April 29, 2024

Chitradurga hoysala

Kannada news portal

ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ದುರಂತ: ಸಚಿವ ಗೋವಿಂದ ಕಾರಜೋಳ

1 min read




ಜಾತಿ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು ದುರಂತ:ಗೋವಿಂದ ಕಾರಜೋಳ

 

_________________ಚಿತ್ರದುರ್ಗ : 900 ವರ್ಷಗಳ ನಂತರವೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ದುರಂತ
ಎಂದು ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ನಗರದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ದಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು, ಶತಮಾನಗಳು ಕಳೆದರೂ ಬಸವಣ್ಣನವರ ಸುಂದರ ಸಮಾಜ
ನಿರ್ಮಾಣವಾಗದಿರುವುದು ನೋವಿನ ಸಂಗತಿ. ಬಸವಣ್ಣನವರು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಯಾವುದೇ ಜಾತಿ, ವರ್ಗ ಎಂಬುದಿಲ್ಲ. ಹೆಣ್ಣು, ಗಂಡು ಎರಡೇ ಜಾತಿ ಎಂಬ ಸಂದೇಶ ಸಾರಿದರು.
ಆದರೆ 900 ವರ್ಷಗಳ ನಂತರವೂ ಜಾತಿ ವ್ಯವಸ್ಥೆ ಜೀವಂತವಾಗಿರುವುದು ದುರಂತ ಎಂದರು.ರಾಜ್ಯದಲ್ಲಿ ದಕ್ಕಲಿಗರು ಕೇವಲ 400 ಕುಟುಂಬದವರಿದ್ದಾರೆ. ಇವರಿಗೆ ಆದಾಯ, ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ. ಇದರಿಂದ ಇವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆಯಾವುದೇ ಸೌಲಭ್ಯ ಸಿಗದ ಕಾರಣ ಶಿಕ್ಷಣ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರೂ ಒಟ್ಟಾಗಿ ನಮ್ಮ ಜಿಲ್ಲೆಗೆ ಬರುವುದಾದಲ್ಲಿ 100 ಎಕರೆ ಜಮೀನು ಖರೀದಿಸಿ ಎಲ್ಲರಿಗೂ ಪುನರ್ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ದಕ್ಕಲಿಗರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಒಂದು ವಾರದೊಳಗಾಗಿ ಪ್ರಮುಖರ ಜೊತೆ ಸಭೆ ನಡೆಸಿ ದಕ್ಕಲಿಗರ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು, ಪ್ರತಿ ಕುಟುಂಬಕ್ಕೆ ಒಂದು ಮನೆ,ಮತ್ತು ಜಮೀನು ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಪ್ರತಿ ಪಂಚಾಯಿತಿಯಲ್ಲಿ ರುದ್ರಭೂಮಿ ನಿರ್ಮಿಸಲಾಗುವುದು. ಇದು ಯಾವುದೇ ಜನಾಂಗಕ್ಕೆ ಸೀಮಿತವಲ್ಲ. ಇಲ್ಲಿ ಎಲ್ಲರೂ ಅಂತ್ಯಕ್ರಿಯೆ ಮಾಡಬಹುದು ಎಂದು ಹೇಳಿದರು. ಶೋಷಿತ ಸಮುದಾಯಗಳಿಗೆ ಮೀಸಲಿಟ್ಟ ಪ್ರತಿ ಪೈಸೆಯೂ ಅವರಿಗೇ ಖರ್ಚು ಮಾಡಬೇಕೆಂಬುದು ನನ್ನ ಉದ್ದೇಶ. ಸರ್ಕಾರ ಮಾತೃ ಸ್ಥಾನದಲ್ಲಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ನೀಡುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ದಕ್ಕಲಿಗರಿಗೆ ಆದಾಯ, ಜಾತಿ ಪ್ರಮಾಣಪತ್ರ ನೀಡುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್‍ಗಳಿಗೆ ಆದೇಶ ನೀಡಲಾಗುವುದು ಎಂದರು.

