May 4, 2024

Chitradurga hoysala

Kannada news portal

ಜನತಾ ಜಲಧಾರೆ ಯಾತ್ರೆ ೨೮ ರಂದು ಮೊಳಕಾಲ್ಮುರು ಮೂಲಕ ಜಿಲ್ಲೆಗೆ ಪ್ರವೇಶಿಸ. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್

1 min read

ಜನತಾ ಜಲಧಾರೆ ಯಾತ್ರೆ :೨೮ ರಂದು ಮೊಳಕಾಲ್ಮುರು ಮೂಲಕ ಜಿಲ್ಲೆಗೆ ಪ್ರವೇಶಿಸ. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್

ಚಿತ್ರದುರ್ಗ:

ಜನತಾ ಜಲಧಾರೆ ಯಾತ್ರೆ ಇದೆ ತಿಂಗಳ ೨೮ ರಂದು ಮೊಳಕಾಲ್ಮುರು ಮೂಲಕ ಜಿಲ್ಲೆಗೆ ಪ್ರವೇಶಿಸಲಿದ್ದು, ಆರು ತಾಲ್ಲೂಕುಗಳಲ್ಲಿ ಯಾತ್ರೆ ಸಂಚರಿಸಲಿರುವುದರಿಂದ ತಳಿರು ತೋರಣಗಳಿಂದ ಸಿಂಗರಿಸಿ ವಾದ್ಯ ಕಲಾತಂಡಗಳ ಸಹಿತ ಭವ್ಯವಾಗಿ ಸ್ವಾಗತಿಸಲು ಸಜ್ಜಾಗಬೇಕಿದೆ ಎಂದು ಜಾತ್ಯಾತೀತ ಜನತಾದಳದ ಜಿಲ್ಲಾಧ್ಯಕ್ಷ ಡಿ.ಯಶೋಧರ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ಕರೆ ನೀಡಿದರು.
ಜನತಾ ಜಲಧಾರೆ ಯಾತ್ರೆ ಜಿಲ್ಲೆಗೆ ಆಗಮಿಸಲಿರುವುದರಿಂದ ಪಕ್ಷದ ಕಚೇರಿಯಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿ.ಯಶೋಧರ
ಏ.೧೨ ರಂದು ಚಾಮರಾಜನಗರದ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಜನತಾ ಜಲಧಾರೆ ಯಾತ್ರೆಯನ್ನು ಪಕ್ಷದ ನಾಯಕರುಗಳು ಉದ್ಘಾಟಿಸಲಿದ್ದು, ಹದಿನೈದು ಯಾತ್ರೆ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಂಚರಿಸಲಿದೆ. ೨೮ ರಂದು ಬೆಳಿಗ್ಗೆ ಮೊಳಕಾಲ್ಮುರು, ನಾಯಕನಹಟ್ಟಿ, ಚಳ್ಳಕೆರೆ, ೨೯ ರಂದು ಹೊಳಲ್ಕೆರೆ ಹೊಸದುರ್ಗ, ೩೦ ರಂದು ಹಿರಿಯೂರಿನ ವಾಣಿವಿಲಾಸ ಸಾಗರ ಹಾಗೂ ಗಾಯತ್ರಿ ಜಲಾಶಯದಲ್ಲಿ ಜಲ ಸಂಗ್ರಹಿಸಿ ಸಂಜೆ ಚಿತ್ರದುರ್ಗಕ್ಕೆ ಆಗಮಿಸಲಿದೆ. ಕಾರ್ಯಕರ್ತರು ಈ ಅವಕಾಶವನ್ನು ಬಳಸಿಕೊಂಡು ಶಕ್ತಿ ಪ್ರದರ್ಶಿಸುವ ಮೂಲಕ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು.
ರಾಷ್ಟ್ರೀಯ ಪಕ್ಷಗಳು ದೇವಸ್ಥಾನ, ಮಂದಿರಗಳನ್ನು ಕಟ್ಟುವುದಕ್ಕಾಗಿ ರಥಯಾತ್ರೆ ನಡೆಸಿ ಜನರ ಮನಸ್ಸನ್ನು ಸೆಳೆದುಕೊಳ್ಳುವ ಕಸರತ್ತು ಮಾಡುತ್ತಿವೆ. ಆದರೆ ನಮ್ಮ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಭಿನ್ನವಾಗಿ ಜನತಾ ಜಲಧಾರೆ ಯಾತ್ರೆಯನ್ನು ಆರಂಭಿಸಿದ್ದಾರೆ. ದೇವರು, ಧರ್ಮದ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಲಿಲ್ಲ. ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹಿಸುವ ಯಾತ್ರೆ ರಾಯಚೂರು, ವಿಜಯನಗರ, ಬಳ್ಳಾರಿ ಮೂಲಕ ಜಿಲ್ಲೆಗೆ ಪ್ರವೇಶಿಸಲಿದೆ. ಆರು ತಾಲ್ಲೂಕುಗಳಲ್ಲಿ ಯಾತ್ರೆ ಸಂಚರಿಸಿ ಕಾರ್ಯಕರ್ತರಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ತಳಿರು ತೋರಣ, ವಾದ್ಯ, ಜಾನಪದ ಕಲಾತಂಡಗಳೊಂದಿಗೆ ಯಾತ್ರೆಯನ್ನು ಬರಮಾಡಿಕೊಂಡು ಹಬ್ಬದ ವಾತಾವರಣ ಸೃಷ್ಟಿಸಿ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್.ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಮಹದಾಯಿ, ಕಾವೇರಿ, ಕೃಷ್ಣ, ಮೇಕೆದಾಟು ಯೋಜನೆ ಹೀಗೆ ಹತ್ತು ಹಲವಾರು ವಿವಾದಗಳನ್ನು ಬಗೆಹರಿಸಿ ನಾಡಿನ ರೈತರಿಗೆ ಹಾಗೂ ಜನಸಾಮಾನ್ಯರಿಗೆ ನೀರು ಕೊಡುವ ಉದ್ದೇಶವಿಟ್ಟುಕೊಂಡು ಹೊರಟಿರುವ ಜನತಾ ಜಲಧಾರೆ ಯಾತ್ರೆಯ ಸಂದರ್ಭದಲ್ಲಿ ಎಲ್ಲಾ ತಾಲ್ಲೂಕಿನಲ್ಲಿಯೂ ನೂರು ಮಹಿಳೆಯರು ಕಳಸ ಹೊತ್ತು ಬರಮಾಡಿಕೊಳ್ಳಬೇಕು. ಅದಕ್ಕಾಗಿ ಆಯಾ ತಾಲ್ಲೂಕಿನ ಅಧ್ಯಕ್ಷರುಗಳು ಪೂರ್ವಭಾವಿ ಸಭೆ ನಡೆಸಬೇಕು ಎಂದು ಸೂಚಿಸಿದ ಡಿ.ಯಶೋಧರ ಒಣ ಭೂಮಿ ಚಿತ್ರದುರ್ಗಕ್ಕೆ ಭದ್ರಾಮೇಲ್ದಂಡೆ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕಾಗಿರುವುದರಿಂದ ಹೆಚ್.ಡಿ.ಕುಮಾರಸ್ವಾಮಿರವರನ್ನು ಮುಂದಿನ ಚುನಾವಣೆಯಲ್ಲಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು. ಕಾರ್ಯಕರ್ತರು ಹಾಗೂ ಮುಖಂಡರುಗಳು ಈಗಿನಿಂದಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ತಿಳಿಸಿದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ ರಾಜ್ಯಾದ್ಯಂತ ಜನತಾ ಜಲಧಾರೆ ಹೊರಟಿರುವುದು ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶುಭ ಸೂಚನೆಯಿದ್ದಂತೆ. ಎಲ್ಲಾ ಜೀವ ಸಂಕುಲಗಳಿಗೂ ನೀರು ಅತ್ಯವಶ್ಯಕವಾಗಿ ಬೇಕು. ಇಲ್ಲಿಯವರೆಗೂ ಬೇರೆ ಪಕ್ಷಗಳು ಘೋಷಿಸಿದ ಕಾರ್ಯಕ್ರಮಗಳೆಲ್ಲಾ ಬರೀ ಘೋಷಣೆಯಾಗಿಯೇ ಉಳಿದಿದೆ. ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಪ್ರಾದೇಶಿಕ ಪಕ್ಷ ಎಲ್ಲಾ ರಾಜ್ಯಗಳಲ್ಲಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿವೆ. ದಿನಕ್ಕೊಂದು ವಿವಾದಗಳನ್ನು ಹುಟ್ಟು ಹಾಕುತ್ತಿರುವ ಆರ್.ಎಸ್.ಎಸ್, ಭಜರಂಗದಳದವರು ಹಿಂದೂ ಮುಸಲ್ಮಾನರ ಸೌಹಾರ್ಧತೆಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಕೋಮುವಾದಿ ಬಿಜೆಪಿ.ಯವರ ಕುಹಕಗಳಿಗೆ ನಾವುಗಳೆ ಉತ್ತರಿಸುತ್ತೇವೆ. ಅಲ್ಲಿಯವರೆಗೂ ಮುಸಲ್ಮಾನರು ತಾಳ್ಮೆಯಿಂದಿರುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರೆ ಹೇಳಿದ್ದಾರೆ. ಹಾಗಾಗಿ ಯಾರು ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಶಾಂತಿಯಿಂದಿರೋಣ ಎಂದು ಹೇಳಿದರು.
