May 6, 2024

Chitradurga hoysala

Kannada news portal

ಶ್ರೇಷ್ಠ ಭಾಷೆಗಳಲ್ಲೊಂದಾಗಿದ್ದು ಜಾನಪದ ಸಾಹಿತ್ಯದೊಂದಿಗೆ ಮೊದಲಿನಿಂದಲೂ ಗಟ್ಟಿಯಾಗಿ ಬೆಸೆದುಕೊಂಡಿದೆ : ಸೀಬಾರದಲ್ಲಿ ಜಾನಪದ ಗಂಟು – ಬಾಬಾರ ನಂಟು ಕಾರ್ಯಕ್ರಮ :ಯೋಗೀಶ್ ಸಹ್ಯಾದ್ರಿ ಅಭಿಮಾತ.

1 min read



ಸೀಬಾರದಲ್ಲಿ ಜಾನಪದ ಗಂಟು – ಬಾಬಾರ ನಂಟು ಕಾರ್ಯಕ್ರಮ :ಯೋಗೀಶ್ ಸಹ್ಯಾದ್ರಿ ಅಭಿಮಾತ.

ಶ್ರೇಷ್ಠ ಭಾಷೆಗಳಲ್ಲೊಂದಾಗಿದ್ದು ಜಾನಪದ ಸಾಹಿತ್ಯದೊಂದಿಗೆ ಮೊದಲಿನಿಂದಲೂ ಗಟ್ಟಿಯಾಗಿ ಬೆಸೆದುಕೊಂಡಿದೆ

