ವಿಜ್ಞಾನಿಗಳು ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದು ವಿಪರ್ಯಾಸ: ಪಂಡಿತಾರಾಧ್ಯ ಶ್ರೀ
1 min readವಿಜ್ಞಾನಿಗಳು ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದು ವಿಪರ್ಯಾಸ: ಪಂಡಿತಾರಾಧ್ಯ ಶ್ರೀ
ಚಿತ್ರದಿರ್ಗ ಹೊಯ್ಸಳ ನ್ಯೂಸ್/
ವರದಿ:ಕಾವೇರಿ ಮಂಜಮ್ಮನವರ್.
ಹೊಸದುರ್ಗ:
ತರಳಬಾಳು ಮಠದ ಮೂಲಪುರುಷ ಮರಳುಸಿದ್ದರು. ಮಾದಿಗ ಜನಾಂಗದಲ್ಲಿ ಹುಟ್ಟಿದ್ದರೂ ತಮ್ಮ ಸಾಮಾಜಿಕ ಕಳಕಳಿ, ಸಾರ್ವಜನಿಕ ಹಿತಾಸಕ್ತಿ, ಬೌದ್ಧಿಕ ಚಿಂತನೆಗಳ ಮೂಲಕ ವಿಶ್ವಬಂಧು ಎನ್ನುವ ಗೌರವಕ್ಕೆ ಪಾತ್ರರಾದರು. ಅವರು ಅಜ್ಞಾನ, ಮೂಢನಂಬಿಕೆ, ಜಾತೀಯತೆಯ ವಿರುದ್ಧ ಹೋರಾಡಿದರು. ಆದರೆ ನಿನ್ನೆ ಶುಕ್ರವಾರ ನಡೆದ ಚಂದ್ರಯಾನ ಉಪಗ್ರಹದ ಉಡಾವಣೆ ನಿರ್ವಿಘ್ನವಾಗಿ ನಡೆಯಲು ವಿಜ್ಞಾನಿಗಳು ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದುದು ವಿಪರ್ಯಾಸ ಸಂಗತಿ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿ ಮಠದ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಶಿವಕುಮಾರ ಹಿರಿಯ ಪ್ರಾಥಮಿಕ ಶಾಲೆಯು ಆಯೋಜಿಸಿದ್ದ ‘ತರಳಬಾಳು ಗುರು ಪರಂಪರೆ’ ಕುರಿತ ದಂದಣ ದತ್ತಣ ಗೋಷ್ಠಿಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಮರುಳಸಿದ್ಧರು ಮೂಢನಂಬಿಕೆಗಳನ್ನು ನಿರಂತರವಾಗಿ ವಿರೋಧಿಸುವ ಸಲುವಾಗಿ ಅವರು ಇಂದಿನ ಕೊಟ್ಟೂರು ತಾಲೂಕಿನ ಉಜ್ಜಯಿನಿಯಲ್ಲಿ ತರಳಬಾಳು ಪೀಠವನ್ನು ಸ್ಥಾಪಿಸಿದರು. ಆ ಪೀಠದ ಮೇಲೆ ತೆಲುಗು ಬಾಳು ಸಿದ್ದಯ್ಯನನ್ನು ಕೂರಿಸಿ ತರಳಬಾಳು ಎಂದು ಆಶೀರ್ವದಿಸಿದರು. ಅಂದಿನಿಂದ ಈ ಪೀಠ ತರಳಬಾಳು ಪೀಠವೆಂದು ಖ್ಯಾತಿ ಪಡೆದಿದೆ.ಆ ಪೀಠದಲ್ಲಿ ಬಂದ ಎಲ್ಲಾ ಗುರುವರ್ಯರು ಮೌಢ್ಯ ವಿರೋಧಿ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ 19 ನೇಯ ಜಗದ್ಗುರುಗಳಾಗಿ ಬಂದ ಶ್ರೀ ಗುರುಶಾಂತ ದೇಶೀಕೇಂದ್ರ ಮಹಾಸ್ವಾಮಿಗಳು ಶ್ರೀಮಠಕ್ಕೆ ಹೊಸ ಚೈತನ್ಯವನ್ನು ತಂದುಕೊಟ್ಟರು. ತದನಂತರ ಬಂದವರೇ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇವರು ಹಗಲು ರಾತ್ರಿಯೆನ್ನದೆ ಸಮಾಜದ ಅಭ್ಯುದಯಕ್ಕಾಗಿ ಶ್ರಮಿಸಿದ್ದರ ಫಲವಾಗಿ ನಾವು-ನೀವು ಇಂದು ಇಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಶಿವಕುಮಾರ ಶ್ರೀಗಳು ರಾಜಕೀಯವಾಗಿ, ಸಾಹಿತ್ಯಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಅದ್ಭುತವಾದ ಕ್ರಾಂತಿಯನ್ನೇ ಮಾಡಿದರು. ಅವರ ದೂರದೃಷ್ಟಿಯ ಫಲವಾಗಿ ನಾವು ಈ ಮಠಕ್ಕೆ ಪಟ್ಟಾಧ್ಯಕ್ಷರಾಗಿ ಬರುವಂತಾಯಿತು ಮತ್ತು ಅಲ್ಪಸ್ವಲ್ಪ ಕೆಲಸ ಮಾಡಲು ಸಾಧ್ಯವಾಯಿತು. ಅವರಂತಹ ಗುರುಗಳನ್ನು ಮತ್ತೆ ಕಾಣುವುದು ಕಷ್ಟಸಾಧ್ಯ. ಅವರು ಲಿಂಗೈಕ್ಯರಾಗಿ 31 ವರ್ಷಗಳು ಸಂದಿದ್ದರೂ ಸಿರಿಗೆರೆಯಲ್ಲಿ ನಡೆಯುವ ಅವರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬರುತ್ತಿರುವುದು ಅವರ ಜನಪ್ರಿಯತೆಯನ್ನು ತೋರಿಸುತ್ತದೆ. ಈಗಿನ ಜಗದ್ಗುರುಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತರಳಬಾಳು ಪೀಠದ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇಂದು ಮಠಪೀಠಗಳ ಬಗ್ಗೆ ಜನ ಮೊದಲಿನಂತೆ ಗೌರವ ತೋರುತ್ತಿಲ್ಲ ಎನ್ನುವುದು ಇತ್ತೀಚೆಗೆ ದಿಗಂಬರ ಜೈನ ಮುನಿಗಳ ಹತ್ಯೆಯಿಂದ ತಿಳಿದು ಬರುವುದು. ಈ ಕಾರಣಕ್ಕಾಗಿಯೇ ಶಿವಕುಮಾರ ಶ್ರೀಗಳು ಹೇಳುತ್ತಿದ್ದುದು; ಭಕ್ತರಿಗೆ ಅಂಜಿ ನಡೆಯುವ ಗುರು, ಗುರುವಿಗೆ ಅಂಜಿ ನಡೆಯುವ ಭಕ್ತರಿದ್ದರೆ ಮಾತ್ರ ಮಠಪೀಠಗಳು ಸರಿದಾರಿಯಲ್ಲಿ ಸಾಗಲು ಸಾಧ್ಯ ಎಂದು. ಭಕ್ತರಾದವರು ಗುರುಗಳನ್ನು ಪ್ರಶ್ನಿಸುವ ಎದೆಗಾರಿಕೆಯನ್ನು, ಗುರುಗಳಾದವರು ಅವುಗಳಿಗೆ ಉತ್ತರಿಸುವ ತಾಳ್ಮೆಯನ್ನು ತೋರಬೇಕು. ಆಗ ಗುರು-ಶಿಷ್ಯರ ಸಂಬಂಧಗಳ ನಡುವೆ ಬಿರುಕು ಕಾಣಿಸದು ಎಂದು ಹೇಳಿದರು.
ಈ ವೇಳೆ ಖ್ಯಾತ ಸಾಹಿತಿ ಚಂದ್ರಶೇಖರ ತಾಳ್ಯ, ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ.ಕೆ ಸ್ವಾಮಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಠದ ಭಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.