ಆಯುಷ್ ಆಸ್ಪತ್ರೆಯಲ್ಲಿ ಮತದಾನ ಜಾಗೃತಿ
1 min read
ಆಯುಷ್ ಆಸ್ಪತ್ರೆಯಲ್ಲಿ ಮತದಾನ ಜಾಗೃತಿ
ಚಿತ್ರದುರ್ಗ(ಕರ್ನಾಟಕ ವಾರ್ತೆ)ಏ.29:
ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವುದು ಕೇವಲ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗದೇ ಇದು ಪ್ರತಿಯೊಬ್ಬರ ಕರ್ತವ್ಯ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು ಎಂದು ಪ್ರಕೃತಿ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಗಂಗಾಧರ ವರ್ಮ ತಿಳಿಸಿದರು.
ಇಲ್ಲಿನ ಆಯುಷ್ ಆಸ್ಪತ್ರೆ ಆವರಣದಲ್ಲಿ ಶನಿವಾರ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಆಸ್ಪತ್ರೆ ಆಯುಷ್ ವಿಭಾಗ ಚಿತ್ರದುರ್ಗ ಇವರ ಸಹಯೋಗದಲ್ಲಿ ಮತದಾನದ ಹಕ್ಕು ಮತ್ತು ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
18 ವರ್ಷ ಮೇಲ್ಪಟ್ಟಿರುವ ನಾಗರಿಕರಿಗೆ ಸಂವಿಧಾನದತ್ತವಾಗಿ ಮತದಾನದ ಹಕ್ಕು ಪ್ರಾಪ್ತವಾಗಿದೆ. ಇದು ಹಕ್ಕು ಮಾತ್ರವಲ್ಲದೆ ಜವಾಬ್ದಾರಿ ಮತ್ತು ಕರ್ತವ್ಯ. ಚುನಾವಣಾ ಆಯೋಗ, ಸರ್ಕಾರದ ವಿವಿಧ ಇಲಾಖೆಗಳು, ಸರ್ಕಾರೇತರ ಸಂಘಟನೆಗಳು ಮಾಡುತ್ತಿರುವ ಸತತ ಪ್ರಯತ್ನದ ಫಲವಾಗಿ ಜನರಲ್ಲಿ ಮತದಾನದ ಜಾಗೃತಿ ಉಂಟಾಗಿರುವುದು ಸಕಾರಾತ್ಮಕ ಬೆಳವಣಿಗೆ. ಚುನಾವಣೆ ಆಯೋಗದ ಸ್ವೀಪ್‍ನಂಥ ಕಾರ್ಯಕ್ರಮಗಳು ಮತದಾನಕ್ಕೆ ಪೂರಕವಾದ ವಾತಾವರಣ ನಿರ್ಮಿಸಲು ಕಾರಣವಾಗಿದೆ ಎಂದು ತಿಳಿಸಿದರು.
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಸುರೇಶ್ ಮಾತನಾಡಿ, ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಮತವನ್ನು ಮೇ 10 ರಂದು ಮತಗಟ್ಟೆಗೆ ಹೋಗುವ ಮೂಲಕ ಮತದಾನವನ್ನು ಮಾಡಬೇಕು. ಮತಗಟ್ಟೆಗೆ ಹೋಗಲು ಸಾಧ್ಯವಾಗದ ವಯೋವೃದ್ದರು ಮತ್ತು ಅಂಗವಿಕಲರು ತಮ್ಮ ಮನೆಯಿಂದಲೇ ಮತದಾನ ಮಾಡಬಹುದಾದ ಈ ಬಾರಿಯ ಚುನಾವಣಾ ನಿಯಮವನ್ನು ಬಳಸಿಕೊಂಡು ಮತದಾನ ಮಾಡಬೇಕು ಎಂದರು.
ಆಸ್ಪತ್ರೆಯ ಯುನಾನಿ ವೈದ್ಯರಾದ ಡಾ. ರೆಹಮಾನ್ ಮಾತನಾಡಿ, ದೇಶದಲ್ಲಿ ಏನಾದರೂ ಧನಾತ್ಮಕ ಬದಲಾವಣೆ ಕಾಣಬೇಕಾದರೆ ಸದೃಢ, ಸುಸ್ಥಿರ ಸರ್ಕಾರ ಇರುವುದು ಅಗತ್ಯ. ಚುನಾವಣೆ ನಮಗೆ ಸರ್ಕಾರ ಆರಿಸುವ ಅವಕಾಶ ಕೊಡುತ್ತದೆ. ದೇಶದಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ ಎನ್ನುವ ಬದಲು ಉತ್ತಮ ಅಭ್ಯರ್ಥಿಗೆ ಮತದಾನ ಮಾಡಿ ದೇಶದ ಅಭಿವೃದ್ದಿಗೆ ಸಹಕರಿಸೋಣ ಎಂದರು.
ಆಸ್ಪತ್ರೆಯ ಡಾ. ಅನುಪಮಾ ಮಾತನಾಡಿ, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಉತ್ತಮ ನಾಯಕನನ್ನು ಗೆಲ್ಲಿಸೋಣ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹೋಮಿಯೋಪತಿ ವೈದ್ಯ ಡಾ. ದೇವರಾಜ್ ಸುರಹೊನ್ನೆ, ಸಿಬ್ಬಂದಿಗಳಾದ ಸುಧಾ, ಶ್ರೀನಿವಾಸ್, ರಂಜಿತ, ಕಾವ್ಯ, ಗೌಸಿಯಾ, ಶಾಂತಮ್ಮ, ಲಕ್ಷೀದೇವಿ ಮತ್ತು ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.