ಕೋಮುವಾದಿ ಬಿಜೆಪಿ.ಯಿಂದ ರಾಜ್ಯದ ಜನ ರೋಸಿ ಹೋಗಿರುವುದರಿಂದ ಮುಂದೆ ಜೆಡಿಎಸ್.ಗೆ ಒಳ್ಳೆಯ ಭವಿಷ್ಯವಿದೆ. ಭಜರಂಗದಳ, ಆರ್.ಎಸ್.ಎಸ್.ವಿವಾದಗಳಿಗೆ ಹಿಂದೂಗಳೆ ಬೇಸತ್ತಿದ್ದಾರೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಜಾಗ್ರತೆ ವಹಿಸಿ ಪಕ್ಷದ ಕೆಲಸ ಮಾಡಿ. ಜನತಾ ಜಲಧಾರೆ ಯಾತ್ರೆಯನ್ನು ಯಶಸ್ವಿಗೊಳಿಸಿ ಜಿಲ್ಲೆಯಲ್ಲಿ ಜೆಡಿಎಸ್.ಶಕ್ತಿಯುತವಾಗಿ ಬೆಳೆಯಬೇಕಿದೆ. ಚಿಕ್ಕಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಸಂಘಟಿತರಾಗಿ ಜಿಲ್ಲಾಧ್ಯಕ್ಷರ ಕೈಬಲಪಡಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ ಮಾತನಾಡಿ ಬೇರೆ ಬೇರೆ ಪಕ್ಷಗಳು ಜನರ ಮನಸ್ಸನ್ನು ತಮ್ಮತ್ತ ಸೆಳೆಯಲು ಹೊರಟಿರುವ ಇಂದಿನ ಸಂದರ್ಭಕ್ಕೆ ಜೆಡಿಎಸ್.ವರಿಷ್ಟರು ಜನತಾ ಜಲಧಾರೆ ಯಾತ್ರೆ ಕೈಗೊಂಡಿರುವುದು ಅರ್ಥಪೂರ್ಣವಾಗಿದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್.ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಹೆಚ್.ಡಿ.ಕುಮಾರಸ್ವಾಮಿರವರ ಕೈಬಲಪಡಿಸೋಣ. ಅದಕ್ಕಾಗಿ ಯಾರನ್ನು ಕಡೆಗಣಿಸದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕು ಎಂದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಮಠದಕುರುಬರಹಟ್ಟಿ ಈರಣ್ಣ, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಸಣ್ಣತಿಮ್ಮಣ್ಣ, ಹಿರಿಯೂರು ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಹೊಸದುರ್ಗ ತಾಲ್ಲೂಕು ಅಧ್ಯಕ್ಷ ಗಣೇಶ್‌ಮೂರ್ತಿ, ಮೊಳಕಾಲ್ಮುರು ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಎಸ್ಸಿ ಘಟಕದ ಅಧ್ಯಕ್ಷ ಪರಮೇಶ್, ನಗರಸಭೆ ಸದಸ್ಯ ನಸ್ರುಲ್ಲಾ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರತಾಪ್ ಜೋಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ತಾಲ್ಲೂಕು ಅಧ್ಯಕ್ಷೆ ಗೀತ, ಹೊಸದುರ್ಗದ ರಾಗಿ ಶಿವಕುಮಾರ್ ಇವರುಗಳು ಮಾತನಾಡಿದರು.
ಜೆಡಿಎಸ್.ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ ಸೇರಿದಂತೆ ಪಕ್ಷದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು.

About The Author

Leave a Reply

Your email address will not be published. Required fields are marked *