April 29, 2024

Chitradurga hoysala

Kannada news portal

ಜಲ ಸಾಕ್ಷರತಾ ಕುರಿತ ಸಂವಾದ ಕಾರ್ಯಕ್ರಮದಲ್ಲಿ : ನೀರಿಲ್ಲದ ಜೀವನ ಊಹಿಸಲು ಆಗದು – ತಹಶೀಲ್ದಾರ್ ಬಿ.ಆರ್.ಆನಂದಮೂರ್ತಿ

1 min read



ಜಲ ಸಾಕ್ಷರತಾ ಕುರಿತ ಸಂವಾದ ಕಾರ್ಯಕ್ರಮದಲ್ಲಿ

ನೀರಿಲ್ಲದ ಜೀವನ ಊಹಿಸಲು ಆಗದು ತಹಶೀಲ್ದಾರ್ ಬಿ.ಆರ್.ಆನಂದಮೂರ್ತಿ

ಚಿತ್ರದುರ್ಗ:
ನೀರು ಪ್ರತಿಯೊಬ್ಬ ಮನುಷ್ಯನಿಗೆ ತುಂಬಾ ಮುಖ್ಯವಾಗಿ ಬೇಕು. ನೀರಿಲ್ಲದ ಜೀವನ ಊಹಿಸಲು ಆಗದು ಎಂದು ಉಪವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಬಿ.ಆರ್.ಆನಂದಮೂರ್ತಿ ಹೇಳಿದರು.
ನಗರದ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಜಲ ಸಾಕ್ಷರತಾ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆ ನೀರನ್ನು ವ್ಯರ್ಥವಾಗಲು ಬಿಡದೇ ಹಿಡಿದಿಡುವ ಕೆಲಸವಾಗಬೇಕು. ಈ ಕುರಿತು ಪ್ರತಿಯೊಬ್ಬರಲ್ಲೂ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು
ಅಂತರ್ಜಲ ಹಾಗೂ ಮಳೆ ನೀರು ಕೊಯ್ಲು ತಜ್ಞ ಡಾ.ಎನ್.ಜೆ.ದೇವರಾಜ ರೆಡ್ಡಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಂದ ನಾಗರಿಕರವರೆಗೂ ಎಲ್ಲರಲ್ಲೂ ಜಲಸಾಕ್ಷರತೆಯ ಜಾಗೃತಿ ಆಗಬೇಕಿದೆ. ದೇಶದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಕೇರಳವಾಗಿದ್ದರೂ ಅಲ್ಲಿ ಜಲಸಾಕ್ಷರತೆ ಮತ್ತು ನೀರಿನ ಮಿತಬಳಕೆ ಕುರಿತು ಅರಿವು ಹೆಚ್ಚಾಗಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯದಿಂದಾಗಿ ಮಳೆ ಎರುಪೇರಾಗುತ್ತದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಳೆ ನೀರು ಸುಗ್ಗಿ ಕೋಶ ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿಯನ್ನು ಸರ್ಕಾರ ನೀಡಬೇಕು ಎಂದು ಹೇಳಿದರು.
ನಮ್ಮ ದೇಶವು ಮಳೆಯನ್ನು ಹೆಚ್ಚು ಪಡೆಯುತ್ತಿದ್ದರೂ ನೀರಿಗೆ ಅಭಾವವಿದೆ. ವೈಜ್ಞಾನಿಕವಾಗಿ ಮಳೆನೀರನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕೆಂಬ ಮಾಹಿತಿಯ ಕೊರತೆ ಇದೆ. ಮಳೆಗಾಲದಲ್ಲಿ ಮನೆಗಳ ಮೇಲ್ಛಾವಣೆಗಳ ಮೇಲೆ ಬೀಳುವ ನೀರನ್ನು ವ್ಯರ್ಥವಾಗಿ ಹರಿದುಹೋಗಲು ಬಿಡದೇ ಶೇಖರಿಸಿಟ್ಟುಕೊಂಡಾಗ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಹಳ್ಳಿಗಳಲ್ಲಿ ನೀರನ್ನು ವ್ಯರ್ಥವಾಗದಂತೆ ಯುವಕರು ತಡೆಗಟ್ಟಬೇಕು. ನೀರನ್ನು ವ್ಯರ್ಥ ಮಾಡಬಾರದು ಎಂದರು.
ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎ.ವಿ.ನುಂಕಪ್ಪ ಮಾತನಾಡಿ, ಪ್ರಕೃತಿದತ್ತವಾಗಿ ದೊರಕುವ ನೀರು ಎಲ್ಲರಿಗೂ ಅತ್ಯಮೂಲ್ಯವಾಗಿ ಬೇಕು. ಅದಕ್ಕಾದರೂ ನೀರನ್ನು ರಕ್ಷಿಸುವ ಜಾಗೃತಿ ಈಗಿನ ಯುವಕರಲ್ಲಿ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ತಿಳಿಸಿದರು.
ಮನುಷ್ಯನ ದುರಾಸೆಗೆ ಬೆಟ್ಟ-ಗುಡ್ಡಗಳು ಕಣ್ಮರೆಯಾಗುತ್ತಿದೆ. ಖನಿಜಗಳು ಕರಗುತ್ತಿವೆ. ನೀರು ಕೂಡ ಕಲುಷಿತವಾಗುತ್ತಿದೆ. ನೈಸರ್ಗಿಕವಾಗಿ ಸಂಪನ್ಮೂಲಗಳ ರಕ್ಷಣೆ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸುಹಾಸೆ ಎನ್. ಪ್ರಾಸ್ತವಿಕವಾಗಿ ಮಾತನಾಡಿ, ಪ್ರಾಕೃತಿಕ ಸಂಪತ್ತನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡರೆ ಮುಂದೊಂದು ದಿನ ಸಕಲ ಜೀವರಾಶಿಗಳು ತೊಂದರೆ. ನೀರು ಎಲ್ಲರಿಗೂ ಅತ್ಯಂತ ಅವಶ್ಯಕ. ಅದನ್ನು ಸಂರಕ್ಷಿಸುವ ಕೆಲಸ ಎಲ್ಲರೂ ಮಾಡಬೇಕು ಎಂದು ತಿಳಿಸಿದರು.
ಜಲ ಸಂರಕ್ಷಣೆ ಕುರಿತು ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಲಾಯಿತು. ಪ್ರಬಂಧಸ್ಪರ್ಧೆಯಲ್ಲಿ ಭರತ್ ಎನ್. (ಪ್ರಥಮ), ಮಾರುತಿ ಎಚ್ (ದ್ವಿತೀಯ) ಹಾಗೂ ತೃತೀಯ ಬಹುಮಾನವನ್ನು ಎಂ.ಸಂದೀಪ, ಎಸ್.ಬಿ.ಕರಿಬಸಪ್ಪ, ಸಿ.ಆರ್.ಸಂಗೀತ ಹಾಗೂ ಯಾಸ್ಮಿನಬಾನು ಪಡೆದುಕೊಂಡರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಎಚ್.ಮಾರುತಿ (ಪ್ರಥಮ), ಇ.ತಿಮ್ಮೇಶ (ದ್ವಿತೀಯ) ಹಾಗೂ ತೃತಿಯ ಬಹುಮಾನವನ್ನು ಎಚ್.ನಾಗವೇಣಿ ಹಾಗೂ ಎಂ.ಮೇಘನಾ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಪ್ರಥಮದರ್ಜೆ ಸಹಾಯಕ ಸತೀಶ್, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ತತ್ವಶಾಸ್ತ್ರ ಸಹ ಪ್ರಾಧ್ಯಾಪಕ ಡಾ.ರಾಜೀವಲೋಚನ ಇದ್ದರು. ಕುಮಾರ ಕಾರ್ಯಕ್ರಮ ನಿರೂಪಿಸಿದರು.

About The Author

Leave a Reply

Your email address will not be published. Required fields are marked *