ದಕ್ಕಲಿಗ ಸಮಾವೇಶದಲ್ಲಿ ಭಾಗವಹಿಸಿ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಮಾತನಾಡಿದರು, ದಯನೀಯ ಬದುಕು ಕಟ್ಟಿಕೊಂಡಿರುವ ಈ ನಮ್ಮ ಬಂಧುಗಳಿಗೆ ಶೀಘ್ರವಾಗಿ ವಸತಿ ಮತ್ತು ಭೂಮಿ ನೀಡಲು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಜೊತೆಯಲ್ಲಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ನೋಡಲ್ ಅಧಿಕಾರಿ ನೇಮಿಸುವ ಭರವಸೆ ನೀಡಿದರು. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ರಾಜ್ಯ ಸಫಾಯಿ
ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ ಶಿವಣ್ಣ/ನಿಗಮದ ಅಧ್ಯಕ್ಷ ಹನುಮಂತಪ್ಪ ಬಳ್ಳಾರಿ,ಸಾಮರಸ್ಯ ವೇದಿಕೆ ಸಂಚಾಲಕ ವಾದಿರಾಜ್,
ದಕ್ಕಲಿಗ ಸಂಘದ ಅಧ್ಯಕ್ಷ ಶಾಂತರಾಜು, ಮುಖಂಡ ಪುರುಷೋತ್ತಮ ಉಪಸ್ಥಿತರಿದ್ದರು.

*ದಕ್ಕಲಿಗರ ಸಂಕ್ಷಿಪ್ತ ಮಾಹಿತಿ*
ದಕ್ಕಲಿಗರನ್ನು ದಕ್ಕಲ್, ದೊಕ್ಕಲ್ ಮತ್ತು ದೊಕ್ಕಲ್ವಾರ್ ಎಂದೂ ಕರೆಯುತ್ತಾರೆ. ಅವರನ್ನು ಇತರರು ಆದಿಜಾಂಬವ ಹೊರಮಕ್ಕಳು,(ಆದಿ ಜಾಂಬವರ ಬಹಿಷ್ಕೃತ ಮಕ್ಕಳು’) ಎಂದೂ ಕರೆಯುತ್ತಾರೆ. ಇವರು ಅರೆ ಅಲೆಮಾರಿ ಸಮುದಾಯವಾಗಿದ್ದು, ಭಿಕ್ಷಾಟನೆಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇವರು ಮಾದಿಗ ಜಾತಿಗೆ ಸಂಬಂಧಿಸಿದ ಉಪಜಾತಿಯಾಗಿದ್ದು,ಅನಾದಿಯಿಂದಲೂ ಮಾದಿಗ ಕೇರಿಯ ಊರ ಹೊರಗಡೆ ಇದ್ದೂ ಕೆಲಕಾಲ ಜೀವನ ಸಾಗಿಸುವ ವಾಡಿಕೆಯನ್ನು ರೂಡಿಸಿಕೊಂಡು ಬಂದಿರುವ ದಕ್ಕಲಿಗ ಜನಾಂಗ ತುಂಬಾ ವಿರಳ ಸಂಖ್ಯೆಯಲ್ಲಿದ್ದು ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ.

ನೀವೂ ಮಾದಿಗರೆ

_________________ನಮ್ಮ ಮಾದಿಗ ಸಮಾಜವೇ ಅತ್ಯಂತ ಬಹಿಷ್ಕ್ರತ,ಇಂತಹ ದಯನೀಯ ಪರಿಸ್ಥಿತಿಯಲ್ಲಿ ಮಾದಿಗರ ಹಟ್ಟಿಯನ್ನು ಪ್ರವೇಶಿಸದ ನೀವು ಇನ್ನೂ ಮುಂದೆ ಮಾದಿಗ ಸಮುದಾಯದ ಭಾಗವೇ,ನೀವೆಲ್ಲರೂ ಮಾದಿಗರೆ ಎಂದು ಮಾದರ ಚನ್ನಯ್ಯ ಶ್ರೀಗಳು ಹೇಳಿದರು.

About The Author

Leave a Reply

Your email address will not be published. Required fields are marked *