳೆಸಿದರು. ರಾಜಕಾರಣ, ಜಾತಿ ಕುರಿತ ಅವರ ಗ್ರಹಿಕೆಗಳು ಅಪರೂಪದ ಒಳನೋಟ ಹೊಂದಿದ್ದವು.’ ಎಂದರು.

ಪ್ರಗತಿಪರ ಚಿಂತಕ ಜೆ.ಯಾದವರೆಡ್ಡಿ ಮಾತನಾಡಿ` ಲಂಕೇಶ್ ಪತ್ರಿಕೆ ಪ್ರಭಾವ ಹೇಗಿತ್ತು ಎಂದರೆ, ಓದುಗರು ಜಾತಕ ಪಕ್ಷಿಗಳಂತೆ ಕಾದು ಅವರ ಪತ್ರಿಕೆ ಓದುತ್ತಿದ್ದರು. ಜಾಹಿರಾತು ಇಲ್ಲದೇ ಪತ್ರಿಕೆ ನಡೆಸಿದ ಹೆಗ್ಗಳಿಕೆ ಅವರದು. ಕೊನೆದಿನದವರೆಗೂ ಅವರು ಬರವಣಿಗೆ ನಿಲ್ಲಿಸಲಿಲ್ಲ. ಪತ್ರಕರ್ತರು ಹೆಚ್ಚು ಓದಬೇಕು ಅನ್ನೋದನ್ನು ತಿಳಿಸಿದ್ದೆ ಲಂಕೇಶ್. ಎಲ್ಲ ಸಿದ್ಧಾಂತ ಮೀರಿದ, ಅಪ್ಪಟ ಜೀವನ ಪ್ರೀತಿಯನ್ನು ಹೊಂದಿದ್ದರು’ ಎಂದು ಹೇಳಿದರು.

ನಿವೃತ್ತ ಪ್ರಾಚಾರ್ಯ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ ಲಂಕೇಶ್ ಒಂದು ವಿಶ್ವ ವಿದ್ಯಾಲಯ ವಾಗಿದ್ದರು. ಅನೇಕರನ್ನು ಪ್ರಭಾವಿಸಿದ್ದರು. ಅವರ ಬಹುತೇಕ ಕೃತಿಗಳನ್ನು ತರಗತಿಗಳಲ್ಲಿ ಪಾಠಮಾಡಿದ ಹೆಗ್ಗಳಿಕೆ ನನಗಿದೆ. ಇದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ. ತಮ್ಮ ಪತ್ರಿಕಾ ಬರಹಗಳಿಂದ ಬಹಳಷ್ಟು ಜನರನ್ನು ಪ್ರಭಾವಿಸಿದ್ದಾರೆ. ಅವರ ಚಿಂತನೆಗಳು ಹೊಂದಿರುವ ಒಂದು ಪರಂಪರೆ ಬಿಟ್ಟು ಹೋಗಿದ್ದಾರೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ`ಲಂಕೇಶರ ಹುಟ್ಟು ಹಬ್ಬದ ದಿನ ಅವರ ಚಿಂತನೆಗಳನ್ನು ನೆನಪು ಮಾಡಿಕೊಳ್ಳಲು ದಿಡೀರ್ ಆಯೋಜನೆಗೊಂಡ ಈ ಕಾರ್ಯಕ್ರಮ ಉತ್ತಮ ಸಹಕಾರಿಯಾಗಿದೆ. ಇನ್ನು ಮುಂದೆ ಪ್ರತಿ ತಿಂಗಳು ಇದೇ ಮಾದರಿಯ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಂಪಿಗೆ ತಿಪ್ಪೇಸ್ವಾಮಿ, ಎಂ.ಎನ್. ಅಹೋಬಳಪತಿ, ಗೌನಹಳ್ಳಿ ಗೋವಿಂದಪ್ಪ, ಮಾತನಾಡಿದರು.

ಸಭೆಯಲ್ಲಿ ಪತ್ರಕರ್ತರಾದ
ಮಲ್ಲಾಪುರ ಹರೀಶ್ ನಾಗರಾಜ್ ಶ್ರೇಷ್ಠಿ,ದ್ವಾರಕನಾಥ್ ನಾಗೇಶ್ ದುರ್ಗಾವರ, ವರದರಾಜ್, ಶಿವರಾಜ್, ದರ್ಶನ್ ಇಂಗಳದಾಳ್, ಮಾಲತೇಶ್ ಅರಸ್ , ರವಿಕುಮಾರ್ ಉಗ್ರಾಣ, ರಘು ,ಕೆ.ಟಿ.ಶಿವಕುಮಾರ್,ಕುಮಾರಸ್ವಾಮಿ,ಮಹದೇವಣ್ಣ,ಸಿದ್ದಪ್ಪ ಇದ್ದರು.

About The Author

Leave a Reply

Your email address will not be published. Required fields are marked *