ಚಿತ್ರದುರ್ಗ : ಕನ್ನಡ ಭಾಷೆಯ ಬೆಳವಣಿಗೆಗೆ ಜಾನಪದ ಸಾಹಿತ್ಯ ಹಾಗು ಜಾನಪದ ಕಲಾವಿದರ ಕೊಡುಗೆ ಅನನ್ಯ. ಜಾನಪದ ಸಾಹಿತ್ಯ ಕನ್ನಡ ಭಾಷೆಯಷ್ಟೆ ಪ್ರಾಚೀನವಾದದ್ದು ಎಂದು ಲೇಖಕ ಹಾಗು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ನಗರದ ಸೀಬಾರದ ಸೈಲಾನಾ ಬಾಬಾ ಆಶ್ರಮದಲ್ಲಿ ಚಂದ್ರೋದಯ ಸಾಂಸ್ಕೃತಿಕ ಕಲಾ ಸಂಘ, ಡಾ|| ಬಿ ಆರ್ ಅಂಬೇಡ್ಕರ್ ಯುವಕ ಸಂಘ ಹಾಗೂ ಡಿಜಿಟಲ್ ವರ್ಲ್ಡ್ ಸಹಯೋಗದಲ್ಲಿ ಸೈಲಾನಾ ಬಾಬಾರವರ ಪುಣ್ಯಸ್ಮರಣೆ ಪ್ರಯುಕ್ತ ಆಯೋಜಿಸಲಾಗಿದ್ದ ‘ಜಾನಪದ ಗಂಟು – ಬಾಬಾರ ನಂಟು : ನೆನಪಿನಂಗಳ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಪನ್ಯಾಸಕ ಯೋಗೀಶ್ ಸಹ್ಯಾದ್ರಿ, ಕನ್ನಡ ಭಾಷೆಯು ಅತ್ಯಂತ ಪರಿಣಾಮಕಾರಿ ಮತ್ತು ಶ್ರೇಷ್ಠ ಭಾಷೆಗಳಲ್ಲೊಂದಾಗಿದ್ದು ಜಾನಪದ ಸಾಹಿತ್ಯದೊಂದಿಗೆ ಮೊದಲಿನಿಂದಲೂ ಗಟ್ಟಿಯಾಗಿ ಬೆಸೆದುಕೊಂಡಿದೆ. ಸೈಲಾನಾ ಬಾಬಾರವರು ಜಾನಪದ ಸಾಹಿತ್ಯ, ಸಂಗೀತದ ಬಗೆಗೆ ಅಪಾರ ಆಸಕ್ತಿ ಹೊಂದಿದ್ದರು ಅಲ್ಲದೇ ಸ್ವತಃ ತಂಬೂರಿ ನುಡಿಸುವುದರೊಂದಿಗೆ ತಮ್ಮ ಭಕ್ತರನ್ನು ಭಕ್ತಿಯ ಲೋಕಕ್ಕೆ ಕರೆದೊಯ್ಯುತ್ತಿದ್ದರು. ಇಂದು ನಿಜವಾಗಿ ಯಾವುದೇ ಧರ್ಮಗಳು, ಪ್ರಾಮಾಣಿಕತೆ, ಸೌಹಾರ್ದ ಸಂಬಂಧಗಳು ಉಳಿದಿದ್ದರೆ ಅದು ಖಂಡಿತ ಶಿಕ್ಷಣ ಪಡೆದ ವಿದ್ಯಾವಂತರಿಂದಲ್ಲ, ಬದಲಾಗಿ ಅವಿದ್ಯಾವಂತರೆನಿಸಿಕೊಂಡ ಜನಪದರಿಂದ ಎಂಬ ಸತ್ಯದ ಅರಿವು ಮೂಡಬೇಕಿದೆ ಎಂದು ಮಾರ್ಮಿಕವಾಗಿ ತಮ್ಮ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಂಗಾವತಿಯ ಶಜ್ಜಾದಾ ನಶೀನ್ನ ಸೈಯದ್ ಬದ್ರುದ್ದೀನ್ ಷಾ ಖಾದ್ರಿ ಗುರುಗಳು ಮಾತನಾಡಿ ಬಾಬಾರವರು ಹಿಂದೆ ತಮ್ಮ ವೃತ್ತಿಜೀವನದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣದಿಂದ ಚಿತ್ರದುರ್ಗದ ಇಂಥಹ ಕಾಡು-ಬೆಟ್ಟದ ಪ್ರದೇಶದಲ್ಲಿ ನೆಲೆಯೂರಿ ತಮ್ಮ ಭಕ್ತ ಸಮೂಹದೊಂದಿಗೆ ಆಶ್ರಮವನ್ನು ನಿರ್ಮಿಸಿ ನಮ್ಮನ್ನು ಅಗಲಿದ್ದಾರೆ. ಆದ್ದರಿಂದ ಈ ಆಶ್ರಮದ ರಕ್ಷಣೆ, ಬೆಳವಣಿಗೆ ಎಲ್ಲವೂ ಸಾರ್ವಜನಿಕರದ್ದಾಗಿದ್ದು ಯಾವುದೇ ಧರ್ಮಗಳ ಭೇದ-ಭಾವಗಳಿಲ್ಲದೆ ಭಕ್ತರು ಆಗಮಿಸಿ ಬಾಬಾರ ಆಶೀರ್ವಾದ ಪಡೆದುಕೊಳ್ಳಬಹುದು ಎಂದು ಈ ಸಂಧರ್ಭದಲ್ಲಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ಅಕಾಡೆಮಿಯ ಸದಸ್ಯರಾದ ಗಾಯಕ ಕಾಲ್ಕೆರೆ ಚಂದ್ರಪ್ಪ ಮಾತನಾಡಿ ಕರೋನ ಮನುಷ್ಯನಿಗೆ ತಕ್ಕ ಪಾಠ ಕಲಿಸಿದೆ. ಆದರೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ, ಗೌರವಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯವ ಕೆಲಸ ಎಲ್ಲ ಧರ್ಮೀಯರಿಂದಲೂ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಿರಾದ ಶಜ್ಜಾದಾ ನಶೀನ್ ನ ಗುರುಗಳಾದ ಸೈಯದ್ ಖಾದರ್ ಷಾ ಖಾದ್ರಿ, ಬಾಬಾರ ವಂಶಸ್ಥರಾದ ಸೈಯದ್ ಜಾಫರ್ ಅಲಿ ಮತ್ತು ಸಹೋದರರು, ಗಾಯಕರಾದ ಜಗದೀಶ್, ಜಿಲ್ಲಾ ಮಾನವ ಹಕ್ಕುಗಳ ಸಂಸ್ಥೆಯ ಅಧ್ಯಕ್ಷರಾದ ದಾದಾಪೀರ್, ರಹಮತ್ ಉಲ್ಲಾ ಹಾಗು ರಾಜ್ಯದ ಅನೇಕ ಭಾಗಗಳಿಂದ ಆಗಮಿಸಿದ್ದ ಭಕ್ತರು, ಮೌಲ್ವಿಗಳು, ಇತರರು ಹಾಜರಿದ್ದರು. ಜಾನಪದ ಕಲಾವಿದರಾದ ಕಾಲ್ಕೆರೆ ಚಂದ್ರಪ್ಪ ಹಾಗು ಸಂಗಡಿಗರು ಜಾನಪದ ಹಾಡುಗಳ ಮೂಲಕ ಬಾಬಾರ ಆತ್ಮಕ್ಕೆ ಭಾವನಮನ ಸಲ್ಲಿಸಿದರು.

About The Author

Leave a Reply

Your email address will not be published. Required fields are marked *