ಕವಾಡಿಗರಹಟ್ಟಿ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರಕ್ಕೆ ಕ್ರಮ : ಕೇಂದ್ರ ಸಚಿವ ನಾರಾಯಣಸ್ವಾಮಿ.
1 min read
ಕವಾಡಿಗರಹಟ್ಟಿ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರಕ್ಕೆ ಕ್ರಮ :ಕೇಂದ್ರ ಸಚಿವ ನಾರಾಯಣಸ್ವಾಮಿ.
ಕವಾಡಿಗರ ಹಟ್ಟಿಯಲ್ಲಿ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಆಧರಿಸಿ ತಕ್ಷಣವೇ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಸಚಿವರು – ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ತಿಳಿಸಿದರು.
ಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮತ್ತು ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿ ನಂತರ ಮಾಧ್ಯಮ ರೊಂದಿಗೆ ಮಾತನಾಡಿದರು.
ಕವಾಡಿಗರ ಹಟ್ಟಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ಕುರಿತು ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಸಾರ್ವಜನಿಕರು ಮಾಡಿರುವ ಆರೋಪಗಳ ಕುರಿತು ಸರ್ಕಾರದೊಂದಿಗೆ ಮಾತನಾಡಿ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ದುರ್ಘಟನೆ ನಡೆಯಲು ಯಾರದಾದರೂ ಕೈವಾಡ ಇದೆಯಾ ಅಥವಾ ಶಾಂತಿ ಸಾಗರದಿಂದ ನೀರು ಸರಬರಾಜು ವೇಳೆಯಲ್ಲಿ ಎಲ್ಲಾದರೂ ಲೋಪದೋಷ ಆಗಿದೆಯಾ ಎಂಬುದನ್ನು ಪರಿಶೀಲಿಸಲು ತಂಡವನ್ನು ರಚಿಸಲಾಗುವುದು. ಜಿಲ್ಲೆಯ ಯಾವುದೇ ಭಾಗದಲ್ಲೂ ಇಂತಹ ಘಟನೆ ಮರುಕಳಿಸದ ಹಾಗೆ ಮುಂಜಾಗ್ರತೆ ವಹಿಸಿ ಎಲ್ಲಾ ಕುಡಿಯುವ ನೀರಿನ ಮೂಲಗಳ ವರದಿಯನ್ನು ತುರ್ತಾಗಿ ತರಿಸಿಕೊಳ್ಳಲಾಗುವುದು ಎಂದರು.
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಜನರು ಆಸ್ಪತ್ರೆಗೆ ದಾಖಲಾದ ಕುರಿತು ಮಾಧ್ಯಮದಲ್ಲಿ ವರದಿ ಬಂದ ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಲಾಗಿದೆ. ಮರುಕ್ಷಣವೇ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಹೆಚ್‌ಓಗೂ ಕರೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಅಧಿಕಾರಿಗಳು ಘಟನೆಗೆ ತಕ್ಷಣ ಸ್ಪಂದಿಸಿ, ಮಕ್ಕಳು, ವೃದ್ಧರೂ ಸೇರಿದಂತೆಎಲ್ಲರಿಗೂ ಉತ್ತಮ ಚಿಕಿತ್ಸೆ ನೀಡಿದ್ದಾರೆ.
ಇದುವರೆಗೂ ಘಟನೆಯಲ್ಲಿ 5 ಜನರು ಜೀವ ತೆತ್ತಿದ್ದಾರೆ. ನಿನ್ನೆ ಬಂದ ನೀರಿನ ಮಾದರಿಗಳ ವಿಧಿ ವಿಜ್ಞಾನ ವರದಿಯು ಸಹ ಕುಡಿಯುವ ನೀರಿಗೆ ಯಾವುದೇ ವಿಷ ಬೆರತಿಲ್ಲ ಎಂದು ಹೇಳಿದೆ. ಆದರೂ ಸಾರ್ವಜನಿಕರ ದೂರನ್ನು ಪರಿಗಣನೆಗೆ ತೆಗೆದುಕೊಂಡು ಮೃತರ ಮರಣೋತ್ತರ ಪರೀಕ್ಷೆ ನಡೆಸಲು ಸೂಚಿಸಿದ್ದೇನೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣ ತಿಳಿದು ಬರಲಿದೆ. ನೀರಿನ ಮಾದರಿಯ ವಿಧಿ ವಿಜ್ಞಾನ ವರದಿ ಹಾಗೂ ಮರಣೋತ್ತರ ಪರೀಕ್ಷೆ ವರದಿಗಳನ್ನು ಪರಿಶೀಲಿಸಿ ಮುಂದಿನ ಅಂಶಗಳನ್ನು ಚರ್ಚಿಸಲಾಗುವುದು. ಇದರ ಮೇಲೆಯೂ ನೀರಿನ ಕಲುಷಿತಕ್ಕೆ ಕಾರಣ ಕಂಡುಹಿಡಿದು ವರದಿ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಅಸ್ವಸ್ಥರ ಮೇಲೆ ನಿಗಾ ವಹಿಸಲು ಹಾಗೂ ಘಟನೆಯ ಕಾರಣಗಳನ್ನು ವಿಶ್ಲೇಷಿಸಲು ರಾಜ್ಯ ಮಟ್ಟದಿಂದ ತಜ್ಞರ ಸಮಿತಿ ಕರೆಸಲು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರಂತೆ ಸರ್ಕಾರ ತಜ್ಞರ ಸಮಿತಿ ನೇಮಿಸಿ ಜಿಲ್ಲೆಗೆ ಕಳುಹಿಸಿಕೊಟ್ಟಿದೆ ಎಂದು ತಿಳಿಸಿದರು.
ಜನರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ. ಜಿಲ್ಲಾಡಳಿತ ಸದಾ ಕಾಲ ನಿಮ್ಮ ಸೇವೆಗೆ ಸಿದ್ಧವಿದೆ. ಸಂಸತ್ ಅಧಿವೇಶನದಲ್ಲಿ ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿತ್ತು. ಸಂಸತ್ ನಡೆಯುವ ವೇಳೆಯಲ್ಲಿ ಲೋಕಸಭಾಧ್ಯಕ್ಷರ ಅನುಮತಿ ಮೇರೆಗೆ ನಾನು ಮರಳಿ ಬರಬೇಕಾದ್ದರಿಂದ ಘಟನೆ ನಡೆದ ತಕ್ಷಣವೇ ಬಂದು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.ಈ ವೇಳೆ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಯವರು ಕೇಂದ್ರ ಸಚಿವರಿಗೆ ಸಾತ್ ನೀಡಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಶಸ್ತ್ರಚಿಕಿತ್ಸಕ ಡಾ.ಹೆಚ್.ಬಸವರಾಜ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ಇದ್ದರು.